ಹೆಲ್ಮೆಟ್ ಧರಿಸದ ಆರೋಪ: ಸುಡು ಬಿಸಿಲಿನಲ್ಲಿ ಗರ್ಭಿಣಿಯನ್ನು ಮೂರು ಕಿ.ಮೀ ನಡೆಸಿದ ಮಹಿಳಾ ಎಸ್ ಐ ಸಸ್ಪೆಂಡ್

0
1642

ಸನ್ಮಾರ್ಗ ವಾರ್ತೆ

ಒಡಿಶಾ: ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬೈಕ್ ನಲ್ಲಿ ತನ್ನ ಪತಿಯೊಂದಿಗೆ ಹೋಗುತ್ತಿದ್ದ ಗರ್ಭಿಣಿಯೋರ್ವಳು ಹೆಲ್ಮೆಟ್ ಧರಿಸದ ಆರೋಪದ ಮೇಲೆ ದಂಡ ಕಟ್ಟಲು ಸುಡು ಬಿಸಿಲಿನಲ್ಲಿ ಮೂರು ಕಿಲೋ ಮೀಟರ್ ದೂರದಲ್ಲಿರುವ ಪೊಲೀಸ್ ಠಾಣೆಗೆ ನಡೆಯುವಂತೆ ಮಾಡಿರುವ ಮಹಿಳಾ ಎಸ್ ಐ ಓರ್ವರ ಕ್ರಮವು ಸದ್ಯ ವಿವಾದಕ್ಕೆ ಕಾರಣವಾಗಿದೆ.

ಈ ಘಟನೆಯು ಒಡಿಶಾದ ಮಯೂರ್‍ಬಂಜ್ ಜಿಲ್ಲೆಯ ಸರತ್ ಎಂಬಲ್ಲಿ ನಡೆದಿದ್ದು, ಸುಡು ಬಿಸಿಲಿನಲ್ಲಿ ಮೂರು ಕಿಲೋಮೀಟರ್ ದೂರದವರೆಗೆ ಬಿಕ್ರಂ ಬಿರುಲಿ ಮತ್ತು ಆತನ ಎಂಟು ತಿಂಗಳ ತುಂಬು ಗರ್ಭಿಣಿ ಗುರುಬಾರಿಯನ್ನು ಮಹಿಳಾ ಎಸ್ಸೈ ರೀನಾ ಬಕ್ಸಲ್ ನಡೆಯುವಂತೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಸದ್ಯ ಎಸ್ಸೈ ರೀನಾ ವಿರುದ್ಧ ಕ್ರಮ ಜರಗಿಸಲು ಹಿರಿಯ ಪೊಲೀಸಧಿಕಾರಿಗಳು ಆದೇಶಿಸಿದ್ದು, ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಆರೋಗ್ಯ ತಪಾಸಣೆಗಾಗಿ ಗುರುಬಾರಿ ತನ್ನ ಪತಿ ಬಿಕ್ರಂ ಬಿರುಲಿಯೊಂದಿಗೆ ಹೆಲ್ಮೆಟ್ ಧರಿಸದೆ ಹೊರಟಿದ್ದರು. ಇವರ ದ್ವಿಚಕ್ರ ವಾಹನವನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಗರ್ಭಿಣಿ ಗುರುಬಾರಿ ಹೆಲ್ಮೆಟ್ ಧರಿಸದ್ದಕ್ಕೆ 500 ರೂಪಾಯಿ ದಂಡ ಹಾಕಿದ್ದಾರೆ. ಮಾತ್ರವಲ್ಲ ಬಿಕ್ರಮ್‍ಗೆ ಮೂರು ಕಿಲೊಮೀಟರ್ ದೂರದ ಪೊಲೀಸ್ ಠಾಣೆಯಲ್ಲಿ ಹಣ ಕಟ್ಟಿ ಬರಲು ರೀನಾ ಬಕ್ಸಲ್ ಹೇಳಿದ್ದಲ್ಲದೆ, ಅವರನ್ನು ದ್ವಿಚಕ್ರದಲ್ಲಿ ಹೋಗಲು ಬಿಡಡಿದ್ದರಿಂದ ನಂತರ ಮೂರು ಕಿಲೊಮೀಟರ್ ವರೆಗೆ ಇಬ್ಬರು ನಡೆದುಕೊಂಡೇ ಬಂದಿದ್ದಾರೆ.

ದಂಪತಿಯು ಬಳಿಕ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಎಸ್ಸೈ ರೀನಾ ಬಕ್ಸಲ್ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್ಪಿಯ ಅಧೀನದಲ್ಲಿ ಇಲಾಖಾ ತನಿಖೆ ನಡೆದು ವರದಿ ಸಲ್ಲಿಸಲಾಗಿತ್ತು. ಮಾರ್ಚ್ 28ರ ಘಟನೆಯಲ್ಲಿ ರೀನಾರ ನಡೆಯಲ್ಲಿ ತಪ್ಪು ಕಂಡು ಬಂದಿದ್ದರಿಂದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡಲಾರಂಭಿಸಿದ್ದು, ಓರ್ವ ಮಹಿಳೆಯಾಗಿ, ಅಲ್ಲದೆ ಅಧಿಕಾರಿಯಾಗಿ ಗರ್ಭಿಣಿಯ ಜೊತೆಗೆ ಹೀಗೆ ಮಾಡಿದ್ದು ಸರಿಯೇ? ಆಕೆಯ ಮಾನವೀಯತೆ ಸತ್ತಿತ್ತೇ ಎಂದು ರೀನಾ ಬಕ್ಸಲ್ ವಿರುದ್ಧ ನೆಟ್ಟಿಗರು ಕಿಡಿಗಾರಿದ್ದಾರೆ.