ಕುರ್‌ಆನ್ ಅರಿಯುವಲ್ಲಿ ಮುಸ್ಲಿಮರ ಮತ್ತು ಮುಸ್ಲಿಮೇತರರ ತಪ್ಪುಗಳು..

0
415

ಸನ್ಮಾರ್ಗ ವಾರ್ತೆ

✍️ಮುಷ್ತಾಕ್ ಹೆನ್ನಾಬೈಲ್
ಸಾಹಿತಿ ಮತ್ತು ಉದ್ಯಮಿ

ಪವಿತ್ರ ಕುರ್‌ಆನನ್ನು ಮನುಕುಲದ ಗ್ರಂಥವೆಂದು ಭಾವಿಸದೆ ಬರೀ ಮುಸ್ಲಿಮರ ಗ್ರಂಥವೆಂಬಂತೆ ಅದು ಸೀಮಿತಗೊಳಿಸಿ ಕೊಂಡಿರುವುದು ಮುಸ್ಲಿಮರ ಮೊದಲ ತಪ್ಪು.

ಮುಸ್ಲಿಮೇತರರು ಕುರ್‌ಆನ್ ಬಗ್ಗೆ ಆರೋಪ ಮಾಡಿದಾಗ ಅಥವಾ ಪ್ರಶ್ನೆ, ಅನುಮಾನ, ವಿವರಣೆಗಳನ್ನು ಕೇಳಿದಾಗ ಸೂಕ್ತವಾಗಿ ಗ್ರಂಥದ ಸೂಕ್ತಗಳನ್ನು ವಿವರಿಸುವಷ್ಟು ಪ್ರಾಥಮಿಕ ಜ್ಞಾನವೂ ಬಹುತೇಕರಿಗೆ ಇಲ್ಲದೇ ಇರುವುದು ಮುಸ್ಲಿಮರ ಎರಡನೆಯ ತಪ್ಪು.

ಸ್ಥಳೀಯ ಭಾಷೆ ಮತ್ತು ಸಾಹಿತ್ಯದ ಸ್ವರೂಪದಲ್ಲಿ ಕುರ್ ಆನನ್ನು ಪ್ರಸಾರ ಮಾಡದೆ ಇರುವುದು ಮೂರನೆಯ ತಪ್ಪು.

ರಾಜಕೀಯ ಕಾರಣಗಳಿಗೋಸ್ಕರ ಕೆಲವು ಮಾಧ್ಯಮ, ವ್ಯಕ್ತಿ, ಸಂಘಟನೆ-ಸಂಸ್ಥೆಗಳಿಂದ ವಿರೂಪ ಮತ್ತು ಅಪವ್ಯಾಖ್ಯಾನಗೊಂಡ ಕೆಲವು ಆಯ್ದ ಸೂಕ್ತಗಳ ಕುರಿತು ಮುಸ್ಲಿಮೇತರರ ಪ್ರಾಮಾಣಿಕವಾದ ಅನುಮಾನಗಳನ್ನು ನಿರ್ಲಕ್ಷಿಸಿ ಮನವರಿಕೆಯ ವ್ಯವಸ್ಥೆ ಮಾಡದೆ ಇರುವುದು ಮುಸ್ಲಿಮರ ನಾಲ್ಕನೆಯ ತಪ್ಪು.

ಸುಲಭದಲ್ಲಿ ಸಿಗುವ ಕನ್ನಡ ಭಾಷೆಯಲ್ಲಿ ಅನುವಾದಿತಗೊಂಡಿರುವ ಕುರ್‌ಆನನ್ನು ಓದದೇ ಕೇವಲ ಅಕ್ಕಪಕ್ಕದ ಮುಸ್ಲಿಮರನ್ನು ನೋಡಿ ಮತ್ತು ರಾಜಕೀಯ ಪ್ರೇರಿತ ವ್ಯಕ್ತಿ ಮತ್ತು ಮಾಧ್ಯಮಗಳ ದುರುದ್ದೇಶಪೂರಿತ ವ್ಯಾಖ್ಯಾನಗಳನ್ನು ನೋಡಿ ಇಸ್ಲಾಮನ್ನು ಅಳೆಯುವುದು ಮುಸ್ಲಿಮೇತರರ ದೊಡ್ಡ ತಪ್ಪು.

