ಮಂಗಳೂರು ಗುಂಪುಹತ್ಯೆ: ಇನ್ಸ್ಪೆಕ್ಟರ್ ಸಹಿತ ಮೂವರ ಅಮಾನತು: ಹತ್ಯೆಯನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತೇ?

0
498

ಸನ್ಮಾರ್ಗ ವಾರ್ತೆ

ಮಂಗಳೂರಿನಲ್ಲಿ ನಡೆದ ಅಶ್ರಫ್‌ ಎಂಬವರ ಹತ್ಯೆಯನ್ನು ಮುಚ್ಚಿಹಾಕಲು ಪೊಲೀಸರೇ ಪ್ರಯತ್ನಿಸಿರುವುದು ಇದೀಗ ಬಯಲಾಗಿದೆ. ಮೂವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಅಮಾನತು ಆದೇಶದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಗುಂಪು ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್, ಹೆಡ್ ಕಾನ್ಸ್ಟೇಬಲ್ ಚಂದ್ರ ಮತ್ತು ಪೊಲೀಸ್ ಕಾನ್ಸ್ಟೇಬಲ್ ಯಲ್ಲಾ ಲಿಂಗ ಅವರನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ

ಗುಂಪು ಹತ್ಯೆ ಎಂದು ಸ್ಥಳೀಯರು ತಿಳಿಸಿದ್ದರೂ ಅದನ್ನು ಅಸಹಜ ಸಾವು ಎಂಬಂತೆ ತೋರಿಸಲು ಪೊಲೀಸರೇ ಪ್ರಯತ್ನಿಸಿರುವುದು ಖಚಿತವಾಗಿದೆ. ಒಬ್ಬರು ಇನ್ಸ್ಪೆಕ್ಟರ್ ಹಾಗೂ ಇಬ್ಬರು ಸಿಬ್ಬಂದಿಗಳ ಅಮಾನತು ಆದೇಶದಲ್ಲಿ ಈ ಬಗ್ಗೆ ವಿವರಣೆ ಇದೆ. ಮಾನಸಿಕ ಅಸ್ವಸ್ಥನಾದ ಆಶ್ರಫ್ ರನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಗಂಭೀರ ಕರ್ತವ್ಯ ಲೋಕ ಪದಡಿ ಇನ್ಸ್ಪೆಕ್ಟರ್ ಶಿವಕುಮಾರ್ ಹೆಡ್ ಕಾನ್ಸ್ಟೇಬಲ್ ಚಂದ್ರ ಮತ್ತು ಪೊಲೀಸ್ ಕಾನ್ಸ್ಟೇಬಲ್ ಯಲ್ಲಾ ಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ

ಈ ಮೂವರನ್ನು ಅಮಾನತು ಮಾಡುವುದಕ್ಕೆ ಆದೇಶದಲ್ಲಿ ಕಾರಣವನ್ನು ವಿವರವಾಗಿ ನೀಡಲಾಗಿದೆ.

ಮಂಗಳೂರು ನಗರ ಪೊಲೀಸ್ ನ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ವರದಿಯಂತೆ ಎಪ್ರಿಲ್ 28ರಂದು ಮಧ್ಯಾಹ್ನ 2:30 ರಿಂದ ಸಂಜೆ 5:30ರ ಮಧ್ಯೆ ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಭಟ್ರ ಕಲ್ಲುರ್ಟಿ ದೇವಸ್ಥಾನದ ಹಿಂಬದಿಯಲ್ಲಿರುವ ಮೈದಾನದ ಬಳಿ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಅಥವಾ ಅನ್ ನಾಚುರಲ್ ಡೆತ್ ರಿಪೋರ್ಟ್ ದಾಖಲಾಗಿತ್ತು. ಇದೇ ಘಟನೆಯ ಕುರಿತು ಏಪ್ರಿಲ್ 28ರಂದು ದೀಪಕ್ ಎಂಬುವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.

ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಗೆ ಕ್ರಿಕೆಟ್ ಪಂದ್ಯಾ ಆಡುತ್ತಿರುವ ಆಟಗಾರರು ಮತ್ತು ಅಲ್ಲಿ ನೆರೆದಿದ್ದ ಪ್ರೇಕ್ಷಕರು ಹಲ್ಲೆ ನಡೆಸುತ್ತಿದ್ದ ಬಗ್ಗೆ ದೀಪಕ್ ಎಂಬುವರು ಪೊಲೀಸರಿಗೆ ಫೋನ್ ಕರೆ ಮಾಡಿ ತಿಳಿಸಿದ್ದರು. ಗುಂಪು ಹಲ್ಲೇ ನಡೆದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಇತ್ತು. ಆದರೆ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸದೆ ಅಸಹಜ ಸಾವು ಪ್ರಕರಣ ದಾಖಲಿಸಿದ್ದರು.

ಈ ಘಟನೆಯ ಬಗ್ಗೆ ಹೆಡ್ ಕಾನ್ಸ್ಟೇಬಲ್ ಚಂದ್ರ ಅವರಿಗೂ ತಿಳಿಸಲಾಗಿತ್ತು. ಆದರೆ ಅವರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಕಲೆ ಹಾಕಲಿಲ್ಲ ಮತ್ತು ಮೇಲಾಧಿಕಾರಿಗಳಿಗೂ ಘಟನೆಯ ಬಗ್ಗೆ ತಿಳಿಸಲಿಲ್ಲ ಇದೇ ಕಾರಣಕ್ಕೆ ಗುಂಪುಹತ್ಯೆ ಪ್ರಕರಣವು ಮೊದಲು ಅಸಹಜ ಸಾವಾಗಿ ದಾಖಲಾಯಿತು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ ಸ್ಥಳದಲ್ಲಿ ಬೀಟ್ ಕರ್ತವ್ಯಕ್ಕೆ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಯಲ್ಲಾ ಲಿಂಗ ಅವರನ್ನು ನಿಯೋಜಿಸಲಾಗಿತ್ತು. ಆದರೆ ಅವರು ತನ್ನ ಬೀಟ್ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವ ಬಗ್ಗೆಯಾಗಲಿ ಘಟನೆಯ ಬಗ್ಗೆಯಾಗಲಿ ಮೇಲಾಧಿಕಾರಿಯ ಗಮನಕ್ಕೆ ತಾರದೆ ಕರ್ತವ್ಯ ದಲ್ಲಿ ತೀವ್ರ ನಿರ್ಲಕ್ಷ ತೋರಿದ್ದಾರೆ ಎಂದು ಆರೋಪಿಸಲಾಗಿದೆ.. ಈ ನೆಲೆಯಲ್ಲಿ ಈ ಮೂವರನ್ನೂ ಅಮಾನತು ಮಾಡಲಾಗಿದ್ದು ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ.