ಸಚ್ ಕಾ ಬೋಲ್ ಬಾಲಾ ಜ್ಹೂಟೇ ಕಾ ಮೂ ಕಾಲಾ

0
1201

ಮೌಲಾನಾ ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ

ಐದು ರಾಜ್ಯಗಳ ಫಲಿತಾಂಶಗಳನ್ನು ನೋಡಿ ಒಂದು ಮಾತಂತು ನೆನಪಾಗುತ್ತಿದೆ. ಸಚ್ ಕಾ ಬೋಲ್ ಬಾಲಾ ಜ್ಹೂಟೇ ಕಾ ಮೂ ಕಾಲಾ (ಸತ್ಯ ಮೇಲು ಮಿಥ್ಯದ ಮುಖ ಕಪ್ಪು ) ತೆಲಂಗಾಣದ ಫಲಿತಾಂಶ ಹೊರ ಬರುವುದಕ್ಕಿಂತ 24 ಘಂಟೆ ಮುಂಚಿತವಾಗಿಯೇ ಬಿ.ಜೆ.ಪಿ.ಯ ಅಧ್ಯಕ್ಷರಾದ ಅಮಿತ್ ಶಾ ರವರು, ಒಂದು ವೇಳೆ ಉವೈಸಿಯವರನ್ನು ಕೈ ಬಿಟ್ಟು ನಮ್ಮಿಂದ ಬೆಂಬಲವನ್ನು ಕೇಳಿದಲ್ಲಿ ನಾವು ಟಿ.ಆರ್. ಎಸ್. ನ್ನು ಬೆಂಬಲಿಸಲಿಕ್ಕೆ ತಯಾರಿದ್ದೇವೆ. ಮಾತ್ರವಲ್ಲ ಬಿ.ಜೆ.ಪಿ. ಯ ಸಹಾಯದ ವಿನಃ ಯಾವ ಕಾರಣಕ್ಕೂ ಯಾವುದೇ ರಾಜಜಕೀಯ ಪಾರ್ಟಿ ತೆಲಂಗಾಣದಲ್ಲಿ ಸರಕಾರವನ್ನು ರಚಿಸಲಿಕ್ಕೆ ಸಾಧ್ಯವೇ ಇಲ್ಲ ಎಂದು ತುಂಬಾ ಕಠೋರ ಶಬ್ದಗಳಿಂದ ಹೇಳಿದ್ದರು.
ಫಲಿತಾಂಶ ಹೊರ ಬಿದ್ದಂತೆ ಅಮಿತ್ ಶಾ ರವರ ಹೇಳಿಕೆ ಮಂಗಮಾಯವಾಗಿ ಹೋಯಿತು. ಒಟ್ಟು 119 ಸೀಟುಗಳಲ್ಲಿ ಬರೇ ಒಂದೇ ಒಂದು ಸೀಟನ್ನು ಪಡೆಯುವಲ್ಲಿ ಯಶಸ್ವಿಯಾದರು. ಇದು ಅಹಂಕಾರಕ್ಕೆ ಸಿಕ್ಕ ಪ್ರತಿಫಲವಾಗಿದೆ. ಈ ದರ್ಪದಿಂದಾಗಿ ಉಳಿದ ನಾಲ್ಕು ರಾಜ್ಯಗಳಲ್ಲಿಯೂ ಅತ್ಯಂತ ಹೀನಾಯ ಸೋಲನ್ನು ಕಾಣಬೇಕಾಯಿತು. ಮಧ್ಯ ಪ್ರದೇಶವಂತೂ ಇವರ ಪಾಲಿಗೆ ಬಂಗಾರದ ಕೋಳಿಯಂತಿತ್ತು. ಕಳೆದ 15 ವರ್ಷಗಳಿಂದ ಅಲ್ಲಿ ಬಿ.ಜೆ.ಪಿ.ಯು ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿತ್ತು. ಜನಸಾಮಾನ್ಯರಿಂದ ಆಯ್ಕೆಯಾಗಿದ್ದ ಮುಖ್ಯಮಂತ್ರಿಯಾದ ಶಿವರಾಜ ಚೌಹಾಣ್ ರವರು ತನ್ನನ್ನು ಸರದಾರನೆಂದು ಬೀಗಿಕೊಳ್ಳುತಿದ್ದರು.
