90 ನಿಮಿಷದಲ್ಲಿ 90 ಸುಳ್ಳುಗಳನ್ನು ಹೇಳಿದ ಪ್ರಧಾನಿಯನ್ನು ನಾವು ನಂಬಲ್ಲ, ದಾಖಲೆಗಳನ್ನೂ ಕೊಡಲ್ಲ; ಕಾನೂನು ಹಿಂಪಡೆಯುವವರೆಗೆ ಬೀದಿಯಲ್ಲಿ ನಿಂತು ಹೋರಾಡುತ್ತೇವೆ: ಅಡ್ಯಾರ್ ಕಣ್ಣೂರು ಸಮಾವೇಶದಲ್ಲಿ ಘೋಷಣೆ

0
2311
  • ಸನ್ಮಾರ್ಗ ವಾರ್ತೆ

ಮಂಗಳೂರು; ಜ. 15- ನನ್ನ ಕುಟುಂಬ ರಾವಲ್ಪಿಂಡಿಯಲ್ಲಿತ್ತು. ದೇಶ ವಿಭಜನೆಯ ಸಂದರ್ಭದಲ್ಲಿ ಅಲ್ಲಿಂದ ಭಾರತಕ್ಕೆ ಬಂತು. ಸ್ವಾತಂತ್ರ್ಯದ ಸಮಯದಲ್ಲಿ ಹಿಂದೂಗಳಿಗೆ ಇದ್ದುದು ಒಂದೇ ದೇಶ- ಹಿಂದುಸ್ತಾನ. ಆದರೆ, ಮುಸ್ಲಿಮರ ಮುಂದೆ ಎರಡು ಆಯ್ಕೆಗಳಿದ್ದುವು. ಮುಸ್ಲಿಮರು ಒಂದೋ ಭಾರತವನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಪಾಕಿಸ್ತಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಮುಸ್ಲಿಮರು ಭಾರತವನ್ನು ಆಯ್ಕೆಮಾಡಿಕೊಂಡರು. ಆದ್ದರಿಂದ ಭಾರತೀಯ ಮುಸ್ಲಿಮರು ತಮ್ಮ ದೇಶಪ್ರೇಮವನ್ನು ಯಾವ ಕಾರಣಕ್ಕೂ ಸಾಬೀತುಪಡಿಸಬೇಕಿಲ್ಲ. ಮುಸ್ಲಿಮರ ಆಯ್ಕೆಯೇ ಅವರ ದೇಶಪ್ರೇಮವನ್ನು ಹೇಳುತ್ತದೆ. ಆದ್ದರಿಂದ ಎನ್ ಆರ್ ಸಿಗಾಗಿ ಮುಸ್ಲಿಮರು ದಾಖಲೆಗಳನ್ನು ಕೊಡುವುದಿಲ್ಲ ಎಂದು ತೀರ್ಮಾನಿಸಬೇಕು ಮಾತ್ರವಲ್ಲ ನಾವು ಮುಸ್ಲಿಮರು ಎಂದು ಹೇಳುವ ಮೂಲಕ ಈ ದೇಶದ ಮುಸ್ಲಿಮೇತರರು ಎನ್ಆರ್ ಸಿ ಪ್ರಕ್ರಿಯೆಯನ್ನು ತಿರಸ್ಕರಿಸಬೇಕು ಎಂದು ವಿಶ್ರಾಂತ ಐಎಎಸ್ ಅಧಿಕಾರಿ ಹರ್ಷ ಮಂದರ್ ಕರೆಕೊಟ್ಟರು.

ಅವರು ಇಲ್ಲಿನ ಅಡ್ಯಾರ್ ಕಣ್ಣೂರಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಜನವರಿ 15ರಂದು ಏರ್ಪಡಿಸಲಾದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡುತ್ತಿದ್ದರು.

