ಭ್ರಷ್ಟಾಚಾರ, ಲೈಂಗಿಕ ಕಿರುಕುಳ; 12 ಕಂದಾಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

0
605

ಹೊಸದಿಲ್ಲಿ, ಜೂ.11: ಭ್ರಷ್ಟಾಚಾರ, ಲೈಂಗಿಕ ಕಿರುಕುಳ ಇತ್ಯಾದಿ ಆರೋಪ ಎದುರಿಸುತ್ತಿರುವ ಹನ್ನೆರಡು ಮಂದಿ ಹಿರಿಯ ರೆವೆನ್ಯೂ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಕೇಂದ್ರ ವಿತ್ತ ಸಚಿವಾಲಯ ಆದೇಶ ಹೊರಡಿಸಿದೆ. ದುರಾಡಳಿತ, ಭ್ರಷ್ಟಾಚಾರ, ಲೈಂಗಿಕ ಕಿರುಕುಳ ಮುಂತಾದ ಅಪರಾಧ ಕೃತ್ಯದಲ್ಲಿ ಒಳಗೊಂಡವರನ್ನು ಸೇವೆಯಿಂದ ಹೊರಗಿಡುವ ನಿಯಮದ ಪ್ರಕಾರ ಕಡ್ಡಾಯ ನಿವೃತ್ತಿ ಆದೇಶ ಹೊರಡಿಸಲಾಗಿದ್ದು ಸುತ್ತೋಲೆಯನ್ನು ವಿತ್ತಸಚಿವಾಲಯ ಸೋಮವಾರ ಹೊರಡಿಸಿದೆ.

ಇಂಡಿಯನ್ ರೆವೆನ್ಯೂ ಸೇವೆಯಿಂದ ಏಳು ಮಂದಿ ಆಯುಕ್ತರು ಮತ್ತು ಓರ್ವ ಜಂಟಿ ಆಯುಕ್ತ ಮೂವರು ಹೆಚ್ಚುವರಿ ಆಯುಕ್ತರು ಒಬ್ಬ ಸಹಾಯ

ಆಯುಕ್ತರು ಕಡ್ಡಾಯ ನಿವೃತ್ತಿ ಶಿಕ್ಷೆಗೆ ಗುರಿಯಾಗಲಿದ್ದಾರೆ. ರೆವೆನ್ಯೂ ಇಲಾಖೆಯ ಅತ್ಯಂತ ಉನ್ನತ ಸ್ಥಾನಗಳಲ್ಲಿ ಆಯುಕ್ತ ಹುದ್ದೆ ಸೇರಿದ್ದು ಕಡ್ಡಾಯ ನಿವೃತ್ತಿ ಆದೇಶ ಪಡೆದಿರುವ ಹನ್ನೆರಡು ಮಂದಿಯಲ್ಲಿ 12 ಮಂದಿ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ಜಂಟಿ ಕಮಿಶನರ್ ಅಶೋಕ್ ಅಗರ್‍ವಾಲ್, ಆಯುಕ್ತ ಎಸ್‍ಕೆ ಶ್ರೀವಾಸ್ತವ, ರೆವೆನ್ಯೂ ಅಧಿಕಾರಿ ಹೋಮಿ ರಾಜ್‍ವಾನಾಶ್, ಬಿಬಿರಾಜೇಂದ್ರ ಪ್ರಸಾದ್, ಅಜೋಯ್ ಕುಮಾರ್ ಸಿಂಗ್, ಅಲೋಕ್ ಕುಮಾರ್ ಮಿತ್ರ, ಚಂದರ್ ಸೈನಿ ಭಾರತಿ, ಅಂದಾಸನು ರವೀಂದರ್, ವಿವೇಕ್ ಬಾತ್ರ, ಶ್ವೇತಬ್ ಸುಮನ್, ರಾಂಕುಮಾರ್ ಭಾರ್ಗವರಿಗೆ ನೋಟಿಸು ಜಾರಿ ಮಾಡಲಾಗಿದೆ. ಪ್ರಮುಖ ವ್ಯಾಪಾರಿಯ ಭ್ರಷ್ಟಾಚಾರಕ್ಕೆ ಸಹಕಾರ ನೀಡಿದ್ದಕ್ಕಾಗಿ ಅಶೋಕ್ ಅಗರ್‍ವಾಲ್ 1999ರಿಂದ 2014ರವರೆಗೆ ಅಮಾನತುಗೊಂಡಿದ್ದರು. ಇವರು 12 ಕೋಟಿಗಿಂತಲೂ ಹೆಚ್ಚು ಅಕ್ರಮ ಆಸ್ತಿ ಗಳಿಸಿದ್ದು ಸಿಬಿಐ ಪತ್ತೆ ಮಾಡಿತ್ತು. ಎಸ್‍ಕೆ ಶ್ರೀವಾಸ್ತವ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಅಕ್ರಮ ಆಸ್ತಿ ಗಳಿಕೆಗಾಗಿ 2009ರಿಂದ ಅಮಾನತುಗೊಂಡಿರುವ ಅಧಿಕಾರಿ ಹೋಮಿ ರಾಜ್‍ವನಾಶ್ ಆಗಿದ್ದಾರೆ. ಇವರು ಅಕ್ರಮವಾಗಿ 3. 17 ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ ಎಂದು ತನಿಖೆಯಲ್ಲಿ ಪತ್ತೆಯಾಗಿತ್ತು. ಹತ್ತು ವರ್ಷದಿಂದ ಇಲಾಖಾ ಮಟ್ಟದ ತನಿಖಾ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧವೂ ವಿತ್ತಸಚಿವಾಲಯ ಕ್ರಮ ಜರಗಿಸುತ್ತಿದೆ.