ವ್ಯಾಪಂ ಹಗರಣವಂತೂ ಈಗಾಗಲೇ ಜಗಜ್ಜಾಹೀರಾಗಿದೆ. ಇನ್ನೆಷ್ಟು ಹಗರಣಗಳು ನಡೆದಿವೆಯೋ ಹೇಳತೀರದು. ಜನಸಾಮಾನ್ಯರಂತೂ ಸರಕಾರದ ನೀತಿಗಳಿಂದಾಗಿ ಸೋತು ಸುಣ್ಣವಾಗಿದ್ದರು. ಮೊದ ಮೊದಲು ಜನಸಾಮಾನ್ಯರು ತೀರಾ ಹತ್ತಿರದಿಂದ ತನ್ನ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದರು. ಕೊನೆಗೆ ನಿರಾಸೆಯಾಗಿ ಕೊನೆಯ ಅಸ್ತ್ರವೆಂಬಂತೆ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಿದ್ದಾರೆ. ಒಂದು ಹೆಜ್ಜೆ ಮುಂದೆ ಸಾಗಿ 2019 ರ ಮಹಾ ಚುನಾವಣೆಯಲ್ಲೂ ನಾವು ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂಬ ಸಣ್ಣದೊಂದು ಭಯವನ್ನು ಹುಟ್ಟಿಸುವಲ್ಲಿ ಸಫಲರಾಗಿದ್ದಾರೆ.
ಕೇಂದ್ರದಲ್ಲಿ ಅಧಿಕಾರವನ್ನು ನೀಡಲು ಕಾರಣ, ಬರೇ ವಿಕಾಸ, ಉದ್ಯೋಗ, ಆರೋಗ್ಯ, ರೈತರ ಹಿತವಾಗಿತ್ತು. ಕೊನೆಗೆ ರೈತರು ದಿನನಿತ್ಯ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ನೀರಿನ ಬರದಿಂದಾಗಿ ಗುಳೆ ಹೋಗುವುದು ಸಾಮಾನ್ಯವಾಗಿದೆ. ನೋಟ್ ಅಮಾನ್ಯೀಕರಣ, ಜಿ.ಎಸ್.ಟಿ, ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯಿಂದಾಗಿ ಜನಸಾಮಾನ್ಯನ ಜೀವನ ದುರ್ಬರವಾಗಿದೆ. ಇಂದು ಈ ಅವ್ಯವಸ್ಥೆಯನ್ನು ಚುನಾವಣೆಯ ಫಲಿತಾಂಶದ ರೂಪದಲ್ಲಿ ಇದನ್ನು ನಾವು ಕಾಣುತ್ತಿದ್ದೇವೆ. ಮಧ್ಯ ಪ್ರದೇಶದಲ್ಲಂತೂ ಜನರ ಬಿ.ಜೆ.ಪಿ. ಪಕ್ಷದ ತಿರಸ್ಕಾರ ಎದ್ದು ಕಾಣುತ್ತಿದೆ.
