ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ರಾಜಸ್ತಾನ್ ವಿಧಾನಸಭೆಯಲ್ಲಿ ಪ್ರಸ್ತಾವ: ಸಚಿನ್ ಪೈಲಟ್

0
1077

ಸನ್ಮಾರ್ಗ ವಾರ್ತೆ

ಜೈಪುರ, ಜ. 24: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ರಾಜಸ್ತಾನದ ವಿಧಾನಸಭೆ ಪ್ರಸ್ತಾವ ತರಲಿದೆ ಎಂದು ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಹೇಳಿದರು. ಇಂದು ಶುಕ್ರವಾರ ರಾಜಸ್ತಾನದ ವಿಧಾನಸಭಾ ಅಧಿವೇಶನ ಆರಂಭವಾಗಲಿದೆ. ಕಾನೂನು ವಿರುದ್ಧ ದೇಶಾದ್ಯಂತ ನಡೆಯುವ ಪ್ರತಿಭಟನೆಗಳನ್ನು ಪರಿಗಣಿಸಲು ಕೇಂದ್ರ ಸರಕಾರ ಸಜ್ಜಾಗಬೇಕೆಂದು ಅವರು ಹೇಳಿದರು. ಕಾನೂನು ಮರುಪರಿಶೀಲನೆಗೆ ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇವೆ. ವಿರೋಧಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಹಾಗೆ ಮಾಡಿದವರ ಮೇಲೆ ದಾಳಿ ಮಾಡಿ ದೇಶದ್ರೋಹಿ ಎಂದು ಕರೆಯುತ್ತಿದ್ದಾರೆ. ಚರ್ಚೆ ಇಲ್ಲವಾದರೆ ಪ್ರಜಾಪ್ರಭುತ್ವ ದುರ್ಬಲವಾಗಲಿದೆ ಎಂದು ಸಚಿನ್ ಹೇಳಿದರು.

ಈ ತಿಂಗಳು 28ರಂದು ನಡೆಯುವ ರಾಹುಲ್ ಗಾಂಧಿಯ ರ್ಯಾಲಿಯ ಪೂರ್ವಭಾವಿ ಸಿದ್ಧತೆಗಳ ಅವಲೋಕನ ನಡೆಸಲು ಸಚಿನ್ ಪೈಲೆಟ್ ಬಂದಿದ್ದಾಗ ಅವರು ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. ಶಾಂತ ರೀತಿಯಲ್ಲಿ ಪ್ರತಿಭಟಿಸುವ ಹಕ್ಕು ಜನರಿಗೆ ಇದೆ. ಆದರೆ ಇದರ ನೆಪದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.