ಇತರರ ನೋವನ್ನು ತನ್ನದೆಂದು ಬಗೆಯುವುದೇ ಬಂಧುತ್ವ. ಸಂವಿಧಾನದ ಮೂಲ ಆಶಯ ಇದುವೇ. ನಮ್ಮ ಈಗಿನ ಹೋರಾಟ ಕೇವಲ ಎನ್ ಆರ್ ಸಿ, ಸಿ ಎ ಎ ಎಂಬ ಕರಾಳ ಕಾನೂನುಗಳ ವಿರುದ್ಧ ಮಾತ್ರ ಅಲ್ಲ ಕಳೆದ ನೂರು ವರ್ಷಗಳ ಹಿಂದೆ  ಈ ಹೋರಾಟ ಶುರುವಾಗಿದೆ. ನೂರು ವರ್ಷಗಳ ಹಿಂದೆ ಗಾಂಧೀಜಿ ಈ ಹೋರಾಟವನ್ನು ಆರಂಭಿಸಿದ್ದರು. ಗಾಂಧೀಜಿಯ 30 ವರ್ಷಗಳ ಹೋರಾಟದಲ್ಲಿ ನಮ್ಮ ಹಿರೀಕರು ಭಾಗಿಯಾದರು. ಬ್ರಿಟಿಷರನ್ನು ಭಾರತದಿಂದ ಹೊರ ಹಾಕುವುದು ಮಾತ್ರ ಆ ಹೋರಾಟದ ಉದ್ದೇಶ ಆಗಿರಲಿಲ್ಲ. ಬ್ರಿಟಿಷರನ್ನು ಹೊರ ಹಾಕಿದ ಬಳಿಕ ಈ ದೇಶ ಯಾರ ದೇಶ ಆಗಬೇಕು ಎಂಬುದು ಕೂಡ ಅಂದಿನ ಹೋರಾಟದ ಉದ್ದೇಶ ಆಗಿತ್ತು. ಇದು ಯಾವುದೋ ಒಂದು ಧರ್ಮದ ದೇಶ ಆಗಬಾರದು, ಎಲ್ಲರ ದೇಶ ಆಗಬೇಕು ಎಂಬ ಕಾರಣಕ್ಕಾಗಿ ನಾವು ಕಳೆದ 70 ವರ್ಷಗಳಿಂದ ಹೋರಾಡುತ್ತಿದ್ದೇವೆ. ನೂರು ವರ್ಷಗಳ ಹಿಂದೆ ಇಲ್ಲಿ ಹಿಂದೂ ಮಹಾಸಭಾ ಹುಟ್ಟಿಕೊಂಡಿತು. 1925 ರಲ್ಲಿ ಆರ್ ಎಸ್ ಎಸ್ ಹುಟ್ಟಿಕೊಂಡಿತು. ಇವೆರಡೂ ಗಾಂಧೀಜಿಯ ಆಶಯಗಳ ವಿರುದ್ಧವಾಗಿತ್ತು. ಅವುಗಳ ವಾದ ಹೇಗಿತ್ತೆಂದರೆ, ಈ ದೇಶ ಹಿಂದೂಗಳ ಅಥವಾ ಸವರ್ಣರ ದೇಶ. ಇಲ್ಲಿ ಮುಸ್ಲಿಮರು ಅಥವಾ ದಲಿತರಿಗೆ ಷರತ್ತಿನೊಂದಿಗೆ ಮಾತ್ರ ಇರಲು ಅನುಮತಿಸುತ್ತೇವೆ. ಆ ಷರತ್ತು ಏನೆಂದರೆ ಭಯ ಭೀತಿಯದ್ದು.

ಇಲ್ಲಿ ಇನ್ನೊಂದು ಸಂಘಟನೆ ಇತ್ತು. ಅದು ಮುಸ್ಲಿಂ ಲೀಗ್. ಅದರ ಪ್ರಕಾರ ಹಿಂದುಸ್ತಾನ್ ಎಂಬುದು ಒಂದೇ ದೇಶ ಅಲ್ಲ, ಎರಡು ದೇಶ. ಹಿಂದೂಗಳಿಗಾಗಿ ಹಿಂದುಸ್ತಾನ ಮತ್ತು ಮುಸ್ಲಿಮರಿಗಾಗಿ ಪಾಕಿಸ್ತಾನ. ಕೊನೆಗೆ ಅವರು ಮುಸ್ಲಿಮ್ ಪಾಕಿಸ್ತಾನವನ್ನು ಪಡೆದುಕೊಂಡರು. ಆದರೆ ಮೌಲಾನ ಅಬ್ದುಲ್ ಕಲಾಂ ಆಜಾದರು ದೆಹಲಿಯ ಜಾಮಾ ಮಸೀದಿಯಲ್ಲಿ ನಿಂತು- ನಾನು ಮುಸ್ಲಿಂ ಕೂಡ ಹೌದು ಅಷ್ಟೇ ಹಿಂದುಸ್ತಾನಿಯೂ ಹೌದು. ನನಗೆ ಈ ಎರಡರ ಬಗ್ಗೆಯೂ ಹೆಮ್ಮೆಯಿದೆ ಎಂದರು. ನಾವು ಇಂಥ ಭಾರತವನ್ನು ಕಟ್ಟಬೇಕಾಗಿದೆ ಎಂದವರು ಹೇಳಿದರು.

