ಹೈದರಾಬಾದ್,ಮೇ 31: ತೆಲಂಗಾಣದ ನಿಝಾಮಾಬಾದಿನ ಬಾಲ್ಕೊಂಡದಲ್ಲಿ ಮುಸ್ಲಿಮರಿಗೆ ಹೇರಿದ್ದ ಆರ್ಥಿಕ-ಸಾಮಾಜಿಕ ಬಹಿಷ್ಕಾರವನ್ನು ಪೊಲೀಸರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಂಡದ್ದು ಬಹಿಷ್ಕಾರ ಕೊನೆಗೊಳ್ಳಲು ಸಹಕಾರಿಯಾಗಿತ್ತು. ಕುಂಬಿ ಜಾತಿಯವರ ಗ್ರಾಮ ವಿಕಾಸ ಕಮಿಟಿ ನಿಝಾಮಾಬಾದಿನ ಮುಸ್ಲಿಂ ವ್ಯಾಪಾರಿಗಳಿಂದ ಸಾಮಾನು ತೆಗೆದುಕೊಳ್ಳಬೇಡಿ. ಅವರೊಂದಿಗೆ ಸಂಪರ್ಕ ಇರಿಸಬೇಡಿ ಎಂದು ತಮ್ಮ ಸಮುದಾಯದ ಜನರಿಗೆ ಆದೇಶಿಸಿತ್ತು. ಮುಸ್ಲಿಮರಿಂದ ಏನಾದರೂ ಖರೀದಿಸಿದರೆ, ಸಾಮಾನು ತೆಗೆದುಕೊಂಡರೆ ಕಮಿಟಿಯು ಸಮುದಾಯದವರಿಗೆ ದೊಡ್ಡ ಮಟ್ಟದ ದಂಡ ವಿಧಿಸಿತ್ತು. ಇದು ಮಾಧ್ಯಮಗಳಲ್ಲಿ ಬಂದ ಮೇಲೆ ಸ್ಥಳೀಯ ಆಡಳಿತ ಜಾಗೃತವಾಯಿತು. ಎಲ್ಲ ಜಾತಿಯವರನ್ನು ಕರೆದು ಪೊಲೀಸರು ಇಫ್ತಾರ್ ಕೂಟ ಆಯೋಜಿಸಿದರು.
2016ರಲ್ಲಿ ಮುಸ್ಲಿಮರ ಕಬರಸ್ಥಾನ(ದಫನ ಭೂಮಿ) ಆಕ್ರಮಸಿದಂದಿನಿಂದ ಇಲ್ಲಿ ಜಾತಿ ಹಗೆ ಆರಂಭವಾಯಿತು. ನಂತರ ಮುಸ್ಲಿಮರು ಕೇಸು ಹಾಕಿದರು. ಕೇಸಿನಿಂದ ಹಿಂದೆ ಸರಿಯಲಿಕ್ಕಾಗಿ ಹೊಸ ಬಹಿಷ್ಕಾರವನ್ನು ಕಮಿಟಿ ಹೇರಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.