ಈ ಎಲ್ಲ ಕಾರಣಗಳಿಂದ ಪವಿತ್ರ ಕುರ್‌ಆನಿನ ನೈಜ ಆದೇಶ-ಆಶಯಗಳು ವ್ಯತಿರಿಕ್ತವಾಗಿ ಬಿಂಬಿತವಾಗಿ ಹಿಂದೂ ಮುಸ್ಲಿಮರ ಸಂಬಂಧಗಳ ನಡುವೆ ಕೆಲವೊಮ್ಮೆ ಸಮಸ್ಯೆಯಾಗಿದೆ.

ಯಾವುದೇ ಸಮುದಾಯದ ಸಾರ್ವಜನಿಕ ನಡಾವಳಿಕೆಗಳು ಎಂದೂ ಕೂಡ ಅವರವರ ಧರ್ಮಗ್ರಂಥದಂತೆ ಇರುವುದಿಲ್ಲ. ಜಗತ್ತಿನ ಯಾವುದೇ ಸಮುದಾಯವನ್ನು ಹಾಗೆ ನೋಡುವುದು ಸರಿಯಲ್ಲ. ಭಾರತವು ಸೇರಿದಂತೆ ಜಗತ್ತಿನ ಯಾವುದೇ ರಾಷ್ಟ್ರದ ಪ್ರಜೆ ನಡೆದುಕೊಳ್ಳುವ ರೀತಿಯನ್ನು ನೋಡಿ ಆ ದೇಶದ ಸಂವಿಧಾನ ಮತ್ತು ಕಾನೂನನ್ನು ಅಳೆಯುವುದು ಹಾಸ್ಯಾಸ್ಪದ ಮತ್ತು ಅಸಂಬದ್ಧ.

ಮುಸ್ಲಿಮರು ಅನ್ಯ ಧರ್ಮದವರನ್ನು ಸಹಿಸಿಕೊಳ್ಳುವುದಿಲ್ಲ ಮತ್ತು ಸೌಹಾರ್ದವನ್ನು ಬಯಸುವುದಿಲ್ಲ ಎಂಬ ಅಪಪ್ರಚಾರ ನಿತ್ಯ ನಿರಂತರ ನಡೆಯುತ್ತಿದೆ. ಅದಕ್ಕೆ ಪವಿತ್ರ ಕುರ್‌ಆನಿನ ಆಯ್ದ ಕೆಲವು ಬಹುದೇವರಾಧನೆ-ಕಾಫಿರ್ ಮುಂತಾದ ವಿಷಯಗಳ ಕುರಿತಾದ ಸೂಕ್ತಗಳನ್ನು ಮುಂದಿಡುತ್ತಾರೆ.

ಪೂರ್ತಿಯಾಗಿ ಕುರ್‌ಆನ್ ಓದದವರಿಗೆ ಕೆಲವು ಇಂತಹ ಆಯ್ದ ವಿಷಯಗಳಿರುವ, ಯುದ್ಧ ಮತ್ತು ಶತ್ರುವನ್ನು ಮಾತ್ರ ಸಂಭೋದಿಸಿ, ಸಂದರ್ಭಕ್ಕೆ ಸೀಮಿತವಾಗಿ ಅವತೀರ್ಣಗೊಂಡ ಸೂಕ್ತಗಳನ್ನು ಮುಂದಿಟ್ಟಾಗ ಅದು ಸತ್ಯ ಮತ್ತು ಸಾರ್ವಕಾಲಿಕ ಅನ್ವಯ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತದೆ.

ಅದು ಸತ್ಯವಾಗಿರುವುದಿಲ್ಲ ಮಾತ್ರವಲ್ಲ ಸಾರ್ವಕಾಲಿಕವಾಗಿ ಅನ್ವಯವೂ ಅಲ್ಲ. ಕೆಲವೊಂದು ಯುದ್ಧ ಕಾಲದ ಸೂಕ್ತಗಳು, ಕೆಲವು ಸಾಂದರ್ಭಿಕವಾಗಿ ಸಮಯ ಸೀಮೆಯೊಳಗೆ ಮಾತ್ರ ಅನ್ವಯವಾದ ಸೂಕ್ತಗಳು ಮತ್ತು ಕೆಲವು ಸಮಾಜಘಾತುಕರಿಗೆ ಶಿಕ್ಷೆಯ ರೂಪದಲ್ಲಿ ಭಯ ಹುಟ್ಟಿಸುವ ಎಚ್ಚರಿಕೆಯಿಂದ ಕೂಡಿದ ಸೂಕ್ತಗಳು, ಉದ್ದೇಶಪೂರ್ವಕವಾಗಿ ತಪ್ಪು ವ್ಯಾಖ್ಯಾನ ಮಾಡುವವರ ದುರ್ವ್ಯಾಖ್ಯಾನಗಳಿಗೆ ವಸ್ತುವಾಗಿದೆ.

