ಮೃತದೇಹವನ್ನು ದಿನವೀಡೀ ಕೋವಿಡ್ ವಾರ್ಡ್‌ನಲ್ಲೇ ಬಿಟ್ಟ ಆಘಾತಕಾರಿ ವಿಡಿಯೋ ವೈರಲ್: ಶವವನ್ನು ಸಾಗಿಸುವ ಕೆಲಸ ಜಿಲ್ಲಾಡಳಿತದ್ದು ಎಂದ ಆಸ್ಪತ್ರೆ ಮಂಡಳಿ

0
780

ಸನ್ಮಾರ್ಗ ವಾರ್ತೆ

ಪಾಟ್ನಾ,ಜು.20: ಬಿಹಾರದ ಸರ್ಕಾರಿ ಅತಿದೊಡ್ಡ ಸೌಕರ್ಯವುಳ್ಳ ಆಸ್ಪತ್ರೆಯಾದ ಪಾಟ್ನಾದ ನಳಂದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಆಘಾತಕಾರಿ ವಿಡಿಯೋವೊಂದು ಹೊರಬಂದಿದೆ. ಇದರಲ್ಲಿ ಕೋವಿಡ್-19 ಸಂತ್ರಸ್ತನ ಶವವು ಆಸ್ಪತ್ರೆಯ ಹಾಸಿಗೆಯ ಮೇಲೆ ಇತರ ಕೊರೋನ ವೈರಸ್ ರೋಗಿಗಳು ತುಂಬಿದ ಕೋಣೆಯಲ್ಲಿ ಹಾಗೆಯೇ ಇರಿಸಿರುವುದಾಗಿ ಕಂಡುಬಂದಿದೆ ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಕಂದು-ಬಿಳುಪು ವಸ್ತ್ರದಂತಿರುವ ಬಟ್ಟೆಯಿಂದ ಹೊದೆಯಲಾದ ಶವವನ್ನು ಭಾನುವಾರದಿಂದ ಅದೇ ಸ್ಥಳದಲ್ಲಿ ಬಿಡಲಾಗಿದೆ ಎಂದು ಅದೇ ಕೋಣೆಯಲ್ಲಿದ್ದ ರೋಗಿಯ ಸಂಬಂಧಿಕರು ಹೇಳಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ಹಲವು ಬಾರಿ ದೂರು ನೀಡಲಾಗಿದೆ ಆದರೆ “.. ಅವರು ಇನ್ನೂ ಪ್ರತಿಕ್ರಿಯಿಸುತ್ತಿಲ್ಲ ಅಲ್ಲದೇ ಶವವನ್ನು ಅವರು ಕೋಣೆಯಿಂದ ತೆಗೆದುಕೊಂಡೂ ಹೋಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

“ಈ ಮೃತದೇಹವನ್ನು ನಿನ್ನೆಯಿಂದ ಇಲ್ಲಿ ಇರಿಸಲಾಗಿದೆ. ನಾವು ದೂರು ನೀಡಿದ್ದೇವೆ ಆದರೆ ಇನ್ನೂ ಅವರು ಸ್ಪಂದಿಸುತ್ತಿಲ್ಲ ಮತ್ತು ಅದನ್ನು ತೆಗೆದುಕೊಂಡು ಹೋಗುತ್ತಿಲ್ಲ” ಎಂದು ಸಂಬಂಧಿ ಹೇಳಿದರು, “ನನ್ನ ತಾಯಿಯನ್ನು ಇಲ್ಲಿ ದಾಖಲಿಸಲಾಗಿದೆ. ಈ ದೇಹವನ್ನು ವಾರ್ಡ್‌ನಲ್ಲಿ ಬಿಟ್ಟ ನಂತರ ಎಲ್ಲಾ ರೋಗಿಗಳು ಅಪಾಯದ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಆಸ್ಪತ್ರೆಯ ಐಸಿಯು (ತೀವ್ರ ನಿಗಾ ಘಟಕ)ದಿಂದ ಈ ರೀತಿಯ ವಿಡಿಯೋ ಹೊರಬರುವುದು ಇದೇ ಮೊದಲಲ್ಲ. ಈ ಕುರಿತು ಪ್ರಶ್ನಿಸಿದಾಗ, ಕುಟುಂಬ ಸದಸ್ಯರು ಬರುವ ಮೊದಲು ಶವವನ್ನು ತೆಗೆಯಲಾಗುವುದಿಲ್ಲ ಎಂದು ಮ್ಯಾನೇಜ್‌ಮೆಂಟ್ ಹೇಳಿದೆ.

ಶವಗಳನ್ನು ಸಾಗಿಸುವ ಮತ್ತು ಅಂತಿಮ ವಿಧಿಗಳನ್ನು ಏರ್ಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಜಿಲ್ಲಾಡಳಿತವು ಸಂಜೆಯಾಗದೇ ಅವುಗಳನ್ನು ತೆಗೆದುಕೊಳ್ಳುವುದಿಲ್ಲ, ಏಕೆಂದರೆ ಅಲ್ಲಿನ COVID-19 ಸಂತ್ರಸ್ತರ ಅಂತ್ಯಕ್ರಿಯೆಯನ್ನು ಆಕ್ಷೇಪಿಸಲು ಸ್ಥಳೀಯರು ಹಗಲಿನ ವೇಳೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದ್ದಾಗಿ ವರದಿಯಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.