ಇಯ್ಯಾಕ ನ‌ಅ್‌ಬುದು ವ ಇಯ್ಯಾಕ ನಸ್ತ‌ಈನ್‌’ ಎಂಬ ಕರಾರಿನ ಕುರಿತು…

0
7576

ಮುಹಮ್ಮದ್ ಸಿದ್ದೀಕ್‌, ಜಕ್ರಿಬೆಟ್ಟು

ನಮಾಝನ್ನು ನನ್ನ ಮತ್ತು ನನ್ನ ದಾಸನ ಮಧ್ಯೆ ಸಮಾನವಾಗಿ ಹಂಚಿರುವೆನು. ಅರ್ಧ ನನಗೆ ಅರ್ಧ ನನ್ನ ದಾಸನಿಗೆಂದು ಸ್ವತಃ ಅಲ್ಲಾಹನೇ ಹೇಳಿರುವುದಾಗಿ ಪ್ರವಾದಿವರ್ಯ(ಸ)ರು ಕುದ್ಸೀ ಆದ ಹದೀಸಲ್ಲಿ ವಿಷಧೀಕರಿಸಿದ್ದಾರೆ. ಹೌದು, ನಿಜ. ನಮಾಝ್ ನಿರ್ವಹಿಸುವಾತನು ಅಲ್ಲಾಹನೊಂದಿಗೆ ಸಂಭಾಷಣೆ ನಡೆಸುತ್ತಾನೆ. ಆತನೊಂದಿಗೆ ಕರಾರು ಮತ್ತು ಪ್ರತಿಜ್ಞೆಗಳನ್ನು ಮಾಡುತ್ತಾನೆ. ಆತನಲ್ಲಿ ಪ್ರಾರ್ಥಿಸುತ್ತಾನೆ. ನೀವೇ ಪರಿಶೀಲಿಸಿ ನೋಡಿ! ಅಲ್ಲಾಹನ ನಾಮದೊಂದಿಗೆ ಆರಂಭಿಸಿ, ಅಲ್ಲಾಹನಿಗೇ ಸರ್ವ ಸ್ತುತಿಗಳನ್ನರ್ಪಿಸಿ, ಅಲ್ಲಾಹನ ಅಪಾರವಾದ ದಯೆ-ಕರುಣೆಯ ಗುಣಗಾನ ಮಾಡಿ ಮತ್ತು ಆತನ ಮಹಾನತೆಯನ್ನು ಕೊಂಡಾಡಿದ ಬಳಿಕ ದಾಸ ಅಲ್ಲಾಹನೊಂದಿಗೆ ಸ್ವತಃ ಮುಂದಿಡುವ ವಾಗ್ದಾನ, *ಇಯ್ಯಾಕ ನ‌ಅ್‌ಬುದು ವ ಇಯ್ಯಾಕ ನಸ್ತ‌ಈನ್‌* ಎಂದಾಗಿದೆ. ಅಂದರೆ “ನಾವು ನಿನ್ನನ್ನು ಮಾತ್ರ ಆರಾಧಿಸುವೆವು ಮತ್ತು ನಿನ್ನೊಂದಿಗೆ ಮಾತ್ರ ಸಹಾಯವನ್ನು ಬೇಡುವೆವು” ಎಂದು. ಈ ವಾಗ್ದಾನವನ್ನು ಆಲಿಸಿದ ಅಲ್ಲಾಹನ ಪ್ರತಿಕ್ರಿಯೆ *ಹಾಝಾ ಬಯ್‌ನೀ ವ ಬಯ್‌ನ ಅಬ್‌ದೀ*= “ಇದು ನನ್ನ ಮತ್ತು ನನ್ನ ದಾಸನ ನಡುವಿನ ಕರಾರು.” ಮತ್ತು *ವಲಿಅಬ್‌ದೀ ಮಾ ಸ‌‌ಅಲ*= “ನನ್ನ ದಾಸನಿಗೆ ಅವನು ಕೇಳಿದ್ದು ಸಿಗುತ್ತದೆ” ಎಂದಾಗಿರುತ್ತದೆ.

