ಆಧುನಿಕ ಮುಸ್ಲಿಮ್ ಜಗತ್ತು ಪ್ರವಾದಿಯಿಂದ(ಸ) ಕಲಿಯಬೇಕಾದ ತಂತ್ರಗಳು

0
265

ಸನ್ಮಾರ್ಗ ವಾರ್ತೆ

✍️ ಅಬ್ದುಸ್ಸಲಾಮ್ ವಾಣಿಯಂಬಲಮ್

ಪ್ರವಾದಿವರ್ಯರ(ಸ) ಬದುಕನ್ನೇ ನೋಡಿರಿ. ಮಕ್ಕಾದಲ್ಲಿ ಹದಿಮೂರು ವರ್ಷಗಳ ಕಾಲ ನಿರ್ಣಯಿತ ಗುರಿಗಳೊಂದಿಗೆ ಮುಂದುವರಿದರು. ಅದು ಅಲ್ಲಿ ಉತ್ತಮ ಸಮಾಜದ ನಿರ್ಮಾಣ ಮಾಡಬೇಕೆಂಬ ಗುರಿಯಾಗಿತ್ತು. ಕುರ್‌ಆನ್ ಆ ಗುರಿಯನ್ನು ಹೊಂದಿದ ಸೂಕ್ತಗಳನ್ನು ಅವತೀರ್ಣಗೊಳಿಸಿತು.

ಬಳಿಕ ಮದೀನಾದಲ್ಲಿ ತನ್ನ ಸಂದೇಶವನ್ನು ನೆಟ್ಟು ಬೆಳೆಸಲು ಪ್ರವಾದಿವರ್ಯ(ಸ)ರಿಗೆ ಆದೇಶಿಸಲಾಯಿತು. ಮದೀನಾದಲ್ಲಿ ಒಂದು ರಾಷ್ಟ್ರ ಸ್ಥಾಪನೆಗೆ ಬೇಕಾದುದನ್ನು ಅದು ಒದಗಿಸಿತು. ಅದು ಕಾರ್ಯಗತವಾಯಿತು. ನಂತರ ಎಂಟು ವರ್ಷಗಳು ಕಳೆದ ಬಳಿಕ ಮಕ್ಕಾವನ್ನು ಮರಳಿ ಪಡೆಯುವ ಯೋಜನೆಗಳು ವ್ಯವಸ್ಥಿತವಾಗಿ ನಡೆಯಿತು. ಎಲ್ಲವೂ ಸುಸೂತ್ರವಾಗಿ ನಡೆಯಿತು. ಹಾಗೆಯೇ ಪ್ರವಾದಿತ್ವ ದೊರೆತು ಇಪ್ಪತ್ತಮೂರು ವರ್ಷಗಳಲ್ಲಿ ಪ್ರವಾದಿವರ್ಯರು(ಸ) ತನ್ನ ದೌತ್ಯವನ್ನು ಪೂರ್ತೀಕರಿಸಿದರು.

ಪ್ರವಾದಿವರ್ಯರ(ಸ) ಕಾರ್ಯ ಯೋಜನೆಯ ಬಗ್ಗೆ ಗಾಢವಾಗಿ ಅಧ್ಯಯನ ನಡೆಸಿರಿ. ಕೇವಲ ಇಪ್ಪತ್ತಮೂರು ವರ್ಷಗಳಲ್ಲಿ ತನ್ನ ಕ್ರಾಂತಿಯನ್ನು ಯಶಸ್ವಿಗೊಳಿಸಲು ಸಹಾಯಕವಾದದ್ದು ಅವರ ವ್ಯವಸ್ಥಿತವಾದ ಕಾರ್ಯಯೋಜನೆಯಾಗಿತ್ತು. ನಿಮಗೆ ಪ್ರವಾದಿವರ್ಯರ(ಸ) ಪ್ರತಿಯೊಂದು ಹೆಜ್ಜೆಯಲ್ಲಿಯೂ ಅದನ್ನು ಗಮನಿಸಬಹುದು.

