ಎಂಫ್ರೆಂಡ್ಸ್‌ನಿಂದ ‘ಈದ್ ಮಿಲನ್’ ಕಾರ್ಯಕ್ರಮ

0
209

ಸನ್ಮಾರ್ಗ ವಾರ್ತೆ

ಬಂಟ್ವಾಳ: ಮಂಗಳೂರಿನ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈದ್ ಮಿಲನ್-22 ಕಾರ್ಯಕ್ರಮವು ಕಾವಳಕಟ್ಟೆಯ ಹಿದಾಯ ಶೇರ್ ಆ್ಯಂಡ್ ಕೇರ್ ಕಾಲೊನಿಯಲ್ಲಿ ಭಾನುವಾರ ನಡೆಯಿತು.

ನಿವೃತ್ತ ಶಿಕ್ಷಕ ಬಿ.ಎಂ.ತುಂಬೆ ಅವರು ಈದ್ ಸಂದೇಶ ನೀಡಿ, ಬಕ್ರೀದ್ ಹಬ್ಬವು ಮಾನವೀಯ ಮೌಲ್ಯ, ತ್ಯಾಗ ಹಾಗೂ ಭ್ರಾತೃತ್ವದ ಉದಾತ್ತ ಸಂದೇಶಗಳನ್ನು ನೀಡುತ್ತದೆ. ಮನುಷ್ಯ ತನ್ನ ದೈನಂದಿನ ಬದುಕಿನಲ್ಲಿ ಕೆಡಕು, ಸುಳ್ಳು, ಅಹಂಕಾರ, ಮೋಸ, ವಂಚನೆ, ದುರಭ್ಯಾಸಗಳು, ಪರದೂಷಣೆಯಂತಹ ಕೆಟ್ಟ ಚಾಳಿಗಳನ್ನು ಮನಃಪೂರ್ವಕವಾಗಿ ತ್ಯಾಗ ಮಾಡಿ, ನೆಮ್ಮದಿಯ ಬದುಕು ನಡೆಸಬೇಕು. ಅರಿಷಡ್ವರ್ಗಗಳ ಮೇಲೆ ನಿಯಂತ್ರಣ ಇಡಬೇಕು ಎಂಬುದೇ ನಿಜವಾದ ಈದ್ ಸಂದೇಶ ಎಂದರು.

ಮುಖ್ಯ ಅತಿಥಿ ಮಂಗಳೂರು ಡೆಕ್ಕನ್ ಪ್ಲಾಸ್ಟ್‌ನ ಮಾಲೀಕ ಬಿಎಚ್.ಅಸ್ಗರ್ ಅಲಿ ಮಾತನಾಡಿ, ಮಾನವೀಯ ಸೇವೆಗೆ ಎಂಫ್ರೆಂಡ್ಸ್ ಉತ್ತೇಜನ ನೀಡುತ್ತಿದೆ. ಇಂಥ ಸಂಸ್ಥೆಗಳ ಮೂಲಕ ನಮ್ಮ ಉದ್ಯಮದ ಒಂದಂಶ ಅರ್ಹರಿಗೆ ಸಿಗುತ್ತಿದೆ ಎಂಬುದೇ ಸಮಾಧಾನದ ವಿಷಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಗೋಳ್ತಮಜಲು ಮಾತನಾಡಿ, ಸಮಾಜಸೇವಾ ಚಟುವಟಿಕೆಯಲ್ಲಿ ತೊಡಗಿರುವ ಎಂಫ್ರೆಂಡ್ಸ್, ಪ್ರತಿವರ್ಷ ಈದ್, ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಕಾರುಣ್ಯ ಯೋಜನೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದರೆ, ಹಿದಾಯ ಕಾಲೊನಿಯ ವಿಕಲಚೇತನ ಮಕ್ಕಳ ಶಾಲೆಯು ನಮ್ಮ ದೊಡ್ಡ ಸಾಹಸ ಎಂದರು.

ಎಂಫ್ರೆಂಡ್ಸ್‌ನ ಅನಿವಾಸಿ ಭಾರತೀಯ ಸದಸ್ಯರಾದ ಮುಹ್ಸಿನ್ ಬಜಪೆ, ಶೌಕತ್ ಅಲಿ ಬಂಟ್ವಾಳ, ಇಬ್ರಾಹಿಂ ಮೊಹಿದಿನ್ ನಂದಾವರ, ಹಿದಾಯ ಫೌಂಡೇಶನ್ ಆಡಳಿತಾಧಿಕಾರಿ ಆಬಿದ್ ಅಲಿ, ಆಸಿಫ್ ಇಕ್ಬಾಲ್ ಉಪಸ್ಥಿತರಿದ್ದರು.

ಹಿದಾಯ ಕೇರ್ ಸೆಂಟರ್‌ಗೆ ಅಗತ್ಯವಿರುವ ದೊಡ್ಡ ಗ್ರೈಂಡರ್, ಪಾತ್ರೆ ಸಾಮಗ್ರಿ, ವಿಕಲಚೇತನ ಮಕ್ಕಳಿಗೆ ಕುರ್ಚಿ, ಕಾಲೊನಿಯ ಮಹಿಳೆಯರಿಗೆ ವಸ್ತ್ರಗಳನ್ನು  ವಿತರಿಸಲಾಯಿತು.

ಎಂಫ್ರೆಂಡ್ಸ್ ಸದಸ್ಯ ಆಶಿಕ್ ಕುಕ್ಕಾಜೆ ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು. ಸದಸ್ಯ ಅಹ್ಮದ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು. ಹಿದಾಯ ಕಾಲೊನಿಯ ಚಟುವಟಿಕೆಗಳ ಬಗ್ಗೆ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಮಾಹಿತಿ ನೀಡಿದರು.