ಖಲೀಫ ಉಮರ್ ರಿಗೆ ಅಂತಿಮ ವಿದಾಯ

0
7764

ಖಲೀಫ ಉಮರ್(ರ) ತನ್ನ ಸಮಯ ಕೊನೆಗೊಳ್ಳುತ್ತಿದೆ ಎಂದು ದೃಢವಾದಾಗ ಮಗನ ಮಡಿಲ ಮೇಲಿದ್ದ ಅವರ ಶಿರವನ್ನು ಕೆಳಗೆ ನೆಲದ ಮೇಲಿರಿಸುವಂತೆ ಹೇಳಿದರು, “ನನ್ನ ಶಿರವನ್ನು ಮಣ್ಣಲ್ಲಿರಿಸು. ಅಲ್ಲಾಹನು ಕೃಪಾಕಟಾಕ್ಷ ಬೀರಿ ನನ್ನನ್ನು ಅನುಗ್ರಹಿಸಬಹುದು. ನಂತರ ಒಂದು ಹುಲ್ಲುಗಡ್ಡಿ ತೆಗೆಯುತ್ತಾ ಹೇಳಿದರು, “ನಾನು ಒಂದು ಹುಲ್ಲುಕಡ್ಡಿಯಾಗಿರುತ್ತಿದ್ದರೆ! ನಾನು ಸೃಷ್ಟಿಸಲ್ಪಡದಿರುತ್ತಿದರೆ! ತಾಯಿ ನನ್ನನ್ನು ಹಡೆಯದಿರುತ್ತಿದ್ದರೆ! ನಾನು ಶಾಶ್ವತವಾಗಿ ಮರೆಯಲ್ಲಿರುತ್ತಿದ್ದರೆ.”

ಆದರೆ ತಂದೆಯ ಶಿರವನ್ನು ನೆಲದಲ್ಲಿರಿಸುವುದಕ್ಕೆ ಅಬ್ದುಲ್ಲಾಹಿಬ್ನು ಉಮರ್ ಒಪ್ಪಿಕೊಳ್ಳಲಿಲ್ಲ. ಆದರೆ ಉಮರ್ ಪುತ್ರನಿಗೆ ಒತ್ತಾಯಿಸಿದ್ದರು. ತನ್ನ ಎರಡು ಕಾಲುಗಳನ್ನು ಜೋಡಿಸಿ ಹೇಳಿದರು, “ಅಲ್ಲಾಹನು ನನ್ನನ್ನು ಕ್ಷಮಿಸದಿದ್ದರೆ ನನಗೆ ನಾಶ!” ಇದೇ ರೀತಿ ಉಮರ್ ಜಗತ್ತಿಗೆ ವಿದಾಯ ಹೇಳುವ ವರೆಗೂ ಹೇಳುತ್ತಿದ್ದರು.

ವಾಸ್ತವದಲ್ಲಿ ಪ್ರವಾದಿವರ್ಯರು(ಸ) ಮೊದಲೇ ಹಝ್ರತ್ ಉಮರ್ ರ ಹುತಾತ್ಮತೆಯ ಕುರಿತು ಸೂಚನೆ ನೀಡಿದ್ದರು. ಒಂದು ದಿನ ಹರಿದ ಬಟ್ಟೆಗಳನ್ನು ಧರಿಸಿ ಕಂಡು ಬಂದ ಅವರಲ್ಲಿ ಪ್ರವಾದಿವರ್ಯರು(ಸ) ಹೇಳಿದರು, “ಹೊಸಬಟ್ಟೆ ಧರಿಸಿರಿ. ಗೌರವದಿಂದ ಬದುಕಿರಿ. ಹುತಾತ್ಮರಾಗಿ ಮೃತಪಡಿರಿ. ಅಲ್ಲಾಹನು ನಿಮಗೆ ಇಹಪರ ಎರಡು ಕಡೆಯೂ ಶೌರ್ಯವನ್ನು ದಯಪಾಲಿಸಲಿ.”

ಇಷ್ಟೇ ಅಲ್ಲ, ಕೆಲವೊಮ್ಮೆ ಉಮರ್ ಅಲ್ಲಾಹನಲ್ಲಿ ಪ್ರಾರ್ಥಿ ಸುತ್ತಿದ್ದರು- “ಪ್ರಭೂ! ನನಗೆ ನಿನ್ನ ಮಾರ್ಗದಲ್ಲಿ ಹುತಾತ್ಮತೆಯನ್ನು ದಯಪಾಲಿಸು. ನನ್ನ ಮರಣವು ಪ್ರವಾದಿವರ್ಯರ(ಸ) ನಾಡಿನಲ್ಲಿ ಸಂಭವಿಸುವಂತೆ ಆಗಲಿ.”

