ಪ್ರಭುತ್ವದ ಎದೆಗೆ ಇರಿಯುತ್ತಿರುವ ಧ್ರುವ್ ರಾಠಿ ಎಂಬ ಲಾಠಿ

0
416

ಸನ್ಮಾರ್ಗ ವಾರ್ತೆ

✍️ಇಶಲ್ ತಮನ್ನಾ

ಧ್ರುವ್ ರಾಠಿ ಎಂಬ 29 ವರ್ಷದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ಎಲ್ಲರ ಬಾಯಲ್ಲೂ ಧ್ರುವ್ ರಾಠಿ ಎನ್ನುವ ಹೆಸರೇ ಕೇಳ್ತಾ ಇದೆ.

ಹಾಗಂತ, ಈ ರಾಠಿ ಸಿನಿಮಾ ನಟ ಅಲ್ಲ, ನಿರ್ದೇಶಕ ಅಲ್ಲ, ಕ್ರಿಕೆಟರ್ ಅಲ್ಲ, ರಾಜಕಾರಣಿ ಅಲ್ಲ ಬಿಡಿ ಟಿವಿ ಆಂಕರ್ ಕೂಡ ಅಲ್ಲ. ಯೂಟ್ಯೂಬರ್. ಬರೇ ಯುಟ್ಯೂಬರ್.

ಆದರೆ ಈ ಯುವಕನ ಮಾತು ಧ್ವನಿ, ಬಾಡಿ ಲಾಂಗ್ವೇಜ್, ಕಂಟೆಂಟ್, ಧೈರ್ಯ, ಛಲ ದೇಶದ ಜನರನ್ನು ಮನಸೂರೆಗೊಳ್ಳುತ್ತಿದೆ. ಯುವ ಸಮೂಹ ದೊಡ್ಡ ಸಂಖ್ಯೆಯಲ್ಲಿ ಫಿದಾ ಆಗ್ತಿದೆ. ಬಿಜೆಪಿ ಐಟಿ ಸೆಲ್ ಅಂತೂ ಥರಗುಟ್ಟಿ ಹೋಗಿದೆ. ಜೂನ್ ನಾಲ್ಕರಂದು ನಾನು ಭಾರತಕ್ಕೆ ಬರ್ತೇನೆ ಅಂತ ಈ ಯುವಕ ಹೇಳಿದ್ದಾರೆ. ಜೂನ್ 4 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನಾಂಕ. ಈಗಿನ ಸರ್ವಾಧಿಕಾರಿ ಆಡಳಿತ ಹೋಗುತ್ತೆ, ಪ್ರಜಾತಂತ್ರ ಮರಳುತ್ತೆ ಎಂಬುದು ಈ ಮಾತಿನ ಅರ್ಥ.

ತನ್ನ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ನಿಮಿಷಗಳೊಳಗೆ ಲಕ್ಷಾಂತರ ವೀವ್ಸ್ ನ್ನು ಪಡೆಯುವ ದೇಶದ ಏಕೈಕ ಯೂಟ್ಯೂಬರ್ ಇವರು. 24 ಗಂಟೆಯೊಳಗೆ ಇವರ ಕಾರ್ಯಕ್ರಮ ಕೋಟಿ ವೀವ್ಸ್ ನ್ನು ದಾಟುತ್ತಿದೆ. ಇದೂ ದಾಖಲೆ. ಈಗಾಗಲೇ ಇವರ ಯೂಟ್ಯೂಬ್ 2 ಕೋಟಿ ಸಬ್‌ಸ್ಕೈಬ್ ದಾಟಿದೆ.

ಎಲೆಕ್ಟ್ರಾರಲ್ ಬಾಂಡ್ ಮತ್ತು ಡಿಕ್ಟೇಟರ್ ಶಿಪ್ ಬಗ್ಗೆ ಅವರು ಕಳೆದ ಹತ್ತು ದಿನಗಳ ಒಳಗೆ ಎರಡು ಕಾರ್ಯಕ್ರಮ ಪ್ರಸಾರ ಮಾಡಿದ್ರು. ಎರಡೂ ಒಂದು ಕೋಟಿ ವೀವ್ಸ್ ಅನ್ನೂ ದಾಟಿತು. ಅವರ ಯಾವುದೇ ಕಾರ್ಯಕ್ರಮ ಎಪ್ಪತ್ತು ಲಕ್ಷಕ್ಕಿಂತ ಕಡಿಮೆ ವೀವ್ಸ್ ಪಡೆಯೋದು ಇಲ್ಲವೇ ಇಲ್ಲ.