ಮೊದಲಾಗಿ, ಬಹುದೇವರಾದಕರನ್ನು ಕೊಲ್ಲಿ ಎಂದು ಆದೇಶವಿದೆ ಎನ್ನುವ ಸೂಕ್ತ ಸಾಂದರ್ಭಿಕ ಸೂಕ್ತವಾಗಿದೆ. ಮುಸ್ಲಿಮರ ಮಕ್ಕಾ ವಿಜಯದ ಕಾಲದಲ್ಲಿ ಗಟ್ಟಿ ಒಪ್ಪಂದವನ್ನು ಉಲ್ಲಂಘಿಸಿದ 12 ಜನ ನಿರ್ದಿಷ್ಟ ನಿರ್ದಯಿ ಅಪರಾಧಿಗಳ ಕುರಿತಾಗಿ ಅವತೀರ್ಣಗೊಂಡ ಸೂಕ್ತವದು. ಅದೊಂದು ಯುದ್ಧ ರಂಗದಲ್ಲಿ ಪಾಲಿಸಲು ಇದ್ದ ಅಪ್ಪಟ ಆದೇಶವೇ ಹೊರತು ಜಗತ್ತಿನಲ್ಲಿರುವ ಬಹುದೇವರಾಧಕರನ್ನು ಉದ್ದೇಶಿಸಿದ್ದು ಅಲ್ಲ. ಈ ಅಪರಾಧಿಗಳು ಯಾವುದೇ ದೇಶವನ್ನಾಗಲಿ, ನಿರ್ದಿಷ್ಟ ಪಂಗಡವನ್ನಾಗಲಿ, ನಿರ್ದಿಷ್ಟ ಪ್ರದೇಶವನ್ನಾಗಲಿ ಪ್ರತಿನಿಧಿಸುವವರಾಗಿರಲಿಲ್ಲ. ಇವರು ಅರಬ್‌ನ ಬೇರೆ ಬೇರೆ ಭಾಗ ಮತ್ತು ಬುಡಕಟ್ಟಿನ ಅಪರಾಧಿಗಳಾಗಿದ್ದರು. ಆದರೆ ಇವರೆಲ್ಲರೂ ಬಹುದೇವಾರಾಧನೆಯಲ್ಲಿ ಸಮಾನರಾಗಿದ್ದರು. ಹೀಗಿರುವುದರಿಂದ ಆ 12 ಜನರಿಗೆ ಮಾತ್ರ ಸೀಮಿತವಾಗಿಸಿ ಬಹುದೇವಾರಾಧಕರು ಎಂದು ಕುರ್‌ಆನ್‌ನಲ್ಲಿ
ಸಂಬೋಧಿಸಲಾಗಿದೆ.

