ದೇಶದಲ್ಲಿ ಭುಗಿಲೆದ್ದ ಕೃಷಿ ಮಸೂದೆ ವಿರೋಧಿ ಪ್ರತಿಭಟನೆ: ಇಂಡಿಯಾ ಗೇಟ್‍ನಲ್ಲಿ ರೈತರಿಂದ ಟ್ರಾಕ್ಟರ್ ಸುಟ್ಟು ಪ್ರತಿಭಟನೆ

0
383

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.28: ಕೃಷಿ ಮಸೂದೆ ವಿರುದ್ಧ ರೈತ ಪ್ರತಿಭಟನೆಯಿಂದ ದೇಶ ಕುದಿಯುತ್ತಿದೆ. ಸೋಮವಾರ ಬೆಳಗ್ಗೆ ರೈತರು ಪ್ರತಿಭಟನೆಯ ಭಾಗವಾಗಿ ದಿಲ್ಲಿಯ ಇಂಡಿಯಾ ಗೇಟ್‍ನಲ್ಲಿ ಟ್ರಾಕ್ಟರ್ ಸುಟ್ಟುಹಾಕಿದರು. ಬೆಳಗ್ಗೆ 7:30ಕ್ಕೆ ಇಪ್ಪತ್ತರಷ್ಟು ರೈತರು ಪ್ರತಿಭಟಿಸುತ್ತಾ ಬಂದು ಟ್ರಾಕ್ಟ್‌ರಗೆ ಬೆಂಕಿಯಿಟ್ಟರು. ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕಾಗಮಿಸಿ ಬೆಂಕಿ ಆರಿಸಿದ್ದಾರೆ.

ವಿವಾದಿತ ರೈತ ಮಸೂದೆಯ ವಿರುದ್ಧ ಉತ್ತರಭಾರತದಲ್ಲಿ ಪ್ರತಿಭಟನೆ ತೀವ್ರವಾಗಿದೆ. ಪಂಜಾಬ್, ಹರಿಯಾಣದಲ್ಲಿ ರೈತರ ಪ್ರತಿಭಟನೆ ಏರು ಗತಿಯಲ್ಲಿದೆ. ಪಂಜಾಬ್‍ನಲ್ಲಿ ಬುಧವಾರ ಆರಂಭವಾದ ‘ರೈಲ್ ರೋಕೋ’ ಪ್ರತಿಭಟನೆ ಮುಂದುವರಿಯುತ್ತಿದೆ.

ಪಂಜಾಬ್‍ನಲ್ಲಿ 31 ರೈತ ಸಂಘಟನೆಗಳ ಕೂಟವಿರುವ ಕಿಸಾನ್ ಮಝ್ದೂರ್ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೈಲು ತಡೆ ಮಾಡಿದರು. ಈ ಹೋರಾಟ ಮಂಗಳವಾರದವರೆಗೆ ಮುಂದುವರಿಯಲಿದೆ. ಅಮೃತಸರ-ದಿಲ್ಲಿ ರೈಲ್ವೆ ಮಾರ್ಗಕ್ಕೆ ಪ್ರತಿಭಟನಕಾರರು ರವಿವಾರ ತಡೆಯೊಡ್ಡಿದರು. ಸಾಮೂಹಿಕ ಅಡುಗೆ ಮತ್ತು ಮನೆಯಲ್ಲಿ ಆಹಾರ ಬೇಯಿಸಿ ತಂದು ರೈಲ್ವೆ ಹಳಿ ಮೇಲೆ ಧರಣಿ ಮುಂದುವರಿಯುತ್ತಿದೆ. ಹಲವಾರು ರೈತರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಜನಪ್ರತಿನಿಧಿಗಳ ರೈತರ ಪ್ರೀತಿ ಪ್ರಾಮಾಣಿಕವಾದರೆ 13 ಸಂಸದರು ರಾಜೀನಾಮೆ ನೀಡಿ ಹೋರಾಟಕ್ಕೆ ಬೆಂಬಲ ಸಾರಬೇಕೆಂದು ಕಿಸಾನ್ ಸಮಿತಿ ಪ್ರಧಾನ ಕಾರ್ಯದರ್ಶಿ ಸರ್ವನ್ ಸಿಂಗ್ ಆಗ್ರಹಿಸಿದರು. ಬಿಜೆಪಿ ನಾಯಕರಿಗೆ ಗ್ರಾಮಕ್ಕೆ ಬರಲು ಬಿಡುವುದಿಲ್ಲ ಎಂದು ರೈತರು ಆಣೆಹಾಕಿದರು.

ಮಸೂದೆ ಹಿಂಪಡೆಯದಿದ್ದರೆ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಹೋಗುತ್ತೇವೆ ಎಂದು ಸಂಘಟನೆ ಮುನ್ನೆಚ್ಚರಿಕೆಯನ್ನೂ ನೀಡಿದೆ. ಯಾವುದೇ ಕಾರಣದಿಂದಲೂ ಮಸೂದೆ ಜಾರಿಗೆ ಬಿಡುವುದಿಲ್ಲ ಎಂದು ಸಮಿತಿ ಘೋಷಿಸಿದೆ. ಪ್ರತಿಭಟನಾಕಾರರು ರಾಜ್ಯದಲ್ಲಿ ಮುಖ್ಯ ರಾಷ್ಟ್ರೀಯ ಹೆದ್ದಾರಿ ತಡೆಯೊಡ್ಡಿದರು. ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಪ್ರತಿಪಕ್ಷಗಳು ರೈತರ ಜೊತೆ ಸೇರಿವೆ. ವ್ಯಾಪಾರಿಗಳೂ ರೈತರಿಗೆ ಬೆಂಬಲ ಘೋಷಿಸಿದ್ದಾರೆ. ರೈಲು ತಡೆಯಿಂದಾಗಿ ರೈಲು ಸಂಚಾರವನ್ನು ರೈಲ್ವೆ ಸ್ಥಗಿತಗೊಳಿಸಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹಿಂಪಡೆದು ರೈತರನ್ನು ಕಾರ್ಪೊರೇಟ್‍ಗಳ ಕರುಣೆಗೆ ಕಾಯುವಂತೆ ಮಾಡುವ ಯತ್ನ ಕೃಷಿ ಮಸೂದೆಯ ಉದ್ದೇಶವಾಗಿದೆ ಎಂದು ರೈತರು ಆರೋಪಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು  ಬೆಂಬಲಿಸಿ.