ಸರಕಾರಿ ಬಸ್ ಪುನರಾರಂಭಿಸಿ: ಡಿವೈ ಎಫ್ ಐಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ

0
180

ಸನ್ಮಾರ್ಗ ವಾರ್ತೆ

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸ್ಥಗಿತಗೊಂಡಿರುವ KSRTC ಸರಕಾರಿ ನಗರ ಸಾರಿಗೆ ನರ್ಮ್ ಬಸ್ಸ್ ತನ್ನ ಸಂಚಾರ ಸೇವೆಯನ್ನು ಈ ಕೂಡಲೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮತ್ತು ಜನರ ಬೇಡಿಕೆಯ ಅನುಗುಣವಾಗಿ ಮಂಜೂರಾಗದೆ ಬಾಕಿ ಇರುವ ಪ್ರದೇಶಗಳಿಗೂ ಶೀಘ್ರವೇ ಬಸ್ ಸಂಚಾರ ಸೇವೆ ಒದಗಿಸಲು ಆಗ್ರಹಿಸಿ ಡಿವೈಎಫ್ಐ ದಕ್ಷಿಣ ಜಿಲ್ಲಾ ಸಮಿತಿಯು ಇಂದು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದೆ.

ಈ ನಿಯೋಗದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಮಂಗಳೂರು ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ, ಉಳ್ಳಾಲ ವಲಯ ಅಧ್ಯಕ್ಷರಾದ ರಫೀಕ್ ಹರೇಕಳ, ಜಿಲ್ಲಾ ಮುಖಂಡರಾದ ರಝಾಕ್ ಮೊಂಟೆಪದವು, ಉಸ್ಮಾನ್ ಕಣ್ಣೂರು, ಮುಸ್ತಫಾ ಕಲ್ಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

ನರ್ಮ್ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 35 ರಷ್ಟು ಸರಕಾರಿ KSRTC ನಗರ ಸಾರಿಗೆ ಬಸ್ಸುಗಳು ಸಂಚಾರ ಸೇವೆ ಒದಗಿಸಲು ಮಂಜೂರಾಗಿದ್ದವು. ಆದರೆ ಮಂಜೂರಾದ 35 ಬಸ್ಸುಗಳಲ್ಲಿ 18 ಬಸ್ಸು ನಗರದ ಸ್ಟೇಟ್ ಬ್ಯಾಂಕ್ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಬಾಕಿ ಉಳಿದ ಬಸ್ಸು ನಗರದ ಹೊರಭಾಗದಿಂದ ಸೇವೆ ಸಲ್ಲಿಸಲು RTO ಪ್ರಾಧಿಕಾರ ಸಭೆ ಒಪ್ಪಿಗೆ‌ ನೀಡಿದ್ದವು. ಆ ಸಂದರ್ಭ ಖಾಸಗೀ ಬಸ್ ಮಾಲಕರು ಹೈಕೋರ್ಟ್ ಮೆಟ್ಟಿಲೇರಿ ತಡೆ ಹೇರಿದರಾದರೂ ಮುಂದೆ ನರ್ಮ್ ಸಾರಿಗೆ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ದೂರನ್ನು ಜಿಲ್ಲಾಧಿಕಾರಿ ಹಂತದಲ್ಲಿ ಇತ್ಯರ್ಥ ಪಡಿಸಲು ನಿರ್ದೇಶನ ನೀಡಿತ್ತು. ಒಟ್ಟಾರೆ ಖಾಸಗೀ ಬಸ್ಸು ಮಾಲಕರ ವಿರೋಧದ ನಡುವೆಯೂ ಆಗಿನ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರ ಜನಪರ ಆಡಳಿತ ನಡೆಯಿಂದ ಸರಕಾರಿ ನರ್ಮ್ ನಗರ ಸಾರಿಗೆ‌ ಬಸ್ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಅದರ ಜೊತೆ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಂತಹ ಗ್ರಾಮೀಣ ಭಾಗಗಳಿಗೂ ಸರಕಾರಿ ಗ್ರಾಮಾಂತರ ಸಾರಿಗೆ ಬಸ್ಸು ನಿರಂತರ ಸೇವೆಯನ್ನು ನೀಡಿದೆ.

