ಸನ್ಮಾರ್ಗ ವಾರ್ತೆ
ಪಾಪು ಎಂದೇ ಪ್ರಸಿದ್ಧರಾಗಿದ್ದ ಮತ್ತು ವಿಶಿಷ್ಟ ಬರಹಗಳಿಂದ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ, ಲೇಖಕ ಮತ್ತು ಕನ್ನಡ ಪರ ಹೋರಾಟಗಾರರಾದ ಡಾ. ಪಾಟೀಲ ಪುಟ್ಟಪ್ಪ ಅವರು ಸೋಮವಾರ ರಾತ್ರಿ (ಮಾರ್ಚ್ 16) ನಿಧನರಾಗಿದ್ದಾರೆ. ಸನ್ಮಾರ್ಗ ಪತ್ರಿಕೆಯ ಬಗ್ಗೆ ಅಪಾರ ಅಭಿಮಾನ ಮತ್ತು ಗೌರವವನ್ನು ಇಟ್ಟುಕೊಂಡಿದ್ದ ಅವರು ಇಸ್ಲಾಮಿನ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಮತ್ತು ನಿಖರವಾಗಿ ಮಾತಾಡುವ ಪತ್ರಿಕೆ ಸನ್ಮಾರ್ಗ ಎಂದು ಅವರು ಹೇಳುತ್ತಿದ್ದರು.
ಪಾಟೀಲ ಪುಟ್ಟಪ್ಪ ಅವರನ್ನು ಫೆಬ್ರವರಿ 10ರಂದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು. ಇವತ್ತು ಅಂದರೆ ಮಾರ್ಚ್ 17ರಂದು ಬಸವ ಪುರಸ್ಕಾರ ಪ್ರದಾನ ಮಾಡಲು ಜಿಲ್ಲಾಡಳಿತ ಎಲ್ಲ ತಯಾರಿಯನ್ನು ನಡೆಸಿಕೊಂಡಿತ್ತು. ಅವರು ರಕ್ತದೊತ್ತಡ, ಉಸಿರಾಟದ ತೊಂದರೆ ಮತ್ತು ಮೆದುಳಿನ ರಕ್ತಸ್ರಾವ ಸೇರಿದಂತೆ ವಯೋಸಹಜ ತೊಂದರೆಯಿಂದ ಬಳಲುತ್ತಿದ್ದರು.
ಅವರಿಗೆ ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರು ಇದ್ದಾರೆ. ಪತ್ನಿ ಇಂದುಮತಿ ಅವರು ಮೂರು ವರ್ಷಗಳ ಹಿಂದೆ ಮತ್ತು ಇನ್ನೊಬ್ಬ ಪುತ್ರ ರಾಜು ಅವರು ವರ್ಷಗಳ ಹಿಂದೆ ನಿಧನರಾಗಿದ್ದರು. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಟಿಎಸ್ಸಾರ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಹಾಗೂ 2003ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪುರಸ್ಕೃತರಾಗಿದ್ದರು. ನಮ್ಮ ದೇಶ ನಮ್ಮ ಜನ, ನನ್ನದು ಈ ಕನ್ನಡ ನಾಡು, ಕರ್ನಾಟಕದ ಕಥೆ, ಪಾಪು ಪ್ರಪಂಚ, ಶಿಲಾಬಾಲಿಕೆ ನುಡಿದಳು, ಗವಾಕ್ಷ ತೆರೆಯಿತು ಮುಂತಾದುವುಗಳು ಅವರ ಪ್ರಮುಖ ಕೃತಿಗಳಾಗಿವೆ. ಪಾಪು ಅವರು ಸನ್ಮಾರ್ಗ ಪತ್ರಿಕೆಯ ಕುರಿತಂತೆ ಆಡಿದ ಮಾತುಗಳ ವಿಡಿಯೋ ಇಲ್ಲಿದೆ.
ಪಾಪು ಅವರ ನಿಧಾನಕ್ಕೆ ಸನ್ಮಾರ್ಗ ಬಳಗ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಅವರು ಪತ್ರಿಕೆಗೆ ನೀಡಿರುವ ಬೆಂಬಲವನ್ನು ಸದಾ ಸ್ಮರಿಸುತ್ತದೆ.












