ಪೌರತ್ವ ತಿದ್ದುಪಡಿ ಮಸೂದೆ: ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಯ ಕಿಡಿ

0
704

ಸನ್ಮಾರ್ಗ ವಾರ್ತೆ-

ಗುವಾಹಟಿ, ಡಿ.11: ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಆತಂಕ ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಅಲೆ ಎದ್ದಿದೆ. ಮಸೂದೆಯು ಲೋಕಸಭೆಯಲ್ಲಿ ಪಾಸಾಗಿದ್ದು ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆಯ ಕಿಡಿ ಹಬ್ಬಿದೆ. ಅಸ್ಸಾಮ್ ಮತ್ತು ಇತರ ಈಶಾನ್ಯ ರಾಜ್ಯಗಳ ಹಲವು ಕಡೆ ಹಿಂಸಾಚಾರ ಘಟನೆ ನಡೆಯಿತು. ವಿದ್ಯಾರ್ಥಿ ಯೂನಿಯನ್‍ಗಳು, ಎಡ-ಪ್ರಜಾಪ್ರಭುತ್ವಾದಿ ಪಾರ್ಟಿಗಳು ಪ್ರತಿಭಟನೆಯ ಮಂಚೂಣಿಯಲ್ಲಿವೆ.

ಸಾಮಾಜಿಕ ಮಾಧ್ಯಮಗಳಲ್ಲಿಯೂ ಸರಕಾರದ ವಿರುದ್ಧ ಪ್ರತಿಭಟನೆ ಕಂಡು ಬಂದಿದೆ. ಕೇರಳ, ಚೆನ್ನೈ, ಭೋಪಾಲಗಳ ಹಲವು ಕಡೆ ಮಸೂದೆಯ ವಿರುದ್ಧ ಪ್ರತಿಭಟನಾ ಜಾಥಾ ನಡೆಯುತ್ತಿದೆ. ದಿಲ್ಲಿಯಲ್ಲಿ ಪೌರ ಹಕ್ಕು ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಮಸೂದೆಯ ಪ್ರತಿಯನ್ನು ಸುಟ್ಟುಹಾಕಲಾಗಿದೆ. ಜಾಮಿಯ ಮಿಲ್ಲಿಯ, ಅಲಿಗಢ ವಿಶ್ವವಿದ್ಯಾನಿಲಯ ಕ್ಯಾಂಪಸ್‍ಗಳಲ್ಲಿ ಮಸೂದೆ ಪ್ರತಿ ಉರಿಸಿಹಾಕಿ ಪ್ರತಿಭಟನೆ ನಡೆದಿದೆ. ಅಸ್ಸಾಮ್‍ನ ಬ್ರಹ್ಮಪುತ್ರ ಪ್ರದೇಶದಲ್ಲಿ ಬಂದ್‍ನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್, ನಾರ್ತ್ ಈಸ್ಟ್ ಸ್ಟೂಡೆಂಟ್ಸ್ ಆರ್ಗನೈಝೇಶನ್ಸ್ ಹನ್ನೊಂದು ಗಂಟೆಯ ಬಂದ್‍ಗೆ ಕರೆ ನೀಡಿದೆ. ಗುವಾಹಟಿ ಸಹಿತ ಹಲವು ಕಡೆಗಳಲ್ಲಿ ದೊಡ್ಡ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಪ್ರತಿಭಟನಾಕಾರರು ರೈಲುಪಟ್ಟಿಯಲ್ಲಿ ಕೂತದ್ದರಿಂದ ರೈಲು ಸಂಚಾರ ಅಸ್ತವ್ಯಸ್ತವಾಗಿದೆ.

ಅಸ್ಸಾಂ, ಅರುಣಾಚಲ, ಮೇಘಾಲಯ, ಮೀಝೋರಂ, ತ್ರಿಪುರಗಳಲ್ಲಿ ಮಂಗಳವಾರ ಬೆಳಗ್ಗೆ ಐದು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಬಂದ್ ನಡೆಯಿತು. ಹೋನ್‍ಬಿಲ್ ಹಬ್ಬದ ಪ್ರಯುಕ್ತ ನಾಗಲೆಂಡ್‍ ಅನ್ನು ಬಂದ್‍ನಿಂದ ಹೊರತುಪಡಿಸಲಾಗಿತ್ತು. ನಿರಾಶ್ರಿತರಿಗೆ ಪೌರತ್ವ ನೀಡುವುದು ತಮ್ಮ ಅಸ್ಮಿತೆ, ಜೀವನದಾರಿಗೆ ಪ್ರತಿಕೂಲ ಎಂದು ಈಶಾನ್ಯ ರಾಜ್ಯಗಳ ಜನವಿಭಾಗ ಆತಂಕಗೊಂಡಿದೆ. ಪ್ರತಿಭಟನೆ ವ್ಯಾಪಿಸಿದ್ದರಿಂದ ತ್ರಿಪುರದಲ್ಲಿ ಇಂಟರ್‍ನೆಟ್ ಸೇವೆಯನ್ನು 48 ಗಂಟೆ ಸ್ಥಗಿತಗೊಳಿಸಲಾಗಿದೆ. ಮೊಬೈಲ್ ಎಸ್ ಎಂಎಸ್ ನಿಷೇಧಿಸಲಾಗಿದೆ.

ಅಸ್ಸಾಂನ ದಿಬ್ರುಗಡ್ ಜಿಲ್ಲೆಯಲ್ಲಿ ಬಂದ್ ಬೆಂಬಲಿಗರು ಸಿಐಎಸ್‍ಎಫ್ ಜವಾನರೊಂದಿಗೆ ಘರ್ಷಣೆಗಿಳಿದರು. ಮೂವರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ತ್ರಿಪುರದ ಧಲಾಯ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇಲ್ಲಿನ ಹೆಚ್ಚಿನ ಅಂಗಡಿ ಮಾಲಕರು ಅಲ್ಲಿನ ನಿವಾಸಿಗಳಲ್ಲ. ತ್ರಿಪುರ, ಅರುಣಾಚಲ, ಮಣಿಪುರ ಹೆಚ್ಚಿನ ಕಡೆಗಳಲ್ಲಿ ಜನಜೀವನ ಸ್ತಂಭಿಸಿದೆ. ಆಲ್ ಮಣಿಪುರ ಸ್ಟೂಡೆಂಟ್ಸ್ ಯೂನಿಯನ್ ನೇತೃತ್ವದಲ್ಲಿ ಬೆಳಗ್ಗೆ ಮೂರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬಂದ್ ಇತ್ತು. ಮೇಘಾಲಯದ ರಾಜಧಾನಿ ಶಿಲ್ಲಾಂಗ್‍ನಲ್ಲಿ ವಾಹನಗಳಿಗೆ ಹಾನಿ ಎಸಗಲಾಗಿದೆ. ಪೊಲೀಸರ ಮೇಲೆ ಪ್ರತಿಭಟನಾಕಾರರು ನಾಡಬಾಂಬ್ ಎಸೆದರು. ಬಂದ್‍ನಿಂದಾಗಿ ವಿವಿಧ ವಿಶ್ವವಿದ್ಯಾನಿಲಯಗಳ ಪರೀಕ್ಷೆ ಮುಂದೂಡಲಾಗಿದೆ.