ಪರಮಶಿವಂ ಎಂಬವರು ಸಮೀರ್ ಅಹ್ಮದ್ ಆಗುವಾಗ ಎದುರಾಗುವ ಸವಾಲುಗಳು

0
244

ಸನ್ಮಾರ್ಗ ಸಂಪಾದಕೀಯ

2026 ಅಕ್ಟೋಬರ್ 15ರಂದು ಸುಪ್ರೀಮ್ ಕೋರ್ಟ್ ನೀಡಿದ ತೀರ್ಪು ಸಾಕಷ್ಟು ಚರ್ಚೆಗೆ ಒಳಗಾಗದೇ ಮತ್ತು ಸಾರ್ವಜನಿಕ ಗಮನವನ್ನೂ ಸೆಳೆಯದೇ ಸರಿದು ಹೋದಂತಿದೆ.

‘ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಿರುವ ಹಿಂದುಳಿದ ಸಮುದಾಯದ ಹಿಂದೂ ವ್ಯಕ್ತಿ ಇಸ್ಲಾಮ್ ಅಥವಾ ಇನ್ನಿತರ ಹಿಂದೂಯೇತರ ಧರ್ಮಕ್ಕೆ ಧರ್ಮಾಂತರಗೊಂಡರೆ ಅವರ ಹಿಂದುಳಿದ ಸ್ಥಾನಮಾನ ರದ್ದುಗೊಳ್ಳುತ್ತದೆ’ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. ಮಾತ್ರವಲ್ಲ, ‘ಹೊಸ ಧರ್ಮದಲ್ಲಿ ಮೀಸಲಾತಿ ಪಡೆದುಕೊಳ್ಳುವುದಕ್ಕೆ ಹಳೆ ಧರ್ಮದ ಹಿಂದುಳಿದಿರುವಿಕೆಯ ಸ್ಥಾನಮಾನವನ್ನು ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದೂ ಹೇಳಿದೆ. ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ತೀರ್ಪು ನೀಡುವುದಕ್ಕೆ ಕಾರಣವಾದ ಪ್ರಕರಣ ಹೀಗಿದೆ:

