ಧರ್ಮವೆಂದರೆ ಕೇವಲ ಆಚರಣೆಯಲ್ಲ: ಸೀರತ್ ನೀಡುವ ಪಾಠಗಳು 

0
172

✍️ ಅಬ್ದುಲ್ಲತೀಫ್‌ ಆಲಿಯಾ
ಖತೀಬರು ಅನಸ್‌ ಬಿನ್‌ ಮಾಲಿಕ್‌ ಜುಮಾ ಮಸ್ಜಿದ್‌ ಬೆಂಗ್ರೆ

ಧರ್ಮ ಎಂದರೆ ಕೇವಲ ಮಸೀದಿಯ ನಾಲ್ಕು ಗೋಡೆಗಳೊಳಗಿನ ಪ್ರಾರ್ಥನೆ, ನಿರ್ದಿಷ್ಟ ದಿನಗಳ ಉಪವಾಸ ಅಥವಾ ನಿರ್ದಿಷ್ಟ ಉಡುಗೆಗಳಿಗೆ ಸೀಮಿತವಾದ ಆಚರಣೆಯಲ್ಲ. ಪ್ರವಾದಿ ಮುಹಮ್ಮದ್(ಸ) ರವರ ಪವಿತ್ರ ಜೀವನಚರ್ಯೆ – ಸೀರತ್ – ನಮಗೆ ಕಲಿಸುವ ಅತ್ಯಂತ ಮಹತ್ವದ ಪಾಠವೆಂದರೆ ಧರ್ಮವು ಸೃಷ್ಟಿಕರ್ತನೊಂದಿಗೆ ಆತ್ಮೀಯವಾದ, ಪ್ರೀತಿಯ ಮತ್ತು ಪ್ರಾಮಾಣಿಕವಾದ ಸಂಬಂಧವಾಗಿದೆ. ಅದು ನಮ್ಮ ಉಸಿರಿನಂತೆ, ನಡತೆಯಂತೆ, ವ್ಯವಹಾರದಂತೆ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತಿಫಲಿಸಬೇಕು.

ಕುರ್‌ಆನ್‌ ಸ್ಪಷ್ಟವಾಗಿ ಹೇಳುತ್ತದೆ: “ನನ್ನ ನಮಾಝ್, ನನ್ನ ತ್ಯಾಗ, ನನ್ನ ಜೀವನ ಮತ್ತು ನನ್ನ ಮರಣವೆಲ್ಲವೂ ಅಲ್ಲಾಹನಿಗೆ ಮಾತ್ರ” (6:162). ಪ್ರವಾದಿ(ಸ) ರವರ ಬದುಕು ಇದಕ್ಕೆ ಜೀವಂತ ಸಾಕ್ಷಿ. ರಾತ್ರಿ ತಹಜ್ಜುದ್‌ ನಮಾಝ್‌ನಲ್ಲಿ ಕಣ್ಣೀರು ಹಾಕಿದ ಅದೇ ಕಣ್ಣುಗಳು ಹಗಲು ಜಾತಿ ಮತ ಭೇದವಿಲ್ಲದೆ ಅನಾಥರ ತಲೆಯ ಮೇಲೆ ಮಮತೆಯಿಂದ ಕೈಯಾಡಿಸಿದವು. ಅವರಿಗೆ ಇಬಾದತ್ ಮತ್ತು ಮುಆಮಲಾತ್ ಬೇರೆ ಬೇರೆಯಾಗಿರಲಿಲ್ಲ. ಅದು ಬೇರ್ಪಡಿಸಲಾಗದ ಒಂದೇ ನಾಣ್ಯವಾಗಿತ್ತು.

ಪ್ರಾಮಾಣಿಕತೆಯೇ ಮೊದಲ ಧರ್ಮ

ಸೀರತ್‌ನ ಮೊದಲ ಗುಣ ಪ್ರಾಮಾಣಿಕತೆ. ಪ್ರವಾದಿಯಾಗುವ ಮುನ್ನವೇ ಮುಹಮ್ಮದ್‌(ಸ) ಅವರು ಮಕ್ಕಾದಲ್ಲಿ “ಅಲ್-ಅಮೀನ್” ಅಂದರೆ ವಿಶ್ವಾಸಾರ್ಹ ಎಂಬ ಬಿರುದನ್ನು ಪಡೆದಿದ್ದರು. ವ್ಯವಹಾರದಲ್ಲಿ ಸತ್ಯಸಂಧತೆ, ಅಳತೆಯಲ್ಲಿ ಮೋಸವಿಲ್ಲದಿರುವುದು, ಮಾತು ತಪ್ಪದಿರುವುದು ಅವರ ಧಾರ್ಮಿಕತೆಯ ಪ್ರತಿಫಲವಾಗಿತ್ತು. ಅವರಿಗೆ ಧರ್ಮವೆಂದರೆ ಶುಕ್ರವಾರ ಮಾತ್ರವಲ್ಲ, ಪ್ರತಿದಿನದ ದಿನಚರಿ ಆಗಿತ್ತು.

