ಮಂಗಳೂರು: ಸೋಮವಾರ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ ದ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದು, ಉಭಯ ಜಿಲ್ಲೆಗಳ ವಿವಿಧ ಪ್ರದೇಶಗಳಿಂದ ಅನಾಹುತಗಳ ವರದಿಗಳು ನಿರಂತರ ಬರತೊಡಗಿವೆ. ದ ಕ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿದ್ದು, ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರದ ಸ್ನಾನಘಟ್ಟವು ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಜಲಾವೃತಗೊಂಡಿದೆ.
ಕುಮಾರ ಪರ್ವತದ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೀಗಾಗಿದ್ದು, ಈ ಬಾರಿಯ ಮಳೆಗಾಲದಲ್ಲಿ ಮೊದಲ ಬಾರಿ ಸ್ನಾನಘಟ್ಟ ಜಲಾವೃತಗೊಂಡಿದೆ ಎಂದು ವರದಿಯಾಗಿದೆ. ಇದರಿಂದಾಗಿ, ನದಿ ದಡದಲ್ಲಿ ಭಕ್ತಾದಿಗಳು ತೀರ್ಥ ಸ್ನಾನ ಮಾಡಿದರು ಎಂದು ದೇವಾಲಯದ ಮೂಲಗಳು ತಿಳಿಸಿವೆ. ಅಲ್ಲದೆ, ಹಲವೆಡೆ ಮನೆ, ಗುಡ್ಡ ಹಾಗೂ ಭೂಕುಸಿತ ಸಂಭವಿಸಿದ ಕುರಿತು ವರದಿಯಾಗಿದೆ.
ವಿಟ್ಲ ಸಮೀಪದ ಕೊಲ್ನಾಡು, ಮುಡಿಪು ಸಮೀಪದ ಕಂಬಳಪದವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದೆ. ವಿಟ್ಲ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಕಿಂಡಿಕಟ್ಟು ಮುಳುಗಡೆಯಾಗಿದೆ. ಸಮೀಪದ ಸುರಂಬಡ್ದಲ್ಲಿರುವ ಕಿಂಡಿ ಅಣೆಕಟ್ಟು ಇದ್ದಾಗಿದ್ದು, ಇದರಿಂದ ಸಾರ್ವಜನಿಕರು ಹೊಳೆಯ ಬದಿಯಲ್ಲಿ ನಿಲ್ಲುವಂತಾಗಿದೆ.ಮಾತ್ರವಲ್ಲ ಸುರಿದ ಭಾರೀ ಮಳೆಗೆ, ಪುತ್ತೂರು, ಕಡಬ, ಬೆಳ್ತಂಗಡಿ ವ್ಯಾಪ್ತಿಯ ತಾಲೂಕುಗಳಿಗೆ ಜಿಲ್ಲಾಧಿಕಾರಿಯವರು ಮಂಗಳವಾರ ಶಾಲೆಗೆ ರಜೆ ಘೋಷಿಸಿದ್ದರೂ ಅದರ ಬಗ್ಗೆ ಗೊತ್ತಿಲ್ಲದ ಅನೇಕ ವಿದ್ಯಾರ್ಥಿಗಳು ಶಾಲೆಗೇ ತೆರಳಿ ಕಷ್ಟಕ್ಕೆ ಸಿಲುಕೊಂಡರು. ಕೆಲವೆಡೆ ಮರದ ದಿಮ್ಮಿ ಹಾಗೂ ಇನ್ನಿತರ ವಸ್ತುಗಳು ಸೇತುವೆಯಲ್ಲಿ ಸಿಕ್ಕಿಹಾಕೊಂಡಿದ್ದರಿಂದ ಕಿಂಡಿ ಅಣೆಕಟ್ಟಿಗೆ ಹಾನಿಯಾಗಿದೆ. ಐದು ವರ್ಷಗಳ ಹಿಂದೆ ಒಂದು ಕೋಟಿ ಅನುದಾನದಲ್ಲಿ ಈ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಇದೀಗ ಆದ ಹಾನಿಯು ಆಣೆಕಟ್ಟು ಕಾಮಗಾರಿಯ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. ಇದೇವೇಳೆ, ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ, ವಿಟ್ಲ ಗ್ರಾಮ ಕರಣಿಕ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೊಳ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿ ನೇತ್ರಾವತಿಯ ಉಪನದಿ ತುಂಬಿ ಹರಿದ ಕಾರಣ ವಿಟ್ಲ-ಸಾಲೆತ್ತೂರು ರಸ್ತೆಯ ಕುಡ್ತಮುಗೇರು ರಸ್ತೆ ಜಲಾವೃತಗೊಂಡಿದೆ. ಇದರಿಂದ ಸುಮಾರು ತಾಸುಗಳ ವರೆಗೆ ರಸ್ತೆ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ ಎಂದು ವರದಿಯಾಗಿದ್ದು, ಕೊಳ್ನಾಡು ಗ್ರಾಮದ ಕರೈ-ಕಾಡುಮಠದಲ್ಲಿ ರಸ್ತೆಗೆ ಗುಡ್ಡ ಕುಸಿದು ರಸ್ತೆ ಮುಚ್ಚಿ ಹೋಗಿತ್ತು. ಎಸ್ಡಿಪಿಐ ಕಾರ್ಯಕರ್ತರು ಮತ್ತು ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕುಡ್ತಮುಗೇರು-ಕುಳಾಲು ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಸ್ಯ ಪವಿತ್ರ ಪೂಂಜ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬೆಳ್ತಂಗಡಿಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಚಾರ್ಮಾಡಿ ಘಾಟಿಯಲ್ಲಿ ಮೂರು ಕಡೆ ಭೂಮಿ ಕುಸಿದಿದೆ. ಅದೇವೇಳೆ, ಆ. 7 ರಿಂದ ಎರಡು ದಿನಗಳ ಕಾಲ ದಕ್ಷಿಣ ಕನ್ನಡದಾದ್ಯಂತ ಜಿಲ್ಲಾಧಿಕಾರಿಯವರು ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ.