ಆದರೆ ಇತ್ತೀಚೆಗೆ ಕೊರೋನಾ ಕಾಲದಲ್ಲಿ ಸ್ಥಗಿತಗೊಂಡಿರುವ ಸರಕಾರಿ ಬಸ್ ಸಂಚಾರ ಸೇವೆಯು ಮತ್ತೆ ಹಿಂದಿನ ರೀತಿಯಲ್ಲಿ ನೀಡಲೇ ಇಲ್ಲ. ಸರಕಾರಿ ನರ್ಮ್ ನಗರ ಸಾರಿಗೆ ಬಸ್ಸು ಮತ್ತು ಗ್ರಾಮೀಣ ಭಾಗದ ಸರಕಾರಿ ಬಸ್ ಸಂಚಾರ ಸೇವೆಯಲ್ಲಿ ಅರ್ಧಕ್ಕರ್ಧ ವ್ಯತ್ಯಯ ಉಂಟಾಗಿದೆ. ಜಿಲ್ಲೆಯಲ್ಲಿ ಖಾಸಗೀ ಬಸ್ಸುಗಳ ಭರಾಟೆಯ ನಡುವೆ ಸರಕಾರಿ ಬಸ್ಸುಗಳು ಮೂಲೆಗುಂಪಾಗ ತೊಡಗಿದೆ. ಇದರಿಂದಾಗಿ ಬಹುತೇಕ ಕಡಿಮೆ ಆದಾಯಕ್ಕೆ ದುಡಿಯುವ ಜನ ಸಾಮಾನ್ಯರು ಸಮಸ್ಯೆಯನ್ನು ಅನುಭವಿಸುವಂತಾಗಿದೆ.

ಜೂನ್ 11 ರಿಂದ ಸರಕಾರ ಘೋಷಿಸಿದ KSRTC ಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಯು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರಿಗೂ ಸಿಗುವಂತಾಗಬೇಕು. ಸದ್ಯ ಜಿಲ್ಲೆಯಲ್ಲಿ ಬೀಡಿ ಉದ್ದಿಮೆ ನೆಲಕ್ಕಚ್ಚಿದ ನಂತರ ಈಗ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಸಣ್ಣ ಪುಟ್ಟ ಅಂಗಡಿ ಮುಗ್ಗಟ್ಟುಗಳಲ್ಲಿ, ಬಟ್ಟೆಯಂಗಡಿಗಳಲ್ಲಿ, ಆಸ್ಪತ್ರೆ, ಕಾಲೇಜುಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದು ಅಂತ ಮಹಿಳೆಯರಿಗೆ ಸರಕಾರದ ಈ ಯೋಜನೆಯು ಅನುಕೂಲಕರವಾಗಲಿದೆ.

ಆದ್ದರಿಂದ ದ.ಕ ಜಿಲ್ಲಾದ್ಯಂತ ಸ್ಥಗಿತಗೊಂಡಿರುವ KSRTC ಸರಕಾರಿ ನಗರ ಸಾರಿಗೆ ನರ್ಮ್ ಬಸ್ಸ್ ತನ್ನ ಸಂಚಾರ ಸೇವೆಯನ್ನು ಈ ಕೂಡಲೇ ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಮತ್ತು ಜನರ ಬೇಡಿಕೆಯ ಅನುಗುಣವಾಗಿ ಮಂಜೂರಾಗದೆ ಬಾಕಿ ಇರುವ ಪ್ರದೇಶಗಳಿಗೂ ಶೀಘ್ರವೇ ಬಸ್ ಸಂಚಾರ ಸೇವೆ ಒದಗಿಸಲು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.