ಸನ್ಮಾರ್ಗ ವಾರ್ತೆ
ಭಯೋತ್ಪಾದನಾ ಆರೋಪದಿಂದ 2025 ಫೆಬ್ರವರಿಯಲ್ಲಿ ಖುಲಾಸೆಗೊಂಡಿದ್ದರೂ ಜಾರ್ಖಂಡಿನ ಮೌಲಾನಾ ತನ್ನ ಮೇಲೆ ಹೇರಲಾಗಿರುವ ಸಾಮಾಜಿಕ ಬಹಿಷ್ಕಾರ ಮತ್ತು ತಾನು ಹಾಗೂ ಕುಟುಂಬ ಅನುಭವಿಸುತ್ತಿರುವ ಸಂಕಟಗಳ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಸಮುದಾಯವೇ ನನ್ನನ್ನು ದೂರ ಇಟ್ಟಿದೆ. ನನ್ನ ಕುಟುಂಬಿಕರು ನನ್ನನ್ನು ಹತ್ತಿರ ಸೇರಿಸುತ್ತಿಲ್ಲ. ನನ್ನನ್ನು ನೋಡಿದರೂ ಅವರು ಮುಖ ತಿರುಗಿಸುತ್ತಾರೆ ಎಂದು ಮೌಲಾನ ಖಲೀಮುದ್ದೀನ್ ಮುಜಾಹಿರಿ ಹೇಳಿದ್ದಾರೆ.
ಇವರು ಮತ್ತು ಒಡಿಸ್ಸಾದ ಮೌಲಾನ ಅಬ್ದುಲ್ ರಹಮಾನ್ ಅಲಿಖಾನ್ ಹಾಗೂ ಜಂಶೆಡ್ಪುರದ ಅಬ್ದುಲ್ ಶಮಿ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
2025 ಫೆಬ್ರವರಿ 28ರಂದು ಜಾರ್ಖಂಡ್ ನ್ಯಾಯಾಲಯ ಇವರನ್ನು ಖುಲಾಸೆಗೊಳಿಸಿತು. ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಸೂಕ್ತ ಪುರಾವೆಗಳನ್ನು ಮಂಡಿಸಲಾಗಿಲ್ಲ ಎಂದು ಹೇಳಿ ನ್ಯಾಯಾಲಯ ಇವರನ್ನು ದೋಷ ಮುಕ್ತಗೊಳಿಸಿತು.
ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋದ ವರದಿಯ ಪ್ರಕಾರ 2014 ರಿಂದ 22 ರ ನಡುವೆ 87 19 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 567 ಮಂದಿಯನ್ನು ದೋಷ ಮುಕ್ತಗೊಳಿಸಲಾಗಿದೆ ಮತ್ತು 222 ಮಂದಿಯನ್ನು ಯುಎಪಿಎ ಪ್ರಕರಣದಲ್ಲಿ ಶಿಕ್ಷೆಗೆ ಒಳಪಡಿಸಲಾಗಿದೆ. ಆದರೆ 90 ಶೇಕಡಕ್ಕಿಂತಲೂ ಅಧಿಕ ಪ್ರಕರಣಗಳು ಇನ್ನೂ ಮುಕ್ತಾಯಗೊಂಡಿಲ್ಲ.
ಪಿಯುಸಿಎಲ್ ನೀಡಿರುವ ಲೆಕ್ಕ ಪ್ರಕಾರ 2009 ರಿಂದ 2014ರ ನಡುವೆ ಎನ್ ಐ ಎ UAPA ಅಡಿ 69 ಪ್ರಕರಣಗಳನ್ನು ದಾಖಲಿಸಿತ್ತು. ಆದರೆ 2014 ರಿಂದ 22 ರ ನಡುವೆ 288 ಪ್ರಕರಣಗಳನ್ನು ದಾಖಲಿಸಲಾಗಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯುಎಪಿಎ ಕಾಯ್ದೆಯಡಿ ದಾಖಲಿಸುವ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ ಅನ್ನೋದನ್ನು ಇದು ಸೂಚಿಸುತ್ತದೆ.
ಈ ಮೇಲಿನ ಮೂವರನ್ನೂ 2015 ಮತ್ತು 19ರ ನಡುವೆ ಬಂಧಿಸಲಾಗಿದೆ. ಮತ್ತು ಇವರಿಗೆ ಆಲ್ ಕಾಯ್ದದೊಂದಿಗೆ ಸಂಬಂಧ ಇದೆ ಎಂದು ಆರೋಪಿಸಲಾಗಿದೆ. 2015ರಲ್ಲಿ ಮುಜಾಹಿರಿಯವರನ್ನು ಒಡಿಸ್ಸಾದಿಂದ ಬಂಧಿಸಲಾಯಿತು. ಆ ಬಳಿಕ ಶಮಿ ಅವರನ್ನು ಹರಿಯಾಣದಿಂದ 2016ರಲ್ಲಿ ಬಂದಿಸಲಾಯಿತು.
ಆದರೆ ಇವರ ವಿರುದ್ಧ ಸಾಬೀತುಪಡಿಸುವಂತಹ ಯಾವುದೇ ಪುರಾವೆಗಳು ಇಲ್ಲ ಎಂದು ಹೇಳಿ 2020ರಲ್ಲಿ ನ್ಯಾಯಾಲಯ ಜಾಮೀನು ನೀಡಿತು. ಈ ಬಗ್ಗೆ ಆರ್ಟಿಕಲ್ 14 ವೆಬ್ ತಾಣವು ವಿಸ್ತೃತ ವರದಿಯನ್ನು ಮಾಡಿದೆ.












