ಬುಲ್ಲಿ ಬಾಯ್ ಆ್ಯಪ್: ಈ ಹುಚ್ಚನ್ನು ಬಿಡಿಸುವುದು ಹೇಗೆ?

0
40

ಸನ್ಮಾರ್ಗ ಸಂಪಾದಕೀಯ

ದೇಶದಲ್ಲಿ ಕೆಲವರಿಗೆ ಆಗಾಗ ‘ಹುಚ್ಚು’ ಹಿಡಿಯುವುದಿದೆ. ಈ ಹುಚ್ಚಿನ ಪ್ರಧಾನ ಲಕ್ಷಣ ಏನೆಂದರೆ, ಮುಸ್ಲಿಮರನ್ನು ದ್ವೇಷಿಸುವುದು. ಇನ್ನೊಂದು ಬಹುಮುಖ್ಯ ಲಕ್ಷಣವೆಂದರೆ, ವಿಮಾನ ನಿಲ್ದಾಣದಂಥ ಸ್ಥಳಗಳಲ್ಲಿ ಬಾಂಬಿಡುವುದು ಮತ್ತು ಬಾಂಬಿಟ್ಟಿರುವುದಾಗಿ ಹುಸಿ ಕರೆ ಮಾಡುವುದು ಹಾಗೂ ಮುಸ್ಲಿಮ್ ವಿರೋಧಿ ಬರಹಗಳನ್ನು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡುವುದು. ಇಲ್ಲಿ ಇನ್ನೊಂದು ವಿಚಿತ್ರ ಅಂಶವೂ ಇದೆ. ಅದೇನೆಂದರೆ, ಯಾವುದು ಹುಚ್ಚು ಮತ್ತು ಯಾವುದು ಅಲ್ಲ ಎಂಬುದನ್ನು ಅಳೆಯುವ ಮಾನದಂಡ. ಅಷ್ಟಕ್ಕೂ, ಮಾನಸಿಕ ಅಸ್ವಸ್ಥತೆಯನ್ನೇ ಹುಚ್ಚು ಎನ್ನಲಾಗುತ್ತದೆ ಎಂದು ನೀವು ವಾದಿಸುವುದಾದರೆ, ಈ ವಾದವನ್ನು ಅಲ್ಲಗಳೆಯುವುದಕ್ಕೆ ಇಲ್ಲಿ ಅನೇಕ ಉದಾಹರಣೆಗಳಿವೆ. ಇದಕ್ಕೆ ತಾಜಾ ಉದಾಹರಣೆ- ಬುಲ್ಲಿ ಬಾಯಿ ಆ್ಯಪ್ ತಯಾರಿಸಿರುವ 20 ವರ್ಷದ ನೀರಜ್ ಬಿಷ್ಣೋಯ್.