ಕಳೆದೊಂದು ವರ್ಷದಿಂದ ನಾನು ದೇಶಾದ್ಯಂತ ಸುತ್ತುತ್ತಿದ್ದೇನೆ. ವ್ಯವಸ್ಥೆಯ ವಿರುದ್ಧದ ಆಕ್ರೋಶ ಈಗ ದೊಡ್ಡ ಪ್ರವಾಹವಾಗಿ ಕಾಣಿಸುತ್ತಿದೆ. ಈ ಹೋರಾಟ ಎಷ್ಟು ದೀರ್ಘ ನಡೆಯುತ್ತದೆಯೋ ಎಂದು ನನಗೆ ಗೊತ್ತಿಲ್ಲ. ಆದರೆ ಜನರ ಅತೃಪ್ತಿಯು ದೇಶಾದ್ಯಂತ ಅತಿ ತೀವ್ರ ಸ್ಥಿತಿಯಲ್ಲಿದೆ ಎಂದವರು ಅಭಿಪ್ರಾಯಪಟ್ಟರು.

ಅಂಕಣಗಾರ ಶಿವಸುಂದರ್ ಮಾತನಾಡಿ, ಈ ದೇಶದ ಮಾಲೀಕರು ನಾವು. ಪ್ರಧಾನಿ, ರಾಷ್ಟ್ರಪತಿ, ಗೃಹಸಚಿವರು, ಅಧಿಕಾರಿಗಳು ಮುಂತಾದವರೆಲ್ಲ ನಮ್ಮ ಸೇವಕರು. 2014ರಲ್ಲಿ ನಾವು ನಮ್ಮ ಮನೆ ಕಾಯಲು ಓರ್ವ ಚೌಕಿದಾರನನ್ನು ನೇಮಿಸಿದೆವು. ಆದರೆ ಈ 2019ರಲ್ಲಿ ಈ ಚೌಕಿದಾರ ಈ ಮನೆಯ ಮಾಲೀಕ ನೀನಾ ಎಂದು ಪ್ರಶ್ನಿಸುತ್ತಿದ್ದಾರೆ. ಈ ದೇಶದ ಸ್ವಾತಂತ್ರ್ಯದ ಪರಂಪರೆಯಲ್ಲಿ ನಮ್ಮ ಪ್ರಧಾನಿಗಳಿಗೆ ಸ್ಥಾನವೇ ಇಲ್ಲ. ಭಗತ್ ಸಿಂಗ್ ಅವರು ನಗುನಗುತ್ತಾ ನೇಣಿಗೆ ತಲೆ ಕೊಟ್ಟರೆ ಸಾವರ್ಕರ್ ಅವರು ಬಂಧನದ ಮಾರನೇ ದಿನವೇ ಬ್ರಿಟಿಷರೊಂದಿಗೆ ಕ್ಷಮೆಯಾಚನೆಗೆ ಸಿದ್ಧರಾದರು. ಕ್ಷಮೆಯಾಚಿಸಿ ಬಂಧಮುಕ್ತಗೊಂಡರು ಎಂದವರು ವಿಶ್ಲೇಷಿಸಿದರು.

ಇದು ನನ್ನ 27ನೇ ಸಿಎಎ, ಎನ್ಆರ್ ಸಿ, ಎನ್ ಪಿ ಆರ್ ಸಭೆ. ಈವರೆಗೂ ಒಂದೇ ಒಂದು ಅಶಾಂತಿಯ  ಘಟನೆ ನಡೆದಿಲ್ಲ. ಲಕ್ಷಾಂತರ ಮಂದಿಯನ್ನು ಲಾಠಿಚಾರ್ಜ್ ಇಲ್ಲದೆ ಇಲ್ಲೆಲ್ಲಾ ನಿಭಾಯಿಸಲಾಗಿದೆ. ಹಾಗಿದ್ದರೆ, 200 ಮಂದಿಯನ್ನು ನಮ್ಮ ಮಂಗಳೂರಿನ ಪೊಲೀಸರಿಗೆ ನಿಭಾಯಿಸಲು ಸಾಧ್ಯವಾಗದೆ ಹೋದದ್ದೇಕೆ? ಇಂಡಿಯಾ ರಿಪಬ್ಲಿಕ್ ನ ಬದಲು ನಾಗಪುರ ರಿಪಬ್ಲಿಕ್ ನಿಂದ ಬಂದ ಆದೇಶ ಜಾರಿ ಮಾಡಲು ಹೊರಟರೆ ಹೀಗಾಗುತ್ತದೆ ಎಂದವರು ಹೇಳಿದರು.