ಇದೇ ಮಾದರಿಯನ್ನು ಖಲೀಫಾ ಅಬೂಬಕರ್ ಸಿದ್ಧೀಕ್(ರ) ರವರು ಅನುಸರಿಸಿದರು. ಆಡಳಿತದ ಉನ್ನತ ಅಧಿಕಾರದಲ್ಲಿದ್ದೂ ಅವರು ಬಡವರ ಮನೆಗೆ ಹೋಗಿ ಹಾಲು ಕರೆಯುತ್ತಿದ್ದರು. ಅಧಿಕಾರ ಸ್ವೀಕರಿಸಿದ ಕೂಡಲೇ ಜನರ ಮುಂದೆ ಬಂದು: “ನಾನು ಸತ್ಯ ಪಥದಲ್ಲಿರುವ ತನಕ ನನ್ನನ್ನು ಬೆಂಬಲಿಸಿರಿ. ತಪ್ಪಿದರೆ ತಿದ್ದಿರಿ” ಎಂದು ಘೋಷಿಸಿದರು. ಇದು ಬದುಕನ್ನೇ ಇಬಾದತ್ ಮಾಡಿದ ಉದಾಹರಣೆ. ನಮ್ಮ ನಮಾಝ್ ನಮ್ಮನ್ನು ಸುಳ್ಳು ಮತ್ತು ವಂಚನೆಯಿಂದ ತಡೆದರೆ ಮಾತ್ರ ಅದು ನಿಜವಾದ ನಮಾಝ್. ಇಲ್ಲದಿದ್ದರೆ ಅದು ಕೇವಲ ದೈಹಿಕ ವ್ಯಾಯಾಮವಾಗಿ ಉಳಿಯುತ್ತದೆ.

ಸಹಿಷ್ಣುತೆಯೊಂದಿಗೆ ದೃಢತೆ

ಸೀರತ್‌ನ ಎರಡನೇ ಸಂದೇಶ ಏನೆಂದರೆ ಮೌಲ್ಯಯುತವಾದ ಧಾರ್ಮಿಕ ಸಹಿಷ್ಣುತೆ. ಇಸ್ಲಾಮಿನ ಮೂಲ ತತ್ವವಾದ ತೌಹೀದ್‌(ಏಕದೇವತ್ವ)ನಲ್ಲಿ ಒಂದು ಅಣುವಿನಷ್ಟು ರಾಜಿ ಮಾಡಿಕೊಳ್ಳದೆ, ಅದೇ ಸಮಯದಲ್ಲಿ ಇತರ ಧರ್ಮೀಯರನ್ನು ಗೌರವಿಸುವುದು – ಪ್ರವಾದಿಯವರ ಮಾದರಿ.

ಹಿಜರಿ 1ನೇ ವರ್ಷದಲ್ಲಿ ಪ್ರವಾದಿ(ಸ) ರವರು ಮದೀನಾದ ಮುಸ್ಲಿಮರು, ಯಹೂದಿಗಳು ಮತ್ತು ಎಲ್ಲ ಬುಡಕಟ್ಟುಗಳೊಂದಿಗೆ “ಮದೀನಾ ಒಡಂಬಡಿಕೆ” ಎಂಬ ಐತಿಹಾಸಿಕ ಒಪ್ಪಂದ ಮಾಡಿಕೊಂಡರು. ಅದರಲ್ಲಿ ಸ್ಪಷ್ಟವಾಗಿ ಬರೆಯಲಾಗಿತ್ತು: “ಯಹೂದಿ ಮತ್ತು ಮುಸ್ಲಿಮೇತರ ಸಮುದಾಯಗಳು ಪ್ರತ್ಯೇಕ ಸಮುದಾಯಗಳು. ಅವರಿಗೆ ಅವರ ಧರ್ಮ, ಮುಸ್ಲಿಮರಿಗೆ ಅವರ ಧರ್ಮ. ಯಾರ ಮೇಲೂ ಅನ್ಯಾಯವಾಗಬಾರದು.” ಯುದ್ಧದ ಸಮಯದಲ್ಲೂ “ಮಕ್ಕಳು, ಮಹಿಳೆಯರು, ವೃದ್ಧರು, ಧಾರ್ಮಿಕ ಗುರುಗಳನ್ನು ಕೊಲ್ಲಬೇಡಿರಿ, ಪ್ರಾರ್ಥನಾ ಸ್ಥಳಗಳನ್ನು ನಾಶ ಮಾಡಬೇಡಿರಿ, ಕೃಷಿ ಭೂಮಿಗಳನ್ನು ನಾಶಮಾಡಬಾರದು” ಎಂದು ಸೈನಿಕರಿಗೆ ಆದೇಶ ನೀಡಿದ್ದರು.