ಈತ ಮಧ್ಯಪ್ರದೇಶದ ವೆಲ್ಲೋರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎರಡನೇ ವರ್ಷದ ಬಿಟೆಕ್ ವಿದ್ಯಾರ್ಥಿ. ಅಸ್ಸಾಮಿನವ. ಬುಲ್ಲಿ ಬಾಯಿ ಆ್ಯಪ್‌ನ ಪ್ರಧಾನ ರೂವಾರಿಯಾಗಿ ಈತನ ಬಂಧನ ವಾದ ಬಳಿಕ ತರಹೇವಾರಿ ಮಾಹಿತಿಗಳು ಮಾಧ್ಯಮಗಳಲ್ಲಿ ಬರತೊಡಗಿವೆ. ಎರಡ್ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುದು ಈ ಮಾಹಿತಿಯ ಒಂದು ಭಾಗವಾದರೆ, ಪೊಲೀಸರು ಮತ್ತು ಆತನ ಹೆತ್ತವರು ಒದಗಿಸಿರುವ ಮಾಹಿತಿಗಳು ಇನ್ನೊಂದು. ಸುಮಾರು 150ಕ್ಕಿಂತಲೂ ಅಧಿಕ ಅಶ್ಲೀಲ ವೀಡಿಯೋಗಳು ಆತನ ಲ್ಯಾಪ್‌ಟಾಪ್‌ನಲ್ಲಿ ದೊರಕಿವೆ ಎಂದು ಹೇಳಿರುವ ಪೊಲೀಸರು, ಆತನನ್ನು ಗೀಳಿಗೆ ಬಿದ್ದ ಯುವಕ ಎಂದು ಬಿಂಬಿಸುವುದಕ್ಕೆ ಮತ್ತು ಆ ಮೂಲಕ ಆತನ ಮೇಲೆ ಆಕ್ರೋಶಕ್ಕಿಂತ ಸಹಾನುಭೂತಿಯ ಭಾವ ಬೆಳೆಯುವಂತೆ ಮಾಡುವುದಕ್ಕೆ ಬೇಕಾದ ತಯಾರಿಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಜೊತೆಗೇ, ಆತನ ಹೆತ್ತವರ ಮಾತುಗಳನ್ನು ಮಾಧ್ಯಮಗಳು ವರದಿ ಮಾಡಿದ್ದು, ಆತನನ್ನು ಪೂರ್ಣ ಪ್ರಮಾಣದ ಹುಚ್ಚನಾಗಿ ಬಿಂಬಿಸುವಲ್ಲಿ ಈ ಮಾಹಿತಿಗಳು ಮುಂದಿನ ದಿನಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಲೂಬಹುದು.

ತಂದೆಯೊಂದಿಗೆ ಈ ನೀರಜ್ ಬಿಷ್ಣೋಯ್ ಮಾತಾಡುತ್ತಿದ್ದುದು ಅಪರೂಪದಲ್ಲಿ ಅಪರೂಪ. ಆತ ಜನರೊಂದಿಗೆ ಬೆರೆಯುವುದಾಗಲಿ ಹಬ್ಬಗಳನ್ನು ಆನಂದಿಸುವುದಾಗಲಿ ಮಾಡುತ್ತಿರಲಿಲ್ಲ. ಆತ ಪುಸ್ತಕದ ಹುಳವಾಗಿದ್ದ. ಆತ ಎಸೆಸೆಲ್ಸಿಯಲ್ಲಿ 86% ಮತ್ತು ಪಿಯುಸಿಯಲ್ಲಿ 82% ಅಂಕ ಪಡೆದಿದ್ದ ಮತ್ತು ಯಾವುದೇ ಟ್ಯೂಷನ್ ಇಲ್ಲದೇ ಈ ಎಲ್ಲವನ್ನೂ ಸಾಧಿಸಿದ್ದ. ಯಾವುದೇ ಸಮುದಾಯ ಅಥವಾ ಮಹಿಳೆಯರ ಬಗ್ಗೆ ಕೆಟ್ಟ ಭಾವನೆ ಆತನಲ್ಲಿರಲಿಲ್ಲ… ಎಂದೆಲ್ಲಾ ಬಿಷ್ಣೋಯ್‌ನ ತಂದೆ ಮತ್ತು ತಾಯಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಬಹುಶಃ, ಇವೆಲ್ಲ ಆತನನ್ನು ಹುಚ್ಚ ಎಂದು ಸಾರುವುದಕ್ಕೆ ಮಾಡಲಾಗುತ್ತಿರುವ ತಯಾರಿಗಳೋ ಎಂಬ ಅನುಮಾನವಿದೆ. ಇಷ್ಟು ಸಾದು ಮತ್ತು ಬುದ್ಧಿವಂತ ಯುವಕನೋರ್ವ ಬುಲ್ಲಿಬಾಯಿ ಆ್ಯಪ್ ತಯಾರಿಸಿರುವನೆಂದರೆ ಅದನ್ನು ನಂಬಕ್ಕಾಗಲ್ಲ. ಆತನಿಗೆ ಹುಚ್ಚೇ ಇರಬೇಕು…’ ಎಂದು ತೀರ್ಮಾನ ಮಾಡಿ ಬಿಡುವುದಕ್ಕೆ ಮುಂದಿನ ದಿನಗಳಲ್ಲಿ ಇವೆಲ್ಲ ಆಧಾರವಾಗಿ ಬಿಡುವ ಸಾಧ್ಯತೆಯಿದೆ. ಈಗಾಗಲೇ ಈ ಆ್ಯಪ್‌ಗೆ ಸಂಬಂಧಿಸಿ ಬಂಧಿತಳಾಗಿರುವ ಉತ್ತರಾಖಂಡದ 18 ವರ್ಷದ ಯುವತಿ ಶ್ವೇತಾ ಸಿಂಗ್ ಬಗ್ಗೆ ಸಹಾನುಭೂತಿಯ ಮಾತುಗಳು ಹೊರಬೀಳುತ್ತಿವೆ. ಕೊರೋನಾದಿಂದ ತಂದೆಯನ್ನೂ ಕ್ಯಾನ್ಸರ್‌ನಿಂದಾಗಿ ತಾಯಿಯನ್ನೂ ಕಳಕೊಂಡು ಮಾನಸಿಕ ತಳಮಳಕ್ಕೆ ಒಳಗಾಗಿರುವ ಈ ಯುವತಿ, ಹಣಕ್ಕಾಗಿ ಈ ಆ್ಯಪ್‌ಗೆ ಸಹಕರಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಬಂಧಿತ ಇನ್ನಿಬ್ಬರಾದ 21 ವರ್ಷದ ಮಯಾಂಕ್ ಅಗರ್ವಾಲ್ ಮತ್ತು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ವಿಲಾಸ್ ಕುಮಾರ್ ಝಾ ಎಂಬವರ ಬಗ್ಗೆ ಇಂಥ ಮಾಹಿತಿಗಳು ಇನ್ನೂ ಬಹಿರಂಗಗೊಂಡಿಲ್ಲ ಎಂಬುದು ಶುಭ ಸುದ್ದಿ.