ಸಂದೇಶ ಪ್ರಚಾರ ಪ್ರಾರಂಭದ ಮೂರು ವರ್ಷಗಳಲ್ಲಿ ಬಹಳ ರಹಸ್ಯವಾಗಿತ್ತು. ಅದು ಪೂರ್ವ ಸಿದ್ಧತೆಯ ಸಮಯವಾಗಿತ್ತು. ಗಲಭೆ ಎಬ್ಬಿಸಿ ತನ್ನ ಅನುಯಾಯಿಗಳನ್ನು ಶತ್ರುಗಳಿಗೆ ಕೊಂದು ಬಿಡಲು ಅವಕಾಶ ನೀಡಲಾರೆ ಎಂಬುದು ಪ್ರವಾದಿವರ್ಯರ(ಸ) ಇಂಗಿತವಾಗಿತ್ತು.

ಅದೇ ವೇಳೆ ಪ್ರಾರಂಭದಲ್ಲಿ ತನ್ನ ದೌತ್ಯ ನಿರ್ವಹಣೆಗೆ ಮುಂಚೂಣಿಯಲ್ಲಿದ್ದವರನ್ನು ಸಜ್ಜುಗೊಳಿಸಲು ದಾರುಲ್ ಅರ್ಕಮ್ ನಲ್ಲಿ ರಹಸ್ಯವಾಗಿ ತರಬೇತಿಗಳು ಆರಂಭವಾಯಿತು. ಜೊತೆಗೆ ಅಂದಿನ ಸಮಾಜದಲ್ಲಿ ನಾಯಕತ್ವ ವಹಿಸುವ ಪ್ರೌಢಿಮೆಯಿದ್ದ ಉಮರ್ ಅಥವಾ ಅಬೂ ಜಹಲ್ ಸಿಗಬೇಕೆಂದು ಅಲ್ಲಾಹನಲ್ಲಿ ಪ್ರವಾದಿವರ್ಯರು(ಸ) ವಿಶೇಷವಾಗಿ ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿದ್ದರು.

ಆಧ್ಯಾತ್ಮಿಕವಾದ ಶಕ್ತಿ ಆರ್ಜಿಸಿಕೊಳ್ಳಬೇಕಾದರೆ ಮೊದಲು ತಹಜ್ಜುದ್ ನಮಾಝ್ ಕಡ್ಡಾಯಗೊಳಿಸಿದರು. ನಂತರ ಅವರಲ್ಲಿ ಸೈದ್ಧಾಂತಿಕವಾಗಿ, ಮಾನಸಿಕವಾಗಿ ದೈಹಿಕವಾಗಿ ವೈಚಾರಿಕವಾದ ತರಬೇತಿಗೆ ಮಹತ್ವ ನೀಡಲಾಯಿತು. ಬಾಣ ಹೂಡುವುದು, ಈಜು ಕಲಿಯುವುದು, ಕ್ರೀಡೆ ಮುಂತಾದವುಗಳಿಗೆ ಪ್ರೋತ್ಸಾಹ ನೀಡಲಾಯಿತು. ಶತ್ರುಗಳ ಹಿಂಸೆ, ಕಿರುಕುಳ ಎದುರಿಸಲು ಮಾನಸಿಕ ಸ್ಥೈರ್ಯ ನೀಡಲಾಯಿತು.

ಅತ್ಯಂತ ದೊಡ್ಡ ಗೋತ್ರವಾದ ಕುರೈಶಿ ಕುಟುಂಬವನ್ನು ಜೊತೆಯಲ್ಲಿರುವಂತೆ ಮಾಡಲು ಶಕ್ತಿ ಮೀರಿ ಶ್ರಮಿಸಲಾಯಿತು. ಗೋತ್ರ ವ್ಯವಸ್ಥೆಯು ಪ್ರಬಲವಾಗಿರುವ ಅರೇಬಿಯಾದಲ್ಲಿ ಇನ್ನಿತರ ಗೋತ್ರಗಳ ನ್ನು ರಹಸ್ಯವಾಗಿ ಭೇಟಿ ಮಾಡಲಾಯಿತು. ಮಕ್ಕಾದಲ್ಲಿ ಎಂತಹ ಪರಿಸ್ಥಿತಿ ಎದುರಿಸಬೇಕಾಗಿ ಬಂದರೂ ಶಸ್ತಾಸ್ತ ಹೋರಾಟವಿಲ್ಲ ಎಂಬ ದೃಢ ನಿರ್ಧಾರ ತಾಳಿ ಶತ್ರುಗಳಿಗೆ ನಮ್ಮನ್ನು ನಿರ್ಮೂಲನ ಮಾಡುವ ಅವಕಾಶವನ್ನೇ ನೀಡಲಿಲ್ಲ. ಕಿರುಕುಳ ಹಿಂಸೆ ಮಿತಿ ಮೀರಿದರೆ ವಲಸೆ ಹೋಗಲು ನಿರ್ದಿಷ್ಟ ನೆರೆಯ ದೇಶಗಳನ್ನು ಗುರುತಿಸಿ ಕೊಂಡರು. ಇಥಿಯೋಪಿಯಾದ ಕ್ರೈಸ್ತ ದೊರೆ ನಜ್ಜಾಶಿಯ ಬಗ್ಗೆ ತಿಳಿದುಕೊಂಡು ಅಲ್ಲಿಗೆ ತಮ್ಮವರನ್ನು ಕಳುಹಿಸಿದರು. ಮಕ್ಕಾದಲ್ಲಿ ಬಾಗಿಲು ಮುಚ್ಚುವುದನ್ನು ನೋಡಿ ಮದೀನಾದತ್ತ ಕಣ್ಣು ಹಾಯಿಸಿದರು.

