ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ದರದಲ್ಲಿ ರಿಯಾಯಿತಿಗೆ ಆಗ್ರಹಿಸಿ ಎಸ್ ಐ ಓ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

0
354

ಸನ್ಮಾರ್ಗ ವಾರ್ತೆ

ಉಡುಪಿ : ಕೋವಿಡ್-19 ಸೋಂಕಿನ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಶಾಲಾ ಕಾಲೇಜಿನ ತರಗತಿಗಳು ಪುನಃ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಎಲ್ಲಾ ರೀತಿಯ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಉಡುಪಿ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನೇ ಬಳಸಿಕೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೇಲ್ ಬೆಲೆ ಏರಿಕೆಯಾದ್ದರಿಂದ ಎಲ್ಲಾ ಖಾಸಗಿ ಬಸ್ ಪ್ರಯಾಣದರ ವಿಪರೀತ ಏರಿಕೆಯಾಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ಪ್ರಯಾಣಿಸುವುದು ಕಷ್ಟಕರವಾಗಿದೆ ಅದಕ್ಕಾಗಿ ಖಾಸಗಿ ಬಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರವನ್ನು ನೀಡಬೇಕೆಂದು ಆಗ್ರಹಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಇಂದು ಉಡುಪಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಸ್ ಐ ಓ ಉಡುಪಿ ಜಿಲ್ಲಾಧ್ಯಕ್ಷರಾದ ಅರ್ಬಾಝ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಅಸ್ಜದ್ ಹೂಡೆ, ಸದಸ್ಯರಾದ ವಸೀಮ್ ಅಬ್ದುಲ್ಲಾ, ಸಯಾನ್ ಮುಂತಾದವರು ಉಪಸ್ಥಿತರಿದ್ದರು.

ಬೇಡಿಕೆಗಳು:
1. ಸಿಟಿ ಬಸ್ ಗಳಲ್ಲಿ ಸ್ವೀಕರಿಸಲಾಗುವ ಚಲೋ ಕಾರ್ಡ್’ನಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸನ್ನು ಶೀಘ್ರವಾಗಿ ಆರಂಭಿಸುವುದು.
2. ವಿದ್ಯಾರ್ಥಿ ಪಾಸ್ ಆರಂಭವಾಗುವ ತನಕ ಎಲ್ಲ ವಿದ್ಯಾರ್ಥಿಗಳಿಗೆ ಬಸ್ ದರದಲ್ಲಿ ಶೇ 50% ರಿಯಾಯಿತಿಯನ್ನು ನೀಡಬೇಕು.
3. ಚಲೋ ಕಾರ್ಡನ್ನು ಎಲ್ಲಾ ಸಿಟಿಬಸ್ ಗಳಲ್ಲಿ ಸ್ವೀಕರಿಸುವುದು. ಇಲ್ಲವೇ ಸಾರ್ವತ್ರಿಕ ಪಾಸ್’ವೊಂದನ್ನು ನೀಡಿ ಎಲ್ಲ ಕಡೆ ಅನ್ವಯವಾಗುವಂತೆ ಕ್ರಮ ವಹಿಸುವುದು.
4. ವಿದ್ಯಾರ್ಥಿ ರಿಯಾಯಿತಿ ಕಾರ್ಡ್ ನಲ್ಲಿ ಮಾಸಿಕ ಪಾವತಿ ಮಿತಿಯಲ್ಲಿರಬೇಕು.
5..ಜಿಲ್ಲಾಡಳಿತವು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಬಸ್ಸಿ‌ನ ವ್ಯವಸ್ಥೆ ಕಲ್ಪಿಸಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ ಸೇವೆ ನೀಡಬೇಕು.