ಅಂತೂ ಆ ಮಹಾನ್ ಚೇತನಕ್ಕೆ ಅಂತಿಮ ತೆರೆಬಿತ್ತು. ಮಾನವ ಸಮಾಜಕ್ಕೆ ನ್ಯಾಯ ಪ್ರಜ್ಞೆಯ ಉಜ್ವಲ ಮಾದರಿ ಸಮರ್ಪಿಸಿದ ಆ ಪ್ರಕಾಶ ಗೋಪುರ ಮುರಿದುಬಿತ್ತು. ಇಸ್ಲಾಮೀ ಸಮಾಜಕ್ಕೆ ಶಕ್ತಿ, ತೇಜಸ್ಸನ್ನು ನೀಡಿದ ಆ ಧೀರೋದಾತ್ತ ನಾಯಕ ಅಂಕದ ಪರದೆಯ ಹಿಂದಕ್ಕೆ ಸರಿದರು. ಉಮರ್ ಖಲೀಫರಾಗಿ ಅಧಿಕಾರಕ್ಕೆ ಬಂದಾಗ ಇಸ್ಲಾಮಿನ ಧ್ವಜ ಅರೇಬಿಯದ ಉಪಖಂಡ ದಲ್ಲಿ ಮಾತ್ರ ಹಾರಾಡುತ್ತಿತ್ತು. ಆದರೆ ಅವರು ಮೃತರಾಗುವ ವೇಳೆಗಾದರೋ? ಪರ್ಶಿಯ, ಇರಾಕ್, ಸಿರಿಯ, ಈಜಿಪ್ಟ್, ಫೆಲಸ್ತೀನ್, ಜೋರ್ಡಾನ್‍ಗಳೆಲ್ಲವೂ ಇಸ್ಲಾಮಿನ ಅಧೀನವಾಗಿತ್ತು. ಆದರೂ ಖಲೀಫ ಉಮರ್ ರ ಜೀವನ ಶೈಲಿಯಲ್ಲಿ ಬದಲಾವಣೆಗಳಾಗಿರಲಿಲ್ಲ. ಸರಳವಾಗಿ ಬದುಕಿದರು. ಐಹಿಕ ವಿರಕ್ತತೆ ತೋರ್ಪಡಿಸಿದರು. ಹೀಗೆ ಇದ್ದರೂ ತಾನು ಆಡಳಿತಾಧಿ ಕಾರ್ಯವನ್ನು ಉಪಯೋಗಿಸಿರುವುದರ ಬಗ್ಗೆ ಅತೃಪ್ತರು ಮತ್ತು ಆತಂಕಿತರಾಗಿದ್ದರು. ಆದ್ದರಿಂದ ಮರಣಾಸನ್ನ ವೇಳೆಯಲ್ಲಿ ಅವರು ಈ ರೀತಿ ದುಃಖಿಸಿದರು: “ಅಧಿಕಾರವು ನನ್ನ ಅಸ್ವಾಸ್ಥ್ಯವನ್ನು ಹೆಚ್ಚಿಸುತ್ತಿದೆ. ನಾನು ಪ್ರವಾದಿವರ್ಯರ(ಸ) ಜೊತೆಗೆ ಬದುಕಿದವನು. ಅವರು ಇಹಲೋಕವನ್ನು ತ್ಯಜಿಸಿದಾಗ ನನ್ನ ಜೀವನದ ಬಗ್ಗೆ ಅವರು ಸಂತೃಪ್ತರಾಗಿದ್ದರು. ಅವರ ನಂತರ ಅಬೂಬಕರ್‍ರ ಜೊತೆ ಬದುಕಿದೆನು. ಅವರ ಆದೇಶಗಳನ್ನು ಸ್ವೀಕರಿಸಿದೆನು. ಅವರನ್ನು ಅನುಸರಿಸಿದ್ದೇನೆ. ಅಬೂಬಕರ್ ಕೂಡ ನನ್ನ ಬಗ್ಗೆ ಸಂತೃಪ್ತರಾಗಿದ್ದರು. ಆದರೂ ನನ್ನ ನಾಯಕತ್ವದ ಕರಿತು ಭಯಭೀತನೇ ಆಗಿರುವೆ.”