ಮದೀನಾಕ್ಕೆ ವಲಸೆ ಹೋಗುವುದಕ್ಕಿಂತ ಮುಂಚೆ ಮುಸ್ ಅಬ್ ಬಿನ್ ಉಮೈರ್‌ರನ್ನು ರಾಯಭಾರಿಯಾಗಿ ಕಳುಹಿಸಿದರು. ಮದೀನಾದಿಂದ ಹಜ್ಜ್ ಗೆ ಬಂದವರನ್ನು ಭೇಟಿಯಾಗಿ ಒಂದು ನಿರ್ಧಾರ ತಾಳಲು ಶ್ರಮಿಸಿದರು. ಅವರೊಂದಿಗೆ ಅಕಬಾ ಒಪ್ಪಂದಕ್ಕೆ ಸಹಿ ಹಾಕಿದರು. ಹಾಗೆಯೇ ಮದೀನಾ ತಲುಪಿದೊಡನೆ ನೆರವಾಗುವ ಭರವಸೆಯನ್ನು ಪಡೆದುಕೊಂಡರು. ಕೊನೆಗೆ ಮದೀನಾದತ್ತ ತೆರಳುವಾಗ ಬಂಧನಕ್ಕೆ ಗುರಿಯಾಗದಂತೆ ಯೋಜನೆ ಹಾಕಿ ಕೊಂಡಿದ್ದರು.

ಮದೀನಾದತ್ತ ಪಯಣ ಪ್ರಾರಂಭಿಸಿದರು. ದಾರಿ ಗೊತ್ತಿರುವ ಮುಸ್ಲಿಮೇತರರೋರ್ವರನ್ನು ಜೊತೆಯಲ್ಲಿ ಸೇರಿಸಿಕೊಂಡು ಸಂಗಾತಿಯಾಗಿ ಅಬೂಬಕ್ಕರ್ (ರ)ರವರನ್ನು ಆರಿಸಿಬೇಕಾದ ಆಹಾರ ಪೊಟ್ಟಣಗಳ ಪೂರ್ವ ತಯಾರಿಯಿಂದ ಹೊರಟರು.

ಹೀಗೇ ಮದೀನಾ ತಲುಪಿದಾಗ ಅಲ್ಲಿನ ಪ್ರಮುಖ ಗೋತ್ರ ಗಳಾದ ಔಸ್ ಮತ್ತು ಖಸ್ರಜ್ ಜೊತೆ ಒಪ್ಪಂದ ಮಾಡಿಕೊಂಡರು. ಪರಸ್ಪರ ಹೋರಾಡಿಕೊಂಡಿದ್ದ ಆ ಎರಡು ಗೋತ್ರಗಳನ್ನು ತನ್ನ ಜೊತೆ ಒಂದಾಗಿಸಿ ಸೇರಿಸಿಕೊಂಡಿತು.

ನಂತರ ಮದೀನಾದ ಮುಸ್ಲಿಮರು, ಕ್ರೈಸ್ತರು, ಯಹೂದಿಗಳು. ಮುಶ್ರಿಕರು ಹೀಗೆ ಇರುವಂತಹ ಬಹು ಸಂಸ್ಕೃತಿಯ ಸಮಾಜವನ್ನು ಒಟ್ಟು ಗೂಡಿಸಿ ಸಿದ್ಧಪಡಿಸಿದ ಮದೀನಾ ಸಂವಿಧಾನದ ಮೂಲಕ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿದರು. ಆ ಮೂಲಕ ತನ್ನ ನೇತೃತ್ವದ ರಾಷ್ಟ್ರವನ್ನು ಸ್ಥಾಪಿಸಲಾಯಿತು.