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪರಮ ಶಿವಂ ಎಂಬವರು 2015ರಲ್ಲಿ ಇಸ್ಲಾಮ್ ಧರ್ಮಕ್ಕೆ ಧರ್ಮಾಂತರಗೊಂಡಿದ್ದರು ಮತ್ತು ತನ್ನ ಹೆಸರನ್ನು ಸಮೀರ್ ಅಹ್ಮದ್ ಎಂದೂ ಬದಲಾಯಿಸಿಕೊಂಡಿದ್ದರು. ತನಗೆ ‘ಮುಸ್ಲಿಮ್ ಲಬ್ಬೈ’ ಸಮುದಾಯದ ಸರ್ಟಿಫಿಕೇಟ್ ನೀಡಬೇಕೆಂದು ಅವರು ಅರ್ಜಿ ಸಲ್ಲಿಸಿದರು. ಮುಸ್ಲಿಮ್ ಲಬ್ಬೈ ಎಂಬುದು ತಮಿಳುನಾಡಿನಲ್ಲಿ ಮುಸ್ಲಿಮ್ ಸಮುದಾಯದ ಹಿಂದುಳಿದ ವರ್ಗವಾಗಿ ಗುರುತಿಸಿ ಕೊಂಡಿದೆ. ಈ ವರ್ಗಕ್ಕೆ ತಮಿಳುನಾಡಿನಲ್ಲಿ 3.5% ಮೀಸಲಾತಿ ಇದೆ. ಸಮೀರ್ ಅಹ್ಮದ್ ಅವರು ಈ ಬೇಡಿಕೆ ಇಡುವುದಕ್ಕೆ ಒಂದು ಕಾರಣವೂ ಇತ್ತು. ಅವರು ಹಿಂದೂ ಧರ್ಮದಲ್ಲಿ ಇದ್ದಾಗ ಸೇನೈ ತಲೈವರ್ ಎಂಬ ಸಮುದಾಯಕ್ಕೆ ಸೇರಿದ್ದರು. ಇದು ತಮಿಳುನಾಡಿನಲ್ಲಿ ಹಿಂದುಳಿದ ವರ್ಗದಲ್ಲಿ ಗುರುತಿಸಿಕೊಂಡಿತ್ತು. ಆದ್ದರಿಂದ ಅಲ್ಲಿ ಲಭ್ಯವಿದ್ದ ಹಿಂದುಳಿದ ವರ್ಗದ ಮೀಸಲಾತಿ ಸೌಲಭ್ಯವನ್ನು ಮುಸ್ಲಿಮ್ ಲಬ್ಬೈ ಸಮುದಾಯಕ್ಕೆ ಸೇರಿಸುವ ಮೂಲಕ ಮುಂದುವರಿಸಬೇಕೆಂದು ಅವರು ಬೇಡಿಕೆ ಇಟ್ಟಿದ್ದರು. ಆದರೆ ತಾಲೂಕು ತಹಶೀಲ್ದಾರರು ಇವರ ಬೇಡಿಕೆಯನ್ನು 2020ರಲ್ಲಿ ತಿರಸ್ಕರಿಸಿದರು. ಇದನ್ನು ಪ್ರಶ್ನಿಸಿ ಸಮೀರ್ ಅಹ್ಮದ್ ಅವರು 2022ರಲ್ಲಿ ಮದ್ರಾಸ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದರು. ಈ ಅರ್ಜಿ ವಿಚಾರಣೆಯಲ್ಲಿ ಇರುವಾಗಲೇ, ರಾಜ್ಯ ಸರಕಾರ ಕಾನೂನೊಂದನ್ನು ಜಾರಿ ಮಾಡಿತು. ‘ಇಸ್ಲಾಮ್‌ಗೆ ಧರ್ಮಾಂತರಗೊಂಡವರಿಗೆ ಹಿಂದುಳಿದ ವರ್ಗದ ಸರ್ಟಿಫಿಕೇಟ್ ಕೊಡಬಹುದು’ ಎಂದು ಅದು ಹೇಳಿತು. ಆದರೆ, ಹೈಕೋರ್ಟ್ ನ್ಯಾಯಾಧೀಶರಾದ ಸ್ವಾಮಿನಾಥನ್ ಮತ್ತು ಬಾಲಾಜಿ ಅವರನ್ನೊಳಗೊಂಡ ನ್ಯಾಯಪೀಠವು ಸರಕಾರದ ಈ ಕಾನೂನನ್ನು ಅಸಾಂವಿಧಾನಿಕ ಎಂದು ಹೇಳಿ ರದ್ದುಪಡಿಸಿತು. ಮಾತ್ರವಲ್ಲ, ಸಮೀರ್ ಅವರ ಅರ್ಜಿಯನ್ನು 2026 ಜೂನ್ 25ರಂದು ವಜಾ ಮಾಡಿತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸುಪ್ರೀಮ್ ಕೋರ್ಟ್ನ ಬಾಗಿಲು ಬಡಿಯಿತು. ಇದೀಗ ಸುಪ್ರೀಮ್ ಕೋರ್ಟ್ 2026 ಅಕ್ಟೋಬರ್ 15ರಂದು ತಮಿಳುನಾಡು ಸರಕಾರದ ಅರ್ಜಿಯನ್ನು ತಿರಸ್ಕರಿಸಿತಲ್ಲದೇ ಮದ್ರಾಸ್ ಹೈಕೋರ್ಟ್ನ ತೀರ್ಪನ್ನು ಎತ್ತಿ ಹಿಡಿಯಿತು. ಆದರೆ,

