ಸನ್ಮಾರ್ಗ ವಾರ್ತೆ
ಜಮ್ಮು, ಫೆ. 17: ಮುಂದಿನ ತಿಂಗಳು ಜಮ್ಮು ಕಾಶ್ಮೀರದಲ್ಲಿ ನಡೆಯುವ ಪಂಚಾಯತ್ ಚುನಾವಣೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಭಾಗವಹಿಸುವ ಆಸಕ್ತಿ ಪ್ರಕಟಿಸಿದ್ದು ಮಾರ್ಚ್ ಐದಕ್ಕೆ ಚುನಾವಣೆ ಆರಂಭಗೊಂಡು ಎಂಟು ಹಂತಗಳಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಭಾಗವಹಿಸುತ್ತದೆ ಎಂದು ಪಾರ್ಟಿಯ ಕೇಂದ್ರ ಕಾರ್ಯದರ್ಶಿ ರತನ್ ಲಾಲ್ ಗುಪ್ತ ರಾಜ್ಯದ ಚೀಫ್ ಇಲಕ್ಟರಲ್ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ಆದರೆ ಸ್ವತಂತ್ರವಾಗಿ ಪಾರ್ಟಿಗೆ ಪ್ರಚಾರ ಮಾಡಲು ಹೆಚ್ಚು ಅಡೆತಡೆಗಳಿವೆ. ಅಧ್ಯಕ್ಷ ಫಾರೂಕ್ ಅಬ್ದುಲ್ಲ, ಉಪಾಧ್ಯಕ್ಷ ಉಮರ್ ಅಬ್ದುಲ್ಲ, ಪ್ರಧಾನ ಕಾರ್ಯದರ್ಶಿ ಅಲಿ ಮುಹಮ್ಮದ್ ಸಾಗರ್ ಸಹಿತ ಹಲವು ಹಿರಿಯ ನಾಯಕರನ್ನು ಸಾರ್ವಜನಿಕ ಸುರಕ್ಷಾ ಕಾನೂನು ಪ್ರಕಾರ ಬಂಧಿಸಿಡಲಾಗಿದೆ. ಇವರು ಜೈಲಿನಲ್ಲಿರುವುದರಿಂದ ಪಾರ್ಟಿಗೆ ಚುನಾವಣೆಯಲ್ಲಿ ಭಾಗವಹಿಸಲು ಪ್ರಾಯೋಗಿಕವಾಗಿ ಅಡ್ಡಿಯಿದೆ. ಬಿಜೆಪಿಯನ್ನು ಹೊರತು ಇತರೆಲ್ಲ ಪಕ್ಷಗಳನ್ನು ದೂರ ನಿಲ್ಲಿಸುವ ಯೋಜನೆಯಾದರೆ ಹೆಚ್ಚೇನೂ ಮಾಡಬೇಕಿಲ್ಲ. ಪ್ರಜಾಪ್ರಭುತ್ವ ಉದ್ದೇಶವಾದರೆ ಈಗಿನ ಪ್ರಕ್ರಿಯೆಯಲ್ಲಿ ಗಂಭೀರ ಲೋಪಗಳಿವೆ ಎಂದು ಪತ್ರದಲ್ಲಿ ರತನ್ಲಾಲ್ ಗುಪ್ತಾ ತಿಳಿಸಿದ್ದಾರೆ.












