ಚಿನ್ನ ಕಳ್ಳ ಸಾಗಾಟಕ್ಕೆ ಯುಎಪಿಎ ಪ್ರಕರಣ: ಕೇಂದ್ರ ಸರಕಾರ, ಎನ್‍ಐಎಗೆ ಸುಪ್ರೀಂ ಕೋರ್ಟ್ ನೋಟಿಸು

0
344

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಚಿನ್ನ ಕಳ್ಳ ಸಾಗಾಟಕ್ಕೆ ಭಯೋತ್ಪಾದನೆ ಆರೋಪ ಹೊರಿಸಿ ಯುಎಪಿಎ ಹೇರಿ ಕೇಸು ದಾಖಲಿಸಿದ್ದು ಎಫ್‍ಐಆರ್ ರದ್ದುಪಡಿಸಬೇಕೆಂದು ಸಲ್ಲಿಸಲಾದ ಅರ್ಜಿಯಲ್ಲಿ ಕೇಂದ್ರ ಸರಕಾರ ಮತ್ತು ಎನ್‍ಐಎಗೆ ಸುಪ್ರೀಂ ಕೋರ್ಟು ನೋಟಿಸು ನೀಡಿದೆ.

ರಾಜಸ್ಥಾನ ನಿವಾಸಿ ಮುಹಮ್ಮದ್ ಅಸ್ಲಂ ಎಂಬಾತ ಸಲ್ಲಿಸಿದ ಅರ್ಜಿಯಲ್ಲಿ ಜಸ್ಟಿಸ್ ರೋಹಿಂಗ್ಟನ್ ನಾರೀಮನ್, ಜಸ್ಟಿಸ್ ಬಿ.ಆರ್. ಗವಾಯ್ ಪೀಠ ನೋಟಿಸು ರವಾನಿಸಿದೆ. 2020 ಜುಲೈಯಲ್ಲಿ ಅಸ್ಲಂ ಸಹಿತ ಹನ್ನೊಂದು ಮಂದಿ ಚಿನ್ನ ಕಳ್ಳ ಸಾಗಾಟಕ್ಕಾಗಿ ಜೈಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅಸ್ಲಂ ವಿರುದ್ಧ ಭಯೋತ್ಪಾದನಾ ಚಟುವಟಿಕೆ ಸಂಘಟನೆಗಳೊಂದಿಗೆ ಸಂಬಂಧವನ್ನು ಸಾಬೀತುಪಡಿಸಲು ತನಿಖಾ ಏಜೆನ್ಸಿಗಳಿಂದ ಸಾಧ್ಯವಾಗಿಲ್ಲ ಎಂದು ಅಸ್ಲಂ ಪರ ವಕೀಲರು ವಾದಿಸಿದರು.

ದೇಶದ ಆರ್ಥಿಕ ಸುರಕ್ಷೆ ನಾಶಪಡಿಸುವ ಗುರಿಯೊಂದಿಗೆ ಮಾಡುವ ಚಿನ್ನ ಕಳ್ಳ ಸಾಗಾಟವನ್ನು ಮಾತ್ರ ಯುಎಪಿಎ ಕಾನೂನು ಪ್ರಕಾರ ಭಯೋತ್ಪಾದನೆಯ ವ್ಯಾಪ್ತಿಗೆ ಬರುತ್ತದೆ ಎಂಬ ಕೇರಳ ಹೈಕೋರ್ಟಿನ ತೀರ್ಪನ್ನು ವಕೀಲರು ಸುಪ್ರೀಂ ಕೋರ್ಟಿನ ಗಮನ ಸೆಳೆದಿದ್ದಾರೆ. ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಲಂ ಕೊರೋನದಿಂದ ಕೆಲಸ ಕಳಕೊಂಡಿದ್ದರು. ಊರಿಗೆ ಮರಳಲು ಹಣ ಇರಲಿಲ್ಲ. ಟಿಕೇಟ್ ಮತ್ತು ಹತ್ತು ಸಾವಿರ ರೂಪಾಯಿ ಕೊಡುತ್ತೇವೆ ಎಂದು ಹೇಳಿದ್ದರಿಂದ ಚಿನ್ನವನ್ನು ಊರಿಗೆ ತರಲು ಒಪ್ಪಿಕೊಂಡಿದ್ದರು ಎಂದು ವಕೀಲರು ವಾದಿಸಿದ್ದಾರೆ.