ಛತ್ತೀಸ್ ಗಢ್ ದಲ್ಲಂತೂ ರಮಣ್ ಸಿಂಗ್ ಯಾವ ಕಾರಣಕ್ಕೂ ಸೋಲಲಿಕ್ಕೆ ಸಾಧ್ಯವೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಯಾರೂ ಮಾಡದಂತಹ ಅಭಿವೃಧ್ಧಿ ಕಾರ್ಯಗಳನ್ನು ಅವರು ಮಾಡಿದ್ದಾರೆ ಎಂದು ಸುಳ್ಳು ಭಾವನೆಗಳನ್ನು ಹರಡಿಸಲಾಗಿತ್ತು. ಆ ರಾಜ್ಯದ ಜನರು ಇವರನ್ನು ಯಾವ ಕಾರಣಕ್ಕೂ ಸೋಲಿಸಕ್ಕೆ ಸಾಧ್ಯವೇ ಇಲ್ಲ ಎಂದು ಜನರು ಹೇಳಿಕೊಳ್ಳುತ್ತಿದ್ದರು. ಆ ಮಹಾ ಕಾರ್ಯಗಳು ಏನಾಗಿದ್ದವು ? ಇಂದು ಚುನಾವಣೆಯ ಫಲಿತಾಂಶವು ಅತ್ಯಂತ ಸ್ಜಷ್ಟವಾಗಿ ಇದರ ಉತ್ತರವನ್ನು ತೋರಿಸುತ್ತಿವೆ. ಇವರ ಹೆಸರೂ ಭ್ರಷ್ಟಾಚಾರದಲ್ಲಿ ತಳುಕುಹಾಕಿಕೊಂಡಿರುವುದು ಅತ್ಯಂತ ಸ್ಪಷ್ಟವಾಗಿದೆ. ಅವರು ಮಾಡಿದಂತಹ ಕಾರ್ಯಗಳು ಸ್ವತಃ ತನ್ನ ಅಭಿವೃಧ್ಧಿ ಹಾಗೂ ತನ್ನ ಪಕ್ಷದ ಅಭಿವೃಧ್ದಿಯಾಗಿತ್ತು ಎಂದು ಆ ರಾಜ್ಯದ ಜನತೆ ಪರಸ್ಪರ ಹೇಳಿಕೊಳ್ಳುತ್ತಿದ್ದರು.
ನಿಜ ಹೇಳಬೇಕೆಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಬಿ.ಜೆ.ಪಿ, ಪಕ್ಷ ಮಾಡಿದಂತಹ ಅಭಿವೃಧ್ದಿ ಯಾವ ರೂಪದ್ದಾಗಿದೆ ಎಂದು ಜನಸಾಮಾನ್ಯನು ತೀರ್ಮಾನಿಸಿ ಆಗಿದೆ. ಕಳೆದ ನಾಲ್ಕುವರೆ ವರ್ಷಗಳು ಬರೇ ಪೊಳ್ಳು ಭರವಸೆಗಳಿಂದ ತುಂಬಿ ತುಳುಕುತ್ತಿವೆ. ವಿಷ ಕಾರುವಂತಹ ಭಾಷಣಗಳಿಂದಾಗಿ ಜನರ ಬದುಕು ಮೂರಾ ಬಟ್ಟೆಯಾಗಿ ಹೋಗಿದೆ. ದೇಶದಾದ್ಯಂತ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಾಣವಾಗಿದೆ. ನಿರಾಸೆ ಎಲ್ಲೆಲ್ಲೂ ಕಂಡು ಬರುತ್ತಿದೆ. ಈ ನಿರಾಶಾ ಭಾವನೆಯ ಉತ್ತರವನ್ನು ಇಂದು ಜನಸಾಮಾನ್ಯರು ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ರೂಪದಲ್ಲಿ ನೀಡಿರುವುದು ಎದ್ದು ಕಾಣುತ್ತಿದೆ.
