ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಮುಸ್ಲಿಮ್ ದ್ವೇಷದ ಸುಳ್ಳು ಸುದ್ದಿ ಹರಡಿದ ಸೂಲಿಬೆಲೆ, ಕೋಣೆಮನೆ

0
1811

ಸನ್ಮಾರ್ಗ ವಾರ್ತೆ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನ ನಂತರ ಸಂಘಪರಿವಾರ ಮತ್ತು ಬಲಪಂಥೀಯ ಪಾಳಯವು ರಾಜ್ಯದಲ್ಲಿ ನಿರಂತರವಾಗಿ ಸುಳ್ಳು ಸುದ್ದಿ, ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಹರಡುವುದರಲ್ಲೇ ನಿರತವಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಆಜ್‌ತಕ್‌ನ ಪತ್ರಕರ್ತ ಸುಧೀರ್ ಚೌಧರಿ ಸ್ವಾವಲಂಬಿ ಸಾರಥಿ ಯೋಜನೆ(ಟ್ಯಾಕ್ಸಿ ಖರೀದಿಗೆ ಸಹಾಯಧನ) ಯು ಕೇವಲ ‘ಮುಸ್ಲಿಮರಿಗೆ ಮಾತ್ರ’ ಎಂದು ಸುಳ್ಳು ಹರಡಿದ್ದರು. ಆದರೆ ಅದು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಇರುವ ಯೋಜನೆಯಲ್ಲ ಎಂಬುದು ವಾಸ್ತವ.

ಸ್ವಾವಲಂಬಿ ಸಾರಥಿ ಯೋಜನೆಯು ಪರಿಶಿಷ್ಟ ಪಂಗಡ ಮತ್ತು ಜಾತಿಯವರಿಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿಯೂ ಲಭ್ಯವಿರುವ ಯೋಜನೆಯಾಗಿದೆ ಈ ಸಂಬಂಧ ಈಗಾಗಲೇ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಪ್ರಕರಣ ದಾಖಲಿಸಿದ್ದು, ಅದರ ತನಿಖೆ ನಡೆಯುತ್ತಿದೆ. ಹೈಕೋರ್ಟ್‌ನಲ್ಲೂ ಕೂಡ ಈ ವ್ಯಾಜ್ಯ ವಿಚಾರಣೆಯಲ್ಲಿದೆ.

ಇದಾದ ಬಳಿಕ ತೇಜಸ್ವಿ ಸೂರ್ಯ, ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗಿನ ಸಂಘರ್ಷದ ವೇಳೆ ಹುತಾತ್ಮನಾಗಿದ್ದ ಕರ್ನಾಟಕದ ಯೋಧ ಪ್ರಾಂಜಲ್ ಯಾರು ಎಂಬುದು ಗೊತ್ತಿಲ್ಲ. ರಾಜ್ಯ ಸರ್ಕಾರ ಪರಿಹಾರ ನೀಡಲು ಹಿಂದೇಟು ಹಾಕಿದೆ ಎಂದು ತಪ್ಪು ಅರ್ಥ ಬರುವಂತೆ ಸಿಎಂ ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆಯನ್ನು ತುಂಡರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು, ವಿಕೃತಿ ಮೆರೆದಿದ್ದರು. ಇದು ವಿವಾದವಾದ ಬಳಿಕ ಖುದ್ದು ಸಿಎಂ ಸಿದ್ದರಾಮಯ್ಯನವರೇ, ಬಿಜೆಪಿ ಸಂಸದನನ್ನು ಜಾಡಿಸಿದ್ದರು.

ಆ ಬಳಿಕವೂ ಇಂಥದ್ದೆಲ್ಲದ್ದಕ್ಕೆ ಬಿಜೆಪಿ ಮತ್ತು ಸಂಘಪರಿವಾರವು ‘ಮುಸ್ಲಿಂ ಆಂಗಲ್’ ನೀಡಲು ಯತ್ನಿಸುತ್ತಿದೆ. ಇದರ ಮುಂದುವರಿದ ಭಾಗವೆಂಬಂತೆ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ಮುಸ್ಲಿಂ ದ್ವೇಷದ ಸುಳ್ಳು ಸುದ್ದಿ ಹರಡಲಾಗಿದೆ. ಇದನ್ನು ಹರಡಿದವರು ಬಲಪಂಥೀಯ ಮುಖಂಡ ಚಕ್ರವರ್ತಿ ಸೂಲಿಬೆಲೆ ಹಾಗೂ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ. ಅದರ ಜೊತೆಗೆ ಬಿಜೆಪಿ ಐಟಿ ಸೆಲ್ ಹಾಗೂ ಕೋಣೆಮನೆ ಈ ಹಿಂದೆ ಸಂಪಾದಕರಾಗಿದ್ದ ವಿಸ್ತಾರ ನ್ಯೂಸ್.

ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ವಿಸ್ತಾರ ನ್ಯೂಸ್“SSLC Exam: ಪರೀಕ್ಷೆಯಲ್ಲೂ ಮುಸ್ಲಿಮರ ಓಲೈಕೆ; ನಮಾಜ್‌ಗಾಗಿ ಸಮಯವೇ ಬದಲು!” ಎಂದು ಸುದ್ದಿಯನ್ನೂ ಪ್ರಕಟಿಸಿದೆ. ಇದೇ ಸುದ್ದಿಯನ್ನು ಬಿಜೆಪಿ ಐಟಿ ಸೆಲ್ ರೀಟ್ವೀಟ್ ಮಾಡಿಕೊಂಡು, “ಪರೀಕ್ಷೆಯ ವಿಚಾರದಲ್ಲೂ ಒಂದು ಸಮುದಾಯಕ್ಕೆ ಇಷ್ಟೊಂದು ಓಲೈಕೆ ಮಾಡುವ ಕಾಂಗ್ರೆಸ್, ಹಿಂದೂ ವಿದ್ಯಾರ್ಥಿಗಳನ್ನು ಈಗ ಎರಡನೇ ದರ್ಜೆಗೆ ಇಳಿಸಿದೆ” ಎಂದು ಆರೋಪಿಸಿದೆ.

ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ. ಆದರೆ, ಶುಕ್ರವಾರ ಮಾತ್ರ ಬೆಳಗ್ಗೆ ಬದಲಿಗೆ ಮಧ್ಯಾಹ್ನ ಪರೀಕ್ಷೆ ನಡೆಸಲು ಸಮಯ ನಿಗದಿ ಮಾಡಲಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರವು, ಈಗ ಪರೀಕ್ಷೆಯಲ್ಲೂ ರಾಜಕೀಯ ಮಾಡುತ್ತಾ, ಮುಸ್ಲಿಮರ ಓಲೈಕೆಗೆ ಮುಂದಾಗಿದೆ ಎಂದು ಸುಳ್ಳು ಹರಡಿದೆ.

ಫೆ.26ರಿಂದ ಮಾರ್ಚ್‌ 2ರವರೆಗೆ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಇದರಲ್ಲಿ ಶುಕ್ರವಾರ ಹೊರತುಪಡಿಸಿ ಬೆಳಗ್ಗೆ 10.15 – 1.30ರವರೆಗೂ ವಿವಿಧ ವಿಷಯಗಳ ಪರೀಕ್ಷೆ ಸಮಯ ನಿಗದಿಯಾಗಿದೆ. ಆದರೆ, ಶುಕ್ರವಾರ ಮಾತ್ರ ಮಧ್ಯಾಹ್ನ 2 ಗಂಟೆಯಿಂದ 5.15ವರೆಗೆ ಶಿಕ್ಷಣ ಇಲಾಖೆ ಸಮಯ ನಿಗದಿ ಮಾಡಿದೆ ಎಂದು ಆರೋಪಿಸಿತ್ತು.

ಅಲ್ಲದೇ, ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್‌ ಸರ್ಕಾರ ಈ ರೀತಿಯ ಆದೇಶ ಮಾಡಿದೆ. ಶಿಕ್ಷಣ ಇಲಾಖೆಯ ಮೇಲೆ ಒತ್ತಡ ಹೇರಿ ಈ ನಿರ್ದೇಶನ ಹೊರಡಿಸಲಾಗಿದೆ ಎಂದು ಸುಳ್ಳು ಹರಡಲಾಗಿದೆ.

