ತೊಕ್ಕೊಟ್ಟು: ಸದ್ಭಾವನಾ ವೇದಿಕೆ ಪೊಸ ಕುರಲ್ ನಿಂದ ಕ್ರಿಸ್ಮಸ್ ಸೌಹಾರ್ದ ಕೂಟ

0
442

ಸನ್ಮಾರ್ಗ ವಾರ್ತೆ

ಮಂಗಳೂರು: ಸದ್ಭಾವನಾ ವೇದಿಕೆ ಉಳ್ಳಾಲ ಮತ್ತು ಪೊಸಕುರಲ್ ಬಳಗದ ಆಶ್ರಯದಲ್ಲಿ ತೊಕ್ಕೊಟ್ಟಿನ ಹೊಟೇಲ್ ಶ್ರೀರತ್ನಂ ನ ಸಭಾಂಗಣದಲ್ಲಿ ನಡೆಯಿತು.
ಕ್ರಿಸ್ ಮಸ್ ಎಲ್ಲರ ಸಂಭ್ರಮದ ಹಬ್ಬ. ಏಸು ಕ್ರಿಸ್ತರು ಸಮಾಜದಲ್ಲಿ ತಮ್ಮ ವಿಚಾರಧಾರೆಗಳನ್ನು ಬಿತ್ತುವ ಮೂಲಕ ಬದಲಾವಣೆ ತಂದರು. ಅವರ ಉದಾತ್ತ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಸೈಂಟ್ ಸೆಬಾಸ್ಟಿಯನ್ ಧರ್ಮ ಕೇಂದ್ರದ
ಪ್ರಧಾನ ಧರ್ಮಗುರು ಫಾದರ್ ಸಿಪ್ರಿಯನ್ ಪಿಂಟೋ ತಮ್ಮ ಸಂದೇಶದಲ್ಲಿ ತಿಳಿಸಿದರು.

ಪೊಸಕುರಲ್ ಬಳಗದ ಸಂಚಾಲಕ, ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ
ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತು ಸದ್ಭಾವನಾ ವೇದಿಕೆಯ ಸದಸ್ಯ
ಮಂಗಳೂರು ಪ್ರದೇಶ ದಕ್ಷಿಣ ವಲಯ ಕ್ಯಾಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿ’ಸೋಜ ಇವರನ್ನು ಈ
ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಕೊರೊನ ಜಗತ್ತಿನಿಂದ ಇವತ್ತಲ್ಲ ನಾಳೆ ಹೋಗಬಹುದು. ಅದಕ್ಕೊಂದು ಆಯುಷ್ಯದ ಕಾಲಮಿತಿ
ಇದೆ. ಆದರೆ ಸೇಡು, ದ್ವೇಷದ ವೈರಸ್ಸಿಗೆ ಕೊನೆ ಇಲ್ಲ. ನಾವು ಕ್ಷಮೆಯ ಗುಣವನ್ನು ಕಲಿಯಬೇಕು,
ಸಾರಬೇಕು ಇದುವೆ ಕ್ರಿಸ್ಮಸ್ ಹಬ್ಬದ ಪ್ರಮುಖ ಸಂದೇಶ ಎಂದು ಜೆಪ್ಪು ಸೈಂಟ್ ಆ್ಯಂಟನಿ ಆಶ್ರಮದ
ನಿರ್ದೇಶಕರಾದ ಫಾದರ್ ಓನಿಲ್ ಡಿ’ಸೋಜ ಸೌಹಾರ್ದ ಸಂದೇಶ ನೀಡಿದರು.

ಕೊರೊನದಿಂದಾಗಿ ನಾವು ಅಪನಂಬಿಕೆ ಒಳಗಾಗಿದ್ದೆವು. ಆದರೆ ಈಗ ಕೊರೋನಾ ನಮಗೆ ಅರ್ಥ ಆಗಿದೆ. ಅಪನಂಬಿಕೆ ದೂರವಾಗಿದೆ. ಹಾಗೆಯೆ ನಾವು ಪರಸ್ಪರರನ್ನು ತಿಳಿದುಕೊಂಡಾಗ, ಆಚರಣೆಗಳನ್ನು
ಅರ್ಥೈಸಿಕೊಂಡಾಗ ನಮ್ಮಲ್ಲಿರುವ ಅಪನಂಬಿಕೆಗಳು ದೂರವಾಗಲು ಸಾಧ್ಯ ಎಂದು ಸನ್ಮಾರ್ಗ
ವಾರಪತ್ರಿಕೆಯ ಸಂಪಾದಕರಾದ ಅಬ್ದುಲ್ ಖಾದರ್ ಕುಕ್ಕಿಲ ಹೇಳಿದರು.

ಎಲ್ಲಾ ಧರ್ಮದ ಸಾರಗಳು ಒಂದೇ, ದಿವ್ಯ ಸಂದೇಶಗಳು ಒಂದೇ. ಕಟ್ಟಿಗೆಯಿಂದ ಉರಿಯುವ ಬೆಂಕಿಯ ಆಕಾರ ಬೇರೆ ಬೇರೆ ಆಗಿರಬಹುದು. ಆದರೆ ಬೆಂಕಿ ಒಂದೇ, ಸದ್ಭಾವನೆ ಇದ್ದಲ್ಲಿ ಸಾಮರಸ್ಯಕ್ಕೆ ಕೊರತೆ ಖಂಡಿತಾ ಬಾರದು ಎಂದು ಯಕ್ಷಗಾನ ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಹೇಳಿದರು.

ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿ ಕ್ರಿಸ್ಮಸ್ ಕೇಕ್ ಕತ್ತರಿಸಿ, ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದೇಶ ನೀಡಿದರು. ಸದ್ಭಾವನಾ ವೇದಿಕೆಯ ಗೌರವಾಧ್ಯಕ್ಷ ಸದಾನಂದ ಬಂಗೇರ, ಜಿಲ್ಲಾ ಧಾರ್ಮಿಕ ಪರಿಷತ್ ನ ಮಾಜಿ ಸದಸ್ಯ ಕೃಷ್ಣ ಗಟ್ಟಿ, ತೊಕ್ಕೊಟ್ಟು ಮಸ್ಜಿದುಲ್ ಹುದಾ ಅಧ್ಯಕ್ಷ ಸಾಗರ್ ಇಸ್ಮಾಯಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸದ್ಭಾವನಾ ವೇದಿಕೆಯ ಸದಸ್ಯ, ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿದರು. ಸದ್ಭಾವನಾ ವೇದಿಕೆಯ ಉಪಾಧ್ಯಕ್ಷ ಜಾಸ್ಲಿನ್ ಡಿಸೋಜ ಪ್ರಸ್ತಾವನೆಗೈದರು. ಕೋಶಾಧಿಕಾರಿ ಮೆಲ್ವಿನ್ ಸಿ. ಡಿಸೋಜ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅನ್ವರ್ ವಂದಿಸಿದರು.