ನಂದಿಗ್ರಾಮದ ಗೇಮ್ ಓವರ್: ಕೈಗೆ ಜೋತು ಬಿದ್ದ ದೀದಿ

0
223

✍️ ಅರಫಾ ಮಂಚಿ

ಬಿಜೆಪಿ ಇಷ್ಟೊಂದು ಸಂಚು ಹೆಣೆಯುತ್ತಾ?

ಸದ್ಯಕ್ಕೆ ಪಶ್ಚಿಮಬಂಗಾಳದ ನಂದಿಗ್ರಾಮ ವಿಧಾನಸಭೆಯ ಉಪಚುನಾವಣೆ ತುಂಬ ಕುತೂಹಲ ಕೆರಳಿಸಿದೆ. ಚುನಾವಣಾ ಆಯೋಗ ಬಿಜೆಪಿ ಪರ ಬ್ಯಾಟಿಂಗಿಗಿಳಿದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮುಖ್ಯವಾಗಿ ಮಮತಾರ ಚುನಾವಣಾ ಚಿಹ್ನೆ ಹುಲ್ಲುಹೂವನ್ನು ಕಿತ್ತುಕೊಂಡು ಫುಟ್‌ಬಾಲ್ ಚಿಹ್ನೆ ಕೊಟ್ಟಿರುವುದು ಇಂತಹ ಮಾತುಗಳಿಗೆ ಪುಷ್ಠಿ ನೀಡುತ್ತಿದೆ. ರಾಹುಲ್ ಗಾಂಧಿ “ಚುನಾವಣಾ ಆಯೋಗ ಚಿಹ್ನೆ ಕಸಿದುಕೊಂಡಿರುವುದು ದೀದಿಯೊಬ್ಬರ ವಿಷಯ ಅಲ್ಲ” ಎಂದು ತೀಕ್ಷ್ಣವಾಗಿ ಚುನಾವಣಾ ಆಯೋಗವನ್ನು ಟೀಕಿಸಿದ್ದಾರೆ. ಮಮತಾ ಪರ ಇಷ್ಟು ಗರಂ ರಾಹುಲ್ ಗಾಂಧಿ ಈ ಹಿಂದೆ ಆಗಿಲ್ಲ. ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ಮತ್ತು ಕಪಿಲ್ ಸಿಬಲ್ ವಾದ ಮಂಡಿಸುವುದು ಪ್ರಚಲಿತದಲ್ಲಿದೆ. 

ಹಾಗೆ ಪಶ್ಚಿಮ ಬಂಗಾಳದ ರೇಜಿನಗರ್ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ನಡೆಯುತ್ತಿದೆ. ಆದರೆ ಎಲ್ಲರ ಗಮನ ನಂದಿಗ್ರಾಮ ಉಪಚುನಾವಣೆಯಲ್ಲಿ. ನಂದಿಗ್ರಾಮದಲ್ಲಿ ಗೆಲುವು ಕಂಡರೆ ಟಿಎಂಸಿ ಮತ್ತೆ ಚೇತರಿಸಿದಂತೆ. ಇದು ಬಿಜೆಪಿಗೂ ಅಮಿತ್‌ಶಾಗೂ ಮುಖ್ಯಮಂತ್ರಿ ಅಧಿಕಾರಿಗೂ ಗೊತ್ತು. ನೂರೊಂದೊಂದು ಆರೋಪ ಹೊತ್ತಿರುವ ಚುನಾವಣಾ ಆಯೋಗವನ್ನು ಇಂದು ಯಾರು ಪ್ರಾಮಾಣಿಕ ಎಂದು ಹೇಳುವ ಸ್ಥಿತಿ ಇಲ್ಲ. ಪಕ್ಕಾ ಗೇಮ್‌ ಪ್ಲಾನ್‌ ಮೂಲಕ ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ಟ್ರೆಂಡ್ ೨೦೧೪ ರ ಲೋಕಸಭಾ ಚುನಾವಣೆಯಿಂದ ಬಿಜೆಪಿ ಪಾಲಿಸುತ್ತಾ ಬಂದಿದೆ. ಮತದಾರ ಮತ್ತು ಮತದಾನದ ವ್ಯಾಲ್ಯೂ ಅಪ್ರಸಕ್ತಗೊಳಿಸಿದ ಅಪರಾಧ ಇದು.