ಅಲ್ಲಾಹು ಅಕ್ಬರ್‌! ಸುಬುಹಾನಲ್ಲಾಹ್! ಅರ್ಥಪೂರ್ಣವಾದ ಒಪ್ಪಂದವಿದು. ಹೌದು! ಬೇಡಿಕೆ ಈಡೇರ ಬೇಕಾದರೆ, ವಾಗ್ದಾನಕ್ಕೆ ಬದ್ಧನಾಗಿ ಬದುಕಬೇಕೆಂಬ ಷರತ್ತು ಅನ್ವಯಿಸುತ್ತದೆ. ಭೂಮಿಯಲ್ಲಿ ಮನುಷ್ಯರೊಳಗೆ ಯಾವುದೇ ವ್ಯವಹಾರ ಕುದುರಿ, ಅಲ್ಲಿ ಕರಾರು ಉಲ್ಲಂಘನೆಯಾದರೆ, ವ್ಯಾಜ್ಯ ಪಂಚಾಯತಿ ಕಟ್ಟೆಗೋ ನ್ಯಾಯಾಲಯಕ್ಕೋ ತಲುಪುವುದು ಮತ್ತು ಸಾಮಾನ್ಯವಾಗಿ ಅಲ್ಲಿ ಅದಕ್ಕೆ ಅದರದ್ದೇ ಫನಿಷ್‌ಮೆಂಟ್‌, ದಂಡ, ನಷ್ಟ, ಶಿಕ್ಷೆ ಇತ್ಯಾದಿ ಸಿಗುವುದು. ಹಾಗೆಯೇ ಅಲ್ಲಾಹನ ಮುಂದೆ ಸ್ವತಃ ಕರಾರು ಮಾಡಿ ಅದನ್ನು ಉಲ್ಲಂಘಿಸುವುದು ಮತ್ತು ಅದಕ್ಕೆ ವ್ಯತಿರಿಕ್ತವಾಗಿ ನಡೆಯುವುದು ಘೋರ ಅಪರಾಧವಾಗಿದೆ. ಮಹಾ ಪಾಪವಾಗಿದೆ. ನೆನಪಿರಲಿ, ವಾಗ್ದಾನವನ್ನು ಮುಂದಿಟ್ಟದ್ದು ನಮ್ಮಲ್ಲಿ ಪ್ರತಿಯೊಬ್ಬರೂ ಮತ್ತು ನಮಾಝ್‌ಗೆ ಕೈಕಟ್ಟಿದ ಕೂಡಲೇ ಏಕಾಏಕಿ ಆತುರದಿಂದ ಮುಂದಿಟ್ಟದ್ದೂ ಅಲ್ಲ.‌ ಬದಲಾಗಿ ಅದಕ್ಕೆ ಮೊದಲು ಸಾವಧಾನದಿಂದ ಅಲ್ಲಾಹನನ್ನು ಕೊಂಡಾಡಲಾಗಿತ್ತು ಮತ್ತು ಕರಾರು ಆರಂಭಿಸಿದ್ದೇ “ಬಿಸ್ಮಿಲ್ಲಾಹ್‌‌” ಎಂಬ ಅತ್ಯುನ್ನತ ವಚನದಿಂದಾಗಿತ್ತು. ಆದ್ದರಿಂದ ನಾವು ಮುಂದಿಡುವ ಈ ಕರಾರಿಗೆ ಸ್ವತಃ ನಾವು ಬದ್ಧರಾದರೆ ಮತ್ತು ಅದನ್ನು ಉಲ್ಲಂಘಿಸದಿದ್ದಲ್ಲಿ, ಅಲ್ಲಾಹನು ಖಂಡಿತ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ. ಇಹಪರ ವಿಜಯವನ್ನು ದಯಪಾಲಿಸುತ್ತಾನೆ. ಹೌದು, ಆ ಕರಾರಿನ ಆಳ-ಅಗಲವನ್ನು ನಾವು ಕುರ್‌ಆನ್‌ ಮತ್ತು ಪ್ರವಾದಿಚರ್ಯೆಯ ಮೂಲಕ ಅರಿಯಬೇಕು. ಆ ಮೂಲಕ ಕಂಡದ್ದು-ಸಿಕ್ಕಿದ್ದುದರ ಮುಂದೆ ಮಂಡಿಯೂರದೆ, ಅಲ್ಲಾಹನನ್ನು ಮಾತ್ರ ಆರಾಧಿಸುವ, ಆತನಲ್ಲಿ ಮಾತ್ರ ಪ್ರಾರ್ಥಿಸುವ, ಆತನಿಗೆ ಮಾತ್ರ ಹರಕೆಗಳನ್ನು ಸಮರ್ಪಿಸುವ ಮತ್ತು ಬದುಕಿನ ಎಲ್ಲ ರಂಗದಲ್ಲೂ ಆತನ ನಿಯಮ-ನಿಬಂಧನೆಗಳನ್ನು ಕರ್ಮ ಜೀವನದಲ್ಲಿ ಅಳವಡಿಸಲು ನಮಗೆ ಸಾಧ್ಯವಾಗಬೇಕು. ಪೌರೋಹಿತ್ಯದ ದಾಸ್ಯ ಮತ್ತು ಗುಲಾಮಗಿರಿಯಲ್ಲಿ ನರಳುವ ಸಂಕೋಲೆಗಳನ್ನು ಕಿತ್ತೆಸೆದು, ಯೋಚಿಸಿ ಮುನ್ನಡೆಯುವವರಾಗಬೇಕು. ಒಟ್ಟಿನಲ್ಲಿ ನಮಾಝ್‌ನಲ್ಲಿ ಪ್ರಕಟಿಸುವಂತಹ ಭಯಭಕ್ತಿ, ವಿಧೇಯತೆ ಮತ್ತು ಪ್ರಭುವಿನ ಮುಂದಿಡುವ ವಾಗ್ದಾನ ನಮ್ಮ ಬದುಕಲ್ಲಿ ಪ್ರತಿಬಿಂಬಿಸುತ್ತಿದೆಯೇ ಎಂಬ ಆತ್ಮಾವಲೋಕನಕ್ಕೆ ನಾವೆಲ್ಲ ಒಗ್ಗಬೇಕು. ಪ್ರತಿಯೊಂದು ನಮಾಝ್‌ನಲ್ಲೂ ವಾಗ್ದಾನವನ್ನು ಆವರ್ತಿಸುವಾಗ, ಅದರ ಉಲ್ಲಂಘನೆಯಿಂದ ಅನುಭವಿಸಲೇ ಬೇಕಾಗುವ ಶಾಶ್ವತ ನರಕಯಾತನೆಯ ಭಯ-ಕಳವಳ ಸದಾ ನಮ್ಮಲ್ಲಿರಬೇಕು. ಅಲ್ಲಾಹನು ಎಲ್ಲರಿಗೂ ಹಿದಾಯತ್‌ ನೀಡಲಿ.