ಖದೀಜ ನುಸ್ರತ್ ಅಬುಧಾಬಿ
ಉಪವಾಸವು ಮಾನವನ ಕಣ್ಣು, ಕಿವಿ, ಕೈ ಕಾಲು ಹಾಗೂ ಇತರ ಅಂಗಗಳಿಗೆ ಪಾಪಕಾರ್ಯಗಳಿಂದ ದೂರವಿರಲು ಉತ್ತಮ ತರಭೇತಿಯನ್ನು ನೀಡುತ್ತದೆ. ಹಲವಾರು ರೀತಿಯ ಮಾನಸಿಕ ರೋಗಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಮನಸ್ಸಿನ ನಿಯಂತ್ರಣ ಮತ್ತು ತರಭೇತಿ ಕೂಡಾ ಅತ್ಯಗತ್ಯವಾಗಿದೆ. ಮನಸ್ಸು ಆರೋಗ್ಯವಾಗಿದ್ದರೆ ಮಾತ್ರ ನಮ್ಮ ಎಲ್ಲ ಕೆಲಸಗಳನ್ನು ಮಾಡಲು ಹುರುಪು ಉತ್ಸಾಹವಿರುತ್ತದೆ. ಕೆಟ್ಟ ಆಲೋಚನೆ, ಚಿಂತನೆಗಳಿಂದ ಉಪವಾಸವು ಮನಸ್ಸನ್ನು ಶುದ್ಧೀಕರಿಸುತ್ತದೆ. ಒಂದು ಧರ್ಮದ ಮೇಲೆ ದೃಢವಾದ ವಿಶ್ವಾಸ, ಆರಾಧನೆ, ಪ್ರಾರ್ಥನೆ ಮತ್ತು ಧರ್ಮ ಗ್ರಂಥಗಳ ಅಧ್ಯಯನ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ದೇವಸ್ಮರಣೆ ಮತ್ತು ಸತ್ಕರ್ಮದಿಂದ ಮಾತ್ರ ಮನಸ್ಸನ್ನು ಶಾಂತವಾಗಿರಿಸಲು ಸಾಧ್ಯ.
ರಮಝಾನ್ ತಿಂಗಳು ಜನರು ಅತಿ ಹೆಚ್ಚು ದಾನಧಾರ್ಮ ನೀಡುವ ತಿಂಗಳಾಗಿರುತ್ತದೆ. ಇದು ಸಂಪತ್ತಿನ ಶುದ್ಧೀಕರಣ ಮಾತ್ರವಲ್ಲ ಮನಸ್ಸಿನ ಶುದ್ಧೀಕರಣ ಕೂಡಾ ಆಗಿರುತ್ತದೆ. ಇದು ಮನಸ್ಸಿನಲ್ಲಿ ಪರಸ್ಪರ ಪರೋಪಕಾರ ಭಾವನೆ, ಗೌರವ, ಸಂತೃಪ್ತಿ ಮತ್ತು ಮನಸ್ಸಿನ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ದಾನಧರ್ಮವು ಸಂಪತ್ತಿನ ಮೇಲಿರುವ ಅತ್ಯಾಸೆ ಮತ್ತು ವ್ಯಾಮೋಹವನ್ನು ನಿಯಂತ್ರಿಸಿ ಮನಸ್ಸನ್ನು ಹತೋಟಿಯಲ್ಲಿಡುತ್ತದೆ .