ಮಂಗಳೂರಿನ ನಂತೂರು ಸಮೀಪದ ಕಂಡೆಟ್ಟು ಶಕ್ತಿನಗರ ರಸ್ತೆಯಲ್ಲಿ ಬೃಹತ್ ಮರಗಳು ಉರಳಿಬಿದ್ದಿವೆ ಎಂಬ ವರದಿ ಬಂದಿದ್ದು, ಉಳ್ಳಾಲ ಮತ್ತು ಸೋಮೇಶ್ವರ ಹಾಗೂ ಉಚ್ಚಿಲದಲ್ಲಿ ಕಡಲ್ಕೊರೆತ ಆರಂಭವಾಗಿದೆ. ಉಚ್ಚಿಲ ಬಟ್ಟಪ್ಪಾಡಿ, ನ್ಯೂ ಉಚ್ಚಿಲ, ಉಳ್ಳಾಲದ ಕಿಳ್ರಿಯಾ ನಗರ, ಕೈಕೋ, ಮುಕ್ಕಚ್ಚೇರಿಯಲ್ಲಿ ಕಡಲ್ಕೊರೆತವಾಗಿದೆ ಮತ್ತು ಕೆಲವೆಡೆ ಭೂಕುಸಿತ ಉಂಟಾಗಿರುವ ವರದಿಗಳು ಬಂದಿವೆ.
ಉಳ್ಳಾಲ ಪರಿಸರದಲ್ಲಿ ಭಾರೀ ಮಳೆಯಾಗುತ್ತಿರುವುದರ ಪರಿಣಾಮದಿಂದಾಗಿ ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಬಳಿ ಸಮುದ್ರ ಕೊರೆತದಿಂದ ರಸ್ತೆಗೆ ಹಾನಿ ಸಂಭವಿಸಿದೆ. ಉಳ್ಳಾಲದ ಕೈಕೋ, ಕಿಳ್ ರಿಯಾನಗರ, ಮುಕ್ಕಚ್ಚೇರಿ, ಸೀಗ್ರೌಂಡ್ ಬಳಿಯೂ ಸಮುದ್ರ ಸಿಡಿದೆದ್ದಿದೆ. ಅದೇವೇಳೆ, ತೊಕ್ಕೊಟ್ಟು ಒಳಪೇಟೆಯಲ್ಲಿರುವ ಪ್ರಧಾನಮಂತ್ರಿ ಜೆನೆರಿಕ್ ಔಷಧಿ ಮಳಿಗೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಮಳಿಗೆ ಸುಟ್ಟುಹೋಗಿದೆಯಲ್ಲದೆ, ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳು ಮತ್ತು ಪರಿಕರಗಳು ಸುಟ್ಟುಹೋಗಿರುವುದಾಗಿ ವರದಿಯಾಗಿದೆ. ಇದೇವೇಳೆ, ಬೆಂಕಿ ನಂದಿಸುವಲ್ಲಿ ನಿರತರಾಗಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿಯೋರ್ವರಿಗೆ ಅಂಗಡಿಯಲ್ಲಿದ್ದ ಬ್ಯಾಟರಿಯ ಅಚಾನಕ್ ಸ್ಪೋಟದಿಂದ ಮುಖಕ್ಕೆ ತೀವ್ರ ಗಾಯವಾಗಿರುವುದಾಗಿ ತಿಳಿದು ಬಂದಿದೆ.
ಇನ್ನು,
ಉಡುಪಿ ಜಿಲ್ಲೆಯೂ ಮಳೆಹಾನಿಯಿಂದ ಮುಕ್ತವಾಗಿಲ್ಲ. ಜಿಲ್ಲೆಯ ಅಜ್ಜರಕಾಡು ಎಲ್ಐಸಿ ಬಳಿಯ ರಸ್ತೆಯಲ್ಲಿ ಐದಾರು ಮರ ಧರೆಗುರುಳಿರುವುದಲ್ಲದೆ, ಸುಮಾರು ೧೧ ವಿದ್ಯುತ್ ಕಂಬ ಉರುಳಿಬಿದ್ದು ಸಾರ್ವಜನಿಕರಲ್ಲಿ ಭೀತಿಯನ್ನು ಮೂಡಿಸಿದೆ.
ಹಾಗೆಯೇ, ಶಿರ್ವ ಕೋಡು ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ 150 ಕ್ಕೂ ಹೆಚ್ಚು ಹಂಚುಗಳು ಹಾರಿ ಹೋಗಿರುವ ವರದಿಗಳೂ ಬಂದಿದ್ದು, ಈ ಸಂದರ್ಭದಲ್ಲಿ ತರಗತಿಗಳು ನಡೆಯುತ್ತಿತ್ತು ಎನ್ನಲಾಗಿದೆ.