ಆದರೆ ವಾಸ್ತವ ಏನು?
ಮಾರ್ಚ್ 1 ರ ಶುಕ್ರವಾರದಂದು ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿದೆ. ಅದೇ ದಿನ ಕನ್ನಡ ಮತ್ತು ಅರೇಬಿಕ್ ಪರೀಕ್ಷೆ ನಡೆಯಲಿದೆ. ಹಾಗಾಗಿ ಆ ದಿನದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಆದರೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಲು ಚಕ್ರವರ್ತಿ ಸೂಲಿಬೆಲೆ ಶುಕ್ರವಾರದ ನಮಾಜ್ ಮಾಡಲು ಮುಸ್ಲಿಂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ.

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸ್ಪಷ್ಟನೆ ಏನು?
ಫೆ. 26ರಿಂದ ಮಾರ್ಚ್‌ 02ರವರೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಪ್ರಥಮ ಭಾಷೆ , ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಬೆಳಗಿನ ಅವಧಿಯಲ್ಲಿ ಹಾಗೂ ಮಾರ್ಚ್‌ 1ರಂದು ರಂದು ದ್ವಿತೀಯ ಪಿಯುಸಿ ಪರೀಕ್ಷೆ ಇರುವುದರಿಂದ, ಆ ಪರೀಕ್ಷೆಗೆ ಕೆಲವು ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಲಾಗಿದೆ. ಹೀಗಾಗಿ ಅಂತಹ ಶಾಲಾ, ಕಾಲೇಜುಗಳಲ್ಲಿಯೇ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಬೇಕಾಗಿರುತ್ತದೆ. ಇದರಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ತೊಂದರೆ ಉಂಟಾಗುವುದನ್ನು ಮನಗಂಡಿದ್ದ ಅಧಿಕಾರಿಗಳು, ಆ ದಿನದಂದು ಎಸ್‌ಎಸ್‌ಎಲ್‌ಸಿ ವಿಜ್ಞಾನ ವಿಷಯದ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿದ್ದಾರೆ.

ಆದರೆ, ಇದ್ಯಾವುದನ್ನೂ ಗಮನಿಸದ ಸೂಲಿಬೆಲೆ ಹಾಗೂ ಮಾಜಿ ಪತ್ರಕರ್ತ, ಸದ್ಯ ಬಿಜೆಪಿ ವಕ್ತಾರನಾಗಿರುವ ಹರಿಪ್ರಕಾಶ್ ಕೋಣೆಮನೆ ವಾಸ್ತವವನ್ನು ಮರೆ ಮಾಚಿ, ಮುಸ್ಲಿಂ ದ್ವೇಷವನ್ನು ಹರಡಿದ್ದಾರೆ. ಸುಳ್ಳು ಹೇಳಿ ಸಿಕ್ಕಿಬಿದ್ದರೂ ಕೂಡ ಇನ್ನೂ ಕೂಡ ಆ ಪೋಸ್ಟ್‌ ಅನ್ನು ಡಿಲೀಟ್ ಮಾಡಿಲ್ಲ ಎಂಬುದೇ ವಿಷರ್ಯಾಸ.

ಇವರಿಬ್ಬರ ಮೇಲೂ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಆದರೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಹೇಳಿಕೆಯಲ್ಲೇ ಕಾಲ ಕಳೆಯುತ್ತಿದೆ.

ಕೋವಿಡ್ ವೇಳೆಯಲ್ಲೂ ಇಂಥದ್ದೇ ಕೃತ್ಯ ಎಸಗಿದ್ದ ಕೋಣೆಮನೆ
ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುಸ್ಲಿಂ ದ್ವೇಷ ಅಂಟಿಸಿರುವ ಬಿಜೆಪಿ ವಕ್ತಾರನಾಗಿರುವ ಹರಿಪ್ರಕಾಶ್ ಕೋಣೆಮನೆ ಈ ಹಿಂದೆ ವಿಜಯ ಕರ್ನಾಟಕ ಸಂಪಾದಕರಾಗಿದ್ದ. ಆಗ ಕೂಡ ಮುಸ್ಲಿಮರ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ್ದರು. ಹರಿಪ್ರಕಾಶ್ ಕೋಣೆಮನೆ ವಿರುದ್ಧ ತನಿಖಾ ಸಂಸ್ಥೆ ದಂಡ ವಿಧಿಸಿತ್ತು.