ಮಾನವನ ಮನಸ್ಸಿನಲ್ಲಿ ಕೆಲವೊಮ್ಮೆ ಸಂತೋಷ, ದುಃಖ, ಬೇಸರ, ನಿರಾಶೆ, ಹತಾಶೆ, ಆತಂಕ, ಭಯ, ಕೋಪ, ಅಸೂಯೆ, ದುರಾಸೆ ಹೀಗೆ ಹಲವಾರು ರೀತಿಯ ಭಾವನೆಗಳು ಮೂಡುವುದು ಸಹಜವಾಗಿರುತ್ತದೆ. ನಾವು ಸಂತೋಷವಾಗಿರುವಾಗ ಅದರ ಕಾರಣವೇನು ಎಂದು ಕೂಲಂಕುಶವಾಗಿ ನೋಡಬೇಕು. ಅದು ಅಲ್ಲಾಹನ ಸಂಪ್ರೀತಿಗಾಗಿ ಯಾವುದೇ ಉತ್ತಮ ಕೆಲಸವನ್ನು ಮಾಡಿ ಗಳಿಸಿದ ಸಂತೋಷವಾಗಿದ್ದರೆ ಅದು ಶಾಶ್ವತವಾಗಿರುತ್ತದೆ. ಇನ್ನು ಕೇವಲ ಲೌಖಿಕ ಜೀವನಕ್ಕೆ ಸಂಬಂಧವಾಗಿದ್ದರೆ ಆ ಸಂತೋಷವು ಕ್ಷಣಿಕವಾಗಿರುತ್ತದೆ. ನಾವು ಜೀವನದಲ್ಲಿ ಎಷ್ಟು ಸಂತೃಪ್ತಿ, ಸಂತೋಷವಾಗಿದ್ದೇವೆ ಎಂಬುದಕ್ಕಿಂತಲೂ ನಮ್ಮಿಂದ ಎಷ್ಟು ಜನರು ಸಂತೋಷವಾಗಿದ್ದಾರೆ ಎಂಬುದು ಮುಖ್ಯವಾಗಿದೆ. ಇನ್ನೊಬ್ಬರ ಮನಸ್ಸಿನ ನೋವು, ಭಾವನೆ, ಕಷ್ಟ ಮತ್ತು ದುಃಖವನ್ನು ಅರ್ಥಮಾಡಿಕೊಳ್ಳಿರಿ. ಇನ್ನೊಬ್ಬರ ಕಷ್ಟ ಮತ್ತು ದುಃಖವನ್ನು ಪರಿಹರಿಸಿ ಅದರಲ್ಲಿ ಸಂತೋಷ ಪಡೆಯಿರಿ. ಇತರರ ಸಂಪತ್ತು ಮತ್ತು ಸಂತೋಷವನ್ನು ಕಂಡು ಅಸೂಯೆ ಪಡಬೇಡಿರಿ. ನಮಗೆ ಮಾತ್ರವಲ್ಲ ಇನ್ನೊಬ್ಬರಿಗೂ ಯಾವಾಗಲೂ ಲಾಭ ಮತ್ತು ಒಳಿತು ಆಗಬೇಕೆಂದು ಚಿಂತಿಸಿರಿ. ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸಿ ಸಕಾರಾತ್ಮಕ ಭಾವನೆಗಳನ್ನು ಬುದ್ಧಿವಂತಿಕೆಯಿಂದ ವ್ಯಕ್ತಪಡಿಸಲು ಪ್ರಯತ್ನಿಸಿರಿ.
ಪ್ರವಾದಿ ಮುಹಮ್ಮದ್(ಸ)ರ ಜೀವನವು ಧನಾತ್ಮಕ ಭಾವನೆಗಳ ಒಂದು ತೆರೆದ ಪುಸ್ತಕದಂತೆ ನಮ್ಮ ಮುಂದಿದೆ. ತಾಳ್ಮೆ, ಸಹನೆ, ಕ್ಷಮೆ, ಔದಾರ್ಯ, ಅನುಕಂಪ, ಲಜ್ಜೆ, ಸತ್ಯ ಸಂಧತೆ, ವಿನಮ್ರತೆ, ಪ್ರಾಮಾಣಿಕತೆ, ವಿಶಾಲ ಮನಸ್ಸು, ಕೃತಜ್ಞತಾಭಾವ ಅವರ ಜೀವನದ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಕಂಡುಬರುತ್ತದೆ. ಮೃದು ಭಾಷೆ, ಕರ್ತವ್ಯ ಪ್ರಜ್ಞೆ, ಸರಳತೆ, ಕೆಡುಕಿಗೆ ಒಳಿತಿನ ಉತ್ತರ, ಅಲ್ಲಾಹನ ಮೇಲೆ ಭರವಸೆಯ ಗುಣಗಳು ಅವರನ್ನು ಜನರು ಅತೀ ಹೆಚ್ಚು¬¬ ಪ್ರೀತಿಸಲು ಕಾರಣವಾಗಿತ್ತು.
