ಸ್ವದೇಶೀಕರಣಕ್ಕೆ ಮುಂದಾದ ಸೌದಿ: ಉದ್ಯೋಗ ಕಳಕೊಳ್ಳುವ ಆತಂಕದಲ್ಲಿ ಭಾರತೀಯರು

0
411

ಸನ್ಮಾರ್ಗ ವಾರ್ತೆ

✍️ ಅಮಾನ್ ಕೆ

ಸೌದಿ ಅರೇಬಿಯಾಕ್ಕೆ ಉದ್ಯೋಗವನ್ನು ಹುಡುಕಿಕೊಂಡು ಹೋಗುವ ಭಾರತೀಯರ ಪಾಲಿಗೆ ಕಹಿಯಾದ ಸುದ್ದಿ ಬಂದಿದೆ. ಸೌದಿ ಅರೇಬಿಯಾವು ಭಾರಿ ದೊಡ್ಡಮಟ್ಟದಲ್ಲಿ ಸ್ವದೇಶಿಕರಣಕ್ಕೆ ಮುಂದಾಗಿದೆ. ಮುಖ್ಯವಾಗಿ ಡೆಂಟಲ್, ಫಾರ್ಮಸಿ, ಅಕೌಂಟಿಂಗ್ ಮತ್ತು ಇಂಜಿನಿಯರಿಂಗ್ ಟೆಕ್ನಿಕಲ್ ಪ್ರೊಫೆಷನಲ್ ಕ್ಷೇತ್ರದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಸ್ವದೇಶಿಯರನ್ನು ಸೇರಿಸಿಕೊಳ್ಳುವ ಯೋಜನೆಯನ್ನು ಅದು ಬಿಡುಗಡೆಗೊಳಿಸಿದೆ. ಎಲ್ಲ ಕ್ಷೇತ್ರಗಳಲ್ಲಿ 30 ಶೇಕಡದಿಂದ 70% ದವರೆಗೆ ಸ್ವದೇಶಿಕರಣ ಮಾಡುವ ಯೋಜನೆಯನ್ನು ಸೌದಿ ಅರೇಬಿಯಾ ಬಹಿರಂಗಪಡಿಸಿದೆ.

ಈ ವರ್ಷದ ಜುಲೈ 23ರಿಂದ ಫಾರ್ಮಸಿ ಕ್ಷೇತ್ರದಲ್ಲಿ ಹಲವು ಉದ್ಯೋಗಗಳನ್ನು ಸ್ವದೇಶಿಕರಣ ಮಾಡಲು ಸೌದಿ ಉದ್ದೇಶಿಸಿರುವುದಾಗಿ ತಿಳಿದು ಬಂದಿದೆ. ಆಸ್ಪತ್ರೆಗಳ ಫಾರ್ಮಸಿ ಉದ್ಯೋಗಗಳಲ್ಲಿ 65 ಶೇಕಡಾ ಮತ್ತು ಆಸ್ಪತ್ರೆಗಳ ಹೊರಗಿನ ಫಾರ್ಮಸಿ ಉದ್ಯೋಗಗಳಲ್ಲಿ 55 ಶೇಕಡ ಉದ್ಯೋಗವನ್ನು ಸ್ವದೇಶಿಯರಿಗೆ ನೀಡಲು ಸೌದಿ ಮುಂದಾಗಿದೆ. ಫಾರ್ಮಸಿ ಸಂಸ್ಥೆಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚಿರುವ ಕಡೆ ಈ ಹೊಸ ನಿಯಮವನ್ನು ಅನ್ವಯಿಸುವುದಾಗಿಯೂ ಅದು ಹೇಳಿದೆ.