ಇನ್ನೊಮ್ಮೆ ತನ್ನನ್ನು ಪ್ರಶಂಸಿಸಿದವರಲ್ಲಿ ಹೇಳಿದರು, “ಆಡಳಿತಕ್ಕೆ ಪ್ರವೇಶಿಸಿದಂತೆ ಹೊರಗೆ ಹೋಗಲು ಸಾಧ್ಯವಾಗಿದ್ದರೆ! ಅದು ನನಗೆ ಅನೂಕೂಲಕರಾಗಿ ಅಲ್ಲದಿದ್ದರೂ ಪ್ರತಿಕೂಲಕರವಾಗದಿದ್ದರೆ ಸಾಕು.”

ಉಮರ್ ಜನಾಝಕ್ಕೆ ಸ್ನಾಮಾಡಿಸಿ ಮಸೀದಿಗೆ ತರಲಾಯಿತು. ಸಾಮಾನ್ಯವಾಗಿ ಹುತಾತ್ಮರ ಮೃತದೇಹಕ್ಕೆ ಸ್ನಾನ ಮಾಡಿಸಲಾಗುವುದಿಲ್ಲ. ಮರಣಗೊಂಡ ಸ್ಥಿತಿಯಲ್ಲೇ ಅಂತಹವರ ಜನಾಝವನ್ನು (ಮೃತ ದೇಹವನ್ನು) ದಫನಮಾಡುವುದು ಕ್ರಮವಾಗಿದೆ. ಹಝ್ರತ್ ಹಂಝ, ಉಸ್ಮಾನಿಬ್ನು ಮಝ್‍ಊನ್, ಅಮ್ಮಾರಿಬ್ನು ಯಾಸಿರ್ ಮತ್ತು ಉಹುದ್ ಯುದ್ಧದಲ್ಲಿ ಮೃತಪಟ್ಟ ಹುತಾತ್ಮರ ಸ್ನಾನವನ್ನು ಮಾಡಿಸಲಾಗಿರಲಿಲ್ಲ. ಆದರೆ ರಣರಂಗದ ಹೊರಗೆ ಹುತಾತ್ಮತೆಗೊಂಡರೆ ಅಂತಹವರ ಜನಾಝದ ಸ್ನಾನ ಮಾಡಿಸಬಹುದು ಎಂಬುದು ಉಮರ್ ರ ಮೃತದೇಹ ಸಂಸ್ಕಾರದಿಂದ ನಾವು ಮನದಟ್ಟು ಮಾಡಿಕೊಳ್ಳಬಹುದು.

ಉಮರ್ ರ ಜನಾಝ ನಮಾಝ್‍ರಿಗೆ ಸುಹೈಬ್‍ರು ನೇತೃತ್ವವನ್ನು ನೀಡಿದರು. ಜನಾಝವನ್ನು ಹಝ್ರತ್ ಆಯಿಷಾ(ರ)ರ ಮನೆ ಬಾಗಿಲ ಬಳಿ ತಂದಿರಿಸಲಾಯಿತು. ತಂದೆಯ ಸೂಚನೆಯಂತೆ ಜನಾಝ ದಫನಕ್ಕೆ ಆಯಿಷಾ(ರ)ರಿಂದ ಇಬ್ನು ಉಮರ್ ಅನುಮತಿ ಯಾಚಿಸಿದರು. ಅನುಮತಿ ಸಿಕ್ಕಿತು. ಪ್ರವಾದಿವರ್ಯರ(ಸ) ಕೋಣೆಯಲ್ಲಿ ಸಿದ್ಧಪಡಿಸಲಾಗಿದ್ದ ಗೋರಿಯಲ್ಲಿ ಉಮರ್ ರ ಮೃತದೇಹ ದಫನ ಕಾರ್ಯ ನಡೆಸಲಾಯಿತು.

ಗೋರಿಯನ್ನು ಪ್ರವಾದಿವರ್ಯರ(ಸ) ಜನಾಝದ ಹೆಗಲಿನ ಭಾಗಕ್ಕೆ ಉಮರ್ ತಲೆಯ ಭಾಗವು ಬರುವಂತೆ ತೋಡಲಾಗಿತ್ತು. ಅಬ್ದುಲ್ಲಾಹಿಬ್ನು ಉಮರ್ ತಂದೆಯ ಮೃತದೇಹವನ್ನು ಸರಿಪಡಿಸಿದರು. ಸಮಾಲೋಚನಾ ಸಮಿತಿಯ ಐವರು ಸದಸ್ಯರು ಅಲ್ಲಿದ್ದರು. ಅವರೆಲ್ಲರೂ ದಫನ ಕಾರ್ಯದಲ್ಲಿ ಭಾಗವಹಿಸಿದರು. ಆಗಲೂ ತಲ್ಹತಿಬ್ನು ಉಬೈದುಲ್ಲಾ ಅಲ್ಲಿಗೆ ಬಂದು ಮುಟ್ಟಲಿಲ್ಲ.