ಪ್ರಶ್ನೆ ಏನೆಂದರೆ, ಈ ಹುಚ್ಚರೆಲ್ಲ ಮುಸ್ಲಿಮರನ್ನೇ ಯಾಕೆ ಗುರಿ ಮಾಡುತ್ತಾರೆ ಅನ್ನುವುದು. ಬುಲ್ಲಿ ಬಾಯಿ ಆ್ಯಪ್ ಅನ್ನು ಸಂಪೂರ್ಣವಾಗಿ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಬಿತ್ತುವುದಕ್ಕಾಗಿಯೇ ಸೃಷ್ಟಿಸಲಾಗಿದೆ. ಮುಸ್ಲಿಮ್ ಮಹಿಳೆಯರನ್ನು ವೇಶ್ಯೆಯರಂತೆ ಮತ್ತು ಮಾರಾಟಕ್ಕಿರುವ ಸರಕುಗಳಂತೆ ಬಿಂಬಿಸಲಾಗಿದೆ. ಅದೂ ಸಾಮಾನ್ಯ ಮಹಿಳೆಯರಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಿರುವ ಮುಸ್ಲಿಮ್ ಹೋರಾಟಗಾರ್ತಿಯರು, ಜೆಎನ್‌ಯುನಿಂದ ಕಾಣೆಯಾದ ವಿದ್ಯಾರ್ಥಿ ನಜೀಬ್‌ನ ತಾಯಿ ಮುಂತಾದವರ ಭಾವಚಿತ್ರವನ್ನೇ ಈ ಆ್ಯಪ್‌ನಲ್ಲಿ ಮಾರಾಟಕ್ಕಿರುವ ಮಹಿಳೆಯರಾಗಿ ಬಿಂಬಿಸಲಾಗಿದೆ. ಹುಚ್ಚು ಸರಿ. ಆದರೆ ಈ ಹುಚ್ಚರಿಗೆಲ್ಲ ಮುಸ್ಲಿಮರನ್ನು ಗುರಿ ಮಾಡಬೇಕು ಎಂಬ ಪ್ರಜ್ಞೆ ಇರುವುದು ಹೇಗೆ? ಹುಚ್ಚು ತಗುಲಿಸಿಕೊಂಡ ಬಳಿಕವೂ ಮನುಷ್ಯರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವ ಮತ್ತು ಅವರಲ್ಲಿ ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಮುಸ್ಲಿಮರನ್ನು ಮಾತ್ರ ಆಯ್ಕೆ ಮಾಡುವಷ್ಟು ಬುದ್ಧಿವಂತಿಕೆ ಉಳಿದಿರುವುದು ಹೇಗೆ? ಹಾಗಂತ,