ಆ ಬಹುದೇವಾರಾಧಕರನ್ನು ಕೊಲ್ಲಿ ಎಂಬ ಕುರ್‌ಆನಿನ ಆದೇಶವು ಈ ವ್ಯಕ್ತಿಗಳ ವಿರುದ್ಧವೇ ಹೊರತು ಸಮಸ್ತ ಬಹುದೇವರಾಧಕರ ವಿರುದ್ಧ ಅಲ್ಲ ಎಂಬುದು ಗ್ರಂಥದ ಸಣ್ಣ ಅಧ್ಯಯನದಿಂದಲೇ ತಿಳಿಯುತ್ತದೆ. ಕುರ್‌ಆನಿನ ಪ್ರಾಥಮಿಕ ಜ್ಞಾನ ಇರುವವರಿಗೆ ಆರಂಭದ ಅಧ್ಯಯನದಲ್ಲಿಯೇ ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಆದರೆ ಯುದ್ಧ ಕಾಲದಲ್ಲಿ ಅವತೀರ್ಣಗೊಂಡ ಇದೇ ಸೂಕ್ತವನ್ನು ಸಂದರ್ಭದ ಹಿನ್ನಲೆ ಮತ್ತು ಉದ್ದೇಶ ಗೊತ್ತಿಲ್ಲದೆ ಓದುತ್ತಾ ಹೋದರೆ ಸ್ವಲ್ಪ ಗೊಂದಲ ಉಂಟಾಗುತ್ತದೆ. ಆ ಗೊಂದಲವನ್ನೇ ಕೆಲವರು ಸಮುದಾಯ ದ್ವೇಷಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಕುರ್‌ಆನ್‌ನ ಅಧ್ಯಾಯ 2ರ ಸೂಕ್ತ ಸಂಖ್ಯೆ 256ರಲ್ಲಿ, ಯಾರನ್ನೂ ಕೂಡ ಧರ್ಮ ಸ್ವೀಕರಿಸಲು ಬಲವಂತ ಮಾಡಬೇಡಿ' ಎಂದು ಅಲ್ಲಾಹನು ನೇರವಾಗಿ ಆದೇಶಿಸುತ್ತಾನೆ. ಅಧ್ಯಾಯ 4ರ ಸೂಕ್ತ ಸಂಖ್ಯೆ 32 ರಲ್ಲಿ,ಭೂಮಿಯ ಮೇಲಿನ ಎಲ್ಲ ಜನರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿರಿ’ ಎಂಬ ಸ್ಪಷ್ಟ ಮಾರ್ಗದರ್ಶನವಿದೆ.

ಅಧ್ಯಾಯ 5ರ ಸೂಕ್ತ ಸಂಖ್ಯೆ 32ರಲ್ಲಿ, “ಒಬ್ಬನ ಜೀವ ಉಳಿಸಿದರೆ ಸಮಸ್ತ ಮನುಕುಲಕ್ಕೆ ಜೀವದಾನ ಮಾಡಿದಂತೆ” ಎಂದಿದೆ. ಅಧ್ಯಾಯ 60, ಸೂಕ್ತ ಸಂಖ್ಯೆ 8ರಲ್ಲಿ, “ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಅವರಾಗಿಯೇ ಯುದ್ಧ ಮಾಡಿದ ಮತ್ತು ನಿಮ್ಮನ್ನು ನಿಮ್ಮ ಮನೆಯಿಂದ ಯಾವುದೇ ಕರುಣೆಯಿಲ್ಲದೆ ಹೊರಹಾಕಿದವರನ್ನು ಹೊರತುಪಡಿಸಿ ಉಳಿದ ಎಲ್ಲ ಮಾನವರೊಂದಿಗೆ ಮತ್ತು ಜೀವರಾಶಿಗಳೊಂದಿಗೆ ಕರುಣೆ ಮತ್ತು ನ್ಯಾಯದಿಂದ ವರ್ತಿಸಿರಿ. ಹೀಗೆ ನ್ಯಾಯ ಪಾಲಿಸುವವರನ್ನು ಅಲ್ಲಾಹನು ಖಂಡಿತವಾಗಿ ಪ್ರೀತಿಸುತ್ತಾನೆ” ಎಂದು ಉಲ್ಲೇಖವಿದೆ. ಅಧ್ಯಾಯ 9, ಸೂಕ್ತ ಸಂಖ್ಯೆ 06ರಲ್ಲಿ, “ಯುದ್ಧ ನಡೆಯುತ್ತಿರುವಾಗಲೂ ವಿರೋಧಿಯು ನಿಮ್ಮ ಧರ್ಮವನ್ನು ಅರಿಯಲು ಇಚ್ಛಿಸಿದರೆ ಅವನು ಆಲಿಸುವವರೆಗೆ ರಕ್ಷಣೆ ನೀಡಿರಿ. ಅನಂತರ ಅವನನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸಿರಿ” ಎಂದಿದೆ.

ಹೀಗೆ ಪವಿತ್ರ ಕುರ್‌ಆನ್ ಧರ್ಮ, ದೇಶಗಳ ಸೀಮೆಗಳಿಲ್ಲದೆ ಸಮಸ್ತ ಮನುಕುಲಕ್ಕೆ ಶಾಂತಿಯನ್ನು ಬೋಧಿಸುತ್ತಾ ಸಾಗುತ್ತದೆ. ಎಲ್ಲಿಯೂ ಕೂಡ ಧರ್ಮ, ದೇಶ, ಪಂಗಡ, ಜಾತಿಗಳ ಕಾರಣದಿಂದ ದ್ವೇಷಿಸಿ ಎಂಬ ಪ್ರತ್ಯಕ್ಷ ಪರೋಕ್ಷ ಆದೇಶಗಳಾಗಲಿ ಆಶಯಗಳಾಗಲಿ ಇಲ್ಲವೇ ಇಲ್ಲ.

