✍️ ಪ್ರಸನ್ನನ್ ಕೆ.ಪಿ.
“ಮಗಳ ಮರುಮದುವೆಯ ಬಗ್ಗೆ ಆಕೆ ಜೊತೆ ಪ್ರಸ್ತಾಪಿಸಿದಾಗ ಆಕೆ ವಿಷಯ ಕೇಳಲೇ ಸಿದ್ಧಳಿಲ್ಲ…” ಎಂದು ಸ್ನೇಹಿತರು ಓರ್ವರು ನನ್ನಲ್ಲಿ ಹಂಚಿಕೊಂಡ ಮಾತುಗಳು.
ಇದು ವಿಚ್ಛೇದನಗೊಂಡ ಮಗಳ ತಂದೆಯ ನೋವು. “ಇನ್ನೊಂದು ವೈಫಲ್ಯವನ್ನು ಅವಳು ತಡೆಯಲು ಸಾಧ್ಯವಿಲ್ಲ” ಎಂಬ ಆತಂಕ. ಇಂದಿನ ಕಾಲದಲ್ಲಿ ಸಂಬಂಧಗಳು ಹುಟ್ಟುವುದು ಮತ್ತು ಮುರಿಯುವುದು ಸಾಮಾನ್ಯ ಸುದ್ದಿಯಂತಾಗಿದೆ. ಅಪಾರ ನಿರೀಕ್ಷೆಗಳೊಂದಿಗೆ ಆರಂಭವಾಗುವ ಅನೇಕ ವಿವಾಹಗಳು ಮಧ್ಯದಲ್ಲೇ ಮುರಿದು ಹೋಗುವುದು ನಿಜಕ್ಕೂ ನೋವಿನ ಸಂಗತಿ. ಆದರೆ ಒಂದು ವೈಫಲ್ಯದಿಂದ ಜೀವನವನ್ನು ಕೊನೆಗೊಳಿಸಬೇಕಾಗಿಲ್ಲ.
ವಿಧವತ್ವವಾಗಲಿ, ವಿಚ್ಛೇದನವಾಗಲಿ – ಇವುಗಳನ್ನು ಧೈರ್ಯದಿಂದ ಎದುರಿಸಿದ ಮಹಾನ್ ಮಹಿಳೆಯರ ಇತಿಹಾಸ ನಮ್ಮ ಮುಂದಿದೆ. ಅವರಲ್ಲಿ ಮಹಿಳೆಯ ಸ್ವತಂತ್ರ ನಿರ್ಧಾರಶಕ್ತಿ ಮತ್ತು ಹೋರಾಟದ ಮನೋಭಾವ ಸ್ಪಷ್ಟವಾಗಿ ಕಾಣುತ್ತದೆ. ಜೀವನದಲ್ಲಿ ಕುಗ್ಗಿದವರು ಅವರ ಬದುಕನ್ನು ಓದಿ ಪ್ರೇರಣೆ ಪಡೆಯಬಹುದು.
ಖಸ್ಅಮ್ ಗೋತ್ರದ ಉಮೈಸ್ ಅವರ ಪುತ್ರಿ ಅಸ್ಮಾ(ರ) ಇಸ್ಲಾಮಿನ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಇಸ್ಲಾಮಿನ ಆರಂಭದ ಕಾಲದಲ್ಲೇ ದಾರುಲ್ ಅರ್ಕಮ್ನಲ್ಲಿ ಪ್ರವಾದಿ ಮುಹಮ್ಮದ್(ಸ) ಅವರ ಮುಂದೆ ಇಸ್ಲಾಮ್ ಸ್ವೀಕರಿಸಿದ ಆರಂಭಿಕ ಸಹಾಬಿ ಮಹಿಳೆಯರಲ್ಲಿ ಒಬ್ಬರು.