ಯಾರ ವಿಷಯದಲ್ಲಿಯೂ ಮನಸ್ಸಿನಲ್ಲಿ ದ್ವೇಷ, ಹಗೆತನ, ಕೋಪ, ಪ್ರತೀಕಾರ ಭಾವನೆಯನ್ನಿರಿಸಬೇಡಿರಿ. ನಿಮಗೆ ಯಾರಾದರೂ ಉಪಕಾರ ಮಾಡಿದ್ದರೆ ಯಾವಾಗಲು ನೆನಪಿನಲ್ಲಿಡಿರಿ ಮತ್ತು ಸಾಧ್ಯವಿದ್ದರೆ ಪ್ರತ್ಯುಪಕಾರವನ್ನು ಮಾಡಿರಿ. ನೀವು ಇತರರಿಗೆ ಮಾಡಿದ ಉಪಕಾರವನ್ನು ಮರೆತು ಬಿಡಿರಿ ಮತ್ತು ಅವರು ನಿಮಗೆ ಪ್ರತ್ಯುಪಕಾರ ಮಾಡಬೇಕೆಂದು ಚಿಂತಿಸಬೇಡಿರಿ . ಅಲ್ಲಾಹನು ಅದಕ್ಕೆ ಸರಿಯಾದ ಪ್ರತಿಫಲ ನೀಡುವನು ಎಂಬ ದೃಢವಾದ ಭರವಸೆಯಿರಲಿ. ಜನರು ನಮ್ಮ ಬಗ್ಗೆ ಏನು ಆಲೋಚಿಸುತ್ತಾರೆ ಮತ್ತು ಏನು ಹೇಳುತ್ತಾರೆ ಎಂಬುದರ ಬಗ್ಗೆ ಚಿಂತಿಸಬೇಡಿರಿ. ಜನರಿಂದ ಯಾವುದೇ ಪ್ರತಿಫಲ ನಿರೀಕ್ಷಿಸಬೇಡಿರಿ. ನೂರಾರು ಒಳಿತುಗಳನ್ನು ಮಾಡಿಯೂ ಎಲ್ಲಾ ಜನರನ್ನು ಸಂತೃಪ್ತ ಪಡಿಸಲು ಸಾಧ್ಯವಿಲ್ಲ. ಅಲ್ಲಾಹನ ಸಂತೃಪ್ತಿ ಗಳಿಸುವ ಕೆಲಸವನ್ನು ಸದಾ ಮಾಡುತ್ತಲಿರಿ. ಆಗ ಜನರು ನಿಮ್ಮನ್ನು ಖಂಡಿತವಾಗಿಯೂ ಪ್ರೀತಿಸುವರು.
ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿರುವುದೇ ನಾಲಗೆಯಲ್ಲಿ ಮಾತುಗಳಾಗಿ ಹೊರಡುತ್ತದೆ. ಜನರೊಂದಿಗೆ ಅಸಭ್ಯ, ನಿಂದನೆ, ಅವಮಾನ, ಮನಸ್ಸಿಗೆ ನೋವನ್ನುಂಟು ಮಾಡುವ ಮತ್ತು ಇನ್ನೊಬ್ಬರಿಗೆ ದ್ವೇಷವನ್ನುಂಟು ಮಾತುಗಳನ್ನಾಡಬೇಡಿರಿ. ಎಲ್ಲರೂ ಪರಸ್ಪರ ಗೌರವಿಸಿರಿ, ಶಾಂತಿ ಮತ್ತು ಸಮಾಧಾನದ ಜೀವನ ನಡೆಸಲು ಪ್ರಯತ್ನಿಸಬೇಕು. ಪರಲೋಕದ ಬಗ್ಗೆ ಸದಾ ಚಿಂತಿಸಿರಿ. ಪರಲೋಕದ ಶಾಶ್ವತ ಜೀವನದ ವಿಜಯಕ್ಕಾಗಿ ಸದಾ ಸಿದ್ಧತೆ ನಡೆಸಿರಿ. ಲೌಖಿಕ ಜೀವನದ ಸಂಪತ್ ಸೌಕರ್ಯ ಮತ್ತು ಸಮಸ್ಯೆಗಳೆಲ್ಲವೂ ಕ್ಷಣಿಕವಾಗಿದೆ. ಅಧಿಕಾರ ಮೋಹ, ಲೌಖಿಕ ಸಂಪತ್ತು ಮತ್ತು ಸೌಕರ್ಯಗಳ ವ್ಯಾಮೋಹ, ಸ್ಥಾನಮಾನ, ಸಮಾಜದಲ್ಲಿ ನಾನು ಇನ್ನೊಬ್ಬರಿಗಿಂತ ಶ್ರೇಷ್ಠ ನಾಗಬೇಕೆಂಬ ಲೌಖಿಕ ಚಿಂತನೆಗಳು ಪರಲೋಕ ವಿಚಾರಣೆಯ ಭಯವಿರುವ ಮನಸ್ಸಿನಲ್ಲಿ ಮೂಡುವುದಿಲ್ಲ. ಭವಿಷ್ಯದ ಬಗ್ಗೆ ಭಯ, ರೋಗದ ಭಯ , ಬಡತನದ ಭೀತಿ, ಶತ್ರುಗಳ ಭಯ, ದುಃಖ, ಚಿಂತೆ, ಒತ್ತಡ, ನಿರಾಶೆಯಿಂದ ಮನಸ್ಸು ಭಾರವಾದಾಗ ಸೃಷ್ಟಿಕರ್ತನೊಂದಿಗೆ ನನ್ನ ಸಂಬಂಧ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ಪ್ರಾರ್ಥನೆ, ನಮಾಝ್ ಮತ್ತು ಕುರ್ ಆನ್ ನೊಂದಿಗೆ ಸಂಬಂಧವನ್ನು ಹೆಚ್ಚಿಸಿರಿ. ಒಂದಿಷ್ಟು ದಾನಧರ್ಮ ನೀಡಿರಿ.