ಖಲೀಫಾ ಉಮರ್ ಬಿನ್ ಖತ್ತಾಬ್(ರ) ರವರು ಬೈತುಲ್ ಮುಕದ್ದಸ್‌ನ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ನಮಾಝ್ ಸಮಯವಾದಾಗ ಅಲ್ಲಿಯ ಕ್ರೈಸ್ತ ಪಾದ್ರಿಗಳು ಖಲೀಫರೊಂದಿಗೆ ಚರ್ಚಿನಲ್ಲಿಯೇ ನಮಾಝ್ ನಿರ್ವಹಿಸಿರೆಂದು ಕೋರಿಕೊಂಡರು. ಆಗ ಉಮರ್(ರ) ರವರು ಅದನ್ನು ನಯವಾಗಿ ನಿರಾಕರಿಸಿ ಹೊರಗೆ ಬಂದು ನಮಾಝ್‌ ನೆರವೇರಿಸಿದರು. “ನಾನು ಇಲ್ಲಿ ಪ್ರಾರ್ಥಿಸಿದರೆ ಮುಂದಿನ ಪೀಳಿಗೆ ಇದನ್ನು ಮಸೀದಿಯಾಗಿತ್ತು ಎಂದು ಹೇಳಿ ಚರ್ಚಿನ ವಿಷಯದಲ್ಲಿ ವಿವಾದ ಸೃಷ್ಟಿಸಬಹುದು” ಎಂದು ಹೇಳುವ ಮೂಲಕ ಇಸ್ಲಾಮಿನ ನಿಜವಾದ ಸಹಿಷ್ಣುತೆಯ ಸಂದೇಶವನ್ನು ಜಗಕ್ಕೆ ಸಾರಿದರು. “ಧರ್ಮದಲ್ಲಿ ಬಲವಂತವಿಲ್ಲ” (2:256) ಎಂಬ ಕುರ್‌ಆನಿನ ತತ್ವವನ್ನು ಅವರು ಆಡಳಿತದಲ್ಲೂ ಬದುಕಿ ತೋರಿಸಿದರು.

ನ್ಯಾಯ ಮತ್ತು ಕರುಣೆಯ ಧರ್ಮ

ಮೂರನೆಯದಾಗಿ, ಸೀರತ್ ಧಾರ್ಮಿಕತೆಯು ಸಾಮಾಜಿಕ ನ್ಯಾಯ ಮತ್ತು ಕರುಣೆಯಲ್ಲಿ ಪ್ರಕಟವಾಗಬೇಕೆಂಬ ಉದಾತ್ತವಾದ ಸಂದೇಶವನ್ನು ನೀಡುತ್ತದೆ. ಪ್ರವಾದಿ(ಸ) ರವರು ಹೇಳಿದರು: “ನೆರೆಹೊರೆಯವನು ಹಸಿದಿರುವಾಗ ಹೊಟ್ಟೆ ತುಂಬಾ ತಿನ್ನುವವನು ಸತ್ಯ ವಿಶ್ವಾಸಿಯಾಗಲಾರನು.”

ಬರಗಾಲದ ಸಮಯದಲ್ಲಿ ಖಲೀಫಾ ಉಮರ್(ರ) ರವರು ಸ್ವತಃ ಎಣ್ಣೆ ಮತ್ತು ಬ್ರೆಡ್ ಹೊತ್ತು ಬಡವರ ಮನೆಗೆ ಹೋದರು. ಮಕ್ಕಳಿಗೆ ಬರೇ ನೀರು ಕುದಿಸುತ್ತಿದ್ದ ಮಹಿಳೆಯನ್ನು ಕಂಡು ಉಮರ್ (ರ) ರವರು ತಾನು ಅಲ್ಲಾಹನ ಬಳಿ ಇದರ ಬಗ್ಗೆ ಪ್ರಶ್ನಿಸಲ್ಪಡುವೆನೆಂದು ಅಳುತ್ತಾ ಹಿಟ್ಟಿನ ಚೀಲವನ್ನು ಹೆಗಲ ಮೇಲೆ ಹೊತ್ತು ತಂದರು. ಧರ್ಮವೆಂದರೆ ಅವರಿಗೆ ಮಸೀದಿಯ ಮಿಂಬರ್ ಮಾತ್ರವಲ್ಲ, ಅದು ಹಸಿದವರ ಹೊಟ್ಟೆಯಾಗಿತ್ತು.