ಸ್ವತಃ ಪ್ರವಾದಿ ಮುಹಮ್ಮದರ(ಸ) ಪ್ರೀತಿಯ ಚಿಕ್ಕಪ್ಪ ಅಬೂತಾಲಿಬ್ ಬಹುದೇವರಾಧಕರು. ಮುಸ್ಲಿಮರಲ್ಲಿ ಇಂದಿಗೂ ಅವರಿಗೆ ಬಹಳ ಗೌರವವಿದೆ. ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಪ್ರವಾದಿಯವರಿಗೆ(ಸ) ಬದುಕಿಡೀ ಅಬೂತಾಲಿಬ್ ಅಕ್ಷರಶಃ ತಂದೆಯ ಪ್ರೀತಿಯನ್ನು ನೀಡಿದರು. ಪ್ರವಾದಿಯವರು(ಸ) ಈ ಲೋಕಯಾತ್ರೆ ಮುಗಿಸುವ ಕಾಲದವರೆಗೂ ಅದೆಷ್ಟೋ ಮಂದಿ ಅವರ ಕುಟುಂಬಸ್ಥರೇ ಬಹುದೇವಾರಧನೆಯನ್ನು ಮಾಡುತ್ತಿದ್ದರು. ಪ್ರವಾದಿ ಮುಹಮ್ಮದರು(ಸ) ಕಾಲವಾಗಿ ಅದೆಷ್ಟೋ ವರ್ಷಗಳ ನಂತರ ಬಹಳಷ್ಟು ಮಂದಿ ಅವರ ಕುಟುಂಬಸ್ಥರು ಪವಿತ್ರ ಕುರ್‌ಆನಿನ ದಿವ್ಯ ಜ್ಞಾನವನ್ನು ಪಡೆದು ಬಹುದೇವರಾಧನೆಯನ್ನು ಸಂಪೂರ್ಣವಾಗಿ ತೊರೆದದ್ದು. ಪ್ರವಾದಿಯವರು(ಸ) ಇಹಲೋಕವನ್ನು ತ್ಯಜಿಸುವವರೆಗೂ ಇವರೊಂದಿಗೆ ಕರುಣೆ ಮತ್ತು ಪ್ರೀತಿಯಿಂದಲೇ ವ್ಯವಹರಿಸುತ್ತಿದ್ದರು.

ಬಹುದೇವಾರಾಧನೆ ಇಸ್ಲಾಮೀ ತತ್ವಕ್ಕೆ ವಿರುದ್ಧವಾದರೂ ಕೂಡ ಅದು ಶಿಕ್ಷಾರ್ಹ ಅಪರಾಧವಲ್ಲ. ಇಸ್ಲಾಮೀ ಆಡಳಿತವಿರುವ ರಾಷ್ಟ್ರಗಳಲ್ಲಿ ಬಹುದೇವರಾಧನೆಗೆ ಶಿಕ್ಷೆಯನ್ನು ಕೊಡುವ ಅಧಿಕಾರ ಸ್ವತಃ ಆಡಳಿತಗಾರನಿಗಿಲ್ಲ. ದೇವಾರಾಧನೆಯು ದೇವ ಮತ್ತು ದಾಸನ ನಡುವಿನ ವ್ಯವಹಾರ. ಇಲ್ಲಿಯ ವರೆಗೂ ಜಗತ್ತಿನಲ್ಲಿರುವ ಐವತ್ತಕ್ಕೂ ಹೆಚ್ಚಿನ ಮುಸ್ಲಿಮ್ ರಾಷ್ಟ್ರಗಳಲ್ಲಿ ಬಹುದೇವರಾಧನೆಗೆ ಶಿಕ್ಷೆಯಾದ ಉದಾಹರಣೆ ಬಹುತೇಕ ಕಾಣಲು ಸಾಧ್ಯವಿಲ್ಲ.

