ಹನುಮಾನ್ ಮಂದಿರ ವಿಸ್ತರಣೆಗೆ ಮುಸ್ಲಿಮ್ ‌ವ್ಯಕ್ತಿಯಿಂದ 80ಲಕ್ಷ ರೂಪಾಯಿ ಮೌಲ್ಯದ ಭೂ ದಾನ: ಫ್ಲೆಕ್ಸ್ ಮೂಲಕ ಕೃತಜ್ಞತೆ ಸಲ್ಲಿಸಿದ ಮಂದಿರ ಸಮಿತಿ

0
838

ಸನ್ಮಾರ್ಗ ವಾರ್ತೆ

ಬೆಂಗಳೂರು,ಡಿ.9: ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲು ಸರಕಾರವೇ ಮುಂದೆ ನಿಂತರೂ ಸೋಲೊಪ್ಪದ ಮಾನವ ಸೌಹಾರ್ದದ ಸುಗಂಧವನ್ನು ಸುತ್ತಲಿರುವವರಿಗೆ ಬೆಂಗಳೂರಿನ ಗ್ರಾಮಾಂತರ ಹೊಸಕೋಟೆಯ ಎಚ್‍.ಎಂ.ಜಿ ಬಾಷಾ ಹರಡುವ ಕೆಲಸ ಮಾಡಿದ್ದು 80ಲಕ್ಷ ರೂಪಾಯಿಯಿಂದ ಒಂದು ಕೋಟಿ ರೂಪಾಯಿ ಮೌಲ್ಯದ 1.5 ಗುಂಟೆ ಭೂಮಿಯನ್ನು (ಸುಮಾರು ಮೂರು ಮುಕ್ಕಾಲು ಸೆಂಟ್) ಅನ್ನು ವಳಗರೆ ಪುರ ಗ್ರಾಮದ ಹನುಮಾನ್ ಮಂದಿರದ ವಿಸ್ತಾರಕ್ಕಾಗಿ ದಾನ ಮಾಡಿದ್ದಾರೆ. ಇದಕ್ಕೆ ಕೃತಜ್ಞಾ ಸೂಚಕವಾಗಿ ಗ್ರಾಮದಲ್ಲಿ ಮಂದಿರ ಸಮಿತಿ ಪದಾಧಿಕಾರಿಗಳು ಕೃತಜ್ಞತಾ ಫಲಕ ಸ್ಥಾಪಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಾಷಾ ಕಾರ್ಗೊ ಟ್ರಾನ್ಸ್‌ಪೋರ್ಟ್ ಬಿಸಿನೆಸ್ ಮಾಡುತ್ತಾರೆ.

ನನ್ನ ಗ್ರಾಮದ ಸಣ್ಣ ಹನುಮಾನ್ ಮಂದಿರ ವಿಸ್ತರಣೆಗೆ ಸ್ಥಳ ಕೊಡುತ್ತೇನೆ ಎಂದು ಹೇಳಿದ್ದೆ ಒಂದು ಗುಂಟೆ ಸ್ಥಳ ಕೇಳುತ್ತಾ ಬಂದರು. ಒಂದೂವರೆ ಗುಂಟೆ ಸ್ಥಳ ಕೊಡುತ್ತೇನೆ ಎಂದು ಹೇಳಿದ್ದೇನೆ. ಮಂದಿರದಲ್ಲಿ ಸಾಕಷ್ಟು ಜಾಗ ಇಲ್ಲದುದರಿಂದ ಅವರಿಗೆ ಆರಾಧನೆಗೆ ಕಷ್ಟವಾಗುತ್ತಿದೆ. ಜಾಗ ಕೊಟ್ಟದ್ದರಿಂದ ಈ ಸಮಸ್ಯೆ ಪರಿಹಾರವಾಗಬಹುದು ಎಂದು 65 ವರ್ಷದ ಬಾಷಾ ಹೇಳಿದರು.

ಜನಸಮಾನ್ಯರ ನಡುವೆ ಹಿಂದೂ-ಮುಸ್ಲಿಂ ಎಂಬ ವ್ಯತ್ಯಾಸಗಳಿರುವುದಿಲ್ಲ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಧರ್ಮವನ್ನು ಉಪಯೋಗಿಸುತ್ತಾರೆ. ಈಗ ಹೊಸ ತಲೆಮಾರು ಕೋಮುವಾದಿ ಮಾರ್ಗದಲ್ಲಿ ಹೆಚ್ಚು ಚಿಂತಿಸುತ್ತಿದೆ. ಲವ್ ಜಿಹಾದ್ ಕುರಿತು ಗೋಹತ್ಯೆ ಕುರಿತು ನಾವು ಕೇಳುತ್ತೇವೆ. ದೇಶ ಹೇಗೆ ಪ್ರಗತಿ ಕಂಡೀತು? ಎಲ್ಲರೂ ಒಗ್ಗೂಡಬೇಕು. ದೇಶಕ್ಕಾಗಿ ಪರಸ್ಪರ ಪ್ರೀತಿಸಬೇಕು ಎಂದು ಅವರು ಹೇಳಿದರು. ಮಂದಿರಕ್ಕೆ ಭೂಮಿ ಕೊಟ್ಟದ್ದು ನನ್ನೊಬ್ಬನ ತೀರ್ಮಾನವಲ್ಲ ಮನೆಯವರೆಲ್ಲರೂ ಅನುಮತಿಸಿದ್ದಾರೆ ಎಂದು ಬಾಷಾ ಹೇಳಿದರು. ಒಂದು ಕೋಟಿ ರೂ. ವೆಚ್ಚದಲ್ಲಿ ಶ್ರೀ ವೀರಾಂಜನೆಯ ಸ್ವಾಮಿ ದೇವಾಲಯ ಟ್ರಸ್ಟ್ ಮಂದಿರ ವಿಸ್ತರಿಸುವ ಕಾರ್ಯ ನಡೆಸುತ್ತಿದೆ.