ಈ ತೀರ್ಪು ಸರಿಯೇ ಎಂಬ ಪ್ರಶ್ನೆಯೊಂದು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಧರ್ಮಾಂತರ ಎಂಬುದು ವೈಯಕ್ತಿಕ. ಅದು ವಿಚಾರ ಬದಲಾವಣೆಗೆ ಸಂಬಂಧಿಸಿದ್ದು. ಆದರೆ ಮೀಸಲಾತಿ ಎಂಬುದು ಸಾಮಾಜಿಕ ಉದ್ದೇಶದಿಂದ ನೀಡಲಾಗುತ್ತಿರುವ ಸೌಲಭ್ಯ. ಸಾಮಾಜಿಕವಾಗಿ ಹಿಂದುಳಿದಿರುವವರು ಮತ್ತು ಬಡತನ, ಅನಕ್ಷರತೆ ಮತ್ತು ವಿವಿಧ ಕಟ್ಟುಪಾಡುಗಳ ಕಾರಣದಿಂದಾಗಿ ಸಮಾಜದಲ್ಲಿ ತಿರಸ್ಕೃತರಾಗಿರುವವರನ್ನು ಮುಖ್ಯವಾಹಿನಿಗೆ ಕರೆತರುವುದಕ್ಕಾಗಿ ಮಾಡಿಕೊಳ್ಳಲಾಗಿರುವ ವ್ಯವಸ್ಥೆಯೇ ಮೀಸಲಾತಿ. ವ್ಯಕ್ತಿ ಧರ್ಮಾಂತರಗೊಂಡ ತಕ್ಷಣ ಆತನ/ಕೆಯ ಸ್ಥಿತಿ ಬದಲಾಗುವುದಿಲ್ಲ. ಆತ ತನ್ನ ಆರಾಧನಾ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಿರಬಹುದು. ಆದರೆ ಸಾಮಾಜಿಕ ಸ್ಥಿತಿಯಲ್ಲಿ ಅದು ಮಹತ್ತರ ಬದಲಾವಣೆ ತರುವುದಕ್ಕೆ ಸಮಯ ಬೇಕು. ಇವರು ಆವರೆಗೆ ಅನುಭವಿಸಿಕೊಂಡು ಬಂದಿರುವ ಜಾತಿ ತಾರತಮ್ಯ, ಹಿಂಸೆ, ಅವಮಾನ ಇತ್ಯಾದಿಗಳೆಲ್ಲ ಧರ್ಮಾಂತರದ ಕಾರಣಕ್ಕಾಗಿ ದಿನ ಬೆಳಗಾಗುವುದರೊಳಗೆ ಬದಲಾಗುವುದಿಲ್ಲ. ಅವರು ಧರ್ಮಾಂತರಗೊಂಡರೂ ವಾಸಸ್ಥಳ ಬದಲಾಯಿಸಿರುವುದಿಲ್ಲ. ವೃತ್ತಿ ಬದಲಾಯಿಸಿರುವುದಿಲ್ಲ. ಹೀಗಿರುವಾಗ, ಧರ್ಮಾಂತರವಾದ ತಕ್ಷಣ ಇವರನ್ನು ಆವರೆಗೆ ಹೀನಾಯವಾಗಿ ಮತ್ತು ತಾರತಮ್ಯದಿಂದ ನಡೆಸಿ ಕೊಂಡು ಬಂದ ಅದೇ ನೆರೆಕರೆಯವರು ಮತ್ತು ಸಮಾಜ ಆ ಎಲ್ಲವನ್ನೂ ಕೈಬಿಟ್ಟು ಏಕಾಏಕಿ ಗೌರವಯುತವಾಗಿ ನಡೆಸಿಕೊಳ್ಳುತ್ತದೆ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ. ಈ ಬಗ್ಗೆ ರಂಗನಾಥ್ ಮಿಶ್ರಾ ಮತ್ತು ಸಾಚಾರ್ ಆಯೋಗಗಳೂ ಬೆಳಕು ಚೆಲ್ಲಿವೆ. ‘ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಧರ್ಮಾಂತರಗೊಂಡ ಹಿಂದೂ ಧರ್ಮದ ಹಿಂದುಳಿದ ಸಮುದಾಯದ ಮಂದಿ ಈಗಲೂ ಸಾಮಾಜಿಕವಾಗಿ ಹಿಂದುಳಿದಿದ್ದಾರೆ’ ಎಂದು ಈ ಆಯೋಗಗಳ ವರದಿಗಳು ಹೇಳಿದ್ದುವು. ಮಾತ್ರವಲ್ಲ, ‘ಹಿಂದುಳಿದ ವರ್ಗದ ಸ್ಥಾನಮಾನವನ್ನು ಧರ್ಮಾಧಾರಿತವಾಗಿ ನೀಡುವ ಬದಲು ಧರ್ಮ ನಿರಪೇಕ್ಷವಾಗಿ ನೀಡಬೇಕು’ ಎಂದು ನ್ಯಾಯಮೂರ್ತಿ ರಂಗನಾಥ್ ಆಯೋಗ ಶಿಫಾರಸ್ಸು ಮಾಡಿತು. ‘ಎಲ್ಲ ಧರ್ಮಗಳಲ್ಲೂ ಹಿಂದುಳಿದವರಿದ್ದಾರೆ, ಆದ್ದರಿಂದ ಹಿಂದುಳಿದ ವರ್ಗ ಎಂಬ ವಿಧಾನವನ್ನು ಧರ್ಮಾಧಾರಿತ ವಾಗಿ ನೋಡದೇ ಸಾಮಾಜಿಕ ವಾಸ್ತವವಾಗಿ ನೋಡಬೇಕು’ ಎಂದು ಅದು ವಾದಿಸಿತ್ತು. ಇಂಥ ಸ್ಥಿತಿಯಲ್ಲಿ,