ಇಸ್ಲಾಮಿನ ಧಾರ್ಮಿಕ ಸಹಿಷ್ಣುತೆಯನ್ನು ಇಡೀ ಜಗತ್ತಿಗೆ ಸಾರುವ ಒಂದು ಬಲುದೊಡ್ಡ ಘಟನೆ ಪ್ರವಾದಿಯವರ(ಸ) ಆಪ್ತ ಸಂಗಾತಿ ಮತ್ತು ಇಸ್ಲಾಮಿನ ಎರಡನೆಯ ಖಲೀಫರಾದ ಉಮರ್ ಫಾರೂಕ್‌ರವರ ಕಾಲದಲ್ಲಿ ಜೆರುಸಲೇಂನಲ್ಲಿ ನಡೆಯುತ್ತದೆ. ಕ್ರಿ.ಶ. 637ನೇ ಇಸವಿಯಲ್ಲಿ ನಡೆದ ಲೋಕ ಚರಿತ್ರೆಯ ಅತೀ ಮಹತ್ವದ್ದು ಎನ್ನಲಾದ ಇದೊಂದೇ ದೃಷ್ಟಾಂತದಲ್ಲಿ ಇಸ್ಲಾಮಿನ ಧಾರ್ಮಿಕ ಸಹಿಷ್ಣುತೆಯ ಸ್ಪಷ್ಟ ಪರಿಚಯವಾಗುತ್ತದೆ.

ಮುಸ್ಲಿಮರ ಸೇನೆ ರೋಮನ್ ಸಾಮ್ರಾಜ್ಯದ ಬಲುದೊಡ್ಡ ಭಾಗವಾದ ಬೈಝೆಂಟೈನ್ ಸಾಮ್ರಾಜ್ಯವನ್ನು ಜಯಿಸುತ್ತದೆ. ಜೇರುಸಲೇಮ್ ಈ ಸಾಮ್ರಾಜ್ಯಕ್ಕೆ ಆಡಳಿತಕ್ಕೊಳಪಟ್ಟಿತ್ತು. ಈ ಜಯದ ಮೂಲಕ ಈಗಿನ ಜೆರುಸಲೇಮಿನ ಕ್ರೈಸ್ತ, ಯಹೂದಿ ಮತ್ತು ಮುಸ್ಲಿಮರ ಎಲ್ಲ ಪ್ರಾರ್ಥನಾ ಸ್ಥಳಗಳ ಮೇಲೆ ಮುಸ್ಲಿಮರ ಹಿಡಿತ ಆರಂಭವಾಗುತ್ತದೆ. ಜೆರುಸಲೇಮಿನ ಮೇಲೆ ಮುಸ್ಲಿಮರ ಆಡಳಿತ ಬರುವವರೆಗೂ, ಕ್ರಿಸ್ತಶಕ 33ನೇ ಇಸವಿಯಲ್ಲಿ ಯೇಸು ಕ್ರಿಸ್ತರನ್ನು ಹತ್ಯೆಗೈಯ್ಯಲಾಯಿತು ಎನ್ನುವ ಕಾರಣಕ್ಕೆ ಕ್ರೈಸ್ತರು ಯಹೂದಿಗಳಿಗೆ ತಮ್ಮ ಪ್ರಾರ್ಥನಾ ಗೃಹಗಳಿಗೆ ನಿರ್ಬಂಧವನ್ನು ಹೇರಿದರು. ಈ ನಿರ್ಬಂಧ 530 ವರ್ಷಗಳಿಂದ ಜಾರಿಯಲ್ಲಿತ್ತು. ಯಾವಾಗ ಖಲೀಫಾ ಉಮರ್ ಜೆರುಸಲೇಮಿನ ಮೇಲೆ ಆಡಳಿತವನ್ನು ವಹಿಸಿಕೊಳ್ಳುತ್ತಾರೋ,
ಕ್ರೈಸ್ತರು ಯಹೂದಿಗಳ ಪ್ರಾರ್ಥನಾ ಗೃಹಗಳ ಭೇಟಿಯ ಮೇಲೆ ಹೇರಿದ ಸುದೀರ್ಘ ಕಾಲದ ನಿರ್ಬಂಧವನ್ನು ತೆಗೆದು ಹಾಕುತ್ತಾರೆ.