ಪ್ರಧಾನಿಯವರು ಸುಳ್ಳು ಹೇಳುತ್ತಿದ್ದಾರೆ. ಸಿಎಎ- ಪೌರತ್ವ ಕಿತ್ತುಕೊಳ್ಳುವ ಕಾಯ್ದೆ ಅಲ್ಲ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಇದು ಅರ್ಧಸತ್ಯ. ನಿಜ ಏನೆಂದರೆ ಇದು ಪೌರತ್ವ ನಿರಾಕರಿಸುವ ಕಾಯ್ದೆ ಎಂದವರು ಹೇಳಿದರು. ಈ ಹಿಂದೆ ಗೃಹ ಸಚಿವರು- ಆರಂಭದಲ್ಲಿ ಸಿಎಎ ತರುತ್ತೇವೆ, ಬಳಿಕ ಎನ್ ಆರ್ ಸಿ ತರುತ್ತೇವೆ ಎಂದು ಹೇಳಿದ್ದರು. ಡಿಸೆಂಬರ್ 22ರಂದು ರಾಮಲೀಲಾ ಮೈದಾನದಲ್ಲಿ 90 ನಿಮಿಷ ಭಾಷಣ ಮಾಡಿದ ಪ್ರಧಾನಿಯವರು 90 ಸುಳ್ಳುಗಳನ್ನು ಹೇಳಿದರು. 2019 ಜುಲೈಯಲ್ಲಿ ಎನ್ಟಿಆರ್ ಗೆ ಸಂಬಂಧಿಸಿ ನೋಟಿಫಿಕೇಶನ್ ಆಗಿದೆ. ಎನ್ ಪಿ ಆರ್ ಮಾಡುವುದೇ ಎನ್ ಆರ್ ಸಿಗಾಗಿ ಎಂದು 2003ರಲ್ಲಿ ವಾಜಪೇಯಿ ಸರಕಾರದ ತಂದ ಕಾನೂನು ತಿದ್ದುಪಡಿ ಹೇಳುತ್ತದೆ. ಆದ್ದರಿಂದ ಈ ಕಾನೂನನ್ನು ಕೇಂದ್ರ ಸರಕಾರ ಹಿಂಪಡೆಯುವವರೆಗೆ ನಾವು ಬೀದಿಯಲ್ಲಿ ನಿಂತು ಪ್ರಶ್ನಿಸಬೇಕು ಎಂದು ಅವರು ಕರೆಕೊಟ್ಟರು.

ವಿಶ್ರಾಂತ ಐ ಎ ಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಮಾತನಾಡಿ, ಈಗಿನ ಕೇಂದ್ರ ಸರಕಾರಕ್ಕೆ ಒಂದು ಭಂಡ ವಿಶ್ವಾಸ ಇತ್ತು. ಅದೇನೆಂದರೆ ನಾವು ಜನರನ್ನು ಭಯ ಪಡಿಸಬಲ್ಲೆವು, ಮೀಡಿಯಾವನ್ನು ಭಯ ಪಡಿಸಬಲ್ಲೆವು, ನ್ಯಾಯಾಂಗವನ್ನು ಭಯ ಪಡಿಸಬಲ್ಲೆವು ಎಂಬುದು. ಆದರೆ ಜನರು ಒಂದು ಹಂತದವರೆಗೆ ಈ ಸರಕಾರವನ್ನು ಸಹಿಸಿಕೊಂಡರು. ಬಳಿಕ ಬೀದಿಗಿಳಿದರು. ಈಗ ಸರಕಾರ ಗೊಂದಲದಲ್ಲಿದೆ ಎಂದರು.

ಕೇಂದ್ರ ಸರಕಾರಕ್ಕೆ ಬೌದ್ಧಿಕ ಸ್ಪಷ್ಟತೆಯಿಲ್ಲ. ಯಾವುದೇ ತೀರ್ಮಾನಗಳಲ್ಲಿ ಸ್ಪಷ್ಟತೆಯಿಲ್ಲ. ನಿಷೇಧ, ಜಿಎಸ್ಟಿ ಮತ್ತು ಕಾಶ್ಮೀರದ 370 ನೇ ವಿಧಿ ರದ್ದು- ಈ ಮೂರರ ಬಳಿಕವೂ ಕೇಂದ್ರ ಗೊಂದಲದಲ್ಲಿದೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಯಾವ ನೀಲನಕ್ಷೆಯೂ ಅದರಲ್ಲಿಲ್ಲ. ಎನ್ ಆರ್ ಸಿ, ಸಿ ಎ ಎ ಮತ್ತು ಎನ್ ಪಿ ಆರ್ ಕೂಡ ಇಂಥದೇ ಗೊಂದಲದ ಒಂದು ನಡೆ. ಸರಕಾರದಲ್ಲಿ ಈ ಬಗ್ಗೆ ಸ್ಪಷ್ಟತೆ ಇದ್ದಂತೆ ಗೋಚರಿಸುತ್ತಿಲ್ಲ. ಮುಂದೇನು ಅನ್ನುವ ಬಗ್ಗೆ ಅದರಲ್ಲಿ ಪರಿಜ್ಞಾನವೇ ಇಲ್ಲ ಎಂದವರು ಹೇಳಿದರು.

ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಕೊಡುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ಈ ದೇಶಕ್ಕೆ ಅತ್ಯಂತ ಹೆಚ್ಚು ವಲಸಿಗರು ಶ್ರೀಲಂಕಾದಿಂದ ಬಂದಿದ್ದಾರೆ. ಆದರೆ ಅಲ್ಲಿಂದ ಬಂದವರಿಗೆ ಪೌರತ್ವ ಕೊಡುವ ಯಾವ ನಿಯಮವೂ ಸಿ ಎ ಎ ಯಲ್ಲಿ ಇಲ್ಲ. ಯಾಕೆಂದರೆ ಶ್ರೀಲಂಕಾ ಬೌದ್ಧ ರಾಷ್ಟ್ರ. ಅಲ್ಲಿಂದ ಭಾರತಕ್ಕೆ ವಲಸೆ ಬಂದವರಲ್ಲಿ ಹಿಂದೂಗಳಂತೆಯೇ ಮುಸ್ಲಿಮರೂ ಇದ್ದಾರೆ. ಒಂದು ವೇಳೆ, ಶ್ರೀಲಂಕಾದ ವಲಸಿಗರಿಗೆ ಪೌರತ್ವ ಕೊಡುವಾಗ ಮುಸ್ಲಿಮರಿಗೂ ಕೊಡಬೇಕಾಗುತ್ತದೆ.ಈ ಕಾರಣಕ್ಕಾಗಿ ಹಿಂದೂಗಳಿಗೂ ಕೇಂದ್ರ ಪೌರತ್ವ ಕೊಡುತ್ತಿಲ್ಲ. ಅದರ ಉದ್ದೇಶವೇ ಮುಸ್ಲಿಮರನ್ನು ತುಳಿಯುವುದು ಎಂದವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸುಧೀರ್ ಕುಮಾರ್ ಮರೋಳಿ ಸಂದರ್ಭೋಚಿತವಾಗಿ ಮಾತನಾಡಿದರು. ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಾಲ್ದಾನಾ, ಸುನ್ನಿ ಯುವಜನ ಸಂಘ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಜೈನಿ, ಸಮಸ್ತ ಮುಶಾವರದ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಝೀಝ್ ದಾರಿಮಿ, ಪಿಎಫ್ಐ ರಾಜ್ಯ ಅಧ್ಯಕ್ಷ ಮುಹಮ್ಮದ್ ಶಾಕಿಬ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ, ಎಸ್ ಕೆಎಸ್ಸೆಂ ಕಾರ್ಯದರ್ಶಿ ಎಂ ಜಿ ಮಹಮ್ಮದ್, ಯುನಿವೆಫ್ ರಾಜ್ಯ ಅಧ್ಯಕ್ಷ ರಫಿಉದ್ದಿನ್ ಕುದ್ರೋಳಿ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ಮುಂತಾದವರು ಸಂದರ್ಭೋಚಿತವಾಗಿ ಮಾತನಾಡಿದರು. ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆಎ ಸ್ ಮುಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಬಿ ಎಂ ಮುಮ್ತಾಜ್ ಅಲಿ ಧನ್ಯವಾದವಿತ್ತರು. ಉಮರ್ ಯು ಹೆಚ್ ಸಭೆಯ ಹಕ್ಕೊತ್ತಾಯವನ್ನು ಮಂಡಿಸಿದರು. ಹಾಜಿ ಇಬ್ರಾಹಿಂ ಕೋಡಿಜಾಲ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಸಭೆಯನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಆರಂಭದಲ್ಲಿ ದುವಾ ನೆರವೇರಿಸಿದರು. ಬಿ ಎ ಮಹಮ್ಮದಲಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಲಕ್ಷಕ್ಕಿಂತಲೂ ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.