ಈ ಪ್ರಶ್ನೆ ಬುಲ್ಲಿ ಬಾಯಿ ಆ್ಯಪ್‌ಗೆ ಸಂಬಂಧಿಸಿ ಮಾತ್ರ ಕೇಳಲಾಗುವುದಲ್ಲ. ಇಂಥ ಹುಚ್ಚರ ದೊಡ್ಡ ಸಂತೆಯೇ ಈ ದೇಶದಲ್ಲಿದೆ. ವಿಮಾನ ನಿಲ್ದಾಣಕ್ಕೆ ಬಾಂಬಿಡಲಾಗಿದೆ ಎಂದು ಮುಸ್ಲಿಮ್ ಹೆಸರಿನಲ್ಲಿ ಪೊಲೀಸರಿಗೆ ಹುಸಿ ಕರೆ ಮಾಡಿದವರು, ಪ್ರವಾದಿಯನ್ನು ನಿಂದಿಸುವ ಬರಹ ಬರೆದವರು, ಬಾಂಬಿಟ್ಟವರು ಕೂಡ ಬಳಿಕ ಮಾನಸಿಕ ಅಸ್ವಸ್ಥರಾಗಿ ಬದಲಾದದ್ದಿದೆ. ಇದಕ್ಕೆ ಇನ್ನೊಂದು ಪ್ರಬಲ ಪುರಾವೆ- ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಾಂಬಿಡಲಾದ ಘಟನೆ. 2020 ಜೂನ್‌ನಲ್ಲಿ ಈ ಪ್ರಕರಣ ನಡೆದಿತ್ತು. ಇದಕ್ಕಿಂತ ಮೊದಲು 2019 ಡಿಸೆಂಬರ್ ಕೊ ನೆಯಲ್ಲಿ ಮಂಗಳೂರಿನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆದು ಪೊಲೀಸರ ಗುಂಡಿಗೆ 2 ಮುಸ್ಲಿಮ್ ಜೀವಗಳೂ ಬಲಿಯಾಗಿದ್ದುವು. ಯಾಕೆ ಮುಸ್ಲಿಮ್ ಜೀವಗಳು ಎಂದು ಒತ್ತು ಕೊಟ್ಟು ಹೇಳಿದ್ದೆಂದರೆ, ಈ ಬಾಂಬ್ ಪ್ರಕರಣವಾದ ತಕ್ಷಣ ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳು ಈ ಬಾಂಬ್‌ಗೆ ಗಡ್ಡ, ಟೋಪಿ, ಪೈಜಾಮವನ್ನು ತೊಡಿಸಿ ಮುಸ್ಲಿಮ್ ಮಾಡಿದ್ದುವು. ಎರಡು ಮುಸ್ಲಿಮ್ ಜೀವಗಳಿಗೆ ಪ್ರತಿಯಾಗಿ ಈ ಬಾಂಬನ್ನು ಇಟ್ಟಿರುವ ಸಾಧ್ಯತೆ ಇದೆ ಎಂಬಂತಹ ಅನುಮಾನಿತ ವರದಿಯನ್ನು ಎರಡು ದಿನಗಳ ಕಾಲ ಪ್ರಸಾರ ಮಾಡಿದ್ದುವು. ಅಲ್ಲದೇ, ಅಧಿಕಾರಿಗಳು ಬಾಂಬನ್ನು ನಿಷ್ಕ್ರೀಯಗೊಳಿಸುವ ಕ್ರಿಯೆಯನ್ನು ಟಿ.ವಿ. ಚಾನೆಲ್ ಗಳು ಲೈವ್ ಆಗಿ ತೋರಿಸಿದ್ದುವು ಮತ್ತು ಆ ಬಾಂಬ್ ಭಯಂಕರ ಸಾಮರ್ಥ್ಯವುಳ್ಳ ಹಾಗೂ ಒಂದುವೇಳೆ ಸಿಡಿದಿದ್ದರೆ ಇಡೀ ರಾಷ್ಟçವನ್ನೇ ನಡುಗಿಸಿ ಬಿಡಬಹುದಾದ ಅ ನಾಹುತಕ್ಕೆ ಕಾರಣವಾಗಿರುತ್ತಿತ್ತು ಎಂಬಂತಹ ತಜ್ಞ ವಿವರಣೆಗಳನ್ನೂ ಈ ಲೈವ್ ಕಾರ್ಯಕ್ರಮದಲ್ಲಿ ನೀಡಲಾಗಿತ್ತು. ಆದರೆ,