ಹೀಗಾಗಿ ಸರಿಸುಮಾರು 500 ವರ್ಷಗಳ ನಂತರ ಯಹೂದಿಗಳು ತಮ್ಮ ಪ್ರಾರ್ಥನಾ ಗೃಹಗಳಲ್ಲಿ ಪ್ರಾರ್ಥನೆ ಮಾಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಜಾಗತಿಕ ಚರಿತ್ರೆಯಲ್ಲಿ ಧರ್ಮ ಸಹಿಷ್ಣುತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಎಲ್ಲೂ ಸಿಗುವುದಿಲ್ಲ. ಹಾಗಂತ, ಪ್ರವಾದಿ ಕಾಲದಲ್ಲಿ ಯಹೂದಿಗಳು ಮಕ್ಕಾ ಮತ್ತು ಮದೀನದಲ್ಲಿ ಮುಸ್ಲಿಮರ ವಿರುದ್ಧ ದೊಡ್ಡ ಷಡ್ಯಂತ್ರಗಳನ್ನು ಮತ್ತು ವಂಚನೆಗಳನ್ನು ನಿತ್ಯ ನಿರಂತರವಾಗಿ ಮಾಡಿದ್ದರು. ಹೀಗಿದ್ದರೂ ಅದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಆರಾಧನಾಲಯಗಳಿಂದ ಆರಾಧಕರನ್ನು ತಡೆಯುವುದು ಅಥವಾ ಪ್ರಾರ್ಥನಾ ಗೃಹಗಳನ್ನು ಒಡೆಯುವುದು ಧರ್ಮ ಸಮ್ಮತವಲ್ಲ ಎಂದು ಬಗೆದು ಖಲೀಫರು ಯಹೂದಿಗಳಿಗೆ ತಮ್ಮ ಐತಿಹಾಸಿಕ ನಿರ್ಣಯದ ಮೂಲಕ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟರು. ಈ ಮೂಲಕ ತಮ್ಮ ಪರಂಪರಾಗತ ಶತ್ರುವಿಗೂ ಕೂಡ ಅವರ ವಿವೇಚನೆಯಂತೆ ನಡೆಯುವ ಆರಾಧನೆಗೆ ಅವಕಾಶ ಕಲ್ಪಿಸಲಾಯಿತು.

ಇದರ ಜೊತೆಗೇ, ಅದೇ ದಿನ ಸೌಹಾರ್ದವನ್ನು ಜಗತ್ತಿಗೆ ಸಾರಿದ ಇನ್ನೊಂದು ಘಟನೆಯೂ ನಡೆಯುತ್ತದೆ. ರೋಮನ್ ಕ್ರೈಸ್ತರ ದಾಳಿಯಿಂದ ಜಗತ್ತಿನಾದ್ಯಂತ ಚದುರಿ ಹೋಗಿರುವ ಯಹೂದಿಗಳಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸುವ ಒಪ್ಪಂದ ಬರೆಯುವ ಹೊತ್ತಿಗೆ ಮಧ್ಯಾಹ್ನದ ಪ್ರಾರ್ಥನೆಯ ಸಮಯವಾಗಿತ್ತು. ಕ್ರೈಸ್ತ ಧರ್ಮಗುರುಗಳು ತಮ್ಮ ಚರ್ಚಿನೊಳಗೆ ಪ್ರಾರ್ಥನೆ ಮಾಡಲು ಖಲೀಫಾ ಉಮರ್ ರವರಿಗೆ ಜಾಗದ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಆದರೆ ಉಮರ್ “ಇಂದು ನಾನು ಚರ್ಚಿನ ಒಳಗಡೆ ಪ್ರಾರ್ಥನೆಯನ್ನು ಮಾಡಿದರೆ ಅದು ಮಾದರಿಯಾಗಿ ಮುಂದೆ ಮುಸ್ಲಿಮರು ತಾವು ಜಯಿಸುವ ದೇಶಗಳಲ್ಲಿನ ಚರ್ಚುಗಳನ್ನು ತಮ್ಮ ಪ್ರಾರ್ಥನೆಗಳಿಗೆ ಬಳಸಿ ಕ್ರೈಸ್ತರನ್ನು ಪ್ರಾರ್ಥನೆಗಳಿಂದ ತಡೆಯುವ ಅಪಾಯವಿದೆ. ಇದು ಕ್ರೈಸ್ತರ ಆರಾಧನೆಗೆ ಅಡ್ಡಿಯಾಗುವುದರ ಜೊತೆಗೆ ಮುಸ್ಲಿಮರು ಮತ್ತು ಕ್ರೈಸ್ತರ ಬಾಂಧವ್ಯಕ್ಕೆ ತೊಡಗಾಗುತ್ತದೆ ಮಾತ್ರವಲ್ಲ, ಸಾಮಾಜಿಕ ಶಾಂತಿಗೆ ಭಂಗ ತರುತ್ತದೆ. ಹಾಗಾಗಬಾರದು. ನಾನು ಪ್ರಾರ್ಥನೆಯನ್ನು ಚರ್ಚಿನ ಹೊರಗಿನ ಸ್ಥಳದಲ್ಲಿ ಮಾಡುತ್ತೇನೆ” ಎಂದು ಚರ್ಚಿನ ಹೊರಗೆ ಪ್ರಾರ್ಥನೆಯನ್ನು ಮಾಡುತ್ತಾರೆ. ಅಂದು ಅವರು ಜೆರುಸಲೇಮಿನಲ್ಲಿ ತೋರಿದ ಈ ಸೌಹಾರ್ದದದ ಪ್ರತೀಕವಾಗಿ ಇಂದಿಗೂ ಚರ್ಚಿನ ಹೊರಗೆ ಉಮರ್ ಪ್ರಾರ್ಥನೆ ನಡೆಸಿದ ಸ್ಥಳದಲ್ಲಿ ಒಂದು “ಮಸ್ಜಿದ್ ಎ ಉಮರ್” ಎಂಬ ಮಸೀದಿ ಇದೆ.

