ಸನ್ಮಾರ್ಗ ವಾರ್ತೆ
ಹೈದರಾಬಾದ್: ತೆಲಂಗಾಣದಲ್ಲಿ ವಕೀಲ ದಂಪತಿಗಳನ್ನು ಅಜ್ಞಾತ ವ್ಯಕ್ತಿಗಳು ಹಾಡಹಗಲೇ ಕೊಲೆ ಮಾಡಿದ ಘಟನೆ ನಡೆದಿದೆ. ತೆಲಂಗಾಣದ ಹೈಕೋರ್ಟಿನ ವಕೀಲ ಗಟ್ಟು ವಮನ್ ರಾವ್, ನಾಗಮಣಿ ಕೊಲೆಯಾದವರು.
ಪೆಡ್ಡಪ್ಪಳ್ಳಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಹೈದರಾಬಾದಿನಿಂದ ಮನೆಗೆ ಮರಳುವ ದಾರಿಯ ಮಧ್ಯೆ ಮಧ್ಯಾಹ್ನ ಎರಡು ಗಂಟೆಗೆ ದಂಪತಿಗಳು ಸಂಚರಿಸಿದ ಕಾರನ್ನು ರಾಮಗಿರಿ ಕ್ಷೇತ್ರದ ಕಲ್ವೆಚ್ಚೇರ್ಲ ಗ್ರಾಮದಲ್ಲಿ ಇಬ್ಬರು ತಡೆದಿದ್ದಾರೆ.ಕಾರಿನಿಂದ ಹೊರಗೆಳೆದು ಹಾಕಿ ಕಡಿದು ಕೊಲೆ ಮಾಡಿದ್ದಾರೆ. ತಲವಾರು ಉಪಯೋಗಿಸಿ ದಂಪತಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ವಕೀಲರ ಮೇಲೆ ಹಲ್ಲೆ ನಡೆದಿದೆ ಎಂಬ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಂಭೀರ ಗಾಯಗೊಂಡ ದಂಪತಿಗಳನ್ನು ಆಸ್ಪತ್ರೆಗೆ ಸಾಗಿಸಿದರು. ದುಷ್ಕರ್ಮಿಗಳು ಬಾಡಿಗೆ ಹಂತಕರೆಂದು ತನಿಖೆಯಲ್ಲಿ ಸ್ಪಷ್ಟವಾಗಿದ್ದು ಬಂಧನಕ್ಕೆ ವಿಶೇಷ ತಂಡವನ್ನು ಪೊಲೀಸರು ರಚಿಸಿದ್ದಾರೆ.
ಕೊಲೆಯ ಹಿಂದೆ ಟಿಆರ್ ಎಸ್ ನಾಯಕನ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿದ್ದು ವಕೀಲ ಗಟ್ಟು ವಮನ್ ರಾವ್ ಸಾಯುವ ಮೊದಲು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ದಂಪತಿಗಳ ಸಂಬಂಧಿಕರು ಇದೇ ಆರೋಪವನ್ನು ಮಾಡಿದ್ದಾರೆ. ದಂಪತಿಗಳು ಅನಧಿಕೃತ ಆಸ್ತಿ ಸಂಪಾದನೆಯ ಕೇಸು ಸಹಿತ ಅನೇಕ ವಿವಾದಾತ್ಮಕ ಪ್ರಕರಣಗಳಲ್ಲಿ ಹೋರಾಟ ನಡೆಸುತ್ತಿದ್ದರು.
ತೆಲಂಗಾಣ ಗೃಹ ಸಚಿವ ಮುಹಮ್ಮದ್ ಮಹ್ಮೂದ್ ಅಲಿ ಘಟನೆಯನ್ನು ಖಂಡಿಸಿದ್ದಾರೆ. ಇಂತಹ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುತ್ತದೆ.ಆರೋಪಿಗಳು ಶೀಘ್ರ ಬಂಧಿಸಲಾಗುವುದು. ಅವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಸಚಿವರು ಹೇಳಿದರು.