ಎರಡು ದಿನಗಳ ಬಳಿಕ ಆದಿತ್ಯರಾವ್ ಎಂಬವ ಪೊಲೀಸರಿಗೆ ಶರಣಾದ. ಈತ ಎಂಬಿಎ ಮಾಡಿರುವ ಮೆಕ್ಯಾನಿಕಲ್ ಎಂಜಿನಿಯರ್. ಯಾವಾಗ ಬಾಂಬಿಟ್ಟವನ ಹೆಸರು ಆದಿತ್ಯರಾವ್ ಎಂಬುದು ಬಹಿರಂಗವಾಯಿತೋ ಟಿ.ವಿ. ಸ್ಟುಡಿಯೋಗಳ ವಾತಾವರಣವೇ ಬದಲಾಯಿತು. ವಿಮಾನ ನಿಲ್ದಾಣದಲ್ಲಿ ಇಡಲಾಗಿದ್ದ ಬಾಂಬ್‌ನ ಸ್ಫೋಟಕ ಸಾಮರ್ಥ್ಯ ನಿರೀಕ್ಷೆಗಿಂತ ತೀರಾ ಕೆಳಮಟ್ಟದಲ್ಲಿದ್ದು, ಅಂಥ ಅ ನಾಹುತಕಾರಿ ಬಾಂಬೇನೂ ಅಲ್ಲ ಎಂಬ ವಿವರಣೆ ಕೇಳಿಬರತೊಡಗಿತು. ಮಾತ್ರವಲ್ಲ, ಆತ ತನ್ನ ಮನೆಯವರೊಂದಿಗೆ ಈಗಾಗಲೇ ಸಂಪರ್ಕ ಕಳೆದುಕೊಂಡಿರುವುದು, ಹೊಟೇಲಿನಲ್ಲಿ ಕೆಲಸ ಮಾಡಿರು ವುದು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬಿಟ್ಟಿರುವುದಾಗಿ ಈ ಹಿಂದೆ ಹುಸಿ ಕರೆ ಮಾಡಿರುವುದನ್ನೆಲ್ಲ ಜೋಡಿಸಿಕೊಂಡು ಹುಚ್ಚನ ಪಟ್ಟ ಕಟ್ಟಲಾಯಿತು. ಒಂದುವೇಳೆ,