ಉಮರ್ ಬಿನ್ ಅಬ್ದುಲ್ ಅಝೀಝ್(ರ) ರವರ ಆಡಳಿತದಲ್ಲಿ ನ್ಯಾಯಯುತ ಝಕಾತ್ ಎಂಬ ಬಲಿಷ್ಠವಾದ ಆರ್ಥಿಕ ವ್ಯವಸ್ಥೆಯಿಂದಾಗಿ ದಾನ (ಝಕಾತ್) ತೆಗೆದುಕೊಳ್ಳುವವರೇ ಇಲ್ಲದಂತಾಯಿತು. ಇದು ಧಾರ್ಮಿಕ ಮೌಲ್ಯ/ತತ್ವಗಳು ಆಡಳಿತಕ್ಕೆ ಬಂದಾಗ ಸಮಾಜದಲ್ಲಿ ಉಂಟಾಗುವ ಬದಲಾವಣೆಗೆ ಸಾಕ್ಷಿ.

ಸೀರತ್‌ನ ನಿಜವಾದ ಧಾರ್ಮಿಕ ಸಂದೇಶವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದರೆ ಅದು ನಮ್ಮನ್ನು ಎರಡು ರೀತಿಯ ವೈಪರೀತ್ಯಗಳಿಂದ ರಕ್ಷಿಸುತ್ತದೆ. ಒಂದು: ಧರ್ಮವನ್ನು ಕೇವಲ ಆರಾಧನಾ ಸಂಕೇತಗಳು ಹಾಗೂ ಆಚಾರಗಳಿಗೆ ಸೀಮಿತಗೊಳಿಸುವುದು. ಎರಡು: ಸಹಿಷ್ಣುತೆಯ ಹೆಸರಿನಲ್ಲಿ ಮೂಲ ತತ್ವಗಳಿಂದ ರಾಜಿ ಮಾಡಿಕೊಳ್ಳುವುದು.

ಪ್ರವಾದಿ ಮುಹಮ್ಮದ್‌(ಸ) ರವರ ಸೀರತ್ ಈ ಎರಡರ ಮಧ್ಯೆ ಸಮತೋಲನದ ನೇರ ಹಾದಿಯನ್ನು ತೋರಿಸಿಕೊಡುತ್ತದೆ. ಅಲ್ಲಾಹನನ್ನು ಪ್ರೀತಿಸಿ, ಆತನ ಸೃಷ್ಟಿಗಳೊಂದಿಗೆ ಕರುಣೆ, ದಯೆ ಹಾಗೂ ಗೌರವ ತೋರಬೇಕು, ಆದರ್ಶ ಹಾಗೂ ನಂಬಿಕೆಯಲ್ಲಿ ಬೆಟ್ಟದಷ್ಟು ದೃಢರಾಗಿರಿ, ವ್ಯವಹಾರದಲ್ಲಿ ಹತ್ತಿಯಂತೆ ಮೃದುವಾಗಿರಿ. ನಮ್ಮ ಮಾತು, ವ್ಯಾಪಾರ, ಕುಟುಂಬ, ನೆರೆಹೊರೆಯ ನಡೆ ಎಲ್ಲವೂ “ಅಲ್ಲಾಹು ನನ್ನನ್ನು ನೋಡುತ್ತಿದ್ದಾನೆ” ಎಂಬ ಪ್ರಜ್ಞೆಯಿಂದ ಕೂಡಿದ್ದರೆ, ಆಗ ನಮ್ಮ ಇಡೀ ಜೀವನವೇ ನಿರಂತರ ಇಬಾದತ್ ಆಗುತ್ತದೆ. ಇದುವೇ ಸೀರತ್‌ನ ನಿಜವಾದ ಧಾರ್ಮಿಕ ಸೌಂದರ್ಯ ಮತ್ತು ಇಂದಿನ ವಿಭಜಿತ ಜಗತ್ತಿಗೆ ಇಸ್ಲಾಮ್‌ ನೀಡುವ ಮಹಾನ್ ಸಂದೇಶ.