ಸನ್ಮಾರ್ಗ ವಾರ್ತೆ
ಮಂಗಳೂರು, ಏಪ್ರಿಲ್ 6: ಸೌದಿ ಅರೇಬಿಯಾದ ಜುಬೈಲ್ನಲ್ಲಿ ದ.ಕ. ಜಿಲ್ಲೆಯ ಅನಿವಾಸಿ ಭಾರತೀಯ ಯುವಕರ ತಂಡವು 2020ರಲ್ಲಿ ಸ್ಥಾಪಿಸಿರುವ ಮನ್ನಾನ್ ಫೌಂಡೇಶನ್ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿವೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಊರಿಗೆ ಬರಲಾಗದೆ ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದವರನ್ನು ನಾಲ್ಕು ಚಾರ್ಟರ್ಡ್ ವಿಮಾನಗಳ ವ್ಯವಸ್ಥೆ ಮಾಡಿ, ಊರಿಗೆ ತಲಪಿಸಲಾಗಿದೆ. ಬಡವರ, ನಿರ್ಗತಿಕರ ಆಶಾಕಿರಣವಾಗಿ ಬೆಳೆಯಬೇಕೆಂಬ ಧ್ಯೇಯೋದ್ಧೇಶವನ್ನು ಹೊಂದಿರುವ ಈ ಸಂಸ್ಥೆಯು ಬಡ ಹೆಣ್ಮಕ್ಕಳ ಮದುವೆಗೆ ಸಹಾಯ ನೀಡುತ್ತಾ ಬಂದಿದೆ. ಕಳೆದ ವರ್ಷ ಮಂಗಳೂರಿನ ಬೆಂಗ್ರೆಯಲ್ಲಿ ನಾಲ್ಕು ಜೋಡಿಗಳ ಸರಳ ವಿವಾಹ ಕಾರ್ಯಕ್ರಮ ಏರ್ಪಡಿಸಿದೆ. ಆಯ್ದ ಕುಟುಂಬಗಳಿಗೆ ‘ರಮಝಾನ್ ಕಿಟ್’ ವಿತರಣೆ, ಶೈಕ್ಷಣಿಕ ಮತ್ತು ವೈದ್ಯಕೀಯ ನೆರವು ಯೋಜನೆಗಳನ್ನು ಕೈಗೆತ್ತಿ ಕೊಂಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.
ಇಪ್ಪತ್ತಕ್ಕೂ ಹೆಚ್ಚು ಟ್ರಸ್ಟಿಗಳು ಹಾಗೂ ಐವತ್ತಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಮಂಗಳೂರಿನ ಮನ್ನಾನ್ ಫೌಂಡೇಶನ್ ಎಪ್ರಿಲ್ 8ರಂದು 6 ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭವನ್ನು ಹಮ್ಮಿಕೊಂಡಿದೆ. ಮಂಗಳೂರಿನ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ ಬಳಿಯ ಯುನಿಟಿ ಸಭಾಂಗಣದಲ್ಲಿ ಬೆಳಿಗ್ಗೆ 11.00ಕ್ಕೆ ಚೊಕ್ಕಬೆಟ್ಟು ಮುಹ್ಯುದ್ದೀನ್ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಅಝೀಝ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮನ್ನಾನ್ ಫೌಂಡೇಶನ್ನ ಅಧ್ಯಕ್ಷ ಆರಿಫ್ ಬಿ.ಎಂ. ಅಧ್ಯಕ್ಷತೆ ವಹಿಸಲಿದ್ದಾರೆ.
ಶಾಸಕ ಯು.ಟಿ ಖಾದರ್, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್ ಉಚ್ಚಿಲ್, ನಂಡೊ ಪೆಂಙಲ್ ಸಂಘಟನೆಯ ಅಧ್ಯಕ್ಷ ಬಿ.ಎಂ. ಮುಮ್ತಾಝ್ ಅಲಿ, ಅಲ್ ವಫಾ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು, ನಿವೃತ್ತ ಪೋಲಿಸ್ ಅಧಿಕಾರಿ ಜಿ.ಎ. ಬಾವ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಎಸ್ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ, ಟ್ರಾನ್ಸಿಸ್ಟ್ ಒನ್ ಮಾಲ್ನ ಸ್ಥಾಪಕ ಪಿ.ಎಸ್. ಮುಹಮ್ಮದ್, ಫ್ಲೊರಾ ಸಂಸ್ಥೆಯ ಮುತ್ತಲಿಬ್, ಕುದ್ರೋಳಿ ಇಸ್ಲಾಮಿಯಾ ಮದ್ರಸದ ಮುಖ್ಯ ಶಿಕ್ಷಕ ಅಬ್ದುಲ್ ಲತೀಫ್ ಆಲಿಯಾ ಹಾಗೂ ಸಾಮಾಜಿಕ ಕಾರ್ಯಕರ್ತ ಶರೀಫ್ ವಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಆಹ್ವಾನಿತರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶವಿದ್ದು, ರಾಜ್ಯ ಸರಕಾರದ ಎಲ್ಲಾ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಆರಿಫ್ ಬಿ.ಎಂ. (ಅಧ್ಯಕ್ಷ, ಮನ್ನಾನ್ ಫೌಂಡೇಶನ್, ಮಂಗಳೂರು) – ಮೊ.ಸಂ.: 7019212561, ಅಬ್ದುಲ್ ರಹೀಮ್ (ಉಪಾಧ್ಯಕ್ಷ, ಮನ್ನಾನ್ ಫೌಂಡೇಶನ್, ಮಂಗಳೂರು) ನೂರುದ್ದೀನ್ ಕಂದಕ (ಟ್ರಸ್ಟಿ, ಮನ್ನಾನ್ ಫೌಂಡೇಶನ್, ಮಂಗಳೂರು) ಭಾಗವಹಿಸಿದ್ದರು.












