ನಮಾಝ್ ಮಾಡಲು ಮಸೀದಿಯೇ ಬೇಕೇ?

0
952

ಪ್ರಶ್ನೋತ್ತರ

ಅಬ್ದುಲ್ ಜಬ್ಬಾರ್, ಉಡುಪಿ

ಪ್ರಶ್ನೆ: ಮುಸ್ಲಿಮರಿಗೆ ನಮಾಝ್ ನಿರ್ವಹಿಸಲು ಮಸೀದಿಯು ಕಡ್ಡಾಯವಲ್ಲ. ಅದನ್ನು ಭೂಮಿಯ ಯಾವ ಭಾಗದಲ್ಲಿ ಬೇಕಾದರೂ ನಿರ್ವಹಿಸಬಹುದಾಗಿದೆ” ಎಂದು ಈ ಹಿಂದೆ ನ್ಯಾಯಾಲಯವು ತೀರ್ಪು ನೀಡಿತ್ತು. ಇದರ ಬಗ್ಗೆ ಇಸ್ಲಾಮಿನ ನಿಲುವೇನು?

ಉತ್ತರ: 1994ರಲ್ಲಿ ಇಸ್ಮಾಯಿಲ್ ಫಾರೂಖಿ ಪ್ರಕರಣದಲ್ಲಿ ತೀರ್ಪು ನೀಡುತ್ತಾ ಸುಪ್ರೀಮ್ ಕೋರ್ಟು `ಮುಸ್ಲಿಮರಿಗೆ ನಮಾಝ್ ನಿರ್ವಹಿಸಲು ಮಸೀದಿಯೇ ಬೇಕಾಗಿಲ್ಲ’ ಎಂಬ ಪ್ರಸ್ತಾಪವನ್ನು ಹೊರಡಿಸಿತು. ತಪ್ಪು ತಿಳುವಳಿಕೆಯನ್ನುಂಟು ಮಾಡುವ ಈ ಪ್ರಸ್ತಾಪವನ್ನು ಹಿಂಪಡೆದುಕೊಳ್ಳಲಿಕ್ಕಾಗಿ ಸಲ್ಲಿಸಲಾದ ರಿಟ್ ಅರ್ಜಿಗಳನ್ನು ನ್ಯಾಯಾಲಯವು ತಳ್ಳಿ ಹಾಕಿತ್ತು. ಈ ತೀರ್ಪು ಬಾಬರಿ ಮಸೀದಿಯ ಭೂ ವಿವಾದಕ್ಕೆ ಸಂಬಂಧಿಸಿದ್ದೂ ಈಗ ಸುಪ್ರೀಮ್ ಕೋರ್ಟ್‍ನ ಪರಿಗಣನೆಯಲ್ಲಿರುವುದೂ ಆದ ಪ್ರಕರಣದಲ್ಲಿ ಅದನ್ನು ಪರಿಗಣಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೂ ಈ ಪ್ರಸ್ತಾಪವು ದುರ್ವ್ಯಾಖ್ಯಾನ ಮಾಡಲಿಕ್ಕೆ ಹೆಚ್ಚಿನ ಸಾಧ್ಯತೆ ಇರುವುದಾಗಿದೆ.