ಬಂಗಾಳದ ಆ ಗೇಮ್ ಯಾವುದು?

ನೋಡಿ, ಮುಖ್ಯಮಂತ್ರಿ ಸುಭೇಂದು ಅಧಿಕಾರಿಯನ್ನು ಭೇಟಿ ಮಾಡಿದ ನಂತರ ಟಿಎಂಸಿ ಅಧಿಕೃತ ಅಭ್ಯರ್ಥಿ ನಾಮಪತ್ರ ವಾಪಸು ತೆಗೆದುಕೊಂಡರು. ಆ ಕೂಡಲೇ ಮಮತಾ ಬ್ಯಾನರ್ಜಿ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದರು. ಪ್ರತಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್‌ರನ್ನು ಬಂಧಿಸಿ ಜೈಲಿಗಟ್ಟಲಾಯಿತು. ನಂದಿಗ್ರಾಮದಲ್ಲಿ ಬಿಜೆಪಿಗೆ ಸೋಲುವ ಭೀತಿಯಿದೆ. ಅಲ್ಲದಿದ್ದರೆ ಹೀಗೆಲ್ಲ ಮಾಡಿಸುವ ಅಗತ್ಯ ಏನು? ಈ ಎಲ್ಲ ಆಟಗಳಿಂದ ಬಿಜೆಪಿ ನಂದಿಗ್ರಾಮವನ್ನು ಪ್ರತಿಷ್ಠೆ ಮಾಡಿಕೊಂಡಿರುವುದು ಅರ್ಥ ಆಗುತ್ತದೆ. ಟಿಎಂಸಿ ಹೋಳಾದ ಬಳಿಕ ನಡೆಯುತ್ತಿರುವ ಮೊದಲ ಬಹು ಪ್ರತಿಷ್ಠಿತ ಚುನಾವಣೆ ನಂದಿಗ್ರಾಮದ್ದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಸೀಟುಗಳನ್ನು ಸುಭೇಂದು ಗೆದ್ದಿದ್ದರು. ಭವಾನಿಪುರ ಉಳಿಸಿಕೊಂಡು ನಂದಿಗ್ರಾಮವನ್ನು ತೆರವುಗೊಳಿಸಿದ್ದಾರೆ. ಮುಖ್ಯಮಂತ್ರಿ ಗೆದ್ದ ಸೀಟನ್ನು ತಾವೇ ಮತ್ತೆ ಗೆಲ್ಲಬೇಕಾಗಿದೆ. ಅದಕ್ಕಾಗಿ ಸುಭೇಂದು ಟಿಎಂಸಿ ಅಧಿಕೃತ ಅಭ್ಯರ್ಥಿಯನ್ನೇ ಚುನಾವಣಾ ಕಣದಿಂದ ಹಿಂದಸರಿಯುವಂತೆ ಮಾಡಿದ್ದಾರೆ. ಆದರೆ ಅಭ್ಯರ್ಥಿ ಮಿಲನ್ ಪ್ರಧಾನ್ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ. ಬಿಜೆಪಿಯ ಗೇಮ್ ಜನರಿಗೆ ಅರ್ಥವಾಗಿದೆ. ಜೈಲಲ್ಲೇ ಇದ್ದರೂ ಮಮತಾರ ಬೆಂಬಲ ಇರುವುದರಿಂದ ಅವರ ಗೆಲುವು ಸಲೀಸು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ನಂದಿಗ್ರಾಮ ಚಳವಳಿ ಯಾವುದು?

ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ ಕೇಸು 2007ರದ್ದು, ನಂದಿಗ್ರಾಮ್ ಚಳವಳಿಯದ್ದು. ಕಮ್ಯುನಿಸ್ಟ್ ಸರಕಾರದ ಲ್ಯಾಂಡ್ ಅಕ್ವಿಸಿಷನ್ ವಿರುದ್ಧ ನಡೆದ ಹೋರಾಟಗಳಲ್ಲಿ ಬಿದ್ದಿದ್ದ ಚಾರ್ಜ್‌ಶೀಟ್ ಈಗ ಸುಭೇಂದು ರೀ ಓಪನ್ ಮಾಡಿಸಿದ್ದಾರೆ. ಬಿಜೆಪಿ ಈ ಗೇಮ್ ಖಂಡಿತ ಮತದಾರರಿಗೆ ಅರ್ಥ ಆಗಬಹುದು. ನಂದಿಗ್ರಾಮ ಚಳವಳಿ ಜನರಿಗಾಗಿತ್ತು. ಈ ಹೋರಾಟದಲ್ಲಿ ಅವರ ಜಮೀನು ಅವರ ಬಳಿಯೇ ಉಳಿದಿತ್ತು. 2007 ರಲ್ಲಿ ಇಂಡೋನೇಷ್ಯಾದ ಸಲೀಂ ಗ್ರೂಪ್‌ಗಾಗಿ ಕೈಗಾರಿಕಾ ರಾಸಾಯನಿಕ ಕೇಂದ್ರ ಸ್ಥಾಪಿಸಲು ನಂದಿಗ್ರಾಮದಲ್ಲಿ ಸುಮಾರು 14,500 ಎಕರೆ ಭೂ ಸ್ವಾಧೀನಕ್ಕೆ ಹಲ್ದಿಯಾ ಅಭಿವೃದ್ಧಿ ಪ್ರಾಧಿಕಾರವು ನೋಟಿಸ್ ಕೊಟ್ಟಿತ್ತು. ಇದರ ವಿರುದ್ಧ ಹೋರಾಟದಲ್ಲಿ ಜನರ ಪರವಾಗಿ ಮಿಲನ್ ಪ್ರಧಾನ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. 2007 ಮಾರ್ಚ್ 14 ರಂದು ಗೋಲಿಬಾರ್ ನಡೆದು ಇಬ್ಬರು ಮಹಿಳೆಯರು ಸಹಿತ ಹದಿನಾಲ್ಕು ಮಂದಿ ಗ್ರಾಮಸ್ಥರು ತೀರಿ ಹೋಗಿದ್ದರು. ಈ ಹೋರಾಟ ಸುದೀರ್ಘ ಪರಿಣಾಮ ಬೀರಿತ್ತು. ಮಿಲನ್ ಪ್ರಧಾನ್‌ರಿಗೆ ಇದನ್ನು ಜೋಡಿಸಿ ಈಗ ಬಂಧನ ನಡೆದಿದೆ. ಜನರಿಗೆ ಅರ್ಥ ಆಗಲು ಇದಕ್ಕಿಂತ ಬೇರೆ ಬೇಕಾ? ಅಂದು ಕಮ್ಯುನಿಸ್ಟ್ ಪಾರ್ಟಿಯ ವಿಶ್ವಾಸರ್ಹತೆ ಕುಸಿದಿತ್ತು ಮತ್ತು 2011ರಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಸಿಪಿಎಂ ಮೂಲೋತ್ಪಾಟನೆಗೊಂಡು ಮಮತಾ ಬ್ಯಾನರ್ಜಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುವ ಅವಕಾಶವನ್ನು ಒದಗಿಸಿತ್ತು. ಈ ಹೋರಾಟದ ನಾಯಕರಲ್ಲೊಬ್ಬರಾದ ಮಿಲನ್ ಪ್ರಧಾನ್‌ಗೆ ಟಿಎಂಸಿ ಬೆಂಬಲ ಕೊಟ್ಟರೆ ಗೆಲುವು ನಿಶ್ಚಿತ. ಆದ್ದರಿಂದ ಬಿಜೆಪಿ ಹೌಹಾರಿದ್ದು, ಡರ್ಟಿ ಪಾಲಿಟಿಕ್ಸ್!

