ಇಸ್ಲಾಮಾಬಾದ್, ಜೂ. 11: ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸರಕಾರ ಕಠಿಣ ಕ್ರಮಕೈಗೊಂಡಿದ್ದು ಪಾಕಿಸ್ತಾನದ ಗಡಿಯಲ್ಲಿ ಕಾರ್ಯಾಚರಿಸುತ್ತಿದ್ದ 13 ತರಬೇತಿ ಕೇಂದ್ರಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಜಾಗತಿಕ ಭಯೋತ್ಪಾದನೆ ವಿರೋಧಿ ಹೋರಾಟದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಪೋರ್ಸ್ (ಎಫ್ಐಟಿಎಫ್) ಪ್ಲೀನರಿ ಸಭೆ ಮುಂದಿನ ವಾರ ಸಭೆ ಸೇರಲಿದ್ದು ಅದಕ್ಕೆ ಮುಂಚಿತವಾಗಿ ಪಾಕ್ ಸರಕಾರ ಕ್ರಮಕೈಗೊಂಡಿದೆ. ಭಯೋತ್ಪಾದಕ ಸಂಘಟನೆಗಳನ್ನು ಬೆಳೆಸುತ್ತಿರುವ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವ ಕ್ರಮವನ್ನು ಹಲವು ದೇಶಗಳು ಬೆಂಬಲಿಸುತ್ತಿವೆ. ತದನಂತರ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರೆ ತಯ್ಯಿಬ, ಜೈಷೆ ಮುಹಮ್ಮದ್, ಹಿಝ್ಬುಲ್ ಮುಜಾಹಿದೀನ್ ಸಂಘಟನೆಗಳ ಶಿಬಿರಗಳನ್ನು ಮುಚ್ಚಲಾಗಿದೆ. ಜೈಷೆ ಮುಹಮ್ಮದ್ ನ ಮುಝಪ್ಫರಾಬಾದ್ನಲ್ಲಿರುವ ಶವಾಯ್ ನಾಲ ಕ್ಯಾಂಪ್, ಮೀರ್ಪುರದ ಕಲ್ಚ್ ಸಂಹಂಜ್, ಗರಹೋನ್ ಜುಂಡಿಯ ಶಿಬಿರಗಳನ್ನು ಮುಟ್ಟುಗೋಲು ಹಾಕಲಾಗಿದ್ದು ಲಷ್ಕರೆ ತಯ್ಯಿಬದ ಮುಝಪ್ಫರಾಬಾದ್ನ ಎರಡು ಶಿಬಿರಗಳು ಮೀರ್ಪುರದ ಫರ್ಗೋಶ್ ಶಿಬಿರಗಳನ್ನು ಮುಟ್ಟುಗೋಲು ಹಾಕಿದೆ.
ಭಯೋತ್ಪಾದಕರೊಂದಿಗೆ ಸಂಬಂಧ ಇರಿಸಿಕೊಂಡಿವೆ ಎಂದು ಶಂಕೆಯಿದ್ದ 800 ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಶಿಕ್ಷಣ ಕೇಂದ್ರಗಳು ಹಾಗೂ ಕೆಲವು ಆಸ್ಪತ್ರೆಗಳನ್ನು ಈ ಹಿಂದೆಯೇ ಮುಚ್ಚಲಾಗಿತ್ತು. ಹೊಸ ಕ್ರಮದಿಂದಾಗಿ ಪಾಕಿಸ್ತಾನ ಕಪ್ಪ ಪಟ್ಟಿ ಸೇರಿಸುವ ಕ್ರಮ ಎದುರಿಸುವುದರಿಂದ ತಾತ್ಕಾಲಿಕವಾಗಿ ಪಾರಾಗಬಹುದಾಗಿದೆ. ಕಳೆದ ತಿಂಗಳು ಐಎಂಎಫ್ ಪಾಕಿಸ್ತಾನದ 600 ಕೋಟಿ ಡಾಲರ್ ಸಾಲವನ್ನು ಮನ್ನಾ ಮಾಡಿತ್ತು. ಓರ್ಲಂಡೊದಲ್ಲಿ ಸೇರಲಿರುವ ಎಫ್ಐಟಿಎಫ್ ಪ್ಲೀನರಿ ಸಭೆಯಲ್ಲಿ ಸಂಘಟನೆಯ ಮುಖ್ಯಸ್ಥಾನ ಚೀನಾದ ಪಾಲಾಗಲಿದೆ.