ಐದು ಕಾರ್ಯಗಳಲ್ಲಿ ನನ್ನ ಸಮುದಾಯಕ್ಕೆ ರಿಯಾಯಿತಿ ದೊರೆತಿದೆ ಎಂದು ಪ್ರವಾದಿ(ಸ) ಪ್ರಸ್ತಾಪಿಸಿರುವುದರಲ್ಲಿ ಹೀಗೊಂದು ಪ್ರಸ್ತಾಪವಿದೆ. “ಭೂಮಿಯನ್ನು ನನಗೆ ನಮಾಝ್‍ನ ಸ್ಥಳವನ್ನಾಗಿಯೂ ಶುಚೀಕರಣದ ಸಾಮರ್ಥ್ಯ ಇರುವುದಾಗಿಯೂ ನಿಶ್ಚಯಿಸಲಾಗಿದೆ.” ಅಂದರೆ ಎಲ್ಲಿಗೆ ಹೋದರೂ ಐದು ಹೊತ್ತಿನ ನಮಾಝ್ ಕಡ್ಡಾಯವಾಗಿರುವಾಗ ಅದಕ್ಕೆ ಮಸೀದಿಯನ್ನೇ ಹುಡುಕುತ್ತಾ ಹೋಗ ಬೇಕೆಂದಿಲ್ಲ. ಶುಚಿ ಇರುವ ಸ್ಥಳದಲ್ಲಿ ನಮಾಝ್ ನಿರ್ವಹಿಸಬಹುದಾಗಿದೆ ಎಂಬುದು ಇದರ ತಾತ್ಪರ್ಯವಾಗಿದೆ. ಇದು ಮಸೀದಿ ಅಗತ್ಯವಿಲ್ಲ ಎಂಬುದಕ್ಕೆ ಅಥವಾ ಮಸೀದಿ ಕಡ್ಡಾಯವಲ್ಲ ಎಂಬುದಕ್ಕೆ ಆಧಾರವಲ್ಲ. ಪ್ರಸ್ತುತ ಇರುವ ಮಸೀದಿಯನ್ನು ಒಡೆದು ಮಂದಿರ ಅಥವಾ ಬೇರೆನನ್ನಾದರೂ ನಿರ್ಮಿಸಬಹುದೆಂಬುದಕ್ಕೂ ಆಧಾರವಲ್ಲ. ಪ್ರವಾದಿ(ಸ) ಹಿಜ್‍ರ ಮಾಡಿ ಮದೀನಾಕ್ಕೆ ತಲುಪಿದ ಕೂಡಲೇ ಕೈಗೊಂಡ ಕ್ರಮವು ಮಸೀದಿಯ ನಿರ್ಮಾಣವಾಗಿತ್ತು. ಅವರು ನಿರ್ಮಿಸಿದ ಮಸ್ಜಿದುನ್ನಬವಿ ಹಲವು ಬಾರಿ ನವೀಕರಿಸಿದ್ದರೂ ಅದು ಇಂದೂ ಕೂಡಾ ಉಳಿದುಕೊಂಡಿದೆ. ಭೂಮಿಯಲ್ಲಿ ಮಸೀದಿಗಳೂ ಇತರ ಧರ್ಮೀಯರ ಆರಾಧನಾಲಯಗಳೂ ಸುರಕ್ಷಿತವಾಗಿ ಉಳಿದುಕೊಳ್ಳಲಿಕ್ಕಾಗಿ ಇಸ್ಲಾಮ್ ಯುದ್ಧವನ್ನು ಅನುವದನೀಯ ಗೊಳಿಸಿತು ಎಂದು ಪವಿತ್ರ ಕುರ್ ಆನ್‍ನಲ್ಲಿದೆ. “ಇವರು `ನಮ್ಮ ಪ್ರಭು ಅಲ್ಲಾಹ್’ ಎಂದಿಷ್ಟೇ ಹೇಳಿದ ತಪ್ಪಿಗಾಗಿ ತಮ್ಮ ಮನೆಗಳಿಂದ ಅನ್ಯಾಯವಾಗಿ ಹೊರಹಾಕಲ್ಪಟ್ಟವರು. ಅಲ್ಲಾಹನು ಜನರಲ್ಲಿ ಕೆಲವರನ್ನು ಬೇರೆ ಕೆಲವರ ಮೂಲಕ ನಿಗೀಸದಿರುತ್ತಿದ್ದರೆ ಅಲ್ಲಾಹನ ನಾಮವನ್ನು ಅತಿ ಹೆಚ್ಚಾಗಿ ಸ್ಮರಿಸಲಾಗುತ್ತಿರುವ ಆಶ್ರಮಗಳೂ ಇಗರ್ಜಿಗಳೂ ಯಹೂದಿಯರ ಆರಾಧನಾಲಯಗಳೂ ಮಸೀದಿಗಳೂ ಧ್ವಂಸಗೊಳ್ಳುತ್ತಿದ್ದವು. ಯಾರು ಅಲ್ಲಾಹನಿಗೆ ಸಹಾಯ ಮಾಡುವರೋ ಅವರಿಗೆ ಅವನು ಖಂಡಿತ ಸಹಾಯ ಮಾಡುವನು. ಅಲ್ಲಾಹನು ಮಹಾ ಶಕ್ತಿವಂತನೂ ಪ್ರಬಲನೂ ಆಗಿರುತ್ತಾನೆ.”

ಮಸೀದಿಗಳು ಅಲ್ಲಾಹನ ಚಿಹ್ನೆಗಳಾಗಿವೆ. ಅವುಗಳನ್ನು ಯಾವುದೇ ಕಾರಣಕ್ಕೂ ಮಲಿನಗೊಳಿಸಬಾರದು ಹಾಗೂ ದುರುಪಯೋಗಪಡಿಸಬಾರದು ಎಂಬುದು ಇಸ್ಲಾಮಿನ ದೃಢವಾದ ನಿಲುವಾಗಿದೆ. ಬೇರೆಯವರ ಸ್ಥಳವನ್ನು ಅತಿಕ್ರಮಿಸಿ ಮಸೀದಿ ನಿರ್ಮಿಸಬಾರದು. ನ್ಯಾಯವಾದ ಸ್ಥಳದಲ್ಲಿ ನಿರ್ಮಿತವಾದ ಮಸೀದಿ, ಪುನರ್ ನಿರ್ಮಾಣಕ್ಕೆ ಅಥವಾ ಹೆಚ್ಚು ಸ್ಥಳಾವಕಾಶ ದೊರೆಯಲಿಕ್ಕಾಗಿ ಅನುಕೂಲಕರವಾದ ಪ್ರದೇಶಕ್ಕೆ ಸ್ಥಳಾಂತರಗೊಳಿಸಲು ಅಥವಾ ಅಂಥ ಸಮಾನ ಕಾರಣಗಳಿಗಾಗಿ ಅಲ್ಲದೆ ಮಸೀದಿಯನ್ನು ಒಡೆಯ ಬಾರದು ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.