ಕಲ್ಲು ತೂರಾಟ ಘಟನೆಯ ಬೆನ್ನಿಗೆ ಮನೆಯನ್ನು ನೆಲಸಮ ಮಾಡಿದ ಸರಕಾರ: ಮುಸ್ಲಿಂ ಕುಟುಂಬಕ್ಕೆ ಆಶ್ರಯ ನೀಡಿದ ನೆರಮನೆಯ ಹಿಂದೂ ಮಹಿಳೆ

0
640

ಸನ್ಮಾರ್ಗ ವಾರ್ತೆ

ನವದೆಹಲಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಅಧಿಕಾರಿಗಳು ಎರಡು ಅಂತಸ್ತಿನ ಮನೆಯನ್ನು ನೆಲಸಮ ಮಾಡಿದ ಬೆನ್ನಿಗೆ 19 ಸದಸ್ಯರ ಮುಸ್ಲಿಂ ಕುಟುಂಬವು ಅವರ ಹಿಂದೂ ನೆರೆಯವರನ್ನು ಆಶ್ರಯಿಸಿದ್ದಾರೆ. ಭಾರತೀಯ ಜನತಾ ಯುವ ಮೋರ್ಚಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಹಿಂದೂ ಉಗ್ರಗಾಮಿ ಸಂಘಟನೆಗಳಿಗೆ ಸೇರಿದ ಗುಂಪೊಂದು ಕಲ್ಲು ತೂರಾಟ ನಡೆಸಿದ ಒಂದು ದಿನದ ನಂತರ ಮನೆಯನ್ನು ನೆಲಸಮ ಮಾಡಲಾಗಿದೆ. ಅಲ್ಲದೇ, ಇನ್ನೊಂದು ಮನೆಯನ್ನೂ ಭಾಗಶಃ ಕೆಡವಲಾಗಿದೆ.

ಈ ನಡುವೆ ಅಬ್ದುಲ್ ರಫೀಕ್ ಅವರ ಕುಟುಂಬಕ್ಕೆ ಆಶ್ರಯ ನೀಡಿದ ಹಿಂದೂ ಮಹಿಳೆಯನ್ನು ಮೀರಾ ಬಾಯಿ ಎಂದು ಗುರುತಿಸಲಾಗಿದೆ. ಕಲ್ಲು ತೂರಾಟದಲ್ಲಿ ರಫೀಕ್ ಭಾಗಿಯಾಗಿಲ್ಲ ಎಂದು ಅವರು ಹೇಳಿದರು

ಜನ್‌ಸತ್ತಾ ವರದಿಯ ಪ್ರಕಾರ, ಮೀರಾ ಬಾಯಿಯ ಮೇಲ್ಛಾವಣಿಯಿಂದ ರ್ಯಾಲಿಯತ್ತ ಕಲ್ಲುಗಳನ್ನು ಎಸೆದ ಆರೋಪದ ಮೇರೆಗೆ ಹೀನಾ ಮತ್ತು ಯಾಸ್ಮೀನ್ ಎಂಬ ಇಬ್ಬರು ಮಹಿಳೆಯರನ್ನು ಸ್ಥಳೀಯ ಅಧಿಕಾರಿಗಳು ಹುಡುಕುತ್ತಿದ್ದಾರೆ ಎಂದು ರಫೀಕ್ ಹೇಳಿದ್ದಾರೆ. ಪೊಲೀಸ್ ತಂಡ ಮೊದಲು ಮೀರಾ ಬಾಯಿಯ ಮನೆಗೆ ಹೋಯಿತು. ಆದರೆ ಅವರ ಹಿಂದೂ ಎಂದು ತಿಳಿದಾಗ ಅವರು ರಫೀಕ್ ಮನೆಗೆ ತಿರುಗಿದರು.

ಘಟನೆಯ ನಂತರ ಇಬ್ಬರು ಮಹಿಳೆಯರು ಪರಾರಿಯಾಗಿದ್ದಾರೆ ಎಂಬುದಾಗಿಯೂ ವರದಿ ಮಾಡಲಾಗಿದೆ.

ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ದೀಪಕ್ ಗುಪ್ತಾ ಉಜ್ಜಯಿನಿಯಲ್ಲಿ ಮನೆಯೊಂದನ್ನು ನೆಲಸಮಗೊಳಿಸುವಲ್ಲಿ ಪೊಲೀಸರ ಅಧಿಕಾರಿಗಳ ಪಾತ್ರವನ್ನು ಪ್ರಶ್ನಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡುವಾಗ ಗುಪ್ತಾ ಇದನ್ನು ಕಾನೂನುಬಾಹಿರ ಮತ್ತು ಪೊಲೀಸ್ ರಾಜ್ಯದ ಕ್ರಮ ಎಂದು ಕರೆದರು.

ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲು ಉರುಳಿಸುವಿಕೆ ನಡೆದಿದ್ದು, ಮನೆ ಮಾಲೀಕರಿಗೆ ಪೂರ್ವ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ನ್ಯಾಯಮೂರ್ತಿ ಗುಪ್ತಾ, ಮಾನ್ಯ ಕಾರಣಗಳ ಹೊರತಾಗಿಯೂ, ಕಾಯಿದೆಯ ಸಮಯವು ಅದನ್ನು ಕಾನೂನುಬಾಹಿರವಾಗಿಸುತ್ತದೆ ಮತ್ತು ಅದೇ ರೀತಿಯಲ್ಲಿ ಮನೆಯನ್ನು ಕೆಡವಿರುವುದೂ ಕಾನೂನುಬಾಹಿರವಾಗುತ್ತದೆ. ಪೊಲೀಸರು ಮತ್ತು ರಾಜಕಾರಣಿಗಳು ವಿಷಯಗಳನ್ನು ತಮ್ಮ ಕೈಗೆ ತೆಗೆದುಕೊಂಡರೆ ನ್ಯಾಯಾಲಯಗಳು ಯಾವುದಕ್ಕಿವೆ ಮತ್ತು ಸಾಮಾನ್ಯ ಜನರು ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.