ಹೀಗೆ ಅರ್ಧ ಜಗತ್ತನ್ನು ಜಯಿಸಿದ ಇಸ್ಲಾಮಿನ ಕಟ್ಟಾ ಅನುಯಾಯಿ, ಪ್ರವಾದಿ ಮುಹಮ್ಮದರ(ಸ) ಆಪ್ತ ಸಂಗಾತಿ, ಖಲಿಫಾ ಉಮರ್ ಒಂದೇ ದಿನ ಲೋಕ ಚರಿತ್ರೆಯ ಸೌಹಾರ್ದದ ಎರಡು ಮಹಾನ್ ದೃಷ್ಟಾಂತಕ್ಕೆ ಮುನ್ನುಡಿ ಬರೆಯುತ್ತಾರೆ. ಕಾಲಾತೀತವಾದ ಜಾಗತಿಕ ಇತಿಹಾಸ ಕಂಡ ಅತೀ ದೊಡ್ಡ ಸಾಮ್ರಾಜ್ಯದ ದೊರೆಯಾದರೂ ಕೂಡ, ಸಹಧರ್ಮೀಯರಾದ ಕ್ರೈಸ್ತರು ಮತ್ತು ಯಹೂದಿಗಳಿಗೆ ಸೌಹಾರ್ದದ ಸ್ನೇಹ ಹಸ್ತ ಚಾಚಿ ತಮ್ಮ ಆಳ್ವಿಕೆಯಲ್ಲಿ ವಿಶ್ವಾಸ ಮತ್ತು ಭರವಸೆಯನ್ನು ಮೂಡಿಸುತ್ತಾರೆ. ಇಸ್ಲಾಮಿ ಜಗತ್ತು ಉಮರ್ ಫಾರೂಕರಷ್ಟು ಕಟ್ಟುನಿಟ್ಟಾಗಿ ಕುರ್‌ಆನ್ ಹದೀಸ್ ಮತ್ತು ಶರಿಯಾ ಕಾನೂನುಗಳನ್ನು ಪಾಲನೆ ಮಾಡಿದ ಮತ್ತೊಬ್ಬನನ್ನು ಕಂಡಿಲ್ಲ.

ಇಸ್ಲಾಮಿನಲ್ಲಿ ಇಷ್ಟು ಶ್ರದ್ಧೆ ಮತ್ತು ಕಟ್ಟುನಿಟ್ಟಿನ ಪಾಲನೆ ಮಾಡಿದ ವ್ಯಕ್ತಿಯೇ ಇಷ್ಟೊಂದು ದೊಡ್ಡ ಸೌಹಾರ್ದಕ್ಕೆ ಕಾರಣರಾದರೆಂದರೆ ಪವಿತ್ರ ಕುರ್‌ಆನ್ ಸಹ ಧರ್ಮಿಯರೊಂದಿಗೆ ಶಾಂತಿಯುತವಾದ ಸಹಬಾಳ್ವೆಯನ್ನೇ ಆಶಿಸಿ ಅನುಷ್ಠಾನಿಸಲು ಉಪದೇಶಿಸಿದೆ ಎಂದರ್ಥವಲ್ಲವೇ?