ಟಿಕ್‌ಟಾಕ್‌ನಲ್ಲಿ ಕಲಿತ ಕೈಸನ್ನೆ ಬಳಸಿ ಬದುಕುಳಿದ 16ರ ಬಾಲಕಿ: ಪೊಲೀಸರಿಂದ ಅಪಹರಣಕಾರನ ಬಂಧನ

0
521

ಸನ್ಮಾರ್ಗ ವಾರ್ತೆ

ಫ್ರಾಂಕ್‌ಫರ್ಟ್: ಟಿಕ್‌ಟಾಕ್‌ನಲ್ಲಿ ರಕ್ಷಣೆಗಾಗಿ ಬಳಸುತ್ತಿದ್ದ ಕೈಸನ್ನೆಯನ್ನು ಬಳಸಿ ಬಾಲಕಿ ತನ್ನ ಜೀವ ಉಳಿಸಿಕೊಂಡ ಘಟನೆ ಅಮೆರಿಕದ ಫ್ರಾಂಕ್‌ಫರ್ಟ್‌ನ ಕೆಂಟುಕಿಯಲ್ಲಿ ನಡೆದಿದೆ. ಕೆನಡಾದ ಮಹಿಳಾ ಫೌಂಡೇಶನ್ ಕಳೆದ ವರ್ಷ ಈ ಹ್ಯಾಂಡ್ ಸಿಗ್ನಲ್(ಕೈ ಸನ್ನೆ)ಅನ್ನು ಪರಿಚಯಿಸಿತ್ತು.

ಕೆಂಟುಕಿಯಲ್ಲಿ ೧೬ ವರ್ಷದ ಬಾಲಕಿಯು ಹಿರಿಯ ವ್ಯಕ್ತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಳು. ಈ ಸಂದರ್ಭ ಆಕೆ ಟಿಕ್‌ಟಾಕ್‌ನಲ್ಲಿ ಕಲಿತ ಕೈ ಸನ್ನೆಯನ್ನು ಬಳಸಿಕೊಂಡು ಸಹಾಯ ಯಾಚಿಸಿದ್ದಳು. ಈಕೆಯ ಕೈಸನ್ನೆಯನ್ನು ಗಮನಿಸಿದ ವಾಹನ ಚಾಲಕನೊಬ್ಬ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.

ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ವಾಹನ ಚಾಲಕನಿಗೆ ಬಾಲಕಿಯ ಕೈಸನ್ನೆ ಅರ್ಥವಾದ ಕೂಡಲೇ ಅವರು 911ಕ್ಕೆ ಕರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕಿಯನ್ನು ಅಪಹರಿಸಿದ್ದ ೬೧ ವರ್ಷದ ಜೇಮ್ಸ್ ಹರ್ಬರ್ಟ್ ಬ್ರಿಕ್‌ನನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.

ಉತ್ತರ ಕೆರೊಲಿನಾದಲ್ಲಿ ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಬಾಲಕಿಯ ಪೋಷಕರು ದೂರು ನೀಡಿದ್ದರು. ಕೆನಡಾದ ಮಹಿಳಾ ಫೌಂಡೇಶನ್ ಕಳೆದ ವರ್ಷ ಮೊದಲು ಬಾರಿಗೆ ಈ ಹ್ಯಾಂಡ್ ಸಿಗ್ನಲ್ ಅನ್ನು ಪರಿಚಯಿಸಿತ್ತು. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ. ಜನರು ಮನೆಯಲ್ಲಿ ಹಾಗೂ ಬೇರೆಡೆ ಸಂಭವನೀಯ ತೊಂದರೆಗಳ ಕುರಿತು ಇತರರನ್ನು ಎಚ್ಚರಿಸುವುದು ಇದರ ಉದ್ದೇಶವಾಗಿದೆ.