ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ : ಆರೋಪಿ ವಿದ್ಯಾರ್ಥಿಗಳು ಕಾಲೇಜಿನಿಂದ ಡಿಬಾರ್

0
2925

ಪುತ್ತೂರು, ಜು. 03: ಐವರು ಸಹಪಾಠಿಗಳಿಂದಲೇ ಇಲ್ಲಿನ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಘಟನೆಗೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬಂಧಿತರನ್ನು ಪುತ್ತೂರಿನ ಬಜತ್ತೂರು ಗುರುನಂದನ್ (19), ಬಂಟ್ವಾಳದ ಪೆರ್ನೆ ಗ್ರಾಮ ಪ್ರಜ್ವಲ್ (19), ಬಂಟ್ವಾಳದ ಪೆರ್ನೆ ಗ್ರಾಮದ ಕಡಂಬು ಮನೆಯ ಕಿಶನ್ (19), ಪುತ್ತೂರಿನ ಆರ್ಯಾಪು ಗ್ರಾಮದ ಪಿಲಿಗುಂಡ ಮನೆಯ ಸುನಿಲ್ (19) , ಬಂಟ್ವಾಳದ ಬರಿಮಾರು ಬಲ್ಯ ಮನೆ ಪ್ರಖ್ಯಾತ್ (19) ಎಂದು ಗುರುತಿಸಲಾಗಿದೆ.

ಘಟನೆ ಕಳೆದ ಮಾರ್ಚ್ ತಿಂಗಳ ಕೊನೆಯ ವಾರ ಮದ್ಯಾಹ್ನ 3.00 ಗಂಟೆಗೆ ನಡೆದಿದೆ ಎನ್ನಲಾಗಿದೆ. ಅಂದು ಸಂತ್ರಸ್ತ ವಿದ್ಯಾರ್ಥಿನಿ ಬಳಿ ತೆರಳಿದ್ದ ಕಾಲೇಜಿನ ಸಹಪಾಠಿ ಸುನಿಲ್ ಎಂಬಾತನು ಮಾತನಾಡಲಿಕ್ಕಿದೆ ಎಂದು ಆಕೆಯನ್ನು ಕಾರಿನಲ್ಲಿ ಕುಳ್ಳಿರಿಸಿ, ಪ್ರಜ್ವಲ್, ಪ್ರಖ್ಯಾತ್ ಎಂಬವರನ್ನು ಕೂಡಿಕೊಂಡು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಆರೋಪಿಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ತಂಡದಲ್ಲಿ ನಾಲ್ಕರಿಂದ ಐದು ಮಂದಿ ಇದ್ದರು ಎನ್ನಲಾಗಿದೆ. ಈ ವಿಚಾರವನ್ನು ಯಾರಲ್ಲೂ ಹೇಳದಂತೆ ಬೆದರಿಕೆ ಒಡ್ಡಿದ್ದು, ತಪ್ಪಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಪಡಿಸುವುದಾಗಿ ಬೆದರಿಸಿದ್ದಾರೆ ಎಂದು ಸಂತ್ರಸ್ತೆ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ಪ್ರಕರಣ ಹೊರಬರುತ್ತಿದ್ದಂತೆ, ಪುತ್ತೂರಿನ ಖಾಸಗಿ ಕಾಲೇಜಿನ ಆಡಳಿತ ಮಂಡಳಿಯು ಸಭೆ ನಡೆಸಿದ್ದು, ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ, ವಿದ್ಯಾರ್ಥಿಗಳಾದ ಪ್ರಜ್ವಲ್, ಪ್ರಖ್ಯಾತ್, ಕಿಶನ್, ಗುರುನಂದನ್ ಮತ್ತು ಸುನೀಲ್ ಎಂಬವರನ್ನು ಡಿಬಾರ್ ಮಾಡಿ ಕಾಲೇಜಿನ ಪ್ರಾಂಶುಪಾಲರು ಆದೇಶ ನೀಡಿದ್ದಾರೆ.