ನಮಗೆ ಸರಿಯಾದ ದಾರಿ ತೋರಿಸು

0
756

ಡಾ| ಫರ್ಹತ್ ಹಾಶ್ಮಿ

ನಾವು ಈ ಲೋಕಕ್ಕೆ ಕೆಲವು ನಿರ್ದಿಷ್ಟ ಸಮಯಕ್ಕಾಗಿ ಬಂದಿದ್ದೇವೆ. ಈ ಸಮಯವನ್ನು ವ್ಯರ್ಥಗೊಳಿಸ ಬಾರದು. ಅತಿ ಉತ್ತಮ ರೀತಿಯಲ್ಲಿ ಸದುಪಯೋಗಿಸಿ ಕೊಳ್ಳಬೇಕಾಗಿದೆ. ಬುದ್ಧಿವಂತ ಮನುಷ್ಯನು ಪ್ರಯಾಣ ಮಾಡುವ ಮೊದಲು ತನಗೆ ಎಲ್ಲಿ ತಲುಪ ಬೇಕಾಗಿದೆ ಎಂದು ಯೋಚಿಸುತ್ತಾನೆ. ಆದರೆ ಬುದ್ಧಿಹೀನನಿಗೆ ತಾನೆಲ್ಲಿಗೆ ಹೋಗುತ್ತಿರುವೆನೆಂಬ ಪರಿವೆಯೇ ಇರುವುದಿಲ್ಲ. ದಾರಿ ತಿಳಿಯದ ವ್ಯಕ್ತಿ ಪ್ರಯಾಣದ ಮಧ್ಯೆ ತಾನು ಹೋಗುತ್ತಿರುವ ದಾರಿ ತಪ್ಪಿದೆ ಎಂದು ಅರಿಯುತ್ತಾನೆ. ಸರಿಯಾದ ಮಾರ್ಗ ತೋರಿಸಿ ಕೊಟ್ಟ ನಂತರವೂ ಮತ್ತೆ ತನ್ನಿಷ್ಟದಂತೆ ಮುನ್ನಡೆಯುವೆನೆಂದು ಮುಂದುವರಿದರೆ ಪರಿಣಾಮ ವೇನಾದೀತು? ಅದೇ ರೀತಿ ನಾವು ದಿನದಲ್ಲಿ ಕಡ್ಡಾಯವಾಗಿ ಹದಿನೇಳು ಬಾರಿ ಅಲ್ಲಾಹನೊಡನೆ ಇಹ್ದಿನಸ್ಸಿರಾತಲ್ ಮುಸ್ತಖೀಮ್= “ನಮಗೆ ಸರಿಯಾದ ದಾರಿ ತೋರಿಸು” ಎಂದು ಯಾಚಿಸುತ್ತೇವೆ.

ಆದರೆ ಅವನು ತೋರಿಸಿ ಕೊಟ್ಟ ಆ ದಾರಿಯಲ್ಲಿ ನಡೆಯದೆ ಎಲ್ಲಿಂದೆಲ್ಲೋ ಅಲೆಯುತ್ತಿದ್ದರೆ ಈ ರೀತಿ ನಮಾಝ್ನಲ್ಲಿ ಅಲ್ಲಾಹನೊಂದಿಗೆ ಯಾಚಿಸುತ್ತಿರುವುದರ ಅರ್ಥವೇನು? ಮನುಷ್ಯನ ಅತಿದೊಡ್ಡ ಶತ್ರು ಸ್ವತಃ ಅವನ ನಫ್ಸ್(ಚಿತ್ತ) ಮತ್ತು ಶೈತಾನ್ ಆಗಿರುವುದು. ಆದರೆ ಈ ಎರಡನ್ನೂ ಜ್ಞಾನದಿಂದ ಸೋಲಿಸಬಹುದು. ಜ್ಞಾನದ ಮೂಲಕ ಅಲ್ಲಾಹನು ಮನುಷ್ಯರಿಗೆ ಶ್ರೇಷ್ಠತೆ ದಯಪಾಲಿಸಿದ್ದಾನೆ. ದೇವಚರರು ಜ್ಞಾನ ಕಲಿಸುವವರ ಮತ್ತು ಕಲಿಯುವವರನ್ನು ತಮ್ಮ ರೆಕ್ಕೆಗಳಿಂದ ಆವರಿಸುತ್ತಾರೆ. ಅವರನ್ನು ಸ್ಪರ್ಶಿಸುತ್ತಾರೆ. ದೇವಚರರು ಕೂಡಾ ಅವರನ್ನು ಪ್ರೀತಿಸುತ್ತಾರೆ. ಅವರ ಮಗ್ಫಿರತ್(ಕ್ಷಮೆ)ಗಾಗಿ ಸಮುದ್ರದ ಮೀನುಗಳು, ಭೂಮಿಯಲ್ಲಿರುವ ಕ್ರಿಮಿಕೀಟಗಳು ಸಹ ಪ್ರಾರ್ಥಿಸುತ್ತವೆ. ಯಾವಾಗ ಮನುಷ್ಯನು ಜ್ಞಾನ ಕಲಿಯಲು ಮತ್ತು ಕಲಿಸಲು ಮನೆಯಿಂದ ಹೊರಡುತ್ತಾನೋ ಲೋಕದ ಎಲ್ಲ ಸೃಷ್ಟಿಗಳೂ ಅವನಿಗಾಗಿ ದುಆದಲ್ಲಿ ನಿರತವಾಗುತ್ತವೆ. ಜ್ಞಾನದಿಂದಲೇ ಸಂಬಂಧಗಳು ಬೆಸೆಯುತ್ತವೆ. ಜ್ಞಾನ ಗಳಿಸಿದರೆ ಮಾತ್ರವೇ ಹಲಾಲ್-ಹರಾಮ್ನ ವ್ಯತ್ಯಾಸ ತಿಳಿಯುತ್ತದೆ. ಸರಿ-ತಪ್ಪು ಮನದಟ್ಟಾಗುತ್ತದೆ. ಆದ್ದರಿಂದ ಸದಾ ಇಲ್ಮ್ ಗಳಿಸಿರಿ. ಅದು ಹೃದಯದ ತಂಪು. ಕಣ್ಣುಗಳಿಗೆ ಪ್ರಕಾಶವಾಗಿದೆ.