ಮೊದಲ ಪತಿ ಜಾಫರ್ ಇಬ್ನು ಅಬೀ ತಾಲಿಬ್(ರ) ಜೊತೆ ಅಬಿಸೀನಿಯಾಕ್ಕೆ ಹಿಜ್ರತ್ ಮಾಡಿದರು. ಸುಮಾರು ಹತ್ತು ವರ್ಷಗಳ ಪ್ರವಾಸ ಜೀವನದ ನಂತರ ಮದೀನಾಕ್ಕೆ ಮರಳಿದರು. ಬಳಿಕ ಮೂತ ಯುದ್ಧದಲ್ಲಿ ಜಾಫರ್(ರ) ಹುತಾತ್ಮರಾದರು. ಆಗ ಅಸ್ಮಾ(ರ) ಮೂವರು ಮಕ್ಕಳೊಂದಿಗೆ ವಿಧವೆಯಾಗಿ ಬದುಕನ್ನು ಮುಂದುವರಿಸಿದರು.
ಆ ಸಂದರ್ಭದಲ್ಲಿ ಪ್ರವಾದಿ(ಸ) ಅವರೇ ಅಬೂಬಕರ್ ಸಿದ್ದೀಕ್(ರ) ಅವರನ್ನು ವಿವಾಹವಾಗುವಂತೆ ಅಸ್ಮಾ(ರ) ಅವರಿಗೆ ಸಲಹೆ ನೀಡಿದರು. ಸುಮಾರು 20ನೇ ವಯಸ್ಸಿನಲ್ಲಿ 27 ವರ್ಷದ ಜಾಫರ್(ರ) ಅವರನ್ನು ವಿವಾಹವಾದ ಅಸ್ಮಾ (ರ), ನಂತರ ಸುಮಾರು 35ನೇ ವಯಸ್ಸಿನಲ್ಲಿ 55 ವರ್ಷದ ಅಬೂಬಕರ್(ರ) ಅವರನ್ನು ಸಂತೋಷದಿಂದ ಜೀವನ ಸಂಗಾತಿಯಾಗಿ ಸ್ವೀಕರಿಸಿದರು. ಈ ದಂಪತಿಗಳಿಗೆ ಮುಹಮ್ಮದ್ ಇಬ್ನು ಅಬೂಬಕರ್ ಎಂಬ ಪುತ್ರ ಜನಿಸಿದರು. ಅಬೂಬಕರ್(ರ) ಅವರ ನಿಧನದ ನಂತರ ಅವರ ವಸಿಯತ್ ಪ್ರಕಾರ ಅಸ್ಮಾ(ರ) ಅವರೇ ಜನಾಝಾ ಸ್ನಾನ ಮಾಡಿಸಿದರು.
ನಂತರ ಅಸ್ಮಾ(ರ) ರವರು ಅಲಿ(ರ) ಅವರನ್ನು ವಿವಾಹವಾದರು. ತಮಗಿಂತ ಕಿರಿಯವರಾದ ಅಲಿ(ರ) ಅವರೊಂದಿಗೆ ಅವರು ಜೀವನ ಸಾಗಿಸಿದರು.
ಬಡತನ ಮತ್ತು ಕಷ್ಟಗಳ ನಡುವೆ ಬೆಳೆದ ಅಸ್ಮಾ(ರ) ಅವರ ಜೀವನ ಜಾಫರ್(ರ) ಅವರೊಂದಿಗೆ ಇದ್ದಾಗಲೂ ಸುಲಭವಾಗಿರಲಿಲ್ಲ. ಹಿಜ್ರತ್ ಮತ್ತು ಪತಿಯ ಹುತಾತ್ಮತೆಯು ಅವರ ಬದುಕಿನ ಕಠಿಣ ಪರೀಕ್ಷೆಗಳಾಗಿದ್ದವು. ಅಬೂಬಕರ್(ರ) ಅವರ ಪತ್ನಿಯಾದ ನಂತರ ಆರ್ಥಿಕ ಸ್ಥಿತಿ ಸುಧಾರಿಸಿದರೂ, ಬಡತನದಲ್ಲಿಯೂ ಐಶ್ವರ್ಯದಲ್ಲಿಯೂ ಅವರು ದಾನಶೀಲತೆಯನ್ನು ಬಿಡಲಿಲ್ಲ. ತಾವೇ ಹಸಿದಿದ್ದರೂ ಬಡವರಿಗೆ ಊಟ ನೀಡುತ್ತಿದ್ದರು. ಬಡವರ ಮೇಲಿನ ಈ ಅಪಾರ ಪ್ರೀತಿಯನ್ನು ಅವರು “ಬಡವರ ತಂದೆ” (ಅಬುಲ್ ಮಸಾಕೀನ್) ಎಂದು ಪ್ರಸಿದ್ಧರಾಗಿದ್ದ ಜಾಫರ್(ರ) ಅವರಿಂದ ಕಲಿತಿದ್ದರು.
