ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದ್ದಂತೆಯೇ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ರ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ ಅಭಿಯಾನದ ಮುಂಚೂಣಿಯಲ್ಲಿದ್ದ ಮಹಿಳಾ ಕಾಂಗ್ರೆಸ್ ನಾಯಕಿಯೋರ್ವರು ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಸೇರುವ ಸಾಧ್ಯತೆ ವರದಿಯಾಗಿದೆ.
ಉತ್ತರ ಪ್ರದೇಶ ಕಾಂಗ್ರೆಸ್ಸಿನ ಮಹಿಳಾ ನಾಯಕಿ, ‘ಲಡ್ಕಿ ಹೂ, ಲಡ್ ಸಕ್ತಿ ಹೂ’ ಅಭಿಯಾನದ ಮುಖವಾಗಿದ್ದ ಪ್ರಿಯಾಂಕ ಮೌರ್ಯ ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್ನ ಮಹಿಳಾ ಸಶಕ್ತೀರಣ ಘೋಷಣೆಯ ದೊಡ್ಡ ಮಹಿಳಾ ಮುಖವಾಗಿದ್ದ ಮೌರ್ಯ ಸೀಟು ಸಿಗದ ಕಾರಣದಿಂದ ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಯೋಚನೆಯಲ್ಲಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಈ ಮಧ್ಯೆ ಹಣ,ಜಾತಿ ನೋಡಿ ಕಾಂಗ್ರೆಸ್ ಟಿಕೆಟ್ ಹಂಚುತ್ತಿದೆ ಎಂದು ಪ್ರಿಯಾಂಕ ಮೌರ್ಯ ಆರೋಪಿಸಿದ್ದಾರೆ. ಪ್ರಿಯಾಂಕಾ ಗಾಂಧಿಯ ಜೊತೆ ಅಭಿಯಾನದಲ್ಲಿ ಎದ್ದು ಕಾಣಿಸುವಂತೆ ಕೆಲಸ ಮಾಡಿದ ಪ್ರಿಯಾಂಕಾ ಮೌರ್ಯ ಕಡೆಗಣಿಗೊಳಗಾಗಿರುವುದು ಅವರಲ್ಲಿ ಆಕ್ರೋಶಕ್ಕೆಕಾರಣವಾಗಿದ್ದು ಪ್ರಿಯಾಂಕಾ ಗಾಂಧಿಯವರನ್ನು ತೀವ್ರವಾಗಿ ಟೀಕಿಸಿದರು.
ಕ್ಷೇತ್ರದಲ್ಲಿ ಕಠಿಣವಾಗಿ ಪರಿಶ್ರಮಿಸಿಯೂ ವಿಧಾನಸಭಾ ಟಿಕೆಟ್ ಕೊಡದೆ ಬೇರೆಯವರಿಗೆ ಕೊಡಲಾಗಿದೆ. ಲಡ್ಕಿಹೂಂ ಲಡ್ಸಕ್ತಿ ಹೂಂ ಅಭಿಯಾನದಲ್ಲಿ ಕಾಂಗ್ರೆಸ್ ತನ್ನನ್ನು ಉಪಯೋಗಿಸಿ ಕೈಬಿಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಸೇರುವ ಬಗ್ಗೆ ಕೊನೆಯ ನಿರ್ಧಾರ ಇನ್ನೂ ಅವರು ತಿಳಿಸಿಲ್ಲ ಎಂದು NDTV ವರದಿ ಮಾಡಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಮುಂದಿನ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.