ಇನ್ನು 2019 ನ್ನು ಜನರು ಎದುರು ನೋಡುತ್ತಿದ್ದಾರೆ. ಬಿ.ಜೆ.ಪಿ. ಯದ್ದು ಇನ್ನು ಸಾವು ಬದುಕಿನ ಪ್ರಶ್ನೆಯಾಗಿದೆ. ಆದ್ದರಿಂದ ಅಭಿವೃಧ್ದಿಯನ್ನು ತೋರಿಸಿ ಚುನಾವಣೆಯನ್ನು ಎದುರಿಸುವ ಶಕ್ತಿಯಂತೂ ಕಮರಿ ಹೋಗಿದೆ. ಇನ್ನು ಬಾಕಿ ಉಳಿದಿರುವ ದಾರಿ ಒಂದೇ ಆಗಿದೆ. ಅದು ಕೋಮು ಪ್ರಚೋದನೆಗೆ ದೇಶವನ್ನು ತತ್ತರಿಸುವ ಹಾಗೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವುದು. ಈ ಸಂಧರ್ಭದಲ್ಲಿ ಜನರು ಪ್ರಚೋದನೆಗೆ ಯಾವ ಕಾರಣಕ್ಕೂ ಕಿವಿಗೊಡಬಾರದು.
ಇನ್ನು ಕಾಂಗ್ರೆಸ್ ನ ಬಗ್ಗೆ ಹೇಳುವುದಾದರೆ, ಇದರ ಗೆಲುವು ಮೃದು ಹಿಂದುತ್ವದ ಪಾಲಿಸಿಯಿಂದತೂ ಖಂಡಿತ ಅಲ್ಲ. ಬದಲಾಗಿ ಜನಸಾಮಾನ್ಯರು ಒಂದು ರಾಷ್ಟ್ರೀಯ ಪಕ್ಷದಿಂದ ಬೇಸತ್ತು, ರಾಜಕೀಯ ಹಿಂದುತ್ವವನ್ನು ಧಿಕ್ಕರಿಸಿ ಪರ್ಯಾಯವಾಗಿ ಕಾಂಗ್ರೆಸನ್ನು ಆಯ್ಕೆ ಮಾಡಿದ್ದಾರೆ. ಈ ಫಲಿತಾಂಶದಲ್ಲಿ ಹಿಂದು ಭಾಂದವರು ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂಬುವುದನ್ನು ಯಾವ ಕಾರಣಕ್ಕೂ ಮರೆಯಲಿಕ್ಕೆ ಸಾಧ್ಯವಿಲ್ಲ.
ಆದ್ದರಿಂದ ಈ ಪಂಚ ರಾಜ್ಯಗಳಲ್ಲಿಯೂ, ಹಾಗೂ ದೇಶದಾದ್ಯಂತ ಶಾಂತಿಯ ವಾತಾವರಣವನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುವ ಬಹು ದೊಡ್ಡ ಜವಾಬ್ದಾರಿಯಿದೆ. ನ್ಯಾಯ ವಂಚಿತರಿಗೆ ನ್ಯಾಯವನ್ನು ಒದಗಿಸಬೇಕಾಗಿದೆ. ದೇಶದ ಬೆನ್ನುಲುಬಾದ ರೈತರ ಹಿತರಕ್ಷಣೆಗೆ ಕಟಿಬಧ್ದರಾಗಬೇಕಾಗಿದೆ. ದಿನಬಳಕೆಯ ವಸ್ತುಗಳು ಕೈಗೆಟುಕುವ ದರದಲ್ಲಿ ಸಿಗುವ ಹಾಗೆ ಮಾಡಬೇಕಾಗಿದೆ. ಉದ್ಯೋಗವಿಲ್ಲದೇ ತತ್ತರಿಸುವ ಜನತೆಗೆ ಉದ್ಯೋಗವನ್ನು ಸೃಷ್ಟಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ಮುಂತಾದ ಕೆಲಸಗಳು ಪಂಚರಾಜ್ಯಗಳಲ್ಲಿ ಮುನ್ನೆಲೆಗೆ ತರುವ ಪ್ರಯತ್ನವನ್ನು ಮಾಡಿದಲ್ಲಿ ಮುಂಬರುವ ಮಹಾ ಚುನಾವಣೆಯಲ್ಲೂ ಜನಸಾಮಾನ್ಯನು ತಮ್ಮ ಕೈಗಳನ್ನು ಬಲಪಡಿಸುವಲ್ಲಿ ಎರಡು ಮಾತಿಲ್ಲ.