ಹಾಗಂತ, ಈ ರಾಠಿ ಹೊಸದೇನೂ ಹೇಳುತ್ತಿಲ್ಲ. ರಾಠಿ ಹೇಳುವುದನ್ನೇ ರವೀಶ್ ಕುಮಾರ್, ಪ್ರಸೂನ್ ಭಾಜಪೇಯಿ ಅಜಿತ್ ಅಂಜುಮ್, ಆಕಾಶ್ ಬ್ಯಾನರ್ಜಿ ಎಲ್ಲರೂ ಹೇಳ್ತಿದ್ದಾರೆ. ಆದರೆ ಅವರೆಲ್ಲರಿಗಿಂತ ಭಿನ್ನವಾಗಿ ನಿರೂಪಿಸುವುದು ಮತ್ತು ಪ್ರಬಲ ಕಂಟೆಂಟ್‌ನೊಂದಿಗೆ ಹೇಳುವುದು ರಾಠಿ ವಿಶೇಷತೆ.

ನೀವು ಅವರ ವಿಡಿಯೋವನ್ನು ತೆರೆದರೆ ಒಂದು ವಿಶೇಷ ಸೆಳೆತಕ್ಕೆ ಒಳಗಾಗ್ತಿರಿ. ಅವರ ವಿಡಿಯೋದಲ್ಲಿ ಮನೆಮಗನಂಥ ಪ್ರೀತಿ, ಪ್ರಾಮಾಣಿಕತೆ ಕಾಣಿಸ್ತದೆ. ಜೊತೆಗೆ ಮಾತಿನಲ್ಲಿಯ ವೇಗ ವೀಕ್ಷಕರನ್ನು ಹಿಡಿದಿಡುತ್ತದೆ. ದೇಹ ಭಾಷೆಯೂ ಅತ್ಯಂತ ಆಕರ್ಷಕ.

2013 ರಲ್ಲಿ ಯೂಟ್ಯೂಬ್ ಆರಂಭಿಸಿದ ರಾಠಿ ಕಳೆದ 11 ವರ್ಷಗಳಲ್ಲಿ 639 ವಿಡಿಯೋಗಳನ್ನು ಪ್ರಸಾರ ಮಾಡಿದ್ದಾರೆ ಮತ್ತು ಒಟ್ಟು 235 ಕೋಟಿಗೂ ಅಧಿಕ ವೀಕ್ಷಣೆಯನ್ನು ಇವು ಪಡೆದಿವೆ. ಇದೂ ದಾಖಲೆ. ಅಂದಹಾಗೆ, ಹರಿಯಾಣದ ಜಾಟ್ ಸಮುದಾಯದ ಯುವಕ ಇಷ್ಟೊಂದು ಸಣ್ಣ ಅವಧಿಯಲ್ಲಿ ಮತ್ತು ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಎತ್ತರಕ್ಕೆ ಏರಲು ಕಾರಣ ಏನು?

12ನೇ ತರಗತಿಯವರೆಗೆ ಹರಿಯಾಣದಲ್ಲಿ ಶಿಕ್ಷಣ ಪಡೆದ ರಾಠಿ ಆ ಬಳಿಕ ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ ಹೋದ್ರು. ಅಲ್ಲಿ ಬಿ ಈ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಮಾಸ್ಟರ್ಸ್ ಇನ್ ರಿನಿವಲ್ ಎನರ್ಜಿಯಲ್ಲಿ ಪಿಜಿ ಶಿಕ್ಷಣ ಪಡೆದರು. 2021 ರಲ್ಲಿ ತನ್ನ ಗೆಳತಿ ಜರ್ಮನಿಯ ಜೂಲಿಯನ್ನು ವಿವಾಹವಾದರು.

ಹಾಗಂತ ಅವರ ಯಾವುದೇ ವಿಡಿಯೋ ನೋಡಿದ್ರೂ ಅದರ ಹಿಂದೆ ಅಧ್ಯಯನ, ಶ್ರಮ ಎದ್ದು ಕಾಣುತ್ತೆ. ವಿಡಿಯೋ ತಯಾರಿಸುವುದಕ್ಕೆ ಕನಿಷ್ಠ ಅವರು ಒಂದು ವಾರ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಅರ್ಧದಷ್ಟು ದಿನಗಳನ್ನು ವಿಷಯದ ಮೇಲಿನ ಅಧ್ಯಯನಕ್ಕೆ ಮೀಸಲಿಡ್ತಾರೆ.

ಆರಂಭದಲ್ಲಿ ಅವರು ತನ್ನ ಐ ಫೋನ್ ನಲ್ಲಿ ಸ್ವತಃ ರೆಕಾರ್ಡ್ ಮಾಡ್ತಾ ಇದ್ದರಂತೆ. ಎಡಿಟ್ ಮಾಡ್ತಾ ಇದ್ರಂತೆ. ಆ ಬಳಿಕ ಪ್ರಸಾರ ಮಾಡ್ತಾ ಇದ್ರಂತೆ. ಆದರೆ ಈಗ ಅವರ ಜೊತೆ ಐದು ಆರು ಮಂದಿಯ ತಂಡ ಕೆಲಸ ಮಾಡ್ತಿದೆ. ಇವರಲ್ಲಿ ಸಂಶೋಧಕರು ವಿಷಯ ತಜ್ಞರು ಇದ್ದಾರೆ.

