ನಾನು ಮೂರು ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ- ಕ್ರಿಕೆಟರ್ ಮುಹಮ್ಮದ್ ಶಮಿ

0
789

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮೇ.3: ತನ್ನ ಜೀವನದಲ್ಲಿ ಆತ್ಮಹತ್ಯೆ ಗೈಯ್ಯಬೇಕೆಂದು ಮೂರು ಬಾರಿ ನಿರ್ಧರಿಸಿದ್ದೆ… ತನ್ನ ಜೀವನದಲ್ಲಿ ಕವಿದಿದ್ದ ಅಂಧಕಾರದ ದಿನಗಳ ಕುರಿತು ಭಾರತೀಯ ಕ್ರಿಕೆಟಿಗ ಮುಹಮ್ಮದ್ ಶಮಿ ಸಹ ಆಟಗಾರ ರೋಹಿತ್ ಶರ್ಮರೊಂದಿಗೆ ನಡೆಸಿದ ಇನ್‌ಸ್ಟಾಗ್ರಾಂ ಚ್ಯಾಟ್ ಶೋನಲ್ಲಿ ತನ್ನ ವ್ಯಥೆಯ ಕಥೆಯ ಮೇಲೆ ಬೆಳಕು ಹಂಚಿಕೊಂಡಿದ್ದಾರೆ.

2015ರಲ್ಲಿ ವಿಶ್ವಕಪ್‍ನಿಂದ ಗಾಯಗೊಂಡು ತಂಡದಿಂದ ಹೊರಬಿದ್ದೆ. ಇದು ತುಂಬಾ ನೋವು ತುಂಬಿದ ದಿನಗಳಾಗಿದ್ದವು. ತುಂಬ ಸಂಘರ್ಷದ ಕಾಲಘಟ್ಟ ಕೂಡ ಆಗಿತ್ತು. ಪುನಃ ಆಟ ಆರಂಭಿಸಿದಾಗ ಕೆಲವು ವೈಯಕ್ತಿಕ ಸಮಸ್ಯೆಗಳಲ್ಲಿ ಹಾದು ಹೋಗಬೇಕಾಯಿತು. ತನ್ನ ಕುಟುಂಬದ ಬೆಂಬಲ ಇಲ್ಲದಿದ್ದರೆ ನನ್ನ ಕೆರಿಯರ್ ಕಳಕೊಳ್ಳುತ್ತಿದ್ದೆ. ಮೂರು ಬಾರಿ ನಾನು ಆತ್ಮಹತ್ಯೆಯ ಕುರಿತು ಚಿಂತಿಸಿದ್ದೇನೆ ಎಂದು ಶಮಿ ಹೇಳಿದರು.

ನಮ್ಮ ಮನೆ 24ನೆ ಮಹಡಿಯಲ್ಲಿತ್ತು. ಕ್ರಿಕೆಟ್ ಅಂದು ನನ್ನ ಯೋಚನೆಯಲ್ಲೇ ಇರಲಿಲ್ಲ. ಮಾನಸಿಕ ಸಂಕಷ್ಟದ ಕಾರಣದಿಂದ ನಾನು ಬಾಲ್ಕನಿಯಿಂದ ಹೊರಗೆ ಹಾರಿ ಬಿಟ್ಟರೇ ಎಂದು ಕುಟುಂಬ ಹೆದರಿತು. ಮಾನಸಿಕವಾಗಿ ಕುಸಿದು ಹೋದ ಪರಿಸ್ಥಿತಿಯಲ್ಲಿ ನನ್ನ ಎರಡು ಮೂರು ಗೆಳೆಯರು ಸದಾ ನನ್ನ ಜೊತೆ ಇರುತ್ತಿದ್ದರು.

ಕುಟುಂಬ ಜೊತೆ ಇದ್ದರೆ ಎಂತಹ ಪರಿಸ್ಥಿತಿಯನ್ನೂ ನಾವು ಎದುರಿಸಿ ನಿಲ್ಲಬಹುದು. ಅಂದು ಅವರು ನನ್ನ ಜೊತೆ ಇಲ್ಲದಿರುತ್ತಿದ್ದರೆ ನಾನು ಆ ಮಹಾಪಾಪ ಎಸಗುತ್ತಿದೆ ಎಂದು ಶಮಿ ದುಃಖ ತೋಡಿಕೊಂಡರು. ನಂತರ ಎಲ್ಲವನ್ನೂ ಮರೆತು ಕ್ರಿಕೆಟ್‍ನ ಬಗ್ಗೆ ಗಮನ ಕೇಂದ್ರೀಕರಿಸಲು ನನ್ನ ತಂದೆ-ತಾಯಿ ನನಗೆ ಹೇಳಿದರು. ಡೆಹ್ರಾಡೂನ್‍ನ ಅಕಾಡೆಮಿಯಲ್ಲಿ ತರಬೇತಿಯನ್ನು ಪುನರಾರಂಭಿಸಿದೆ. ತುಂಬ ಬೆವರು ಸುರಿಸಿದೆ ಎಂದು ಶಮಿ ಹೇಳಿದರು.

ಹದಿನೆಂಟು ತಿಂಗಳ ಬಳಿಕ ಗಾಯದಿಂದ ಸಂಪೂರ್ಣ ಗುಣಮುಖನಾಗಿದ್ದ ಶಮಿ ಪುನಃ ಕ್ರಿಕೆಟ್‍ಗೆ ಮರಳಿದಾಗ 2018ರಲ್ಲಿ ಗೃಹ ಹಿಂಸೆ ಆರೋಪಿಸಿ ಪತ್ನಿ ಹಸಿನ್ ಜಹಾನ್ ಶಮಿಯ ವಿರುದ್ಧ ಕೇಸು ದಾಖಲಿಸಿದ್ದರು.