ಟೆಲ್ ಅವಿವ್ ಮೇಲೆ ‘ಅಣು ಬಾಂಬ್‌ ಸ್ಫೋಟ’: ಮತಗಳನ್ನು ಗೆಲ್ಲಲು ನೆತನ್ಯಾಹು ಹೊಸ ತಂತ್ರ ರೂಪಿಸಿದ್ದಾರೆ ಎಂದ ವಿರೋಧ ಪಕ್ಷಗಳು

0
350

ಸನ್ಮಾರ್ಗ ವಾರ್ತೆ

ಟೆಲ್ ಅವಿವ್: ಇಸ್ರೇಲ್ ಸಾರ್ವತ್ರಿಕ ಚುನಾವಣೆಗಳಿಗೆ ಸಿದ್ಧವಾಗುತ್ತಿದ್ದಂತೆ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ರಾಜಧಾನಿ ಟೆಲ್ ಅವಿವ್ ಮೇಲೆ ಅಣು ಬಾಂಬ್‌ ಸ್ಫೋಟ ಸಂಭವಿಸಿದಂತಿರುವ ಎಐ-ಜನರೇಟೆಡ್ (AI-generated) ಚಿತ್ರವನ್ನು ಹಂಚಿಕೊಂಡಿದ್ದಾರೆ. ಇರಾನ್‌ನ ಬೆದರಿಕೆಯ ಬಗ್ಗೆ ಎಚ್ಚರಿಸುವ ನೆತನ್ಯಾಹು ಅವರ ಈ ಪೋಸ್ಟ್ ದೊಡ್ಡ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ದಟ್ಟ ಜನಸಂದಣಿ ಹೊಂದಿರುವ ನಗರದ ಮೇಲೆ ಬೃಹತ್ ಅಣಬೆ ಆಕಾರದ ಹೊಗೆಯ ಮೋಡ ಏರುತ್ತಿರುವ ಮತ್ತು ಹತ್ತಿರದ ಎಲ್ಲಾ ಕಟ್ಟಡಗಳನ್ನು ನಾಶಪಡಿಸುತ್ತಿರುವ ಚಿತ್ರವನ್ನು ನೆತನ್ಯಾಹು ಹಂಚಿಕೊಂಡಿದ್ದಾರೆ.

ಇರಾನ್‌ನ ಪರಮಾಣು ಸೌಲಭ್ಯಗಳ ವಿರುದ್ಧ ಇಸ್ರೇಲ್ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದ್ದ ಇಸ್ರೇಲಿ ಲೇಖಕ ಹಾಗೂ ರಾಜಕೀಯ ವಿಶ್ಲೇಷಕ ಯುವಲ್ ಬ್ಲಂಬರ್ಗ್ ಅವರ ಹೇಳಿಕೆಯೊಂದಿಗೆ ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆತನ್ಯಾಹು ಹಂಚಿಕೊಂಡಿದ್ದಾರೆ. “ಇಸ್ರೇಲ್ ರಾಜ್ಯವು ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಂಡರೆ, ಯಾವುದೂ ಎಂದಿನಂತೆ ಇರುವುದಿಲ್ಲ” ಎಂದು ಆ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಇರಾನಿನ ಬೆದರಿಕೆಯನ್ನು ಎದುರಿಸಲು ಇಸ್ರೇಲ್‌ಗೆ ಅತ್ಯಂತ ಕಡಿಮೆ ಸಮಯವಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್‌ನ ಭವಿಷ್ಯವನ್ನು ರಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ಪೂರ್ಣಗೊಳಿಸಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯ ಬಾಕಿ ಉಳಿದಿರುವ ಎರಡು ವರ್ಷಗಳನ್ನು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ವಿರೋಧ ಪಕ್ಷಗಳು ನೆತನ್ಯಾಹು ವಿರುದ್ಧ ರೊಚ್ಚಿಗೆದ್ದಿವೆ. ಚುನಾವಣೆಗೆ ಮುಂಚೆ ಜನರಲ್ಲಿ ಭಯವನ್ನು ಸೃಷ್ಟಿಸುವ ಮೂಲಕ ಮತಗಳನ್ನು ಸೆಳೆಯಲು ನೆತನ್ಯಾಹು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕರು ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.