“ನಿಮಗೆ ನೀಡಲಾಗಿರುವುದೆಲ್ಲವೂ ಕೇವಲ ಇಹಲೋಕದ ಕೆಲವೇ ದಿನಗಳ ಜೀವನ ಸಾಧನಗಳಾಗಿವೆ ಮತ್ತು ಅಲ್ಲಾಹನ ಬಳಿಯಲ್ಲಿರುವುದೆಲ್ಲ ಉತ್ತಮವೂ ಶಾಶ್ವತವೂ ಆಗಿರುತ್ತದೆ. ಅದು ಇರುವುದು ಸತ್ಯವಿಶ್ವಾಸಿಗಳಿಗಾಗಿ ಮತ್ತು ತಮ್ಮ ಪ್ರಭುವಿನ ಮೇಲೆ ಭರವಸೆ ಇಡುವವರಿಗಾಗಿ.” (ಅಶ್ಶೂರಾ :36)
ಇಂದು ನಾವು ಬೇರೆ ಬೇರೆ ರೀತಿಯ ಸ್ವಭಾವ, ಅಭಿರುಚಿ, ಭಾವನೆ, ಚಿಂತನೆ, ವ್ಯಕ್ತಿತ್ವ, ಆಚಾರ, ವಿಚಾರ, ಆಲೋಚನೆ, ಅಭಿಪ್ರಾಯ ವ್ಯತ್ಯಾಸಗಳಿರುವ ಜನರೊಂದಿಗೆ ಜೀವಿಸಬೇಕಾಗಿದೆ. ಅವರವರ ಅಭಿರುಚಿ ಮತ್ತು ವ್ಯಕ್ತಿತ್ವಕ್ಕೆ ತಕ್ಕಂತೆ ಭಿನ್ನಾಭಿಪ್ರಾಯಗಳು ಇರಬಹುದು. ಇತರರ ಅಭಿಪ್ರಾಯಗಳು ತನ್ನ ಅಭಿಪ್ರಾಯದಂತೆ ಇರಬೇಕೆಂದು ಭಾವಿಸುವುದು ತಪ್ಪು. ಆದರೆ ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು. ಎಲ್ಲ ವಿಷಯಗಳಲ್ಲಿ ಒಳಿತನ್ನು ನೋಡಬೇಕು. ಕೆಡುಕನ್ನು ಹುಡುಕಬಾರದು. ಇನ್ನೊಬ್ಬರ ವರ್ತನೆಗಳ ಬಗ್ಗೆ ಅತಿಯಾಗಿ ಚಿಂತಿಸಬೇಡಿರಿ. ಇನ್ನೊಬ್ಬರ ತಪ್ಪು, ಮಾತು, ಕರ್ಮ ,ಬರಹ, ಅಭಿಪ್ರಾಯ, ಆಚಾರ, ವಿಚಾರಗಳಿಗೆ ನಾವು ಜವಾಬ್ದಾರರಾಗಿರುದಿಲ್ಲ ಬದಲಾಗಿ ನಮ್ಮ ತಪ್ಪು, ಕರ್ಮ, ಮಾತುಗಳಿಗೆ ಮಾತ್ರ ನಾವು ಜವಾಬ್ದಾರರಾಗಿರುತ್ತೇವೆ .ಇನ್ನೊಬ್ಬರಿಗೆ ಒಳಿತನ್ನು ಮಾತ್ರ ಬಯಸಿರಿ. ಅವರ ಒಳಿತಿಗಾಗಿ ಪ್ರಾರ್ಥಿಸಿರಿ, ಅವರೊಂದಿಗೆ ಒಳಿತಿನ ಮಾತುಗಳನ್ನು ಮಾತ್ರ ಆಡಿರಿ. ನಿಮ್ಮ ಮಾತು, ವರ್ತನೆ ಯಾವಾಗಲೂ ಇನ್ನೊಬ್ಬರ ಮನಸ್ಸಿಗೆ ಶಾಂತಿ, ಸಮಾಧಾನ, ನೆಮ್ಮದಿ, ಆಶ್ವಾಸನೆಯನ್ನು ನೀಡುವಂತಾಗಿರಲಿ. ಇನ್ನೊಬ್ಬರಿಗೆ ಒಳಿತನ್ನು ಬಯಸಬೇಕೆಂಬುದು ಸತ್ಯ ವಿಶ್ವಾಸದ ಬೇಡಿಕೆಯಾಗಿದೆ.
ಪ್ರವಾದಿ ಮುಹಮ್ಮದ್(ಸ) ಹೇಳಿರುವರು: ” ನನ್ನ ಆತ್ಮವು ಯಾರ ಹಸ್ತದಲ್ಲಿದೆಯೋ ಆತನಾಣೆ! ಓರ್ವನು ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ಸತ್ಯವಿಶ್ವಾಸಿಯಾಗುವುದಿಲ್ಲ.”