ದೀದಿ ಸೋತದ್ದಾ ಸೋಲಿಸಿದ್ದಾ?

ಕಳೆದ ಪಶ್ಚಿಮಬಂಗಾಳದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರನ್ನು ಎಸ್.ಐ.ಆರ್. ತಂದು ಸೋಲಿಸಿದ್ದೆಂಬ ಪ್ರತೀತಿ ಈಗಲೂ ದಟ್ಟವಾಗಿದೆ. ಕೋರ್ಟಿನ ಮುಂದೆ ಚುನಾವಣಾ ಆಯೋಗ ಸಲ್ಲಿಸಿದ ಅಫಿಡವಿಟ್ ಪ್ರಕಾರ 37 ಲಕ್ಷಕ್ಕೂ ಹೆಚ್ಚು ಅಪೀಲುಗಳಿವೆ. ಸುಪ್ರೀಂ ಕೋರ್ಟ್ ರೂಪಿಸಿದ ಟ್ರಿಬ್ಯುನಿಲ್‌ನಲ್ಲಿ ಮುಂದಿನ ಹನ್ನೆರಡು ವರ್ಷದವರೆಗೂ ವಿಲೇವಾರಿ ಸಾಧ್ಯವಿಲ್ಲ ಎಂದು ವರದಿಯಾಗಿದೆ.

ನಿಜಕ್ಕೂ ಎಂತ ಪ್ಲಾನಿದು! ಹೊರಗಿಟ್ಟವರಲ್ಲಿ ಹೆಚ್ಚಿನ ಮತದಾರರು ಟಿಎಂಸಿ ಬೆಂಬಲಿಗರು ಎನ್ನಲಾಗುತ್ತಿದೆ. ಟ್ರಿಬ್ಯುನಲ್ ತೀರ್ಪಿನಲ್ಲಿ ವೋಟು ಹಾಕುವ ಹಕ್ಕು ಈ ಮೇಲ್ಮನವಿದಾರರಿಗೆ ಹಲವು ಚುನಾವಣೆಗಳು ಬಂದು ಹೋಗುವವರೆಗೂ ಕಾಯಬೇಕಾಗುತ್ತದೆ. ಜ್ಞಾನೇಶ್ ಕುಮಾರ್‌ರ ಚುನಾವಣಾ ಆಯೋಗದಿಂದಾಗಿ ಪಾಪ ಮತದಾರ 12 ವರ್ಷ ವನವಾಸ ಅನುಭವಿಸಬೇಕಾಗುತ್ತದೆ. ರಾಹುಲ್ ಗಾಂಧಿ “ದೀದಿಯೊಬ್ಬರಿಗೆ ಸಂಬಂಧಿಸಿದ ವಿಚಾರ ಅಲ್ಲ” ಅಂದದ್ದು ಮತ್ತು ಚುನಾವಣಾ ಆಯೋಗದ ಕುರಿತು ಉಗ್ರ ಟೀಕೆ ಮಾಡಿದ್ದು ಅದೇ ಕಾರಣಗಳಿಂದ ಅನಿಸುತ್ತದೆ. ಇಂಡಿಯಾ ಕೂಟ ಮಾಡಿ ಅದಕ್ಕೂ ಸರಿಯಾಗಿ ಸಾಥ್ ಕೊಡದ ದೀದಿಯನ್ನು ಈ ಸಂದರ್ಭದಲ್ಲಿ ಇಗ್ನೋರ್ ಮಾಡಬಹುದಿತ್ತು. ಬಿಜೆಪಿಯ ರಾಜಕೀಯ ಆಟ ಮಮತಾರಿಗಿಂತಲೂ ಅಪಾಯಕಾರಿಯಾದುದು. ಯಾಕೆಂದರೆ ಬಂಗಾಳದಲ್ಲಿ ಬಿಜೆಪಿ ಟಿಎಂಸಿಯೊಂದಿಗೆ ಆಡಿದ ಅದೇ ಆಟ ಗುಜರಾತಿನ ಚುನಾವಣೆಯ ವೇಳೆ ಕಾಂಗ್ರೆಸ್ಸಿನೊಂದಿಗೆ ಕೂಡ ಆಡಿತ್ತು.