ಇವತ್ತು ಅವರ ಒಂದೊಂದು ಕಾರ್ಯಕ್ರಮಕ್ಕೂ ಲಕ್ಷಾಂತರ ರೂಪಾಯಿ ಜಾಹೀರಾತಿನ ಮೂಲಕ ಹಣ ಹರಿದು ಬರುತ್ತಿದೆ. ಇವತ್ತು ಅವರ ವಿಡಿಯೋಗಳಿಗೆ ಕಂಪನಿಗಳು, ಹೋಟೆಲ್ ಗಳು, ಪರ್ಯಾಯ ಮಾಧ್ಯಮಗಳು ಪ್ರಾಯೋಜಕತ್ವ ನೀಡುತ್ತಿವೆ. ಅವರು ಯೂಟ್ಯೂಬ್ ಚಾನೆಲ್ ಅಲ್ಲದೆ ವ್ಲೋಗ್ಸ್ ಮತ್ತು ಶಾರ್ಟ್ಸ್ ಗಳನ್ನು ಮಾಡುತ್ತಾರೆ. ಚಾಟ್ ಜಿಪಿಟಿಯಂಥ ಕೋರ್ಸ್‌ಗಳನ್ನು ಮಾಡುತ್ತಾರೆ. ಕುಕು ಎಫ್‌ಎಮ್ ರೀತಿಯ ಹಲವು ಪ್ಲಾಟ್‌ಫಾರ್ಮ್ ಗೆ ಪೊಡ ಕಾಸ್ಟ್ ಮಾಡ್ತಾರೆ. ಇನ್ನೂ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಈಗ ಹಣಕ್ಕೆ ಬರವಿಲ್ಲ.

ನಿಜವಾಗಿ, ಸತ್ಯ ಹೇಳದ ಮತ್ತು ಪ್ರಭುತ್ವದ ಆಲಾಪನೆ ಮಾಡ್ತಾ ಇರುವ ಮುಖ್ಯವಾಹಿನಿ ಟಿವಿ ಚಾನಲ್ ಗಳೇ ರಾಠಿಯ ಜನಪ್ರಿಯತೆಗೆ ಪರೋಕ್ಷ ಕಾರಣ ಎಂದೇ ಹೇಳಬೇಕು. ಜನರು ಸತ್ಯ ಹೇಳುವವರನ್ನು ಬಯಸ್ತಾ ಇದ್ರು. ಪ್ರಭುತ್ವದ ಸುಳ್ಳು, ದೌರ್ಜನ್ಯಗಳ ಬಗ್ಗೆ ಮುಲಾಜು ಇಲ್ಲದೆ ಮಾತಾಡುವವರನ್ನು ಕಾಯ್ತಾ ಇದ್ರು. ಚಾನೆಲ್ ಆಂಕರ್‌ಗಳು ಇದರಲ್ಲಿ ದಯನೀಯ ವೈಫಲ್ಯ ಕಂಡಾಗ ಜನರು ರಾಠಿಯತ್ತ ವಾಲಿದ್ರು. ಇವತ್ತು ಹಿಂದಿ ಇಂಗ್ಲಿಷ್ ಸಹಿತ ಯಾವುದೇ ಚಾನೆಲ್‌ಗಳ ಯೂಟ್ಯೂಬ್‌ಗಳಿಗೆ ಇಲ್ಲದ ಚಂದಾದಾರಿಕೆ ರಾಠಿ ಯೂಟ್ಯೂಬ್‌ಗೆ ಇದೆ. ರಾಠಿಯ ಯೂಟ್ಯೂಬ್‌ಗೆ ಸಿಗುವ ವೀವ್ಸ್ ನ ಕಾಲುಭಾಗವೂ ಹಿಂದಿ ಇಂಗ್ಲಿಷ್ ಚಾನೆಲ್‌ಗಳ ಕಾರ್ಯಕ್ರಮಗಳಿಗೆ ಇವತ್ತು ಸಿಕ್ತಾ ಇಲ್ಲ. ಅತ್ಯಂತ ಸ್ಫುಟವಾದ ಮತ್ತು ನಿರರ್ಗಳವಾದ ಹಿಂದಿ ಭಾಷೆಯಲ್ಲಿ ರಾಠಿ ಆಡುವ ಮಾತುಗಳು ಹಿಂದಿ ರಾಜ್ಯಗಳಲ್ಲಿ ತಲ್ಲಣವನ್ನೇ ಸೃಷ್ಟಿಸುತ್ತಿದೆ. ಹಿಂದಿಯನ್ನು ಅಷ್ಟಾಗಿ ಹಚ್ಚಿಕೊಳ್ಳದ ದಕ್ಷಿಣ ಭಾರತದಲ್ಲೂ ಈ ಯುವಕ ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here