ತೀಸ್ತಾ ಸೆಟಲ್ವಾಡ್ ದಂಪತಿಗಳನ್ನು ಜೈಲಿಗೆ ಕಳುಹಿಸಲು ಆತುರವೇಕೆ? : ಸುಪ್ರೀಂ ತರಾಟೆ

0
242

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಳೆದ ಏಳು ವರ್ಷಕ್ಕೂ ಹೆಚ್ಚು ಕಾಲ ಜಾಮೀನಿನ ಮೇಲೆ ಹೊರಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ರನ್ನು ಮತ್ತೆ ಜೈಲಿಗೆ ಏಕೆ ಕಳುಹಿಸಲು ಬಯಸುತ್ತೀರಿ ಎಂದು ಸುಪ್ರೀಂ ಕೋರ್ಟ್ ಗುಜರಾತ್ ಪೊಲೀಸರು ಮತ್ತು ಕೇಂದ್ರ ತನಿಖಾ ದಳವನ್ನು ಪ್ರಶ್ನಿಸಿದೆ.

ಜಸ್ಟಿಸ್ ಎಸ್‌.ಕೆ ಕೌಲ್, ಎ.ಎಸ್ ಓಕಾ ಮತ್ತು ಬಿ.ವಿ ನಾಗರತ್ನರವರಿದ್ದ ಪೀಠವು ಗುಜರಾತ್ ಪೊಲೀಸರು ಮತ್ತು ಕೇಂದ್ರೀಯ ತನಿಖಾ ದಳ ಸಲ್ಲಿಸಿದ ಮೂರು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಸೆಟಲ್ವಾಡ್, ಆನಂದ್ ದಂಪತಿಯ ವಿರುದ್ಧ ವಿಚಾರಣೆ ನಡೆಸುತ್ತಿದೆ. 2002ರ ಗುಜರಾತ್ ದಂಗೆಯ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ದಂಪತಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯವು ಸೆಟಲ್ವಾಡ್ ಮತ್ತು ಆನಂದ್‌ಗೆ ನಿರೀಕ್ಷಣಾ ಜಾಮೀನು ಮತ್ತು ಸಾಮಾನ್ಯ ಜಾಮೀನು ಮಂಜೂರು ಮಾಡಿದೆ. ಆದರೆ ತನಿಖಾ ಸಂಸ್ಥೆಗಳು ಇನ್ನೂ ಚಾರ್ಜ್ ಶೀಟ್ ಸಲ್ಲಿಸಬೇಕಿದೆ ಎಂದು ಸೆಟಲ್ವಾಡ್ ಮತ್ತು ಆನಂದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

“ನೀವು ಯಾರನ್ನಾದರೂ ಎಷ್ಟು ಸಮಯದವರೆಗೆ ಕಸ್ಟಡಿಯಲ್ಲಿ ಇರಿಸಬಹುದು ಎಂಬುದು ಪ್ರಶ್ನೆಯಾಗಿದೆ ಎಂದು ಕೋರ್ಟ್ ಹೇಳಿದೆ. ಏಕೆಂದರೆ ನಿರೀಕ್ಷಣಾ ಜಾಮೀನು ನೀಡಿ ಏಳು ವರ್ಷಗಳು ಕಳೆದಿವೆ. ಆದರೂ ಈಗ ನೀವು ಆಕೆಯನ್ನು ಮತ್ತೆ ಜೈಲಿಗೆ ಕಳುಹಿಸಲು ಏಕೆ ಬಯಸುತ್ತೀರಿ”ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

2010 ಮತ್ತು 2013ರ ನಡುವೆ ಸಬ್ರಂಗ್ ಟ್ರಸ್ಟ್‌ಗೆ ಕೇಂದ್ರ ಸರ್ಕಾರದ ನಿಧಿಯಾಗಿ 1.4 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಕ್ಕಾಗಿ ಸೆಟಲ್ವಾಡ್ ಮತ್ತು ಆನಂದ್ ವಿರುದ್ಧ ಮೂರನೇ ಎಫ್‌ಐಆರ್ ದಾಖಲಿಸಲಾಗಿದೆ.