ಮಮತಾರಿಂದ ಹೊಸ ಇಂಡಿಯಾ?

ಈಗ ಟಿಎಂಸಿಯ ಬಂಡಾಯ ನಾಯಕಿ ಸಯೋನಿ ಘೋಷ್ ಅವರು ಎಕ್ಸ್‌ನಲ್ಲಿ ಹಾಕಿದ ಶಾಯರಿ ವೈರಲ್ ಆಗಿ ಕುತೂಹಲ ಸೃಷ್ಟಿಸಿದೆ.

“ತು ಇದರ್ ಉದರ್ ಬಾತ್ ಮತ್ ಕರ್ ಏ ಬತಾ ಕಾಫಿಲಾ ಕ್ಯೂಂ ಲೂಟಾ.” ಹೀಗೆ ಇನ್‌ಡೈರೆಕ್ಟಾಗಿ ಮಮತಾರಿಗೆ ಗುರಿ ಇಟ್ಟು ಸಯೋನಿ ಘೋಷ್ ಪರೋಕ್ಷ ಎಚ್ಚರಿಕೆ ನೀಡುತ್ತಿದ್ದಾರೆ ಎಂಬ ಚರ್ಚೆಗಳಿವೆ. ಅವರು ಸೂಚನೆ ನೀಡಿರುವ ಪ್ರಕಾರ ದೀದಿ ಅತಂತ್ರ ಪರಿಸ್ಥಿತಿಯ ಲಾಭ ಎತ್ತಲು ಕಾಂಗ್ರೆಸ್ಸನ್ನು ಬಳಕೆ ಮಾಡುತ್ತಿದ್ದಾರೆ. ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ನಿಜವಾದ ಘಟ್‌ಬಂಧನ್ ಆಗಲಿ ಎಂದು ಕೂಡ ರಾಹುಲ್ ಗಾಂಧಿಗೆ ಸಲಹೆ ನೀಡುವ ರೀತಿಯಲ್ಲೇ ಸಯೋನಿ ಮಾತಾಡಿದ್ದಾರೆ. ಹೌದು, ಸಯೋನಿ ಇತ್ತೀಚೆವರೆಗೂ ಮಮತಾ ಬ್ಯಾನರ್ಜಿಯ ಆಪ್ತೆಯಾಗಿದ್ದವರು. ಹಾಗಿದ್ದರೆ ಮಮತಾ ಬ್ಯಾನರ್ಜಿ ಟಿಎಂಸಿಯ ಚೇತರಿಕೆಗಾಗಿ ಕಾಂಗ್ರೆಸ್‌ನ ಸಖ್ಯ ಬಯಸುತ್ತಿದ್ದಾರೆ. ತನ್ನ ಪಾರ್ಟಿ ಚೇತರಿಸಿದ ಬಳಿಕ ಕೈ ಕೊಡಬಹುದು ಎಂಬ ಮಾತುಗಳು ತೇಲಿ ಬರುತ್ತಿವೆ.