ದಫನ ಕಾರ್ಯ ಮುಗಿದಾಗ ಜನರ ಕಣ್ಣಾಲಿಗಲು ತುಂಬಿ ಹರಿಯಿತು. ಕಂಠ ತುಂಬಿ ಬಂದು ಮಾತುಗಳು ತಡವರಿಸಿದವು. ದುಃಖ ದುಮ್ಮಾನಗಳನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ತಡೆದಿರಿಸಲು ತುಂಬ ಕಷ್ಟಪಡುತ್ತಿದ್ದರು. ಅವರಲ್ಲಿ ಹೆದರಿಕೆ, ಆತಂಕದ ಮನೋಸ್ಥಿತಿ ನೆಲೆಸಿತ್ತು. ಯಾರೂ ಅಳಬಾರದೆಂಬ ನಿರ್ದೇಶನ ಇದ್ದರೂ ಜನರಿಂದ ಸ್ವಯಂ ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ದುಃಖ ಅಂತಹದ್ದು. ನಿಯಂತ್ರಣದ ರೇಖೆಯನ್ನು ಭೇದಿಸುವಷ್ಟು ಅಗಾಧವಾದುದು.

ಉಮರ್ ನಿಧನರಾದಾಗ ಅವರ ವಯಸ್ಸೆಷ್ಟೆಂಬುದು ದೃಢವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೆ ಆಗ 55 ವರ್ಷ, 61 ವರ್ಷ, ಅರುವತ್ತಮೂರು ವರ್ಷ ಎನ್ನುವ ಅಭಿಪ್ರಾಯವಿದೆ. ಆದರೆ 63 ವರ್ಷ ಆರು ತಿಂಗಳು ಮೂರು ದಿನ ಎನ್ನುವುದು ಹೆಚ್ಚು ದೃಢ ಅಭಿಪ್ರಾಯವಾಗಿದೆ.

ಯುಗಸಾಕ್ಷ್ಯಗಳು:

ಉಮರ್ ಮಾನವ ಇತಿಹಾಸದ ಅದ್ಭುತವಾದ ಒಂದು ಮಾದರಿಯಾಗಿದ್ದಾರೆ. ಅವರು ಪ್ರವಾದಿವರ್ಯರು(ಸ) ಮತ್ತು ಅನುಯಾಯಿಗಳ ನಡುವೆ ಬದುಕಿದರು. ಹೀಗೆ ತುಲಾನಾತೀತವಾಗಿ ಅಂದಿನ ಸಮಾಜದಲ್ಲಿ ಬದುಕುವುದು ಅಷ್ಟು ಸುಲಭ ವಿಚಾರ ಆಗಿರಲಿಲ್ಲ. ಅವರಿಗೆ ಸಮಕಾಲೀನ ಸಮಾಜದ ಎಲ್ಲರ ಪ್ರೀತ್ಯಾದರವನ್ನು ಗಳಿಸುವುದು ಸಾಧ್ಯವಾಯಿತು. ಪ್ರವಾದಿವರ್ಯರು(ಸ) ಉಮರ್ ರ ಕುರಿತು ಹೇಳಿದರು, “ವಿಷಯವನ್ನು ಉಮರ್ ರ (ರ) ರೀತಿ ವಿಶ್ಲೇಷಿಸುವ ಬೇರೆ ಪ್ರತಿಭಾವಂತ ವ್ಯಕ್ತಿಯನ್ನು ನಾನು ನೋಡಿಲ್ಲ.”

“ದೇವನ ವಿಷಯದಲ್ಲಿ ನನ್ನ ಸಮುದಾಯದಲ್ಲಿ ಅತೀ ನಿಷ್ಠುರ ವ್ಯಕ್ತಿ ಅವರು.”

“ನಿಮಗಿಂತ ಮುಂಚಿನ ಜನರಲ್ಲಿ ದಿವ್ಯಜ್ಞಾನ ಲಭಿಸುವ ವ್ಯಕ್ತಿಗಳಿದ್ದರು. ನನ್ನ ಸಮುದಾಯದಲ್ಲಿ ಹೀಗೆ ಯಾರಾದರೂ ಇರಬಹುದು ಎಂದಾದರೆ ಅವರು ಉಮರ್ ಆಗಿದ್ದಾರೆ.”