ನಂತರ ಮದೀನಾದಲ್ಲಿ ಬಂದು ಆಕ್ರಮಣ ಮಾಡಲು ಸಿದ್ಧರಾದ ಮಕ್ಕಾದ ಮುಶ್ರಿಕ್‌ರ ವಿರುದ್ದ ಶಸ್ತ್ರಾಸ್ತ್ರ ಯುದ್ಧದ ನಿರ್ಧಾರ ಕೈ ಗೊಂಡರು. ಬದ್ರ್ ಯುದ್ಧ ನಡೆದು ಅದರಲ್ಲಿ ತಮಗಿಂತ ಮೂರು ಪಟ್ಟು ಅಧಿಕವಿರುವ ಸೇನೆಯನ್ನು ಸೋಲಿಸುವ ಕಾರ್ಯ ಯೋಜನೆಗಳು ನಡೆದವು. ಅರಬರ ಅವ್ಯವಸ್ಥಿತವಾದ ಯುದ್ದ ತಂತ್ರಕ್ಕಿಂತ ಭಿನ್ನವಾದ ಬಹಳ ವ್ಯವಸ್ಥಿತ ರೀತಿಯಲ್ಲಿ ಮುಂದಿನ ದಳ ಮತ್ತು ಹಿಂದಿನ ದಳ ಹೀಗೆ ಪಡೆಯನ್ನು ರಚಿಸಿ, ಸೇನೆ ಎಲ್ಲಿ ಬೀಡು ಬಿಡಬೇಕೆಂಬುದನ್ನೂ ನಿಶ್ಚಯಿಸಿ ಶತ್ರುಗಳಿಗೆ ನೀರು ತಡೆಯುವಂತಹ ರೀತಿಯಲ್ಲಿರಬೇಕೆಂದು ಅನುಯಾಯಿಗಳು ತಂತ್ರವನ್ನು ಹೇಳಿದಾಗ ಅದನ್ನು ಕೂಡಲೇ ಸ್ವೀಕರಿಸಿ ಮನುಷ್ಯರಿಂದ ಸಾಧ್ಯವಾಗುವಂತಹ ಎಲ್ಲಾ ಯೋಜನೆಗಳನ್ನು ಮಾಡಿ ವಿಜಯ ಸಾಧಿಸಲೇಬೇಕೆಂದು ಅಲ್ಲಾಹನಲ್ಲಿ ಪ್ರಾರ್ಥಿಸಿ ಗಳಿಸಿಕೊಂಡ ವಿಜಯವದು.

ಉಹುದ್‌ನಲ್ಲಿ ಸೋಲು ಕಂಡಾಗ ಸೋತ ಒಂದು ಗುಂಪು ವಿಜಯಿಗಳ ಹಾಗೆ ಹೇಗೆ ವರ್ತಿಸಬೇಕೆಂದು ಕಲಿಸಿದ ಆತ್ಮವಿಶ್ವಾಸದ ಚೈತನ್ಯ ನೀಡಿದ ಆ ಮಹಾನ್ ಮಾದರಿ ನಾಯಕತ್ವವದು.

ಕಂದಕ್‌ನಲ್ಲಿ ಶತ್ರುಗಳೆಲ್ಲರೂ ಸೇರಿ ಸುತ್ತುವರಿದಾಗ ಆ ತನಕ ಯಾರೂ ಕೂಡಾ ಮಾಡಿರದ ಕಂದಕ ತೋಡುವ ವಿಶೇಷ ತಂತ್ರವನ್ನು ಸಲ್ಮಾನುಲ್ ಫಾರಿಸ್ ಎಂಬ ಅನುಯಾಯಿ ಹೇಳಿ ಕೊಟ್ಟಾಗ ಅದನ್ನು ಸ್ವೀಕರಿಸಿದರು. ನಾಯಕನೇ ಹಸಿವು ತಾಳಲಾರದೆ ಹೊಟ್ಟೆಗೆ ಕಲ್ಲು ಕಟ್ಟಿದ, ಕೊಡಲಿ ತೆಗೆದು ಹೊಡೆದು ದೊಡ್ಡ ಕಲ್ಲೊಂದನ್ನು ಸ್ವತಃ ಸೀಳಿ ಹಾಕಿದ ಮಾದರಿ.