ತಮಿಳುನಾಡಿನಲ್ಲಿ ಡಿಎಂಕೆಗೆ ಕೈಕೊಟ್ಟು ವಿಜಯ್ ಜೊತೆ ಹೋದ ರಾಹುಲ್ ಗಾಂಧಿ ನಿರ್ಧಾರಕ್ಕೆ ಡಿಎಂಕೆಯಿಂದಲೂ ಪ್ರತಿ ನಿರ್ಧಾರ ಆಗಿದೆ ಎಂಬ ವರದಿಯಿದೆ. ಇತ್ತೀಚೆಗೆ ಡಿಎಂಕೆ ರಾಜ್ಯಸಭಾ ಸಂಸದೆ ಕನಿಮೊಝಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾದ ಬಳಿಕ ಸುದ್ದಿ ಎದ್ದಿದೆ. ಇಬ್ಬರೂ ನಾಯಕರು ಪ್ರಾದೇಶಿಕ ಪಕ್ಷಗಳನ್ನು ಒಟ್ಟುಸೇರಿಸಿ ಮೂರನೆಯದಾದೊಂದು ಕೂಟ ಕಟ್ಟುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಪ. ಬಂಗಾಳದ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಟಿಎಂಸಿ ಜೊತೆ ಮೈತ್ರಿಗೆ ಕಾಂಗ್ರೆಸ್ ಹಿಂಜರಿಯುತ್ತಿದೆ. ಒಂದು ಕಾಲದಲ್ಲಿ ಎಲ್ಲೂ ಇಲ್ಲದ ಬಿಜೆಪಿಯನ್ನು ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಡಿಎಂಕೆ-ಟಿಎಂಸಿಯ ಪಾತ್ರವೂ ಇದೆ. ಅಂದು ಕಾಂಗ್ರೆಸ್ಸನ್ನು ವಿರೋಧಿಸುವ ಹಟದಲ್ಲಿ ಬಿಜೆಪಿಗೆ ಮಣೆ ಹಾಕಿತ್ತು. ಕರುಣಾನಿಧಿ ವಾಜಪೇಯಿ ಜೊತೆ ಸಖ್ಯ ಮಾಡಿದ್ದು, ಮಮತಾ ಬ್ಯಾನರ್ಜಿ ವಾಜಪೇಯಿ ಕ್ಯಾಬಿನೆಟ್‌ನಲ್ಲಿ ರೈಲು ಸಚಿವರಾಗಿದ್ದವರೇ. ಇನ್ನೊಂದು ಕಡೆ ಕೇಜ್ರಿವಾಲ್‌ಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಆಗಲ್ಲ. ಅವರು ಬಹಳ ಹಿಂದಿನಿಂದಲೂ ಪ್ರಾದೇಶಿಕ ಪಕ್ಷಗಳ ಸಖ್ಯವನ್ನು ಹೇಳುತ್ತಾ ಬಂದಿದ್ದಾರೆ. ಕನಿಮೊಝಿ ಪ್ಲಾನ್ ಸಕ್ಸಸ್ಸಾದರೆ ಕೇಜ್ರಿವಾಲ್ ಗೆಲುವಿನ ನಗು ಬೀರಬಹುದಾಗಿತ್ತು. ಆದರೆ ಸದ್ಯಕ್ಕೆ ಮಮತಾ ಬ್ಯಾನರ್ಜಿ ಆ ಸ್ಥಿತಿಯಲ್ಲಿಲ್ಲ. ಮಮತಾ ಕಾಂಗ್ರೆಸ್ಸಿಗೆ ಹತ್ತಿರವಾಗಲೇ ಬೇಕೆಂಬ ಪರಿಸ್ಥಿತಿ ಮಮತಾರ ಮುಂದೆ ಸೃಷ್ಟಿಯಾಗಿದೆ. ಡಿಎಂಕೆಗೆ ಸಖ್ಯ ಇಲ್ಲದ ಅವಸ್ಥೆ! ಕಾಲದ ಲೀಲೆ.