ಪುತ್ತೂರು ಸಾಲ್ಮರ ರೈಲ್ವೆ ಅಂಡರ್ ಪಾಸಿನಲ್ಲಿ ಬೆಳಕಿನ ಸಮಸ್ಯೆಗೆ ಮುಕ್ತಿ: ರೈಲ್ವೆ ಇಲಾಖೆಯಿಂದ NOC ಲಭ್ಯ – ಸಹಾಯಕ ಕಮಿಷನರ್ ಕು. ಸ್ಟೆಲ್ಲಾ ವರ್ಗೀಸ್ ರವರಿಗೆ ನೂರುದ್ದೀನ್ ಸಾಲ್ಮರ ಕೃತಜ್ಞತೆ

0
164

ಸನ್ಮಾರ್ಗ ವಾರ್ತೆ

ಪುತ್ತೂರು: ಪುತ್ತೂರು ಸಾಲ್ಮರದ ರೈಲ್ವೆ ಅಂಡರ್ ಪಾಸಿನಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಅನುಭವಿಸುತ್ತಿದ್ದ ಸಮಸ್ಯೆಯ ಬಗ್ಗೆ ನ್ಯಾಯವಾದಿ ಹಾಗೂ ಕೆಪಿಸಿಸಿ ಸಂಯೋಜಕ ನೂರುದ್ದೀನ್ ಸಾಲ್ಮರ ರವರು ಪುತ್ತೂರು ಸಹಾಯಕ ಕಮಿಷನರ್ ರವರಿಗೆ ಮನವಿ ಸಲ್ಲಿಸಿದ್ದರು.

ಈ ಮನವಿಗೆ ತಕ್ಷಣ ಸ್ಪಂದಿಸಿದ ಪುತ್ತೂರು ಸಹಾಯಕ ಕಮಿಷನರ್ ಕುಮಾರಿ ಸ್ಟೆಲ್ಲಾ ವರ್ಗೀಸ್ ರವರು, ಈ ಹಿಂದೆ APMC ರಸ್ತೆಯು ಹಾದು ಹೋಗುವ ಸಾಲ್ಮರ ರೈಲ್ವೆ ಅಂಡರ್ ಪಾಸ್ ಮೂಲಕ ಪುತ್ತೂರು-ಉಪ್ಪಿನಂಗಡಿ ಮುಖ್ಯ ರಸ್ತೆಗೆ ಸೇರುವ ರಸ್ತೆಗಳ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದರು.

ಆದರೆ, ರೈಲ್ವೆ ಅಂಡರ್ ಪಾಸಿನೊಳಗೆ ವಿದ್ಯುತ್ ದೀಪ ಅಳವಡಿಕೆಗೆ ಕಾನೂನಾತ್ಮಕ ತೊಡಕು ಇದ್ದ ಕಾರಣ, ರೈಲ್ವೆ ಇಲಾಖೆಯ ನಿರಾಕ್ಷೇಪಣಾ ಪತ್ರ (NOC) ಅಗತ್ಯವಿತ್ತು. ಈ ಬಗ್ಗೆ ಸಹಾಯಕ ಕಮಿಷನರ್ ರವರು ವಿಶೇಷ ಮುತುವರ್ಜಿ ವಹಿಸಿ, ಮೈಸೂರು ವಿಭಾಗದ ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆಯೊಂದಿಗೆ ನಿರಂತರ ಪತ್ರ ವ್ಯವಹಾರ ಮತ್ತು ಅನುಸರಣೆ ನಡೆಸಿದರು.

ಅವರ ಅವಿರತ ಶ್ರಮದ ಫಲವಾಗಿ, ಇದೀಗ ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ಇಂಜಿನಿಯರ್ ರೋಹನ್ ಡೊಂಗ್ರೆ ರವರು ದಿನಾಂಕ 19.09.2026 ರಂದು ಪುತ್ತೂರು ನಗರಸಭೆಗೆ ಅಧಿಕೃತವಾಗಿ NOC ನೀಡಿದ್ದಾರೆ. RUB No. 508A, ಕಬಕಪುತ್ತೂರು ಸ್ಟೇಷನ್ ಯಾರ್ಡ್, ಹಾಸನ-ಮಂಗಳೂರು ವಿಭಾಗದಲ್ಲಿ ಬೀದಿ ದೀಪ ಅಳವಡಿಸಲು ಅನುಮತಿ ದೊರೆತಿದೆ.

ಇದರಿಂದ ಇನ್ನು ಕೆಲವೇ ದಿನಗಳಲ್ಲಿ ಈ ಭಾಗದಲ್ಲಿ ವಿದ್ಯುತ್ ದೀಪಗಳು ಬೆಳಗಲಿದ್ದು, ರಾತ್ರಿ ವೇಳೆ ಪಾದಚಾರಿಗಳು ಮತ್ತು ವಾಹನ ಸವಾರರು ನೆಮ್ಮದಿಯಿಂದ ಸಂಚರಿಸಲು ಸಾಧ್ಯವಾಗಲಿದೆ.

ಇದಲ್ಲದೆ, ಪುತ್ತೂರು ರೈಲ್ವೆ ಅಂಡರ್ ಪಾಸಿನ ದ್ವಿಮುಖ ರಸ್ತೆ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯ ತೊಡಕಿನಿಂದ ಒಂದು ಬದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಈ ಸಮಸ್ಯೆಯ ಬಗ್ಗೆಯೂ ಸಹಾಯಕ ಕಮಿಷನರ್ ರವರು ವಿಶೇಷ ಮುತುವರ್ಜಿ ವಹಿಸಿರುವುದರಿಂದ ಶೀಘ್ರದಲ್ಲೇ ಪರಿಹಾರ ದೊರೆಯುವ ಲಕ್ಷಣಗಳು ಕಂಡುಬರುತ್ತಿವೆ.

ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಜನಪರ ಕಾರ್ಯ ಮಾಡುತ್ತಿರುವ ಪುತ್ತೂರು ಸಹಾಯಕ ಕಮಿಷನರ್ ಕುಮಾರಿ ಸ್ಟೆಲ್ಲಾ ವರ್ಗೀಸ್ ರವರ ಕಾರ್ಯಕ್ಕೆ ಸಾರ್ವಜನಿಕರ ಪರವಾಗಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ರವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.