ಇದೇ ವೇಳೆ ಡೆಂಟಲ್ ಕ್ಷೇತ್ರದಲ್ಲಿ ಎರಡು ಹಂತಗಳಲ್ಲಿ ಸ್ವದೇಶಿಕರಣ ಮಾಡುವುದಾಗಿಯೂ ಸೌದಿ ಅರೇಬಿಯಾ ಘೋಷಿಸಿದೆ. ಮೊದಲ ಘಟ್ಟ ಜುಲೈ 23 ರಿಂದ ಆರಂಭವಾಗಲಿದೆ. ಈ ಘಟ್ಟದಲ್ಲಿ 45 ಶೇಕಡದವರೆಗೆ ಸ್ವದೇಶಿಕರಣ ನಡೆಯಲಿದೆ. ಎರಡನೇ ಹಂತವು ಒಂದು ವರ್ಷದ ಬಳಿಕ ಪ್ರಾರಂಭವಾಗಲಿದೆ ಡೆಂಟಲ್ ಸಂಸ್ಥೆಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಗಳಿರುವ ಕಡೆ ಈ ನಿಯಮ ಅನ್ವಯವಾಗಲಿದೆ.

ಹಾಗೆಯೇ ಇಂಜಿನಿಯರಿಂಗ್ ಟೆಕ್ನಿಕಲ್ ಪ್ರೊಫೆಶನ್ ಕ್ಷೇತ್ರದಲ್ಲಿ ಕೂಡ ಜುಲೈಯಿಂದ ಸ್ವದೇಶಿಕರಣ ನಡೆಯಲಿದೆ. ಈ ಉದ್ಯೋಗಗಳಲ್ಲಿ 30 ಶೇಕಡಾ ಸ್ವದೇಶಿಯರನ್ನು ನೇಮಿಸಲಾಗುವುದು ಎಂದು ಸೌದಿ ಅರೇಬಿಯಾ ತಿಳಿಸಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುತ್ತಿರುವ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಈ ನಿಯಮವನ್ನು ಅನ್ವಯಿಸಲಾಗುತ್ತದೆ.

ಹಾಗೆಯೇ ಅಕೌಂಟೆಂಟ್ ಕ್ಷೇತ್ರದಲ್ಲಿಯೂ ಭಾರಿ ದೊಡ್ಡ ಮಟ್ಟದಲ್ಲಿ ಸ್ವದೇಶಿಕರಣ ನಡೆಯಲಿದೆ. ಈ ಕ್ಷೇತ್ರದಲ್ಲಿ ಐದು ಹಂತಗಳಲ್ಲಿ ಸ್ವದೇಶಿಕರಣ ನಡೆಯಲಿದೆ. ಐದು ವರ್ಷಗಳ ಕಾಲ ನಡೆಯಲಿರುವ ಈ ಸ್ವದೇಶಿಕರಣದ ಆರಂಭವು ಅಕ್ಟೋಬರ್ ನಿಂದ ಆಗಲಿದೆ. ಮೊದಲ ಘಟ್ಟದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ 40 ಶೇಕಡಾ ಸ್ವದೇಶೀಕರಣ ನಡೆಯಲಿದೆ. ಅಂತಿಮವಾಗಿ 7ನೇ ಘಟ್ಟಕ್ಕೆ ತಲುಪಿದಾಗ 70% ಸ್ವದೇಶೀಕರಣ ನಡೆಯಲಿದೆ ಎಂದು ತಿಳಿದು ಬಂದಿದೆ ಈ ಎಲ್ಲಾ ಮಾಹಿತಿಯನ್ನು ಮಾನವ ಸಂಪನ್ಮೂಲ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ಅಂದ ಹಾಗೆ ಸೌದಿ ಅರೇಬಿಯಾ, ಭಾರತೀಯರಿಗೆ ಬಹಳ ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡಿರುವ ರಾಷ್ಟ್ರ. ಇದೀಗ ಅದು ಸ್ವದೇಶಿಕರಣಕ್ಕೆ ಮುಂದಾಗಿರುವುದು ಭಾರತೀಯರ ಮಟ್ಟಿಗೆ ದೊಡ್ಡ ಹೊಡೆತ ಎಂದು ಹೇಳಲಾಗುತ್ತಿದೆ. ಈಗಾಗಲೇ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು ಸೌದಿ ಅರೇಬಿಯಾದ ಈ ನಿರ್ಧಾರವು ಭಾರತವನ್ನು ಇನ್ನಷ್ಟು ಕಾಡಲಿದೆ ಎಂದು ಹೇಳಲಾಗಿದೆ.