ಸನ್ಮಾರ್ಗ ವಾರ್ತೆ
ಜಿದ್ದ,ನ.13: ಲಿಬಿಯನ್ ಸಯಾಮೀಸ್ ಅವಳಿಗಳನ್ನು ಗುರುವಾರ ಶಸ್ತ್ರಕ್ರಿಯೆ ಮೂಲಕ ಬೇರ್ಪಡಿಸುವ ಕಾರ್ಯ ನಡೆಯಲಿದೆ. ಮೆಡಿಕಲ್ ಸರ್ಜಿಕಲ್ ತಂಡ ಮುಖ್ಯಸ್ಥ ಡಾ. ಅಬ್ದುಲ್ಲ ಅಲ್ರಬೀಈ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಲಿಬಿಯದ ಸಯಮೀಸ್ ಅವಳಿಗಳನ್ನು ಶಸ್ತ್ರಕ್ರಿಯೆ ಮೂಲಕ ಬೇರ್ಪಡಿಸಲು ತೀರ್ಮಾನಿಸಲಾಗಿದೆ.
ರಿಯಾದ್ ನ್ಯಾಶನಲ್ ಗಾರ್ಡ್ ಸಚಿವಾಲಯದ ಕಿಂಗ್ ಅಬ್ದುಲ್ಅಝೀಝ್ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಯಲಿದೆ. ಮಕ್ಕಳ ಶಾರೀರಿಕ ಅವಸ್ಥೆ ಮತ್ತು ಬೇರ್ಪಡಿಸುವಿಕೆ ಯಶಸ್ವಿಯಾಗುವ ಸಾಧ್ಯತೆಗಳನ್ನು ತಂದೆಗೆ ವಿವರಿಸಲಾಗಿದೆ. ತಂದೆ ಶಸ್ತ್ರಕ್ರಿಯೆಗೆ ಒಪ್ಪಿದ್ದು ಹದಿನೈದು ಗಂಟೆಗಳು ಶಸ್ತ್ರಕ್ರಿಯೆಗೆ ತಗುಲಬಹುದು.
ಹನ್ನೊಂದು ಹಂತಗಳಲ್ಲಿ ಸರ್ಜರಿ ನಡೆಯಲಿದ್ದು, ಮೆಡಿಕಲ್ ಸರ್ಜರಿ ತಜ್ಞರು, ತಂತ್ರಜ್ಞಾನ ತಜ್ಞರು. ನರ್ಸಿಂಗ್ ಸ್ಟಾಪ್ ಸಹಿತ 35 ಮಂದಿಯ ತಂಡ ಶಸ್ತ್ರಕ್ರಿಯೆಯಲ್ಲಿ ಭಾಗಿಯಾಗಲಿದೆ. ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ರ ಸೂಚನೆಯ ಮೇರೆಗೆ ಲಿಬಿಯನ್ ಸಯಾಮೀಸ್ಗಳನ್ನು ಸೌದಿಗೆ ಕರೆ ತರಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಹೆಚ್ಚಿನ ತಪಾಸಣೆ ಮಾಡಲಾಗಿತ್ತು. ಮಕ್ಕಳ ಹೆಸರು ಅಹ್ಮದ್, ಮುಹಮ್ಮದ್ ಎಂದಾಗಿದೆ.