ಒಮ್ಮೆ ಜಾಫರ್(ರ) ಅವರ ಪುತ್ರ ಮುಹಮ್ಮದ್ ಇಬ್ನು ಜಾಫರ್ ಮತ್ತು ಅಬೂಬಕರ್(ರ) ಅವರ ಪುತ್ರ ಮುಹಮ್ಮದ್ ಇಬ್ನು ಅಬೂಬಕರ್ ಇವರ ನಡುವೆ ಒಂದು ವಾದ ಉಂಟಾಯಿತು.
“ನಮ್ಮ ತಂದೆಯರಲ್ಲಿ ಶ್ರೇಷ್ಠರು ಯಾರು?”
ಅಲಿ(ರ) ಆ ಪ್ರಶ್ನೆಯನ್ನು ಕೇಳಿ, “ಈ ತೀರ್ಪನ್ನು ನೀನೇ ಹೇಳು, ಅಸ್ಮಾ!” ಎಂದರು.
ಅದಕ್ಕೆ ಅಸ್ಮಾ(ರ) ಹೀಗೆ ಉತ್ತರಿಸಿದರು: “ಅರಬ್ ಯುವಕರಲ್ಲಿ ಜಾಫರ್(ರ) ಅವರಷ್ಟು ಉನ್ನತ ಸ್ವಭಾವದವರನ್ನು ನಾನು ಕಂಡಿಲ್ಲ. ಹಿರಿಯರಲ್ಲಿ ಅಬೂಬಕರ್(ರ) ಅವರಷ್ಟು ಶ್ರೇಷ್ಠ ವ್ಯಕ್ತಿಯನ್ನೇ ನಾನು ಕಂಡಿಲ್ಲ.”
ಇದನ್ನು ಆಲಿಸಿದ ಅಲಿ(ರ) ನಗುತ್ತಾ ಕೇಳಿದರು: “ಹಾಗಾದರೆ ಅಸ್ಮಾ! ನನಗಾಗಿ ಏನನ್ನೂ ಉಳಿಸಲೇ ಇಲ್ಲವೇ?”
ಆ ಮಾತಿಗೆ ಮಕ್ಕಳು, ತಾಯಿ ಮತ್ತು ಅಲಿ(ರ) ಎಲ್ಲರೂ ನಕ್ಕರು. ಹೀಗೆ ಪ್ರವಾದಿ(ಸ) ಅವರ ಸಹಚರರ ಕುಟುಂಬ ಜೀವನದ ಸುಂದರ ಕ್ಷಣವೊಂದು ನಮ್ಮ ಮುಂದೆ ತೆರೆದುಕೊಳ್ಳುತ್ತದೆ.
ಆರನೇ ಶತಮಾನದ ಸಾಮಾಜಿಕ ಸಂಬಂಧಗಳು, ಮಹಿಳೆಯ ನಿರ್ಧಾರ ಹಕ್ಕು, ವಿವಾಹ, ವಯಸ್ಸಿನ ವ್ಯತ್ಯಾಸ ಇತ್ಯಾದಿಗಳ ಬಗ್ಗೆ ವಾದಿಸುವುದಕ್ಕಿಂತ, ಅವರ ಜೀವನದಲ್ಲಿದ್ದ ಪ್ರೀತಿ, ಪರಸ್ಪರ ಗೌರವ ಮತ್ತು ಶಾಂತಿಯ ಪರಿಮಳವನ್ನು ಅರಿಯುವುದು ಹೆಚ್ಚು ಪಾಠದಾಯಕವಾಗಿದೆ.