ತಮ್ಮನ್ನು ಸುತ್ತುವರಿದಿರುವವರಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಬಂದವರಿಗೆ ಧನ ಸಹಾಯ ಮಾಡಿ ಪ್ರಭಾವ ಬೀರಿ ತಮ್ಮೆಡೆಗೆ ಸೆಳೆಯುವ ಶ್ರಮಗಳು, ಶತ್ರುಗಳ ಮಧ್ಯೆ ಒಡಕುಂಟು ಮಾಡಿದ ಪ್ರಯತ್ನಗಳು, ಒಪ್ಪಂದ ಮುರಿದ ಮದೀನಾದ ಯಹೂದಿಗಳನ್ನು ಗಡಿಪಾರು ಮಾಡಿದ ಕಾನೂನು ಕ್ರಮಗಳು, ಸ್ವಲ್ಪ ಕಾಲದ ಬಳಿಕ ತಮಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದ್ದರೂ ಹುದೈಬಿಯಾ ಸಂಧಿಗೆ ಸಹಿ ಹಾಕಿ ಮಕ್ಕಾದ ಹಳೆಯ ಶತ್ರುಗಳನ್ನು ನಿರ್ವೀರ್ಯಗೊಳಿಸಿದ ತಂತ್ರಗಳು, ಮಕ್ಕಾ ವಿಜಯಕ್ಕೆ ಹೋಗುವಾಗ ಅನುಯಾಯಿಗಳ ಜೊತೆ ತಾವು ಬಲಿಷ್ಠರೆಂದು ತೋರ್ಪಡಿಸಲು ತಮ್ಮ ಭುಜವನ್ನು ಹೊರಗೆ ಪ್ರದರ್ಶಿಸುವಂತೆ ಆದೇಶಿಸಿದ್ದು, ಮಕ್ಕಾದವರ ನಾಯಕ ಅಬೂ ಸುಫ್ಯಾನ್‌ರನ್ನು ದಮನಿಸಲು ಹರಮ್ ನಲ್ಲಿ ಪ್ರವೇಶಿಸುವವರೂ ಮತ್ತು ಅಬೂ ಸುಫ್ಯಾನ್‌ರ ಮನೆಗೆ ಪ್ರವೇಶಿಸಿದವರೂ ಸುರಕ್ಷಿತರು ಎಂದು ಘೋಷಿಸಿದ್ದು, ಮಕ್ಕಾದ ವಿಜಯದ ಬಳಿಕ ಬಂಧಿತರಾದ ಮಕ್ಕಾದವರನ್ನು ಶಿಕ್ಷಿಸದೆ ಕ್ಷಮಿಸಿ ಬಿಟ್ಟದ್ದು, ಆದರೆ ಕ್ಷೋಭೆಯುಂಟು ಮಾಡುವವರ ವಧೆಗೆ ತೀರ್ಮಾನಿಸಿದ್ದು, ವಿದೇಶಗಳ ನಾಯಕರಿಗೆ ಕಾಗದಗಳನ್ನು ಬರೆದು ಕಳುಹಿಸಿ ಇಸ್ಲಾಮಿನ ಪರಿಚಯ ಮಾಡಿದ್ದು, ಜನಹಿತವಾದ ಜನರ ಬಯಕೆಯ ರಾಷ್ಟ್ರದ ಸ್ಥಾಪನೆಯ ಸಂವಿಧಾನ ರೂಪಿಸಿ ತನ್ನ ನಂತರದ ನಾಯಕರನ್ನು ಆರಿಸುವ ಸ್ವಾತಂತ್ರ್ಯವನ್ನು ಅವರಿಗೇ ನೀಡಿದ್ದು…

ಹೀಗೆ ಎಂತೆಂಥ ಸುದೃಢ ಯೋಜನಾ ಬದ್ಧವಾದ ಹೆಜ್ಜೆಗಳು! ಈ ಏಕೈಕ ವ್ಯಕ್ತಿಯ ಇತಿಹಾಸ ಅವರ ಅನುಯಾಯಿಗಳಿಗೆ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಜಗತ್ತನ್ನು ಎದುರಿಸಬಲ್ಲ ವ್ಯವಸ್ಥಿತ ಯೋಜನೆಯ ತಂತ್ರಗಳನ್ನು ಹೆಣೆಯಲು ಸಾಕು.

LEAVE A REPLY

Please enter your comment!
Please enter your name here