ಆದಿತ್ಯರಾವ್ ಎಂಬ ಹೆಸರಿನ ಬದಲು ಮುಸ್ಲಿಮ್ ಹೆಸರು ಇರುತ್ತಿದ್ದರೆ ಆತನಿಗೂ ಈ ಹುಚ್ಚನ ಪಟ್ಟ ಕಟ್ಟುವ ಸಾಧ್ಯತೆ ಇತ್ತೇ ಅಥವಾ ಇದು, ಸಿಎಎ ಪ್ರತಿಭಟನೆಯಲ್ಲಿ ಕಳಕೊಂಡ ಎರಡು ಜೀವಗಳಿಗೆ ಪ್ರತಿಕ್ರಿಯೆ ಯಾಗಿ ಇಡಲಾದ ಬಾಂಬ್, ಪಾಕ್‌ನೊಂದಿಗೆ ಕೈವಾಡ, ವಿದೇಶಿ ಫಂಡ್ ಇತ್ಯಾದಿ ಕತೆಗಳನ್ನು ಆತನ ವಿರುದ್ಧ ಒತ್ತಿ ಒತ್ತಿ ಹೇಳಲಾಗುತ್ತಿತ್ತೇ? ಹುಚ್ಚನೊಬ್ಬ ಬಾಂಬ್ ತಯಾರಿಸುವಷ್ಟು ಸ್ವಸ್ಥ ನಿರುವುದು ಮತ್ತು ಅದಕ್ಕೆ ಬೇಕಾದ ಮಾಹಿತಿಗಳನ್ನು ಇಂಟರ್‌ನೆಟ್‌ನಿಂದ ಸಂಗ್ರಹಿಸುವಷ್ಟು ಚತುರನಿರುವುದು ಹೇಗೆ ಎಂಬ ಪ್ರಶ್ನೆಯನ್ನು ಬಾರಿಬಾರಿಗೂ ಅವು ಕೇಳುತ್ತಿರಲಿಲ್ಲವೇ? ಎಂಬಿಎ ಮಾಡಿದವ ಮತ್ತು ಮೆಕ್ಯಾನಿಕಲ್ ಇಂಜಿನಿ ಯರ್ ಹೇಗೆ ತಾನೇ ಹುಚ್ಚನಾಗುತ್ತಾನೆ ಎಂಬ ಪ್ರಶ್ನೆಯನ್ನು ನೀಳ ಉಗುರು, ಕೋರೆ ಹಲ್ಲುಗಳಾಗಿ ಉಬ್ಬಿಸಿ ಕೇಳುತ್ತಿರಲಿಲ್ಲವೇ? ನಿಜಕ್ಕೂ ಹುಚ್ಚು ಯಾರಿಗೆ? ಈ ಹುಚ್ಚುತನವ ನ್ನು ನಿರ್ಧರಿಸುವ ಬಗೆ ಹೇಗೆ? ಅವರ ಧರ್ಮವೇ? ಅಪರಾಧಿ ಹಿಂದೂ ಆದರೆ ಹುಚ್ಚು, ಮುಸ್ಲಿಮ್ ಆದರೆ ಜಿಹಾದಿ ಎಂದಾಗುವುದು ಏಕೆ?

ಬುಲ್ಲಿ ಬಾಯಿ ಎಂಬ ಆ್ಯಪ್‌ನ ಬಳಿಕ ಇದೀಗ ಸುಲ್ಲಿ ಡೀಲ್ ಎಂಬ ಆ್ಯಪ್ ಸೃಷ್ಟಿಸಿದವನನ್ನೂ ಬಂಧಿಸಲಾಗಿದೆ. ಈತ ಮಧ್ಯಪ್ರದೇಶದವ. ಓಂ ಠಾಕೂರ್ ಎಂದು ಈತನ ಹೆಸರು. ಈ ಆ್ಯಪ್‌ನಲ್ಲೂ ಮುಸ್ಲಿಮ್ ಮಹಿಳೆಯರನ್ನೇ ಹರಾಜಿಗೆ ಇಡಲಾಗಿತ್ತು. ಆದರೆ, ಈತನ ಹುಚ್ಚಿನ ಬಗ್ಗೆ ಈವರೆಗೆ ಯಾವುದೇ ಮಾಹಿತಿಯಿಲ್ಲ ಎಂಬುದು ಸಮಾಧಾನಕರ.

LEAVE A REPLY

Please enter your comment!
Please enter your name here