ಸುಪ್ರೀಮ್ ಕೋರ್ಟ್ ತೀರ್ಪು ಪ್ರಕಟವಾಗಿದೆ. ಈ ತೀರ್ಪಿನಿಂದಾಗಿ ಸಂವಿಧಾನದ ಪರಿಚ್ಛೇದ 14, 15 ಮತ್ತು 25ರ ಉಲ್ಲಂಘನೆಯಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಅದನ್ನು ಪಾಲಿಸುವ ಸ್ವಾತಂತ್ರ‍್ಯವನ್ನು ಸಂವಿಧಾನವೇ ನೀಡುತ್ತದೆ. ಆದರೆ, ಸುಪ್ರೀಮ್‌ನ ಈ ತೀರ್ಪು ದುರ್ಬಲ ಮತ್ತು ಹಿಂದುಳಿದ ಸಮುದಾಯದ ಜನರನ್ನು ಧರ್ಮಾಂತರದಿAದ ತಡೆಯುವುದಕ್ಕೆ ಪರೋಕ್ಷವಾಗಿ ಒತ್ತಾಯಿಸುತ್ತದೆ ಎಂದೂ ಹೇಳಲಾಗುತ್ತಿದೆ. ಹಾಗಂತ,

ಮೀಸಲಾತಿಯನ್ನು ಪಡೆದುಕೊಳ್ಳುತ್ತಿರುವ ಹಿಂದುಳಿದ ಸಮುದಾಯದ ವ್ಯಕ್ತಿಯೋರ್ವ/ಳು ಇಸ್ಲಾಮ್ ಅಥವಾ ಕ್ರೈಸ್ತ ಧರ್ಮದಿಂದ ಆಕರ್ಷಿತವಾದರೂ ಆ ಧರ್ಮಕ್ಕೆ ಧರ್ಮಾಂತರಗೊಳ್ಳದಂತೆ ಈ ತೀರ್ಪು ತಡೆಯಬಹುದು ಎಂಬ ಕಳವಳವನ್ನು ತಿರಸ್ಕರಿಸುವಂತೆಯೂ ಇಲ್ಲ. ಒಂದುವೇಳೆ ಆತ ಧರ್ಮಾಂತರಗೊಂಡರೆ ತಕ್ಷಣಕ್ಕೆ ಆತ ಪಡೆಯುತ್ತಿರುವ ಮೀಸಲಾತಿ ಸಹಿತ ಹಿಂದುಳಿದ ವರ್ಗಕ್ಕೆ ಸಿಗುವ ಸೌಲಭ್ಯಗಳೆಲ್ಲವೂ ರದ್ದುಗೊಳ್ಳುತ್ತದೆ. ಆತ ಬದಲಾಯಿಸಿರುವುದು ವಿಚಾರವನ್ನಾದರೂ ಅದಕ್ಕಾಗಿ ಆತ ಭೌತಿಕ ಸೌಲಭ್ಯಗಳನ್ನು ಕಳಕೊಳ್ಳಬೇಕಾಗುತ್ತದೆ. ಆದರೆ ಈ ವಿಚಾರ ಬದಲಾವಣೆಯು ಆತನನ್ನು ಆರ್ಥಿಕವಾಗಿ ಸಬಲನನ್ನಾಗಿ ಮಾಡುವುದಿಲ್ಲ. ಸಾಮಾಜಿಕವಾಗಿ ಆವರೆಗೆ ಎದುರಿಸುತ್ತಾ ಬಂದ ತಾರತಮ್ಯಗಳಿಂದ ತಕ್ಷಣಕ್ಕೆ ಬಿಡುಗಡೆಯನ್ನೂ ಕೊಡುವುದಿಲ್ಲ. ಯಾಕೆಂದರೆ, ಆತ ವಿಚಾರ ಬದಲಾಯಿಸಿರುತ್ತಾನೆಯೇ ಹೊರತು ಆ ಪರಿಸರವನ್ನು ಬಿಟ್ಟು ಹೋಗಿರುವುದಿಲ್ಲ. ವಾಸ ಬದಲಾಯಿಸಿರುವುದಿಲ್ಲ. ವೃತ್ತಿಯನ್ನೂ ಬದಲಾಯಿಸಿರುವುದಿಲ್ಲ. ಆದ್ದರಿಂದ ವಿಚಾರ ಬದಲಾವಣೆಯು ಆತನಲ್ಲಿ ವೈಯಕ್ತಿಕ ಮಾರ್ಪಾಡು ಮಾಡಬಹುದೇ ಹೊರತು ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ಸ್ಥಿತಿಯಲ್ಲಿ ತಕ್ಷಣದ ಬದಲಾವಣೆಯನ್ನು ಮಾಡಲಾರದು. ಹೀಗಿರುವಾಗ,

ಇಸ್ಲಾಮ್ ಅಥವಾ ಕ್ರೈಸ್ತ ಧರ್ಮಕ್ಕೆ ಧರ್ಮಾಂತರಗೊಳ್ಳುವ ಹಿಂದುಳಿದ ಸಮುದಾಯದ ವ್ಯಕ್ತಿಯ ಮೀಸಲಾತಿ ಸೌಲಭ್ಯಗಳನ್ನು ರದ್ದುಪಡಿಸುವುದೆಂದರೆ, ಆತನಿಗೆ ಶಿಕ್ಷೆ ಕೊಟ್ಟಂತೆ ಆಗುವುದಿಲ್ಲವೇ? ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಮೀಸಲಾತಿ ಸೌಲಭ್ಯವನ್ನು ಕಳೆದುಕೊಳ್ಳಲು ಸಿದ್ಧವಿರುವವರು ಮಾತ್ರ ಧರ್ಮ ಪರಿವರ್ತನೆಗೆ ಸಿದ್ಧರಾಗಿ ಎಂದು ಭಯಪಡಿಸಿದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಸಂವಿಧಾನವು ಹಿಂದುಳಿದ ಜಾತಿ (SC) ಸ್ಥಾನವನ್ನು ಹಿಂದೂ, ಬೌದ್ಧ ಮತ್ತು ಕ್ರೈಸ್ತ ಧರ್ಮಗಳಿಗೆ ಮಾತ್ರ ಸೀಮಿತಗೊಳಿಸಿದೆ ಎಂಬುದು ನಿಜವೇ ಆಗಿದ್ದರೂ, ವಿಚಾರ ಕ್ರಾಂತಿಯ ಈ ದಿನಗಳಲ್ಲಿ ಈ ಬಗ್ಗೆ ಮರು ಅವಲೋಕನ ನಡೆಯಬೇಕಿದೆ.
ಜ್ಞಾನೇಶ್‌ ಕುಮಾರ್ ವಿರೋಧಿ ಪ್ರತಿಭಟನೆಯ ಭರಾಟೆಯಲ್ಲಿ ಸುಪ್ರೀಮ್ ತೀರ್ಪು ಸದ್ದಿಲ್ಲದೇ ಮತ್ತು ಸಾರ್ವ ಜನಿಕ ಚರ್ಚೆಗೆ ಒಳಗಾಗದೇ ಮರೆಯಾಗುವುದನ್ನು ತಡೆಯಬೇಕಿದೆ.