ಅಸ್ಸಾಂ-ತೆಲಂಗಾಣ ಮುಖ್ಯಮಂತ್ರಿಗಳ ನಡುವೆ ವಾಗ್ಯುದ್ದಕ್ಕೆ ವೇದಿಕೆಯೊದಗಿಸಿದ ‘ಸರ್ಜಿಕಲ್ ಸ್ಟ್ರೈಕ್’

0
367

ಸನ್ಮಾರ್ಗ ವಾರ್ತೆ

ಹೈದರಾಬಾದ್: ಕಾಶ್ಮೀರದ ಪುಲ್ವಾಮಾ ದಾಳಿಗೆ ಮೂರು ವರ್ಷವಾಗುತ್ತಿರುವ ಸಂದರ್ಭದಲ್ಲಿ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಸದ್ಯ ರಾಜಕೀಯ ಚರ್ಚೆಗೆ ವೇದಿಕೆಯೊದಗಿಸಿದೆ. ತೆಲಂಗಾಣ ಹಾಗೂ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳ ನಡುವೆ ವಾಗ್ಯುದ್ಧಕ್ಕೆ ಕೂಡ ಕಾರಣವಾಗಿದೆ.

“ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಪಾಕ್ ನೆಲದಲ್ಲಿ ಸೇನೆಯು ಏರ್ ಸ್ಟ್ರೈಕ್ ನಡೆಸಿತ್ತು. ಈ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪುರಾವೆ ಕೇಳುವುದರಲ್ಲಿ ತಪ್ಪೇನಿಲ್ಲ. ನಾನು ಕೂಡ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳುತ್ತಿದ್ದೇನೆ” ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿಕೆ ನೀಡಿದ್ದರು.

“ತೆಲಂಗಾಣ ಮುಖ್ಯಮಂತ್ರಿಯವರ ಹೇಳಿಕೆಯನ್ನುದ್ದೇಶಿಸಿ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪುಲ್ವಾಮಾ ದಾಳಿಯ ವಾರ್ಷಿಕೋತ್ಸವದಂದು ಪ್ರತಿಪಕ್ಷಗಳು ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಶ್ನಿಸುವ ಮೂಲಕ ನಮ್ಮ ಹುತಾತ್ಮರನ್ನು ಮತ್ತೆ ಅವಮಾನಿಸಿದ್ದಾರೆ. ಗಾಂಧಿ ಕುಟುಂಬಕ್ಕೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸುವ ಪ್ರಯತ್ನದಲ್ಲಿ ತೆಲಂಗಾಣ ಮುಖ್ಯಮಂತ್ರಿಯವರು ಸೇನೆಗೆ ದ್ರೋಹ ಮಾಡಿದ್ದಾರೆ. ನಿಮ್ಮ ಜೀವನದುದ್ದಕ್ಕೂ ನನ್ನನ್ನು ಬೇಕಾದರೆ ನಿಂದಿಸಿ, ಆದರೆ ನಾನು ಹೆದರುವುದಿಲ್ಲ. ಸೇನೆಯ ನಿಷ್ಠೆಯ ಬಗ್ಗೆ ಮಾತನಾಡಬೇಡಿ” ಎಂದು ಸುದ್ದಿ ಸಂಸ್ಥೆ ಎ ಎನ್ ಐ ಯೊಂದಿಗೆ ಮಾತನಾಡುವ ವೇಳೆ ತಿಳಿಸಿದ್ದಾರೆ.

ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಕೆ. ಚಂದ್ರಶೇಖರ್ ರಾವ್, ಪಂಚ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿಯವರು ಧರ್ಮ ಮತ್ತು ಸೇನೆಯ ಉಲ್ಲೇಖಗಳನ್ನು ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. 2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಪಾಕಿಸ್ಥಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಕೀರ್ತಿ ಸೇನೆಗೆ ಸಲ್ಲುತ್ತದೆಯೇ ಹೊರತು ಬಿಜೆಪಿಗಲ್ಲ ಎಂದು ಹೇಳಿದ್ದರು.

ಮತದಾರರನ್ನು ತನ್ನ ಪರವಾಗಿ ಸಜ್ಜುಗೊಳಿಸಲು ಬಿಜೆಪಿ ಸರ್ಜಿಕಲ್ ಸ್ಟ್ರೈಕ್ಗಳನ್ನು ಬಳಸುತ್ತಿದೆ ಎಂದು ಕಿಡಿಕಾರಿದರು. ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತದೆ. ಈಗ ಜನರಲ್ ಬಿಪಿನ್ ರಾವತ್ ಫೋಟೋಗಳನ್ನು ಬಳಸುತ್ತಿದ್ದಾರೆ ಎಂದವರು ಹೇಳಿದ್ದರು.