ಸನ್ಮಾರ್ಗ ವಾರ್ತೆ
ತೊಡುಪುಝ, 23: ಮಂಗಳೂರಿನಲ್ಲಿ ಕಾಲು ಮುರಿದು ಕಷ್ಟಕ್ಕೊಳಗಾಗಿದ್ದ ಕೇರಳದ ಇಡುಕ್ಕಿ ನಿವಾಸಿಯಾದ ವಿದ್ಯಾರ್ಥಿನಿ ದೇವಿಕಾ ಕೇರಳದ ಸಚಿವ ಎಂಎಂ ಮಣಿ ಮತ್ತು ಇಡುಕ್ಕಿ ಜಿಲ್ಲಾಧಿಕಾರಿಯ ಪರಿಶ್ರಮದಿಂದಾಗಿ ಊರಿಗೆ ಆಂಬುಲೆನ್ಸ್ ನಲ್ಲಿ ತಲುಪಿದ್ದಾರೆ.
ಮಂಗಳೂರಿನಲ್ಲಿ ಬಿಬಿಎ ಎವಿಯೇಶನ್ ಕಲಿಯುತ್ತಿದ್ದ ದೇವಿಕಾ ರವೀಂದ್ರನ್, ಉಳ್ಳಾಲದ ಸೋಮೇಶ್ವರದ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರೂ ಲಾಕ್ಡೌನ್ ಘೋಷಣೆಯಾದ ನಂತರ ಅವರು ಮನೆಯ ಬಾಲ್ಕನಿಯಿಂದ ಬಿದ್ದಿದ್ದರು. ಎರಡು ಕಾಲುಗಳ ಎಲುಬುಗಳು ಮುರಿದಿತ್ತು. ಸಹಪಾಠಿಗಳು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಒಂದು ತಿಂಗಳು ಕಾಲನ್ನು ನೆಲಕ್ಕೆ ಊರಬಾರದೆಂದು ವೈದ್ಯರು ಸೂಚಿಸಿದ್ದರು. ಇದಾದ ನಂತರ ತನ್ನನ್ನು ಊರಿಗೆ ಕರೆದುಕೊಂಡು ಹೋಗಿ ಎಂದು ದೇವಿಕಾ ಗೆಳೆಯರಿಗೆ ತಿಳಿಸಿದ್ದರು.
ಮಂಗಳೂರಿನ ಪತ್ರಕರ್ತರು, ಕೇರಳ ಸಮಾಜ ಕಾರ್ಯಕರ್ತರು ಸಚಿವ ಎಂಎಂ ಮಣಿಯವರನ್ನು ಮತ್ತು ಇಡುಕ್ಕಿ ಜಿಲ್ಲಾಧಿಕಾರಿಗೆ ವಿಷಯ ತಿಳಿಸಿದ್ದಾರೆ. ಸೋಮವಾರ ಪತ್ರಕರ್ತರು ದೇವಿಕಾರನ್ನು ತಲಪ್ಪಾಡಿ ಗಡಿಗೆ ತಲುಪಿಸಿದರು. ಅಲ್ಲಿಂದ ಕಾಂಞಂಗಾಡ್ ನಗರಸಭಾ ಸದಸ್ಯ ವಿವಿ ರಮೇಶ್ರ ಸಹಾಯದಲ್ಲಿ ಆಂಬುಲೆನ್ಸ್ ಸಿದ್ಧಪಡಿಸಿ ಇಡಲಾಗಿತ್ತು. ರಾತ್ರೆ ತೊಡುಪುಝಕ್ಕೆ ತಲುಪಿದ ದೇವಿಕಾರನ್ನು ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷೆ ನಡೆಸಿ ಮನೆಗೆ ಕರೆದುಕೊಂಡು ಹೋಗಲಾಯಿತು. ಮಂಗಳೂರಿನಿಂದ ಬಂದದ್ದರಿಂದ ಆರೋಗ್ಯ ಕಾರ್ಯಕರ್ತರ ಸಹಾಯದಂತೆ ದೇವಿಕಾ ಮನೆಯಲ್ಲಿ ನಿರೀಕ್ಷಣೆಯಲ್ಲಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












