ಮುಸ್ಲಿಂ ಶಾಸಕರಿಗೆ ಡಿಸಿಎಂ: ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ

0
257

ಸನ್ಮಾರ್ಗ ವಾರ್ತೆ

ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವಲ್ಲಿ ಮುಸ್ಲಿಂ ಸಮುದಾಯದ ಕೊಡುಗೆ ಅಪಾರವಾಗಿದ್ದು ನೂತನ ಸರಕಾರದಲ್ಲಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಮುಸ್ಲಿಂ ಸಮುದಾಯದ ಒಂಬತ್ತು ಮಂದಿ ವಿಧಾನಸಭೆಗೆ ಆಯ್ಕೆಯಾಗಿರುವುದಷ್ಟೇ ಅಲ್ಲ ಕಾಂಗ್ರೆಸ್ಸಿನ 135 ಸ್ಥಾನಗಳ ಗೆಲುವಿನಲ್ಲಿ ಮುಸ್ಲಿಂ ಸಮುದಾಯ ನಿರ್ಣಾಯಕ ಪಾತ್ರವನ್ನು ನಿಭಾಯಿಸಿದೆ ಎಂಬ ಮಾತು ಕೇಳಿ ಬಂದಿದೆ.

ಒಂದು ಡಿಸಿಎಂ ಪೋಸ್ಟ್ ಹಾಗೆಯೇ ಮೂರರಿಂದ ನಾಲ್ಕು ಸಚಿವ ಸ್ಥಾನಗಳು ಮುಸ್ಲಿಮರಿಗೆ ಲಭಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ. ವಖ್ಫ್ ಅಧ್ಯಕ್ಷ ಶಾಫಿ ಸಅದಿ ಕೂಡ ಮುಸ್ಲಿಂ ಡಿಸಿಎಂನ ಬೇಡಿಕೆ ಇಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಮತ್ತು ಡಿ ಸಿ ಎಂ ಹಾಗೂ ಮೂರು ಅಥವಾ ನಾಲ್ಕು ಮಂದಿ ಮುಸ್ಲಿಂ ಸಚಿವರ ಬೇಡಿಕೆಗೆ ಬಾರಿ ಬೆಂಬಲ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ 90 ಲಕ್ಷಕ್ಕಿಂತ ಅಧಿಕ ಮುಸ್ಲಿಮರಿದ್ದಾರೆ. ಈ ಬಾರಿ ಕಾಂಗ್ರೆಸ್ಸಿಗೆ ಬಹುತೇಕ ಮುಸ್ಲಿಮರ ಮತಗಳು ಬಿದ್ದಿವೆ. ಈ ಮುಖಾಂತರ ಸುಮಾರು 70ರಿಂದ 80ರಷ್ಟು ಸ್ಥಾನಗಳ ಗೆಲುವಿನಲ್ಲಿ ಮುಸ್ಲಿಂ ಮತದಾರರ ಪಾತ್ರ ಗಮನಹವಾಗಿದೆ ಎಂದು ಹೇಳಲಾಗುತ್ತಿದೆ.

ಬೊಮ್ಮಾಯಿ ಸರಕಾರ ಮುಸ್ಲಿಂ ವಿರೋಧಿ ನಿಲುವನ್ನು ತಾಳಿದುದರ ಪರಿಣಾಮ ಮುಸ್ಲಿಂ ಸಮುದಾಯ ಸಾಕಷ್ಟು ತೊಂದರೆಗೆ ಗುರಿಯಾಗಿತ್ತು. ಅದರಲ್ಲಿ ಹಿಜಾಬ್ ಮತ್ತು ಮೀಸಲಾತಿ ಕೂಡ ಒಂದು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ನಡೆದ ಹತ್ಯೆಗಳಿಗೆ ಸಂಬಂಧಿಸಿದ ಬೊಮ್ಮಾಯಿ ಸರಕಾರ ಅತ್ಯಂತ ಪಕ್ಷಪಾತಿಯಾಗಿ ವರ್ತಿಸಿದೆ. ಫಾಸಿಲ್ ಮತ್ತು ಮಸೂದ್ ಕುಟುಂಬಕ್ಕೆ ಪರಿಹಾರವನ್ನು ನೀಡದೆ ಅನ್ಯಾಯವೆಸಗಿದೆ.. ಹೊಸ ಸರಕಾರ ಈ ಕುರಿತಂತೆ ನ್ಯಾಯ ಒದಗಿಸಬೇಕು ಎಂಬ ಮಾತುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿದೆ.